ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಡಾಸಕ್ಕ ಸುರುವ್ಲಿಕ್ಕೆ ಎಲ್ಯದರಿ ನೀರು...?

Last Updated 13 ಜುಲೈ 2012, 19:30 IST
ಅಕ್ಷರ ಗಾತ್ರ

ಗುಲ್ಬರ್ಗ ಜಿಲ್ಲೆಯ ವಿಧಾನಸಭಾ ಕ್ಷೇತ್ರವೊಂದರ ಶಾಸಕರು ಸುಮಾರು ಹತ್ತು ವರ್ಷಗಳ ಹಿಂದೆ ಸಚಿವರಾದರು. ಏಳು ಖಾತೆಗಳ ಹೊಣೆ ಹೊತ್ತಿದ್ದ ಅವರು ಬೆಳ್ಳಂಬೆಳಿಗ್ಗೆ ಕಾರಿನಲ್ಲಿ ಹಳ್ಳಿಯೊಂದಕ್ಕೆ ತೆರಳುತ್ತಿದ್ದಾಗ, ರಸ್ತೆ ಅಕ್ಕಪಕ್ಕ ಮಹಿಳೆಯರು ಸಾಲಾಗಿ ನಿಂತಿದ್ದನ್ನು ನೋಡಿ ಉಮೇದಿನಿಂದ ಕಾರು ಇಳಿದು ಮಳೆ-ಬೆಳೆ ಕುಶಲೋಪರಿ ವಿಚಾರಿಸಿದರು. ನಂತರ ಕಾರೊಳಗೆ ಕೂತು `ಪರ್ವಾಗಿಲ್ಲ ಕೂತ್ಕೊಳ್ರಮ್ಮ...~ ಎಂದು ಒತ್ತಾಯಿಸಿದರು. ಆದರೆ ಆ ಮಹಿಳೆಯರಿಗೆ ಹೇಳಲಾರದ ಮುಜುಗರ. ಸಪ್ತ ಖಾತೆಗಳ ಸಚಿವರು ಸಾಮಾನ್ಯರಂತೆ ಬಂದು ಮಾತಾಡಿಸಿದ್ದಕ್ಕೆ ಖುಷಿ ಪಡಬೇಕೋ, ಶೌಚಾಲಯವಿಲ್ಲದೇ ಬಹಿರ್ದೆಸೆಗೆ ತಾವು ಈ ರೀತಿ ರಸ್ತೆ ಆಶ್ರಯಿಸಬೇಕಾದ ಅನಿವಾರ್ಯತೆಗೆ ಸಂಕಟ ಪಡಬೇಕೋ ತಿಳಿಯಲಾರದ ಸ್ಥಿತಿ.

ಹಳ್ಳಿ ಸಮೀಪಿಸುತ್ತಿರುವಂತೆ ದುರ್ವಾಸನೆ. ಊರ ಆರಂಭದಲ್ಲೇ ರಸ್ತೆ ಅಕ್ಕಪಕ್ಕದ ಸ್ಥಳವನ್ನೇ ಬಯಲು ಶೌಚಾಲಯವನ್ನಾಗಿ ಮಾಡಿಕೊಂಡ ಪರಿಣಾಮ, ಒಳಗೆ ಹೋಗುವ ಮುನ್ನ ಮೂಗು ಮುಚ್ಚಿಕೊಂಡಿರಲೇಬೇಕು. ಬಹುತೇಕ ಗ್ರಾಮಗಳಲ್ಲಿ ಈ ದೃಶ್ಯ ಸಾಮಾನ್ಯ. ಸರ್ಕಾರದ ಯೋಜನೆಗಳು ಎಷ್ಟೇ ಬಂದರೂ ಅಷ್ಟೇ ಎನ್ನುವಂತಿದೆ ಹೈದರಾಬಾದ್ ಕರ್ನಾಟಕ ಪ್ರದೇಶದ ಹಳ್ಳಿಗಳ ಸ್ಥಿತಿ. ಯಾವುದೋ ಯೋಜನೆಯಡಿ ಟೆಂಡರ್ ಪಡೆಯುವ ಗುತ್ತಿಗೆದಾರರು ಶೌಚಾಲಯ ಕಟ್ಟಿ ಅತ್ತ ಹೋಗುತ್ತಲೇ, ಇತ್ತ ಅದು ಹಾಳಾಗಲು ಆರಂಭ! `ಅದ್ರಾಗ ಹೋಗಾಕ ಮನಸ್ ಬರಂಗಿಲ್ರಿ~ ಎನ್ನುವ ಮಹಿಳೆಯರ ಮನೋಭಾವ ಬದಲಾಗಬೇಕಿದೆ; ಶೌಚಾಲಯ ಕಟ್ಟಿದರೆ ಮಾತ್ರ ಸಾಲದು, ಅದರ ಬಳಕೆಗೆ ಮಹಿಳೆಯರನ್ನು ಪ್ರೇರೇಪಿಸುವ ಕೆಲಸವೂ ಆಗಬೇಕಿದೆ.

ಸಂಪೂರ್ಣ ಸ್ವಚ್ಛತಾ ಆಂದೋಲನ, ನಿರ್ಮಲ ಗ್ರಾಮ ಯೋಜನೆಯಡಿ ವೈಯಕ್ತಿಕ ಶೌಚಾಲಯ ಹೊಂದಲು ಸರ್ಕಾರ ಅನುದಾನ ಬಿಡುಗಡೆ ಮಾಡುತ್ತಿದೆ. ಅತ್ಯಲ್ಪ ಜಾಗದಲ್ಲಿ ಶೌಚಾಲಯ ನಿರ್ಮಾಣಗೊಳ್ಳುತ್ತದೆ. ಇದರ ಬಳಕೆಗೆ ಹಳ್ಳಿಯ ಮಹಿಳೆಯರು ಸಿದ್ಧರಾಗುತ್ತಿಲ್ಲ. ಆರೋಗ್ಯ ಅಥವಾ ಸ್ವಚ್ಛತೆಯ ಉದ್ದೇಶದಿಂದಲಾದರೂ ಬಳಸಿಕೊಳ್ಳಿ ಎಂದು ಮಹಿಳೆಯರ ಮನವೊಲಿಸುವಲ್ಲಿ ಸರ್ಕಾರ ಪದೇ ಪದೇ ವಿಫಲವಾಗುತ್ತಿದೆ.

ಶೌಚಾಲಯವಿಲ್ಲದ ಕಡೆ ಮಹಿಳೆಯರು ಅನುಭವಿಸುವ ಮುಜುಗರ, ಕಿರಿಕಿರಿ ಬಣ್ಣಿಸಲು ಅಸಾಧ್ಯ. ನಸುಕು ಹರಿಯುವ ಮುನ್ನ ಅಥವಾ ಕತ್ತಲು ಕವಿದ ಮೇಲೆ ನಿಸರ್ಗದ ಕರೆಗೆ ಓಗೊಡುವ ಅನಿವಾರ್ಯತೆ ಅವರದು. ಹೆಚ್ಚು ಊಟ ಮಾಡಿದರೆ ಮತ್ತೆ ಶೌಚಾಲಯಕ್ಕೆ ಹೋಗಬೇಕಾಗುವುದರಿಂದ, ಕೆಲವರು ಹೊಟ್ಟೆ ತುಂಬ ಊಟವನ್ನೂ ಮಾಡುವುದಿಲ್ಲ ಎಂಬ ವಾಸ್ತವಾಂಶ ಕಳವಳ ಮೂಡಿಸುತ್ತದೆ.

ಶೌಚಾಲಯ ಬಳಸದೇ ಇರಲು ನೀರಿನ ಕೊರತೆಯೂ ಪ್ರಮುಖ ಕಾರಣ. ಸಾಮೂಹಿಕ ಶೌಚಾಲಯಗಳನ್ನು ನಿರ್ಮಿಸುವ ಸರ್ಕಾರ, ಅದಕ್ಕೆ ನೀರಿನ ಪೂರೈಕೆ ಮಾಡುವುದಿಲ್ಲ! ಅತ್ತ ಕಟ್ಟಡವೂ ಹಾಳು; ಇತ್ತ ಸರ್ಕಾರದ ಹಣವೂ ಪೋಲು. `ಕುಡೀಲಿಕ್ಕೇ ನೀರು ಸಿಗಂಗಿಲ್ರಿ. ಇನ್ನ ಸಂಡಾಸಕ್ಕ ಸುರುವ್ಲಿಕ್ಕೆ ಎಲ್ಯದರಿ ನೀರು?~ ಎಂಬ ಪ್ರಶ್ನೆಗೆ ಸೂಕ್ತ ಉತ್ತರ ಸಿಗದು. ಹೀಗಾಗಿ ಶೌಚಾಲಯ ಕಟ್ಟಡಗಳು ಕಟ್ಟಿಗೆ ಸಂಗ್ರಹ ಅಥವಾ ಸ್ಟೋರ್ ರೂಮ್‌ಗಳಾಗಿ ಪರಿವರ್ತನೆಗೊಂಡ ನಿದರ್ಶನಗಳು ಧಾರಾಳವಾಗಿ ಕಾಣಸಿಗುತ್ತವೆ.

ಶೌಚಕ್ರಿಯೆಗೆಂದು ಬಯಲಿಗೆ ಹೋದವರು ಹಾವಿನ ಕಡಿತಕ್ಕೆ ಬಲಿಯಾದ ಅನೇಕ ಘಟನೆಗಳು ಸಂಭವಿಸಿವೆ. ಮಹಿಳೆಯರಿಗೆ ಕಾಮುಕರ ಕಾಟವೂ ತಪ್ಪಿದ್ದಲ್ಲ. ಹೀಗಾಗಿ ಹಳ್ಳಿಗಳಲ್ಲಿ ಬಯಲು ಶೌಚಾಲಯ ಪದ್ಧತಿ ತಪ್ಪಿಸಬೇಕೆಂದರೆ ಮೊದಲು ನೈರ್ಮಲ್ಯದ ಬಗ್ಗೆ ಅರಿವು ಮೂಡಿಸಬೇಕು. ರೋಗ-ರುಜಿನದಿಂದ ಪಾರಾಗಲು ಶೌಚಾಲಯವೇ ಪರಿಹಾರ ಎಂಬುದನ್ನು ಮನದಟ್ಟು ಮಾಡಬೇಕು.

ಇನ್ಫೋಸಿಸ್ ಪ್ರತಿಷ್ಠಾನ `ಪರಿಶುದ್ಧ~ ಯೋಜನೆಯಡಿ ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಈ ವರ್ಷಾಂತ್ಯಕ್ಕೆ 10,000 ಶೌಚಾಲಯಗಳನ್ನು ನಿರ್ಮಿಸಲು ಮುಂದಾಗಿದೆ. ಫಲಾನುಭವಿ ಅರ್ಧ ಹಣ ನೀಡಿದರೆ, ಉಳಿದ ಹಣವನ್ನು ಪ್ರತಿಷ್ಠಾನ ಕೊಡುತ್ತದೆ. ಹಲವು ಗ್ರಾಮಗಳಲ್ಲಿ ಇದಕ್ಕೆ ಸಕಾರಾತ್ಮಕ ಪ್ರತಿಕ್ರಿಯೆ ದೊರಕಿದೆ. ಆದರೆ ಮನೆ ಯಜಮಾನ ಶೌಚಾಲಯ ಕಟ್ಟಿಸಿದರೂ ಅದನ್ನು ಬಳಸಲು ಯಜಮಾನಿ ಮುಂದಾಗುತ್ತಿಲ್ಲ! ಕಲರ್ ಟಿ.ವಿ, ಬೈಕು, ನಾಲ್ಕೈದು ಮೊಬೈಲ್‌ಗಳನ್ನು ಹೊಂದಿದ ಮನೆಯಲ್ಲಿ ಶೌಚಾಲಯವೇ ಇರುವುದಿಲ್ಲ! ಇದೆಲ್ಲ ತಮಗೆ ಮಾಡಿಸಿದಂಥದ್ದಲ್ಲ; ಬಯಲು ಶೌಚಾಲಯವೇ ನಮಗೆ ಸರಿ  ಎಂಬ ಭಾವನೆ ಬಹುತೇಕರಲ್ಲಿ   ದಟ್ಟವಾಗಿ ಬೇರೂರಿದೆ. ಈ ಭಾವನೆ ತೆಗೆದುಹಾಕಿ, ಶೌಚಾಲಯ ಬಳಕೆಗೆ ಪ್ರೇರೇಪಿಸುವ ತನಕ ಹಳ್ಳಿ ಮುಂದಿನ ರಸ್ತೆಯಲ್ಲಿ ದುರ್ವಾಸನೆ ತಪ್ಪಿದ್ದಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT