ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತರನ್ನು ಸೀಮೆಯೊಳಗಿಡುವುದು ಮ್ಯಾಚ್ ಫಿಕ್ಸಿಂಗ್!

Last Updated 26 ಸೆಪ್ಟೆಂಬರ್ 2013, 6:11 IST
ಅಕ್ಷರ ಗಾತ್ರ

ಕೋಲಾರ: ಭೂಮಂಡಲದ ಗುರುತ್ವ­ವನ್ನೇ ಮನುಕುಲ ಮೀರಿ ಹೋಗುತ್ತಿದೆ. ಮಾನವ ನಿರ್ಮಿತ ವಸ್ತುಗಳು ಸೌರ­ವ್ಯೂಹವನ್ನೂ ಭೇದಿಸುತ್ತಿವೆ. ಅದಕ್ಕೂ ಮೊದಲೇ ಸಂತರು ಭವ ಬಂಧನ­ಗಳಿಂದ ಮನುಕುಲ ಮೀರುವುದು ಹೇಗೆಂದು ಬದುಕಿ ತೋರಿಸಿಕೊಟ್ಟರು ಎಂದು ವಿಮರ್ಶಕ ಡಾ.ಚಂದ್ರಶೇಖರ ನಂಗಲಿ ಅಭಿಪ್ರಾಯಪಟ್ಟರು.

ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರವು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಸಹಯೋಗ­ದಲ್ಲಿ ನಗರದ ಟಿ.ಚೆನ್ನಯ್ಯ ರಂಗ­ಮಂದಿರದಲ್ಲಿ ಏರ್ಪಡಿಸಿರುವ ‘ಕಾಲು­ದಾರಿ ಸಂತ ಪರಂಪರೆ ಮತ್ತು ಕನಕ­ದಾಸರು’ ವಿಚಾರ ಸಂಕಿರಣದಲ್ಲಿ ಬುಧ­ವಾರ ಅವರು ಗಂಗ­ವಾಡಿ ಸೀಮೆಯಲ್ಲಿ ಕನ್ನಡ ಕಾಲುದಾರಿ ಪಂಥದ ಕುರಿತು ವಿಷಯ ಮಂಡಿಸಿದರು.

ಕಾಲುದಾರಿ ಸಂತರನ್ನು ಭೂತ­ಕಾಲದ ಪರಿಪ್ರೇಕ್ಷ್ಯದಲ್ಲೇ ನೋಡಬೇಕಾ­ಗಿಲ್ಲ. ಸಂತರ ತಿರುಗುಬೀಳುತನವನ್ನು ಸತ್ಯಾಗ್ರಹದ ಅಸ್ತ್ರವನ್ನಾಗಿಸಿದ ಗಾಂಧೀಜಿ, ಅಜ್ಞಾತ, ಅಲಕ್ಷಿತ ನೆಲೆಗಳ ಸ್ಥಳೀಯ ಭೂಗೋಳ ನೆಲೆಯನ್ನೇ ಸಮಗ್ರ ಸಾಹಿತ್ಯವನ್ನಾಗಿಸಿದ ಕುವೆಂಪು, ಸಂತರ ಕಾಯಕತತ್ವವನ್ನೇ ನೈಸರ್ಗಿಕ ಕೃಷಿಗೆ ಅಳವಡಿಸಿಕೊಂಡ ಸಿ.ನಾರಾ­ಯಣ­ರೆಡ್ಡಿ, ಸಂತರ ತಾಯ್ತನವನ್ನೇ ಪರಿಸರ ಕಾಳಜಿಯಾಗಿಸಿಕೊಂಡ ಮೇಧಾ ಪಾಟ್ಕರ್, ಸಾಲುಮರದ ತಿಮ್ಮಕ್ಕ, ಸಂತರ ಕ್ರಾಂತಿಕಾರಿ ಗುಣವನ್ನೇ ಸರ್ವಾಧಿಕಾರಿ ಶಕ್ತಿಯನ್ನು ಉರುಳಿ­ಸುವ ಶಕ್ತಿಯನ್ನಾಗಿ ಮಾಡಿಕೊಂಡ ಎನ್ ಟಿಆರ್ ಅವರೂ ಸಂತರ ಸಾಲಿಗೆ ಸೇರುತ್ತಾರೆ. ಇವರೆಲ್ಲರೂ ಸಂತರ ರೀತಿಯಲ್ಲೇ ಧ್ಯಾನಸ್ಥ ಸ್ಥಿತಿಯಲ್ಲಿ ತಮ್ಮನ್ನು ತೆರೆದುಕೊಂಡವರು ಎಂದು ಹೊಸ ಬಗೆಯಲ್ಲಿ ವಿಶ್ಲೇಷಿ­ಸಿದರು.

ಸಂತರನ್ನು ಸೀಮೆಗಳಿಗೆ ಒಳಪಡಿಸಿ ನೋಡುವ ವಿಧಾನವೇ ಸೀಮಿತ­ವಾದದು. ಅದು ಮ್ಯಾಚ್ ಫಿಕ್ಸಿಂಗ್‍ ರೀತಿ. ಗುರುತ್ವವನ್ನು ಮೀರುವ ಸಂತರ ಸ್ಫೂರ್ತಿಯನ್ನೇ ನಾಶಗೊಳಿಸು­ವಂಥದ್ದು. ಸಂತರನ್ನು ಕಲ್ಯಾಣ ಸೀಮೆ, ಬೆಳುವಲ ಸೀಮೆ, ಬಯಲು ಸೀಮೆ, ಗಂಗವಾಡಿ ಸೀಮೆ ಎಂದು ಸೀಮಾಬದ್ಧ­ಗೊಳಿಸಿದರೆ ನಿಸ್ಸೀಮನಾದ ಚೆಲುವಂಗೆ ಒಲಿದೆನವ್ವಾ ಎನ್ನುವ ಅಕ್ಕನ ಮಾತಿಗೆ ಬೆಲೆ ಎಲ್ಲಿ ಎಂದು ಪ್ರಶ್ನಿಸಿದರು.

ಸ್ವಾರ್ಥಪೂರಿತವಾದ ಗುರುತ್ವದ ಆಕರ್ಷಣೆಗಳಾದ ಜಾತಿ, ಮತ, ಧರ್ಮ, ದೇಶ, ಕಾಲ ಭಾಷೆಯನ್ನು ಮೀರುವವರೇ ಸಂತರು. ಪ್ರತಿಷ್ಠಿತ ಗುರುತ್ವದ ಪೀಠಗಳೊಡನೆ ಗುರುತಿಸಿ­ಕೊಳ್ಳದೆ ಸಂತರು ಅದನ್ನು ಮೀರುವ ಪ್ರಯತ್ನ ಮಾಡುತ್ತಾರೆ. ದೇಶದ ಯುಗ­ಮಾನದಲ್ಲೇ ಈ ಮೀರುವಿಕೆ ಇದೆ. ಅದನ್ನು ನಮ್ಮೆಲ್ಲರ ವ್ಯಕ್ತಿತ್ವದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ ಎಂದರು.

ಗುರುತ್ವ ಮೀರಲು ಸ್ಫೋಟಕ ಶಕ್ತಿ ಬೇಕು. ಮಾನವ ನಿರ್ಮಿತ ವಸ್ತುಗಳು ಈ ಸ್ಫೋಟಕ ಶಕ್ತಿಯಿಂದ ಸೌರ­ವ್ಯೂಹ­ವನ್ನೇ ಭೇದಿಸುತ್ತಿವೆ. ಅಂಥ ಸ್ಫೋಟಕ ಶಕ್ತಿಯ ಪ್ರತಿನಿಧಿಗಳನ್ನಾಗಿ ಸಂತರನ್ನು ಪರಿಭಾವಿಸಿ ಪ್ರಸ್ತು ಸಂದರ್ಭ­ದಲ್ಲಿ ವಿಶ್ಲೇಷಿಸಬೇಕಾಗಿದೆ ಎಂದರು.

ಕಲ್ಯಾಣ ಸೀಮೆ ಸಂತರ ಕುರಿತು ಡಾ.ಸಿ.ಬಿ.ಚಿಲ್ಕಾರಾಗಿ, ಬೆಳುವಲ ಸೀಮೆ ಸಂತರ ಕುರಿತು ಪ್ರೊ.ಶಂಕರ ಕಟಗಿ, ಬಯಲು ಸೀಮೆ ಸಂತರ ಕುರಿತು ಡಾ.ನಟರಾಜ ಬೂದಾಳ್ ವಿಷಯ ಮಂಡಿಸಿದರು.

ನಾಲ್ಕನೇ ಗೋಷ್ಠಿಯಲ್ಲಿ ಕನ್ನಡದ ಹಾಡು ಮತ್ತು ಕಾಯಕ ಜೀವಿಗಳು ಕುರಿತು ಡಾ.ಕೆ.ವೈ.ನಾರಾಯಣಸ್ವಾಮಿ ವಿಷಯ ಮಂಡಿಸಿದರು. ಅಧ್ಯಕ್ಷತೆ ವಹಿಸಿ ಸ್ಥಳೀಯ ಜ್ಞಾನ ಪರಂಪರೆ ಮತ್ತು ಸಂತರ ಕುರಿತು ಡಾ.ಕೆ.ಮರುಳ­ಸಿದ್ದಪ್ಪ ವಿಷಯ ಮಂಡಿಸಿ­ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT