ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತೆ ದಿನದ ರಸ್ತೆ ಬದಿ `ಖಾನಾವಳಿ'

Last Updated 1 ಸೆಪ್ಟೆಂಬರ್ 2013, 20:26 IST
ಅಕ್ಷರ ಗಾತ್ರ

ಕಾರವಾರ: ನಗರದಲ್ಲಿ ಭಾನುವಾರದ ಸಂತೆ ಬಲು ಜೋರಾಗಿ ನಡೆಯುತ್ತದೆ. ಹಣ್ಣು-ತರಕಾರಿ ಮತ್ತಿತರರ ಪದಾರ್ಥಗಳನ್ನು ಹೊತ್ತು ನೂರಾರು ವ್ಯಾಪಾರಸ್ಥರು ಸಂತೆಗೆ ಬರುತ್ತಾರೆ. ಇವರ ಮಧ್ಯಾಹ್ನ ಊಟ ಮಾತ್ರ ಸಾಮಾನ್ಯವಾಗಿ ರಸ್ತೆಬದಿಯ `ಖಾನಾವಳಿ'ಯಲ್ಲೇ ನಡೆಯುತ್ತದೆ.

ಈ ಖಾನಾವಳಿಗಳನ್ನು ನಡೆಸುವ ಜನರು ಕಾರವಾರದವರಲ್ಲ. ಅವರು ಬೇರೆ ಬೇರೆ ಊರುಗಳಿಂದ ಬಂದವರು. ಸಂತೆಗೆಂದೇ ಬರುವ ಇವರು ಸಂತೆ ಮುಗಿಯುತ್ತಿದ್ದಂತೆ ಮತ್ತೆ ತಮ್ಮ ಊರು ಸೇರುತ್ತಾರೆ. ಇಲ್ಲಿ ಭಾನುವಾರ ಮಾತ್ರ ಸಂತೆ ನಡೆಯುತ್ತದೆ. ಉಳಿದ ದಿನ ಅವರು ಇತರೆ ಕಾಯಕದಲ್ಲಿ ತೊಡಗಿರುತ್ತಾರೆ.

ಸಂತೆಯೊಳಗೊಂದು ಸುತ್ತು ಬಂದರೆ ಇಂತಹ ರಸ್ತೆಬದಿ ಖಾನಾವಳಿಗಳು ಸುಮಾರು ಐದಾರು ಸಿಗುತ್ತವೆ. ಈ ಖಾನಾವಳಿ ನಡೆಸುವರು ಸಂತೆ ಮುನ್ನಾ ದಿನವಾದ ರಾತ್ರಿಯೇ ನಗರಕ್ಕೆ ಬಂದು ಸಂತೆ ನಡೆಯುವ ಸಮೀಪದ ರಸ್ತೆಬದಿ ಟೆಂಟ್ ಹಾಕಿಕೊಂಡು ಉಳಿದುಕೊಳ್ಳುತ್ತಾರೆ. ಬೆಳಿಗ್ಗೆ ಎದ್ದು ತಿಂಡಿ ಹಾಗೂ ಮಧ್ಯಾಹ್ನದ ಊಟಕ್ಕೆ ತಯಾರಿ ಮಾಡಿಕೊಳ್ಳುತ್ತಾರೆ.

ನಗರದಲ್ಲಿ ಹಲವಾರು ಹೋಟೆಲ್ ಹಾಗೂ ಕ್ಯಾಂಟಿನ್‌ಗಳಿದ್ದರೂ ಇಲ್ಲಿ ತಿಂಡಿ-ಊಟ ದುಬಾರಿ ಎನ್ನುವ ಕಾರಣದಿಂದ ಅನೇಕ ವ್ಯಾಪಾರಸ್ಥರು ಮಧ್ಯಾಹ್ನ ಊಟಕ್ಕೆ ರಸ್ತೆಬದಿ ಖಾನಾವಳಿಯನ್ನೇ ನೆಚ್ಚಿಕೊಂಡಿದ್ದಾರೆ. ಇಲ್ಲಿ 30 ರಿಂದ 35 ರೂಪಾಯಿಗಳಲ್ಲಿ ಹೊಟ್ಟೆ ತುಂಬಾ ಊಟ ಮಾಡಬಹುದು.

ಹಳಿಯಾಳ ತಾಲ್ಲೂಕಿನ ಮದ್ನಳ್ಳಿಯ ಈಶ್ವರ ಕಂಟೆನವರ, ಗೌರವ್ವ ದಂಪತಿ ಹಲವಾರು ವರ್ಷಗಳಿಂದ ಕಾರವಾರ ಸಂತೆಗೆ ಬರುತ್ತಿದ್ದು, ಇಲ್ಲಿನ ವ್ಯಾಪಾರಸ್ಥರಿಗೆ ತಮ್ಮ ಕೈ ರುಚಿ ತೋರಿಸುತ್ತಿದ್ದಾರೆ. ಇವರು ಪ್ರತಿ ಭಾನುವಾರ ನಗರದ ಮಹಾತ್ಮ ಗಾಂಧಿ ರಸ್ತೆ ಬದಿಯಲ್ಲಿ ಟೆಂಟ್ ಹಾಕಿಕೊಂಡು ಕಟ್ಟಿಗೆ ಒಲೆಯಲ್ಲಿ ತಿಂಡಿ ಹಾಗೂ ಅಡುಗೆ ಸಿದ್ಧಪಡಿಸುತ್ತಾರೆ. ಅಡುಗೆ ಬೇಕಾದ ಕೆಲ ಪದಾರ್ಥಗಳನ್ನು ಊರಿನಲ್ಲೇ ತಂದಿರುತ್ತಾರೆ. ಇನ್ನು ಕೆಲವು ಪದಾರ್ಥಗಳನ್ನು ಸಂತೆಯಲ್ಲೇ ಖರೀದಿಸುತ್ತಾರೆ.

ಬೆಳಗಿನ ತಿಂಡಿಗೆ ಉಪ್ಪಿಟ್ಟು, ಅವಲಕ್ಕಿ ಹಾಗೂ ಮಧ್ಯಾಹ್ನದ ಊಟಕ್ಕೆ ಖಡಕ್ ರೊಟ್ಟಿ, ಬದನೆಕಾಯಿ ಎಣಗಾಯಿ, ಕಾಳು ಪಲ್ಯ, ಮೆಣಸಿನ ಚಟ್ನಿ, ಜೊತೆಗೆ ಅನ್ನ, ಸಾಂಬಾರ್, ಮಜ್ಜಿಗೆ ಸಿಗುತ್ತವೆ. ಅವರ ಆತ್ಮೀಯತೆಗೆ ಮನಸೋತ ವ್ಯಾಪಾರಸ್ಥರು ಬೇರೆಲ್ಲೂ ಹೋಗದೆ ಇಲ್ಲಿಯೇ ಬಂದು ಊಟ ಮಾಡುತ್ತಾರೆ. ಇಲ್ಲಿ ಸುಮಾರು 40-50 ಮಂದಿ ಊಟ ಮಾಡುತ್ತಾರೆ.   

`ಪ್ರತಿ ಶನಿವಾರ ಅಂಕೋಲಾದಲ್ಲಿ ನಡೆಯುವ ಸಂತೆಗೆ ಹೋಗಿ, ಅಲ್ಲಿಂದ ಭಾನುವಾರ ಕಾರವಾರದ ಸಂತೆ ಬರುತ್ತಿದ್ದೆವು. ಈಚಿನ ವರ್ಷಗಳಲ್ಲಿ ಅಂಕೋಲಾದ ಸಂತೆಗೆ ಹೋಗುವುದನ್ನು ಬಿಟ್ಟಿದ್ದೇವೆ. ಪ್ರತಿ ಭಾನುವಾರ ಇಲ್ಲಿನ ಸಂತೆಗೆ ಮಾತ್ರ ಬಂದು ಅಡುಗೆ ಮಾಡುತ್ತೇವೆ. ಇತರ ದಿನಗಳಲ್ಲಿ ಊರಿನಲ್ಲೇ ಸಣ್ಣಪುಟ್ಟ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೇವೆ' ಎನ್ನುತ್ತಾರೆ ಗೌರವ್ವ.
`ನಾನು ತರಕಾರಿ ವ್ಯಾಪಾರಿ. ಕುಮಟಾದಿಂದ ವ್ಯಾಪಾರ ಮಾಡಲು ಇಲ್ಲಿಗೆ ಬಂದಿದ್ದೇನೆ. ನಮ್ಮಂತವರು ದೊಡ್ಡ ಹೋಟೆಲ್‌ಗಳಿಗೆ ಹೋಗಿ ಊಟ ಮಾಡಲು ಸಾಧ್ಯವಿಲ್ಲ. ಅಲ್ಲಿ ಊಟ ದುಬಾರಿಯಾಗಿರುತ್ತದೆ. ಆದ್ದರಿಂದ ನಾವು ಊಟಕ್ಕೆ ರಸ್ತೆಬದಿಯ ಖಾನಾವಳಿಯನ್ನೇ ಆಶ್ರಯಿಸಿದ್ದೇವೆ' ಎನ್ನುತ್ತಾರೆ ಗ್ರಾಹಕ ರಮೇಶ.

ಪಲಾವ್ ರುಚಿ: ಹಾವೇರಿ ಜಿಲ್ಲೆಯ ಸವಣೂರು ತಾಲ್ಲೂಕಿನ ಆಸೀಫ್ ಹಾಗೂ ಅವರ ತಂದೆ ಬಾಬಾಜಾನ್ ಕಾರವಾರದ ಭಾನುವಾರ ಸಂತೆಯಲ್ಲಿ ಮಧ್ಯಾಹ್ನ ಊಟಕ್ಕೆ ಚಿಕನ್ ಪಲಾವ್ ಹಾಗೂ ಅನ್ನವನ್ನು ರಸ್ತೆಬದಿಯಲ್ಲಿ ಕಟ್ಟಿಗೆ ಒಲೆಯಲ್ಲೇ ಸಿದ್ಧಪಡಿಸುತ್ತಾರೆ. 
`ಇಲ್ಲಿ ಚಿಕನ್ ಪಲಾವ್, ಅನ್ನ, ಸಾಂಬಾರ್, ಬೇಯಿಸಿದ ಮೊಟ್ಟೆ ಸಿಗುತ್ತದೆ. ಅಡುಗೆಗೆ ಬೇಕಾದ ಚಿಕನ್ ಅನ್ನು ನಗರದಲ್ಲೇ ಖರೀದಿಸುತ್ತೇನೆ. ಸಂತೆ ದಿನವಾದ ಪ್ರತಿ ಭಾನುವಾರ ಸುಮಾರು 70-80 ಮಂದಿ ಇಲ್ಲಿ ಊಟ ಮಾಡುತ್ತಾರೆ. ಒಂದು ಊಟಕ್ಕೆ 35 ರೂಪಾಯಿ ಮಾತ್ರ' ಎನ್ನುತ್ತಾರೆ ಆಸೀಫ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT