ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಜೀವ್ ಭಟ್‌ಗೆ ಜಾಮೀನು

Last Updated 17 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಅಹಮದಾಬಾದ್ (ಪಿಟಿಐ): ಗುಜರಾತ್‌ನಲ್ಲಿ ನಡೆದ ಗೋಧ್ರಾ ಗಲಭೆ ಪ್ರಕರಣದಲ್ಲಿ ಮುಖ್ಯಮಂತ್ರಿ ನರೇಂದ್ರಮೋದಿ ಅವರನ್ನು ಸಿಕ್ಕಿ ಹಾಕಿಸುವುದಕ್ಕಾಗಿ ಅವರ ವಿರುದ್ಧ ಸಾಕ್ಷ್ಯಗಳನ್ನು ಸೃಷ್ಟಿಸುತ್ತಿದ್ದ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದ, ಅಮಾನತುಗೊಂಡಿರುವ ಐಪಿಎಸ್ ಅಧಿಕಾರಿ ಸಂಜೀವ್ ಭಟ್‌ಗೆ ಸ್ಥಳೀಯ ನ್ಯಾಯಾಲಯ ಸೋಮವಾರ ಜಾಮೀನು ನೀಡಿದೆ.

ಪ್ರಕರಣದ ತನಿಖೆಗೆ ಸಹಕರಿಸಬೇಕು ಮತ್ತು ಅಗತ್ಯ ಬಿದ್ದಾಗಲೆಲ್ಲಾ ವಿಚಾರಣೆಗೆ ಹಾಜರಾಗಬೇಕು ಎಂಬ ಷರತ್ತುಗಳನ್ನು ವಿಧಿಸಿ ಸೆಷನ್ಸ್ ನ್ಯಾಯಾಧೀಶ ವಿ.ಕೆ.ವ್ಯಾಸ್ ಅವರು ಭಟ್‌ಗೆ ಜಾಮೀನು ಮಂಜೂರು ಮಾಡಿದರು.

ಪೊಲೀಸ್ ಕಾನ್‌ಸ್ಟೆಬಲ್ ಕೆ.ಡಿ. ಪಂತ್ ದಾಖಲಿಸಿರುವ ಎಫ್‌ಐಆರ್‌ಗೆ ಸಂಬಂಧಿಸಿದಂತೆ ಸಂಜೀವ್ ಭಟ್ ಅವರನ್ನು ಸೆಪ್ಟೆಂಬರ್ 30ರಂದು ಬಂಧಿಸಲಾಗಿತ್ತು.

2002ರ ಫೆಬ್ರುವರಿ 27ರಂದು ಗೋಧ್ರಾದಲ್ಲಿ ರೈಲು ಬೆಂಕಿ ಹಚ್ಚಿದ ಪ್ರಕರಣ ನಡೆದ ಬಳಿಕ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಕರೆದಿದ್ದ ಸಭೆಯಲ್ಲಿ ತಾವು ಭಾಗವಹಿಸಿರುವ ಕುರಿತಾದ ಸುಳ್ಳು ಪ್ರಮಾಣ ಪತ್ರಕ್ಕೆ ಸಹಿ ಹಾಕುವಂತೆ ಪಂತ್‌ಗೆ ಬೆದರಿಕೆ ಹಾಕಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಆರೋಪಿಸಲಾಗಿತ್ತು.

ಭಟ್ ಅವರು ಜಾಮೀನಿಗಾಗಿ ಅಕ್ಟೋಬರ್ 3ರಂದು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ರಾಜ್ಯ ಸರ್ಕಾರ ಇದನ್ನು ವಿರೋಧಿಸಿತ್ತು.ಒಂದು ವಾರ ನಡೆದ ಜಾಮೀನು ಅರ್ಜಿ ವಿಚಾರಣೆಯ ಸಂದರ್ಭದಲ್ಲಿ ಭಟ್ ಪರ ವಕೀಲರಾದ ಐ.ಎಚ್. ಸೈಯದ್ ಅವರು, ತಮ್ಮ ಕಕ್ಷಿದಾರರ ಮೇಲೆ ಮಾಡಿರುವ ಆರೋಪಗಳು ರಾಜಕೀಯ ಪ್ರೇರಿತವಾದುದು ಎಂದು ವಾದಿಸಿದ್ದರು.

ಅಲ್ಲದೇ, 2002ರಲ್ಲಿ ನಡೆದ ಕೋಮು ಗಲಭೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧದ ಸಾಕ್ಷ್ಯಗಳನ್ನು ವಶಪಡಿಸಿಕೊಳ್ಳುವ ಮತ್ತು ನಾಶ ಪಡಿಸುವ ಉದ್ದೇಶವೂ ಭಟ್ ಬಂಧನದ ಹಿಂದೆ ಅಡಗಿದೆ ಎಂದು ತಿಳಿಸಿದ್ದರು.

ಭಟ್ ಅವರ ಬಂಧನಕ್ಕೆ ಕಾರಣವಾದ ದೂರು ಕೂಡ ಸತ್ಯಕ್ಕೆ ದೂರವಾದದ್ದು. ಕೆಲವು ರಾಜಕಾರಣಿಗಳ ಮತ್ತು ಪೊಲೀಸ್ ಅಧಿಕಾರಿಗಳ ಆಣತಿಯ ಮೇರೆಗೆ ಈ ದೂರನ್ನು ನೀಡಲಾಗಿದೆ ಎಂದು ಸೈಯದ್ ಆರೋಪಿಸಿದ್ದರು.

ಭಾರತೀಯ ದಂಡ ಸಂಹಿತೆಯ ಅನುಸಾರ ಭಟ್ ವಿರುದ್ಧ ಹೊರಿಸಲಾಗಿರುವ ಬಹುತೇಕ ಆರೋಪಗಳು ಜಾಮೀನು ನೀಡಿಕೆಗೆ ಅರ್ಹವಾಗಿವೆ. ಆದ್ದರಿಂದ ತಮ್ಮ ಕಕ್ಷಿದಾರರಿಗೆ ತಕ್ಷಣವೇ ಜಾಮೀನು ಮಂಜೂರು ಮಾಡಬೇಕು ಎಂದು ಮನವಿ ಮಾಡಿದ್ದರು.

ಆದರೆ ಸೈಯದ್ ಅವರ ವಾದವನ್ನು ಸರ್ಕಾರಿ ಹಿರಿಯ ವಕೀಲ ಎಸ್.ವಿ ರಾಜು ವಿರೋಧಿಸಿ ಭಟ್ ಅವರು ಅಪರಾಧಿ ಹಿನ್ನೆಲೆಯುಳ್ಳವರಾಗಿದ್ದು, ಪದೇ ಪದೇ ಅಪರಾಧಗಳನ್ನು ಮಾಡುವ ಚಾಳಿ ಅವರಿಗೆ ಅಂಟಿಕೊಂಡಿದೆ. ಈ ಕಾರಣದಿಂದ ಜಾಮೀನು ನೀಡಬಾರದು ಎಂದು ವಾದಿಸಿದ್ದರು.

ಈ ವಾದಕ್ಕೆ ಪೂರಕವೆಂಬಂತೆ, ಭಟ್ ವಿರುದ್ಧ ವಿವಿಧ ನ್ಯಾಯಾಲಯಗಳಲ್ಲಿ ಇರುವ ಇತರ ಕ್ರಿಮಿನಲ್ ಪ್ರಕರಣಗಳನ್ನು ಅವರು ಸರ್ಕಾರಿ ವಕೀಲರು ಉದಾಹರಿಸಿದ್ದರು.

ಈ ಪ್ರಕರಣದಲ್ಲಿ ಭಟ್ ಜೊತೆ ಗುಜರಾತ್ ಕಾಂಗ್ರೆಸ್ ಅಧ್ಯಕ್ಷ ಅರ್ಜುನ್ ಮೋಧ್ವಾಡಿಯಾ ಕೂಡ ಭಾಗಿಯಾಗಿದ್ದಾರೆ ಎಂದು ರಾಜು ಆರೋಪಿಸಿದ್ದರು.

ಹದಿನೇಳು ದಿನ ವಿಶ್ರಾಂತಿ ಪಡೆದೆ...

ಅಹಮದಾಬಾದ್ (ಪಿಟಿಐ):
`ಹದಿನೇಳು ದಿನಗಳ ಜೈಲು ವಾಸ ವಿಶ್ರಾಂತಿ ಅವಧಿಯಂತೆ ಇತ್ತು~ ಎಂದು ಜಾಮೀನಿನ ಮೇಲೆ ಬಿಡುಗಡೆಗೊಂಡಿರುವ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಹೇಳಿದ್ದಾರೆ.

ಗೋಧ್ರಾ ಗಲಭೆ ಪ್ರಕರಣದಲ್ಲಿ ನರೇಂದ್ರ ಮೋದಿ ಅವರನ್ನು ಸಿಕ್ಕಿ ಹಾಕಿಸಲು ಸಾಕ್ಷ್ಯಗಳನ್ನು ಸೃಷ್ಟಿಸುತ್ತಿದ್ದ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದ ಸಂಜೀವ್ ಭಟ್ ಅವರಿಗೆ ಸೋಮವಾರ ಜಾಮೀನು ದೊರೆತ ಹಿನ್ನೆಲೆಯಲ್ಲಿ ಸಾಬರಮತಿ ಕೇಂದ್ರ ಕಾರಾಗೃಹದಿಂದ ಅವರು ಬಿಡುಗಡೆಗೊಂಡರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ನ್ಯಾಯಕ್ಕೆ ಜಯ ದೊರಕಿರುವುದಕ್ಕೆ ಸಂತಸವಾಗಿದೆ. ಇದು ಸರ್ಕಾರಿ ಪ್ರಾಯೋಜಿತ ಹಿಂಸಾಚಾರದ ಸಂತ್ರಸ್ತರಿಗೆ ಸಿಕ್ಕ ಗೆಲುವು. ಜೈಲು ವಾಸ ವಿಶ್ರಾಂತಿ ದಿನಗಳಂತಿತ್ತು. ನನ್ನ ಗುರಿ ನಿಶ್ಚಲವಾಗಿದೆ. ಅದು ನನಗಿಂತಲೂ ದೊಡ್ಡದಾಗಿದೆ~ ಎಂದು ಹೇಳಿದರು.

ಸೆಪ್ಟೆಂಬರ್ 30ರಂದು ಬಂಧನಕ್ಕೊಳಗಾದ ಬಳಿಕ, ಪೊಲೀಸ್ ಸೆರೆಮನೆಯಿಂದ ನಗರ ಅಪರಾಧ ವಿಭಾಗದ ಸೆರೆಮನೆಗೆ ಕರೆ ತರುವಾಗ ಪೊಲೀಸ್ ಸಿಬ್ಬಂದಿ ತೋರಿರುವ ಅನುಚಿತ ವರ್ತನೆ ಬಗ್ಗೆ ಪ್ರಶ್ನಿಸಿದಾಗ, `ಆ ಬಗ್ಗೆ ನಾನು ಈಗ ಏನೂ ಹೇಳುವುದಿಲ್ಲ. ಸೂಕ್ತ ಸಮಯದಲ್ಲಿ ಸೂಕ್ತ ವೇದಿಕೆಯಲ್ಲಿ ಪ್ರತಿಕ್ರಿಯಿಸುತ್ತೇನೆ~ ಎಂದು ಭಟ್ ಉತ್ತರಿಸಿದರು.

`ಜೈಲಿಗೆ ಹೋದ ಬಳಿಕ ನಾನು ಇನ್ನಷ್ಟು ಸದೃಢಗೊಂಡಿದ್ದೇನೆ. ಹೋರಾಟವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲಿದ್ದೇನೆ~ ಎಂದು ಅವರು ತಿಳಿಸಿದರು.

ಜೈಲಿನಲ್ಲಿ ತಮ್ಮನ್ನು ನಡೆಸಿಕೊಂಡಿರುವ ಬಗ್ಗೆ ಯಾರ ವಿರುದ್ಧವೂ ಅಸಮಾಧಾನವಿಲ್ಲ ಎಂದು ಭಟ್ ಇದೇ ಸಂದರ್ಭದಲ್ಲಿ ತಿಳಿಸಿದರು.

ಇತ್ಯರ್ಥವಾಗದೇ ಉಳಿದಿರುವ ತಮ್ಮ ವಿರುದ್ಧದ ಎಲ್ಲಾ ಪ್ರಕರಣಗಳು ಗುಜರಾತ್‌ನಿಂದ ಬೇರೆ ಕಡೆಗೆ ವರ್ಗಾವಣೆಯಾಗುವುದನ್ನು ಬಯಸುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಭಟ್, ತಮ್ಮ ಬಂಧನಕ್ಕೆ ಕಾರಣವಾದ ಕೆ.ಡಿ.ಪಂತ್ ನೀಡಿರುವ ದೂರಿನ ತನಿಖೆಯನ್ನು ಗುಜರಾತ್‌ನ ಹೊರಗಡೆ ಸೂಕ್ತವಾದ ತನಿಖಾ ಸಂಸ್ಥೆಯಿಂದ ನಡೆಸಬೇಕು ಎಂದು ಹೇಳಿದರು.

ಬಂಧನದ ಅವಧಿಯಲ್ಲಿ ತಮಗೆ ಬೆಂಬಲ ನೀಡಿರುವುದಕ್ಕೆ ಕುಟುಂಬದ ಸದಸ್ಯರಿಗೆ ಹಾಗೂ ಗುಜರಾತ್ ಐಪಿಎಸ್ ಅಧಿಕಾರಿಗಳಿಗೆ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.

ಜೈಲಿನಿಂದ ಬಿಡುಗಡೆಗೊಂಡು ಸಂಜೀವ್ ಭಟ್ ಮೆಮ್ ನಗರದಲ್ಲಿರುವ ತಮ್ಮ ಮನೆಗೆ ತೆರಳುತ್ತಿದ್ದಂತೆ ಅವರ ಪತ್ನಿ ಶ್ವೇತಾ ಭಟ್, ಇಬ್ಬರು ಮಕ್ಕಳು ಮತ್ತು ಕುಟುಂಬದ ಇತರ ಸದಸ್ಯರು ಅವರನ್ನು ಬರಮಾಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT