ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಡೂರು ತಾ.ಪಂ ಉಪಚುನಾವಣೆ: ಬಿಜೆಪಿ- ಕಾಂಗ್ರೆಸ್ ಕಿತ್ತಾಟ

Last Updated 2 ಜನವರಿ 2012, 5:25 IST
ಅಕ್ಷರ ಗಾತ್ರ

ಸಂಡೂರು: ತಾ.ಪಂ.ಉಪ ಚುನಾವಣೆಯ ಅಭ್ಯರ್ಥಿಗಾಗಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರು ಕಿತ್ತಾಟ ನಡೆಸಿದ ಘಟನೆ ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಶನಿವಾರ ಜರುಗಿತು.

ಜ.10ರಂದು ನಡೆಯಲಿರುವ ತಾಲ್ಲೂಕಿನ ಕಾಳಿಂಗೇರಿ ತಾ.ಪಂ ಉಪ ಚುನಾವಣೆಗೆ ಶನಿವಾರ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿತ್ತು. ಬಿಜೆಪಿಯಿಂದ ಬಿ ಫಾರಂ ಪಡೆದು ಸ್ಪರ್ಧಿಸಿದ್ದ ಅಂಜಿನಪ್ಪನನ್ನು ಕಾಂಗ್ರೆಸ್ ಪಕ್ಷದವರು ಶುಕ್ರವಾರ ಹೈಜಾಕ್ ಮಾಡಿದ್ದಾಗಿ ಬಿಜೆಪಿ ಕಾರ್ಯಕರ್ತರು ಆರೋಪಿಸಿದರು.

ಶನಿವಾರ ನಾಮಪತ್ರ ವಾಪಸ್ಸು ಪಡೆಯಲು ಬಿಜೆಪಿ ಅಭ್ಯರ್ಥಿ ಅಂಜಿನಪ್ಪನನ್ನು ಕಾಂಗ್ರೆಸ್ ಕಾರ್ಯಕರ್ತರು ತಾಲ್ಲೂಕು ಕಚೇರಿಗೆ ಕರೆದುಕೊಂಡು ಬರುತ್ತಿದ್ದಂತೆ ಎರಡೂ ಪಕ್ಷದವರ ನಡುವೆ ಮಾತಿನ ಚಕಮಕಿ ನಡೆಯಿತಲ್ಲದೆ, ತಮ್ಮ ಕಡೆಗೆ ಬರುವಂತೆ ಎರಡೂ ಬಣದವರು ಅಭ್ಯರ್ಥಿಯನ್ನು ಎಳೆದಾಡಿದರು.

ಕೊನೆಗೆ ಅಭ್ಯರ್ಥಿ ಅಂಜಿನಪ್ಪ ಬಿಜೆಪಿ ಪರ ಸ್ಪರ್ಧಿಸುವುದಾಗಿ ಖಡಾಖಂಡಿತವಾಗಿ ಹೇಳಿ ಬಿಜೆಪಿಯವರ ವಾಹನದಲ್ಲಿ ತೆರಳುತ್ತಿದ್ದಂತೆ ಗಲಾಟೆ ಶಮನಗೊಂಡಿತು. ಎರಡೂ ಪಕ್ಷಗಳ ಕಾರ್ಯಕರ್ತರ ಎಳೆದಾಟದಲ್ಲಿ ಬಿಜೆಪಿ ಅಭ್ಯರ್ಥಿ ಅಂಜಿನಪ್ಪ ಅಂಗಿ ಹರಿದು ಹೈರಾಣಾಗಿದ್ದ.

ನಾಮಪತ್ರ ವಾಪಸ್ ಪಡೆಯಲು ಒತ್ತಾಯ: ಶುಕ್ರವಾರ ಗ್ರಾಮದ ಬಳಿ ಕಾಲ್ನಡಿಗೆಯಲ್ಲಿ ಹೊರಟಿದ್ದ ತನ್ನನ್ನು ನಿನ್ನೊಂದಿಗೆ ಮಾತನಾಡುವುದಿದೆ ಎಂದು ನನ್ನ ಸ್ನೇಹಿತರೇ ಆಗಿರುವ ಕಾಂಗ್ರೆಸ್ ಪಕ್ಷದ ಕೆಲ ಕಾರ್ಯಕರ್ತರು ನನ್ನನ್ನು ವಾಹನದಲ್ಲಿ ಕರೆದೊಯ್ದಿದ್ದರು ಎಂದು ಬಿಜೆಪಿ ಅಭ್ಯರ್ಥಿ ಅಂಜಿನಪ್ಪ ವಿವರಿಸಿದರು.

ಅಸಹಾಯಕ ತಹಸೀಲ್ದಾರರು: ಬಿಜೆಪಿ ಅಭ್ಯರ್ಥಿ ಕಚೇರಿ ಪ್ರವೇಶಿಸುತ್ತಿದ್ದಂತೆ ತಹಸೀಲ್ದಾರರ ಚೇಂಬರಿನಲ್ಲಿಯೇ ಎರಡೂ ಪಕ್ಷಗಳ 30-40ಜನ ಕಾರ್ಯಕರ್ತರ ಮದ್ಯೆ ವಾಗ್ವಾದ ನಡೆದು ಕೈ ಕೈ ಮಿಲಾಸುತ್ತಿದ್ದರೂ ತಹಸೀಲ್ದಾರರು ಅಸಹಾಯಕರಾಗಿ ನೋಡುತ್ತಾ ನಿಲ್ಲುವಂತಾಗಿತ್ತು.

ಒಬ್ಬನೇ ಕಾನ್‌ಸ್ಟೇಬಲ್ ಇದ್ದುದರಿಂದ ಗಲಾಟೆ ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಕೊನೆಗೆ ತಹಸೀಲ್ದಾರರು ಠಾಣೆಗೆ ದೂರವಾಣಿ ಮೂಲಕ ಹೆಚ್ಚಿನ ಸಿಬ್ಬಂದಿ ಕಳುಹಿಸು ವಂತೆ ಸೂಚಿಸಿದರು. ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ದೂರು ದಾಖಲಿಸುವುದಾಗಿ ಚುನಾವಣಾಧಿಕಾರಿಯೂ ಆಗಿರುವ ಪ್ರಭಾರ ತಹಸೀಲ್ದಾರ ಕೆ. ದಾಸಪ್ಪ ಸುದ್ದಿಗಾರರಿಗೆ ತಿಳಿಸಿದರು.

ಕಚೇರಿಯಲ್ಲಿ ದಾಂಧಲೆ ನಡೆಸಿದವರ ವಿಡಿಯೋ ಚಿತ್ರೀಕರಣ ಮಾಡಲಾಗಿದ್ದು, ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಹಸೀಲ್ದಾರ್ `ಪ್ರಜಾವಾಣಿ~ಗೆ ತಹಸೀಲ್ದಾರರು ತಿಳಿಸಿದರು. ಮಧ್ಯಾಹ್ನ 3 ಗಂಟೆಗೆ ನಾಮಪತ್ರ ವಾಪಸ್ ಪಡೆಯುವ ಅವಧಿ ಮುಗಿಯುತ್ತಿದ್ದಂತೆ ಕಣದಲ್ಲಿರುವ  ಕಾಂಗ್ರೆಸ್‌ನ ಪೂಜಾರಿ ಮಾರೆವ್ವ, ಬಿಜೆಪಿಯಿಂದ ಅಂಜಿನಪ್ಪ ಅಧಿಕೃತ ಅಭ್ಯರ್ಥಿಗಳೆಂದು ಘೋಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT