ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತರ ಕಾಯಕವೇ ಒಂದು ಕಾವ್ಯ: ಕೃಷ್ಣಮೂರ್ತಿ

Last Updated 8 ಫೆಬ್ರುವರಿ 2012, 9:05 IST
ಅಕ್ಷರ ಗಾತ್ರ

ಮೈಸೂರು: ಸಮಾಜದ ಕೆಳ ವರ್ಗಕ್ಕೆ ಸೇರಿದ ಸಂತರು ಪುಸ್ತಕ ಜ್ಞಾನಕ್ಕಿಂತ ಅನುಭವದ ಅರಿವನ್ನು ಸಂಪಾದಿಸಿದ್ದರು. ಅರ್ಥವಾಗದ ಮಹಾಕಾವ್ಯಕ್ಕಿಂತ ಜನಸಾಮಾನ್ಯರ ಭಾಷೆಯಲ್ಲಿ ಗೇಯ ಗೀತೆಗಳನ್ನು ರಚಿಸಿ ಹಾಡಿದ ಅವರ ಕಾಯಕವೇ ಒಂದು ಅದ್ಭುತ ಕಾವ್ಯ ಎಂದು ವಿದ್ವಾಂಸ ಪ್ರೊ.ಮ.ಸು.ಕೃಷ್ಣಮೂರ್ತಿ ಮೆಚ್ಚುಗೆ ವ್ಯಕ್ತಪಡಿಸಿದರು.

ಮಾನಸಗಂಗೋತ್ರಿಯ ಇಎಂಎಂಆರ್‌ಸಿ ಸಭಾಂಗಣದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಡಾ.ಬಾಬೂ ಜಗಜೀವನರಾಮ್ ಅಧ್ಯಯನ, ಸಂಶೋಧನ ಮತ್ತು ವಿಸ್ತರಣ ಕೇಂದ್ರ ಮಂಗಳವಾರ ಏರ್ಪಡಿಸಿದ್ದ `ಸಂತ ಶಿರೋಮಣಿ ರವಿದಾಸ ಜಯಂತಿ ಹಾಗೂ ವಿಚಾರ ಸಂಕಿರಣ~ ಉದ್ಘಾಟಿಸಿ ಅವರು ಮಾತನಾಡಿದರು.

ಮಧ್ಯಯುಗದಲ್ಲಿ ಕ್ರಾಂತಿಯನ್ನೇ ಮಾಡಿದ, ವರ್ಗರಹಿತ ಸಮಾಜದ ಕನಸು ಕಂಡ ಸಂತರಲ್ಲಿ ಬಹುಪಾಲು ಮಂದಿ ಅನಕ್ಷರಸ್ತರಾಗಿದ್ದರು. ಅವರಲ್ಲಿ ಪುಸ್ತಕ ಜ್ಞಾನಕ್ಕಿಂತ ಲೋಕಾನುಭವ ಇತ್ತು. ಸಂಗೀತದಲ್ಲಿ ವಿಶೇಷ ಆಸಕ್ತಿ ಹೊಂದಿದ್ದ ಅವರು ಜಾತಿ, ಧರ್ಮವನ್ನು ಪುಡಿಗಟ್ಟುವ, ದೇವರನ್ನು ಸ್ಮರಿಸುವ ಕಾವ್ಯಗಳನ್ನು ರಚಿಸಿ ಹಾಡುತ್ತಿದ್ದರು. ಅವರ ಭಕ್ತಿಯ ತೀವ್ರತೆಗೆ ಉತ್ತರ ಭಾರತದ ಸಾಮಾನ್ಯ ಭಾಷೆಯಾಗಿ `ಹಿಂದಿ~ ಬೆಳೆಯಿತು ಎಂದು ಅಭಿಪ್ರಾಯಪಟ್ಟರು.

ಭಾರತದಲ್ಲಿ ನಡೆದ ಭಕ್ತಿಯ ಆಂದೋಲನ ವಿಶ್ವದ ಪ್ರಮುಖ ಚಳವಳಿಗಳಲ್ಲಿ ಒಂದು. ದೈವಿ ಪ್ರೇಮದ ಮುಂದೆ ಜಾತಿ, ಧರ್ಮಗಳಿಲ್ಲ ಎಂದು ಸಾರಿದ ಸಂತರು `ಬಟ್ಟೆ ಕತ್ತರಿಸುವ ಕತ್ತರಿಯಾಗಬಾರದು; ಬಟ್ಟೆ ಹೊಲಿಯುವ ದಾರವಾಗಬೇಕು~ ಎಂಬ ಸಂದೇಶ ನೀಡಿದರು. ಇತರ ಧಾರ್ಮಿಕ ಆಂದೋಲನಗಳಂತೆ ಅವರು ಬೋಧನಗೆಳನ್ನು, ಉಪದೇಶಗಳನ್ನು ಮಾಡಲಿಲ್ಲ. ಎಲ್ಲ ಮತಗಳನ್ನು ಅವಲೋಕಿಸಿ, ಒಳಿತನ್ನು ಸ್ವೀಕರಿಸಿದರು. ವಿಶ್ವದ ಎಲ್ಲ ಧರ್ಮಗಳಿಗೆ ಇರುವಂತೆ ಸಂತರಿಗೆ ಯಾವುದೇ ಲಾಂಛನವಿಲ್ಲ ಎಂದು ಹೇಳಿದರು.

ಪ್ರಪಂಚದ ಮೂಲ ತತ್ವ ಒಂದೇ. ಭಿನ್ನತೆಯ ಆಧಾರದ ಮೇಲೆ ಆಧ್ಯಾತ್ಮಿಕ ಜೀವನ ಕಟ್ಟಿಕೊಳ್ಳಬಹುದು ಎಂಬುದಕ್ಕೆ ಸಂತರೇ ನಿದರ್ಶನ. ಅವರಿಗೆ ದಲಿತ ಸಂತ, ಆ ಸಂತ ಎಂದು ಹೆಸರಿಸುವುದು ಬೇಡ. `ಸಾದುವಿನ ಜಾತಿ ಕೇಳಬೇಡ~ ಎಂದು ಸಂತ ರವಿದಾಸರೇ ಹೇಳಿದ್ದಾರೆ ಎಂದು ನುಡಿದರು.

ಸಂದರ್ಶಕ ಪ್ರಾಧ್ಯಾಪಕ ಪ್ರೊ.ಲಕ್ಷ್ಮಿನಾರಾಯಣ ಅರೋರಾ ಮಾತನಾಡಿದರು. ಕುಲಸಚಿವ ಪ್ರೊ.ಪಿ.ಎಸ್.ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಬಾಬೂ ಜಗಜೀವನರಾಮ್ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ.ಮೈಲಹಳ್ಳಿ ರೇವಣ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT