ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಡೂರು: ಶೇ 65ರಷ್ಟು ಹಳ್ಳಿಗಳಲ್ಲಿ ಫ್ಲೋರೈಡ್ ಅಂಶ

Last Updated 17 ಸೆಪ್ಟೆಂಬರ್ 2011, 8:25 IST
ಅಕ್ಷರ ಗಾತ್ರ

ಸಂಡೂರು: ತಾಲ್ಲೂಕಿನ 21 ಗ್ರಾಮ ಪಂಚಾಯ್ತಿಗಳ ಶೇ 65ರಷ್ಟು ಹಳ್ಳಿಗಳ ಕುಡಿವ ನೀರಿನಲ್ಲಿ ಅಧಿಕ ಫ್ಲೋರೈಡ್ ಅಂಶ ಇರುವುದನ್ನು ನೀರು ಮತ್ತು ನೈರ್ಮಲ್ಯ ಸಂಯೋಜಕರು ಪ್ರಾಯೋಗಿಕವಾಗಿ ಪರೀಕ್ಷಿಸಿ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಿದ್ದಾರೆ.

ನೀರಿನ ಮೂಲಗಳಾದ ಕೊಳವೆ ಬಾವಿ,ಕೆರೆ ನೀರು,ತೆರೆದ ಬಾವಿಗಳ 695 ಸ್ಥಳಗಳ ಪೈಕಿ ಸದ್ಯ ಚಾಲ್ತಿಯಲ್ಲಿರುವ 465 ನೀರಿನ ಆಕರಗಳಿಂದ ಪಿ.ಎಚ್, (ಹೈಡ್ರೋಜನ್ ಅಯಾನ್ಸ್), ಟೋಟಲ್ ಹಾರ್ಡ್‌ನೆಸ್ (ಟಿ.ಎಚ್.), ಫ್ಲೋರೈಡ್ (ಎಫ್.ಎಲ್.), ಕ್ಲೋರೈಡ್ (ಸಿ.ಎಲ್.), ನೈಟ್ರೇಟ್(ಎನ್.ಐ.) ಐರನ್ (ಐ.ಎಫ್.) ಮಾದರಿಯ 6 ಪರೀಕ್ಷೆಗಳನ್ನು ಕಳೆದ ಎರಡೂವರೆ ತಿಂಗಳಿನಿಂದ ಮಾಡಿದ ಪರಿಣಾಮವಾಗಿ ಇಲ್ಲಿನ ಬಹುತೇಕ ಹಳ್ಳಿಗಳ ಜನರು ಅಪಾಯಕಾರಿಯಾದ ಪ್ಲೋರೈಡ್‌ಯುಕ್ತ ನೀರನ್ನೆ ಬಳಸುತ್ತಿದ್ದರೆಂಬ ಆಘಾತಕಾರಿ ಅಂಶವನ್ನು ತಾಲ್ಲೂಕಿಗೆ ನಿಯೋಜನೆಗೊಂಡಿರುವ ನೀರು ಮತ್ತು ನೈರ್ಮಲ್ಯ ಸಂಯೋಜಕರು `ಪ್ರಜಾವಾಣಿ~ಗೆ ತಿಳಿಸಿದರು.

ಇದುವರೆಗೂ ದೇವರಬುಡ್ಡೇನಹಳ್ಳಿ,ಎಸ್. ಬಸಾಪುರ, ತೋಕೆನಹಳ್ಳಿ, ನರಸಿಂಗಾಪುರ, ನಾರಾಯಣಪುರ, ಮೆಟ್ರಿಕಿ ಲಕ್ಕಲಹಳ್ಳಿ, ಗುಂಡ್ಲಹಳ್ಳಿ, ಬಂಡ್ರಿ, ಕೋಡಿಹಳ್ಳಿ, ಚಿಕ್ಕ ಕೆರೆಯಾಗಿನಹಳ್ಳಿಗಳು ಅಧಿಕ ಫ್ಲೋರೈಡ್ ಅಂಶವಿರುವ ಗ್ರಾಮಗಳಾಗಿದ್ದು, ಜನರು ಅಪಾಯಕಾರಿ ನೀರಿನ ಬಳಕೆಯಿಂದ ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದರು. ತಾಲ್ಲೂಕಿನ ಬಹುತೇಕ ಹಳ್ಳಿಗಳಲ್ಲಿ ಫ್ಲೋರೈಡ್ ಇರುವುದು ದೃಢಪಟ್ಟಿದ್ದು ಜನರ ಬದುಕಿಗೆ ಮಾರಕವಾಗಲಿದೆ ಎನ್ನುತ್ತಾರೆ ತಜ್ಞರು.

ತಾಲ್ಲೂಕಿನ ಕೆಲಹಳ್ಳಿಗಳಲ್ಲಿ ನೈಟ್ರೇಟ್ ಪ್ರಮಾಣವು ಹೆಚ್ಚಿನ ಪ್ರಮಾಣದಲ್ಲಿರುವುದು ಪರೀಕ್ಷೆಯಿಂದ ಖಚಿತವಾಗಿದ್ದು ಈ ನೀರಿನ ಬಳಕೆಯಿಂದ ಶಿಶುಗಳಲ್ಲಿ ಮೆಥೆಮೇಗ್ಲೋಬಿನಿಮಿಯಾ  (ನೀಲ ಶಿಶು ರೋಗ)ಉಂಟಾಗಬಹುದು.

ಇನ್ನು ಫ್ಲೋರೈಡ್ ಯುಕ್ತ ನೀರಿನಿಂದ ದಂತಗಳ ಫ್ಲೋರೋಸಿಸ್, ಮೂಳೆಯ ರಚನೆಯನ್ನು ಹಾನಿಗೊಳಿಸಿ ಹೆಳವತನವನ್ನು ಉಂಟು ಮಾಡುವ  ಎಲುಬಿನ ಫ್ಲೋರೋಸಿಸ್ ಹಾಗೂ ಮೂಳೆಗಳ ಹೊರತಾದ ಫ್ಲೋರೋಸಿಸ್ ಸಹ ಬರುವ ಸಾಧ್ಯತೆ ಹೆಚ್ಚು ಎನ್ನುತ್ತಾರೆ  ವೈದ್ಯರು.

ಪಟ್ಟಣವನ್ನು ಒಳಗೊಂಡಂತೆ ತಾರಾನಗರ, ಬನ್ನಿಹಟ್ಟಿ, ನಾಗಲಾಪುರ, ತಾಳೂರು, ಕುರೆಕುಪ್ಪ, ಗಂಗಲಾಪುರ ಗ್ರಾಮಗಳಿಗೆ ತುಂಗಭದ್ರಾ ನದಿ ನೀರು ಒದಗಿಸುವ 2007- 2008ರ ಅಂದಾಜು 6 ಕೋಟಿ ರೂಪಾಯಿಗಳ  ಕಾಮಗಾರಿ ಆಮೆ ವೇಗದಲ್ಲಿದೆ.

2010-11ನೇ ಸಾಲಿನಲ್ಲಿ ನೀರು ಪೂರೈಕೆ ಮತ್ತು ಕಿರು ನೀರು ಸರಬರಾಜು ಯೋಜನೆಯಡಿ 284.50ಲಕ್ಷ ರೂ.ಗಳ ಕಾಮಗಾರಿ ನಡೆಯುತ್ತಿದೆ ಎಂದು ನೀರು ಸರಬರಾಜು ಹೊಣೆ ಹೊತ್ತಿರುವ ಇಲಾಖೆಯ ಕಡತಗಳು ಮಾತ್ರ ತಿಳಿಸುತ್ತಿವೆ ಎಂದು ಸ್ಥಳೀಯರು ಆರೋಪಿಸುತ್ತಾರೆ.

ಕುಡಿವ ಶುದ್ಧ ನೀರಿಗಾಗಿ ಜನರು ಪಡಬಾರದ ಕಷ್ಟಪಡುತ್ತಿದ್ದಾರೆ. ಜನಪ್ರತಿನಿಧಿಗಳಾಗಿರುವವರು ಸರ್ಕಾರ ನಮ್ಮದಿಲ್ಲ ಅಸಹಾಯಕರಾಗಿದ್ದೇವೆಂದು ಕಣ್ಣಿದ್ದು ಕುರುಡರಂತೆ ನಟಿಸುತ್ತಿರುವ ಅವರ ಕಾರ್ಯವೈಖರಿ ಸಾರ್ವಜನಿಕರ ನಗೆಪಾಟಲಿಗೆ ಈಡಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT