ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತಪುರ: ಬಳಕೆಯಾಗದ ಬಸ್ ನಿಲ್ದಾಣ

Last Updated 15 ಏಪ್ರಿಲ್ 2013, 10:29 IST
ಅಕ್ಷರ ಗಾತ್ರ

ಔರಾದ್: ಸಂತಪುರನಲ್ಲಿ ಸುಮಾರು 50 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಬಸ್ ನಿಲ್ದಾಣ ಪ್ರಯಾಣಿಕರಿಗಾಗಿ ಬಳಕೆಯಾಗದೆ ಪೋಲಿ ಹುಡುಗರ ತಾಣವಾಗಿ ಮಾರ್ಪಟ್ಟಿದೆ.

ಬೀದರ್-ಔರಾದ್ ಮುಖ್ಯ ರಸ್ತೆಗೆ ಹೊಂದಿಕೊಂಡು ಎರಡು ಎಕರೆ ವಿಶಾಲ ಪ್ರದೇಶದಲ್ಲಿ ಬಸ್ ನಿಲ್ದಾಣ ಕಟ್ಟಡ ನಿರ್ಮಿಸಲಾಗಿದೆ.

ಕಾಮಗಾರಿ ಪೂರ್ಣಗೊಂಡು ಕಟ್ಟಡ ಸಂಬಂಧಿತರಿಗೆ ಹಸ್ತಾಂತರಿಸಿ ಆರು ತಿಂಗಳಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಸಾರಿಗೆ ಸಂಸ್ಥೆ ಸಂಬಂಧಿತರು ಬಸ್ ನಿಲ್ದಾಣ ಪ್ರಯಾಣಿಕರ ಬಳಕೆಗಾಗಿ ಉಪಯೋಗಿಸಲು ಆಸಕ್ತಿ ತೋರುತ್ತಿಲ್ಲ ಎಂದು ಸಂತಪುರ ನಾಗರಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸದ್ಯ ಸಂತಪುರ ಬಸವೇಶ್ವರ ವೃತ್ತದ ರಸ್ತೆ ಬದಿಯಲ್ಲಿ ಬಸ್‌ಗಳು ನಿಲ್ಲುತ್ತಿವೆ. ಅಲ್ಲಿ ನಾಲ್ಕು ಕಡೆಯಿಂದ ಬಂದ ವಾಹನಗಳು ಒಂದೇ ಕಡೆ ನಿಲ್ಲುವುದರಿಂದ ಸುಗಮ ಸಂಚಾರಕ್ಕೆ ತೊಂದರೆಯಾಗಿದೆ. ಅಲ್ಲಿಂದ ಹಾದು ಹೋಗುವ ಪಾದಚಾರಿಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳು ಸಂಚಾರ ಸಮಸ್ಯೆ ಎದುರಿಸಬೇಕಾಗಿದೆ. ಕಳೆದ ಎರಡು ದಿನಗಳ ಹಿಂದೆ ಮ್ಯಾಕ್ಸಿಕ್ಯಾಬ್‌ವೊಂದು ಡಿಕ್ಕಿಯಾಗಿ 12 ಜನ ಗಾಯಗೊಂಡಿದ್ದಾರೆ.

ಸಮಸ್ಯೆಯ ಗಂಭೀರತೆ ಅರಿತು ಸಾರಿಗೆ ಸಂಸ್ಥೆ ಮೇಲಾಧಿಕಾರಿಗಳು ತಕ್ಷಣ ಹೊಸ ಬಸ್ ನಿಲ್ದಾಣ ಕಾರ್ಯಾರಂಭ ಮಾಡುವಂತೆ ಸಂತಪುರ ತಾಲ್ಲೂಕು ಹೋರಾಟ ಸಮಿತಿ ಅಧ್ಯಕ್ಷ ಸಿದ್ದಯ್ಯ ಸ್ವಾಮಿ, ಕಸಾಪ ವಲಯ ಅಧ್ಯಕ್ಷ ಅನಿಲ ಜಿರೋಬೆ ಬೇಡಿಕೆ ಮಂಡಿಸಿದ್ದಾರೆ.

ಸಿಟಿ ಬಸ್ ವ್ಯವಸ್ಥೆ: ಸಂತಪುರ-ಬೀದರ್ ಮತ್ತು ಸಂತಪುರ ಸಂಗಮ ನಡುವೆ ನಿರಂತರವಾಗಿ ಸಿಟಿ ಬಸ್ ಓಡಿಸುವಂತೆ ಸಂತಪುರ ತಾಲ್ಲೂಕು ಹೋರಾಟ ಸಮಿತಿ ಆಗ್ರಹಿಸಿದೆ. ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರವಾದ ಸಂತಪುರಗೆ ಎಲ್ಲ ಕಡೆಯಿಂದ ಬಂದು ಜನ ಸೇರುತ್ತಾರೆ.

ಬೀದರ್ ಮತ್ತು ಭಾಲ್ಕಿ ಕಡೆ ಹೋಗಲು ಶಾಲಾ ಕಾಲೇಜು ವಿದ್ಯಾರ್ಥಿಗಳು, ಸರ್ಕಾರಿ ನೌಕರರು, ವ್ಯಾಪಾರಿಗಳು ನಿತ್ಯ ಬಸ್ಸಿಗಾಗಿ ಕಾಯಬೇಕಾಗಿದೆ. ಔರಾದ್ ಕಡೆಯಿಂದ ಬಸ್‌ಗಳು ತುಂಬಿ ಬರುತ್ತಿರುವುದರಿಂದ ಸಂತಪುರನಲ್ಲಿಯ ಪ್ರಯಾಣಿಕರು ಬಾಗಿಲಲ್ಲಿ ನಿಂತು ಪ್ರಯಾಣಿಸಬೇಕಾಗಿದೆ.

ಸಂಗಮ-ಸಂತಪುರ ನಡುವೆ ಖಾಸಗಿ ವಾಹನ ವಾವಳಿಯಿಂದ ಪ್ರಯಾಣಿಕರು ಕಿರಿಕಿರಿ ಅನುಭವಿಸಬೇಕಾಗಿದೆ. ಈ ಮಾರ್ಗದಲ್ಲಿನ ಮ್ಯಾಕ್ಸಿಕ್ಯಾಬ್-ಜೀಪ್‌ಗಳು ತುಂಬ ಹೆಳೆಯಾದ ಕಾರಣ ಯಾವಾಗ ಅವಘಡ ಸಂಭವಿಸುತ್ತದೆ ಎಂದು ಹೇಳಲಿಕ್ಕಾಗದು.

ಈ ಹಿನ್ನೆಲೆಯಲ್ಲಿ ತಕ್ಷಣ ಸಿಟಿ ಬಸ್ ವ್ಯವಸ್ಥೆ ಮಾಡುವಂತೆ ಪ್ರಯಾಣಿಕರು ಸಾರಿಗೆ ಸಂಸ್ಥೆ ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT