ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತೆಮೈದಾನದಲ್ಲಿ ವ್ಯಾಪಾರ ಮಾಡಿ: ರೈತಸಂಘ

Last Updated 23 ಫೆಬ್ರುವರಿ 2012, 10:00 IST
ಅಕ್ಷರ ಗಾತ್ರ

ಹಳೇಬೀಡು: ಪಟ್ಟಣದ ಸಂತೆಯ ದಿನವಾದ ಪ್ರತಿಬುಧವಾರ ಸಂತೆ ಮೈದಾನದ ಹೊರಗೆ ಹಾಸನ ರಸ್ತೆ ದ್ವಾರಸಮುದ್ರ ಕೆರೆ ತಿರುವಿನಲ್ಲಿ ಸರಕು ಜೊಡಿಸಿಕೊಂಡು ವ್ಯಾಪಾರ ಮಾಡು ವುದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗುವುದಲ್ಲದೆ, ಸಾರ್ವ ಜನಿಕರ ಓಡಾಟಕ್ಕೂ ತೊಡಕಾಗುತ್ತಿದೆ. ಮುಂದಿನವಾರದಿಂದ ಮೈದಾನ ದಲ್ಲಿಯೇ ವ್ಯಾಪಾರ ಮಾಡಬೇಕು ಎಂದು ರೈತ ಸಂಘದವರು ಗ್ರಾಪಂ ಅಧ್ಯಕ್ಷರೊಂದಿಗೆ ವ್ಯಾಪಾರಿಗಳಿಗೆ ಎಚ್ಚರಿಕೆ ನೀಡಿದರು.

ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುವವರಿಗೆ ಸುರಕ್ಷತೆ ಇರುವುದಿಲ್ಲ. ವಾಹನದಟ್ಟಣೆ ಹೆಚ್ಚಾದಾಗ ಅಪಘಾತ ಸಂಭವಿಸುವ ಸಾಧ್ಯತೆ ಇರುತ್ತದೆ. ಅಂತಹ ಸಂದರ್ಭದಲ್ಲಿ ಸಾವು ನೋವು ಸಂಭಸಿದರೆ ಯಾವುದೇ ಪರಿಹಾರ ದೊರಕುವುದಿಲ್ಲ. ಸಂತೆ ಮೈದಾನ ದಲ್ಲಿಯೇ ವ್ಯಾಪಾರ ಮಾಡುವುದು ಸೂಕ್ತ ಎಂದು ವ್ಯಾಪಾರಿಗಳಿಗೆ ರೈತ ಮುಖಂಡರು ಸಲಹೆ ಮಾಡಿದರು.

ಸಂತೆ ಮೈದಾನದ ಗದ್ದೆ ರಸ್ತೆಯಲ್ಲಿ ವ್ಯಾಪಾರ ಮಾಡುವುದರಿಂದ ರೈತರು ಎತ್ತು ಗಾಡಿ ಹಾಗೂ ಜಾನುವಾರು ಗಳೊಂದಿಗೆ ಜಮೀನುಗಳಿಗೆ ತೆರಳಲು ತೊಂದರೆಯಾಗುತ್ತಿದೆ. ಗದ್ದೆ ರಸ್ತೆ ಯಲ್ಲಿಯೂ ವ್ಯಾಪಾರ ಮಾಡಬಾರದು ಎಂದು ರೈತ ಮುಖಂಡರು ಎಚ್ಚರಿಕೆ ನೀಡುವಾಗ ಮಧ್ಯಪ್ರವೇಶಿಸಿದ ಸುಂಕ ವಸೂಲಿ ಗುತ್ತಿಗೆದಾರರು “ಕೆರೆ ತಿರುವಿನಲ್ಲಿ ಅಂಗಡಿ ಎತ್ತಂಗಡಿ ಮಾಡುವುದು ತಪ್ಪೇನಲ್ಲ.

ಗದ್ದೆ ರಸ್ತೆಯಲ್ಲಿ ವ್ಯಾಪಾರ ಮಾಡುವುದರಿಂದ ತೊಂದರೆ ಇಲ್ಲ. ಸಂಪೂರ್ಣವಾಗಿ ಮೈದಾನದಲಿಯೇ ವ್ಯಾಪಾರ ಮಾಡಬೇಕು ಎಂದರೆ ದೂರದಿಂದ ಬಂದ ವ್ಯಾಪಾರಿಗಳು ಬರಿಗೈಯಿನಲ್ಲಿ ಹಿಂದಿರುಗುವಂತಾಗುತ್ತದೆ. ನಮಗೂ ಸುಂಕವಸೂಲಿ ಆಗುವುದಿಲ್ಲ. ನಮ್ಮ ಹರಾಜಿನ ಹಕ್ಕು ಮುಗಿದ ನಂತರ ಮುಂದಿನ ಬದಲಾವಣೆ ಮಾಡಿ” ಎಂದರು. ಇದೇ ಸಂದರ್ಭದಲ್ಲಿ ರೈತಸಂಘ ಸದಸ್ಯರಿಗೂ ಗುತ್ತಿಗೆದಾರ ರಿಗೂ ಮಾತಿನ ಚಕಮಕಿ ನಡೆಯಿತು.

ಯಾರಿಗೂ ತೊಂದರೆಯಾಗದಂತೆ ಸುರಕ್ಷಿತವಾಗಿ ವ್ಯಾಪಾರ ಮಾಡುವಂತೆ ವ್ಯವಸ್ಥೆ ಮಾಡಲಾಗುವುದು. ವ್ಯಾಪಾರಿಗಳು ರೈತರು ಹಾಗೂ ಗ್ರಾಹಕರ ಸಹಕಾರಬೇಕು ಎಂದು ಗ್ರಾಪಂ ಅಧ್ಯಕ್ಷ ಸಿ.ಆರ್.ಲಿಂಗಪ್ಪ ಪ್ರೇಮಣ್ಣ ತಿಳಿಸಿದ ನಂತರ ಪರಿಸ್ಥಿತಿ ತಿಳಿಯಾಯಿತು.

ಭಾರತೀಯ ಕಿಸಾನ್ ಸಂಘ ತಾಲ್ಲೂಕು ಅಧ್ಯಕ್ಷ ಹಂಚಿಹಳ್ಳಿ ಗಂಗಾ ಧರ್, ರೈತ ಸಂಘದ ತಾಲ್ಲೂಕು ಅಧ್ಯಕ್ಷ ಎಲ್.ಈ.ಶಿವಪ್ಪ, ರೈತ ಮುಖಂಡರಾದ ಚನ್ನೇಗೌಡ, ಗುರುಶಾಂತಪ್ಪ ಮೊದಲಾದವರು ಇದ್ದರು.
ಟೊಮ್ಯಾಟೊ ದುಬಾರಿ: ವಾರದ ಸಂತೆಯ ದಿನವಾದ ಬುಧವಾರ ಟೊಮ್ಯಾಟೊ ಬೆಲೆಯಲ್ಲಿ ಏರಿಕೆ ಕಂಡುಬಂತು.
12ರಿಂದ 15ಕೆಜಿ ತೂಕದ ಒಂದು ಚೀಲ ಹಣ್ಣು ರೂ150ರಿಂದ 180ರವರೆಗೆ ಮಾರಾಟವಾಯಿತು. ಸಣ್ಣ ಗಾತ್ರದ ಕಡಿಮೆ ಗುಣಮಟ್ಟದ ಹಣ್ಣು ಸಹ ರೂ100ರಿಂದ 120ರವರೆಗೆ ಮಾರಾಟವಾಯಿತು. ಕೆಜಿ ಒಂದಕ್ಕೆ ರೂ.15ರಿಂದ 18ರವರೆಗೆ ಚಿಲ್ಲರೆ ಮಾರಾಟ ನಡೆಯಿತು.

ಶಿವರಾತ್ರಿ ಹಬ್ಬದ ಸಮಯಕ್ಕಿಂತ ಹೆಚ್ಚಿನ ಬೆಲೆ ನಿಗದಿಯಾಗಿತ್ತು. ಕೊಳವೆಬಾವಿಗಳಲ್ಲಿ ಅಂತರ್ಜಲ ಪ್ರಮಾಣ ಇಳಿಮುಖವಾಗುತ್ತಿದೆ. ಸಾಕಷ್ಟು ಬಾವಿಗಳು ನೀರಿಲ್ಲದೆ ಒಣಗಿವೆ. ಉರಿಯುವ ಬಿಸಿಲಿನ ತಾಪಕ್ಕೆ ಬೆಳೆ ಬಾಡುತ್ತಿರುವುದಲ್ಲದೆ, ಬೆಳೆ ಹಲವಾರು ರೋಗಗಳಿಗೂ ತುತ್ತಾಗಿದೆ, ಹೀಗಾಗಿ ಟೊಮ್ಯಾಟೊ ಮಾತ್ರವಲ್ಲದೆ ರೈತರು ಬೆಳೆದ ತರಕಾರಿಗಳ ಫಸಲು ತೀವ್ರ ಪ್ರಮಾಣದಲ್ಲಿ ಇಳಿಕೆಯಾಗಿದೆ. ಬೆಲೆ ಏರಿಕೆಯಾದರೂ ಅಷ್ಟೇನು ಲಾಭವಾಗುವುದಿಲ್ಲ ಎಂಬ ಮಾತು ರೈತರಿಂದ ಕೇಳಿಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT