ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂದರ್ಶನ ಯಶಸ್ಸು ಹೇಗೆ?

Last Updated 12 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಉದ್ಯೋಗಕ್ಕಾಗಿ ನಡೆಯುವ ಸಂದರ್ಶನಗಳೆಂದರೆ ಅನುಭವಿ ಅಭ್ಯರ್ಥಿಗಳಿಗೂ ಸಾಕಷ್ಟು ಉದ್ವೇಗ, ಆತಂಕ ಇರುತ್ತದೆ. ಹಾಗಾಗಿ, ಕಲಿಕೆಯ ಜೊತೆ ಕಾಲೇಜಿನ ಮೋಜಿನ ದಿನಗಳನ್ನು ಆಗಷ್ಟೇ ಮುಗಿಸಿ, ಕ್ಯಾಂಪಸ್ ಆಯ್ಕೆ ಎದುರಿಸುವ ವಿಧ್ಯಾರ್ಥಿಗಳಿಗೆ, ಹೊಸ ಜೀವನವನ್ನು ಪ್ರಾರಂಭಿಸುವ ಉತ್ಸುಕತೆಯ ಜೊತೆಯಲ್ಲೇ, ಈ ಪ್ರಕ್ರಿಯೆಯ ಬಗ್ಗೆ ಭಯ, ಭೀತಿ ಸಾಮಾನ್ಯ.

ಸ್ವಲ್ಪ ಮಟ್ಟಿನ ಆತಂಕ ಸ್ವಾಭಾವಿಕವಾದರೂ, ಈ ಪ್ರಕ್ರಿಯೆ ಕುರಿತು ಭಯ, ಭೀತಿ ಪಡುವ ಅಗತ್ಯವಿಲ್ಲ. ಏಕೆಂದರೆ, ಕ್ಯಾಂಪಸ್‌ಗೆ ಬರುವ ಕಂಪೆನಿಗಳಿಗೂ ಸಹ ಒಳ್ಳೆಯ ಅಭ್ಯರ್ಥಿಗಳ ಅಗತ್ಯವಿರುತ್ತದೆ.
 
ಆದರೆ ಕ್ಯಾಂಪಸ್ ಆಯ್ಕೆಗಳಲ್ಲಿ ನಾನೇ ನೋಡಿರುವಂತೆ ಅನೇಕ ಉತ್ತಮ ಅಭ್ಯರ್ಥಿಗಳೂ ಕೂಡ ಕೆಲವೊಮ್ಮೆ ಸಂದರ್ಶನ ಮುಗಿಯುವ ಹಂತದಲ್ಲಿ ಅಸಮಂಜಸ ಅಥವಾ ಅನುಚಿತ ಪ್ರಶ್ನೆಗಳನ್ನು ಕೇಳಿ ತಿರಸ್ಕೃತರಾಗಿರುವುದೂ ಉಂಟು.

ಅದೇ ರೀತಿ ಅಭ್ಯರ್ಥಿಗಳು ಯಾವುದೇ ರೀತಿಯ ತಯಾರಿಯಿಲ್ಲದೆ, ಸಂದರ್ಶನಕ್ಕೆ ಹಾಜರಾಗಿ ತಮ್ಮ ವೃತ್ತಿ ಜೀವನವನ್ನು ರೂಪಿಸುವಲ್ಲಿ ವಿಫಲವಾಗುವುದರ ಜೊತೆಗೆ ಕಾಲೇಜಿನ ಖ್ಯಾತಿಗೆ ಧಕ್ಕೆ ತಂದಿರುವುದೂ ಉಂಟು.
 
ಈಗ ಉದ್ಯೋಗಾವಕಾಶಗಳು ಅಧಿಕವಾಗಿದ್ದರೂ, ಮೇಲ್ಪಂಕ್ತಿಯಲ್ಲಿರುವ ಕಂಪೆನಿಗಳಿಗೆ ಆಯ್ಕೆ ಸ್ಪರ್ಧಾತ್ಮಕವಾಗಿರುತ್ತದೆ. ಉತ್ತಮ ಸಂಬಳ, ಸೌಲಭ್ಯ ಮತ್ತು ತರಬೇತಿ ನೀಡುವ ಈ ಕಂಪೆನಿಗಳಲ್ಲಿ ನೀವು ಉದ್ಯೋಗವನ್ನು ಗಳಿಸಲು ವ್ಯಾಪಕವಾದ ತಯಾರಿಯಿಂದ ಸಂದರ್ಶನವನ್ನು ಎದುರಿಸಬೇಕು.

ಆದ್ದರಿಂದ ಸಂದರ್ಶನಕಾರರು ನಿಮ್ಮ ಯೋಗ್ಯತೆಯನ್ನು ನಿರ್ಧರಿಸುವಲ್ಲಿ, ಯಾವ ಕೌಶಲಗಳನ್ನು ಗುರುತಿಸಲು ಪ್ರಯತ್ನಿಸುತ್ತಾರೆ ಎನ್ನುವುದನ್ನು ನೀವು ಮೊದಲು ಗಮನಿಸಬೇಕು.

ವೃತ್ತಿಯ ಅಗತ್ಯಗಳೇನು?

ಸಂದರ್ಶನವೇ ಕ್ಯಾಂಪಸ್ ಆಯ್ಕೆಯ ಅಂತಿಮ ಮತ್ತು ನಿರ್ಣಾಯಕ ಹಂತ. ಈ ಹಂತದಲ್ಲಿ ನಿಮ್ಮ ವ್ಯಕ್ತಿತ್ವ, ಆಸಕ್ತಿ, ಅಭಿರುಚಿಗೂ, ಉದ್ಯೋಗದ ಅಗತ್ಯ ಮತ್ತು ಸವಾಲುಗಳಿಗೂ ತುಲನೆ ಮಾಡಿ, ನಿಮ್ಮ ಯೋಗ್ಯತೆಯ ಅಂದಾಜು ಮಾಡಲಾಗುತ್ತದೆ.
 
ಸಾಮಾನ್ಯವಾಗಿ, ಸಂದರ್ಶನಗಳಲ್ಲಿ ನಿರ್ವಾಹಕರು ನಿಮ್ಮಲ್ಲಿ ಗುರುತಿಸುವ ಕೌಶಲಗಳೆಂದರೆ:

ನಿಮ್ಮ ವ್ಯಕ್ತಿತ್ವ:
ಸಂದರ್ಶನಗಳಲ್ಲಿ ಮೊದಲ 30 ಸೆಕೆಂಡುಗಳು ಅತಿ ಮುಖ್ಯ. ಈ ಅಲ್ಪ ಕಾಲದಲ್ಲಿ ಪರಿಣತ ಸಂದರ್ಶನಕಾರರು ನಿಮ್ಮ ವೇಷಭೂಷಣ ಮತ್ತು ನಡೆನುಡಿಗಳಿಂದಲೇ ನಿಮ್ಮ ಒಟ್ಟಾರೆ ವ್ಯಕ್ತಿತ್ವದ ಅಂದಾಜನ್ನು ಮಾಡುತ್ತಾರೆ. ಆದ್ದರಿಂದಲೇ, ನಿಮ್ಮ ವೇಷಭೂಷಣ ಅಚ್ಚುಕಟ್ಟಾಗಿದ್ದು, ಸಾಂಪ್ರದಾಯಿಕವಾಗಿರಲಿ. ಸಹಜವಾದ ಮುಗುಳ್ನಗೆಯಿಂದಲೂ, ಆತ್ಮವಿಶ್ವಾಸದಿಂದಲೂ ಸಂದರ್ಶನವನ್ನು ಎದುರಿಸಿ.
ಸಂವಹನ ಕೌಶಲ

 ವೃತ್ತಿಯಲ್ಲಿ ನಿಮ್ಮ ಪ್ರತಿಭೆ ಹೊರಬರಬೇಕಾದರೆ ನಿಮ್ಮಲ್ಲಿ ಸಂವಹನ ಕೌಶಲವಿರಬೇಕು. ಕೆಲವೊಮ್ಮೆ ಪ್ರಭಾವ ಬೀರಲು ಅಭ್ಯರ್ಥಿಗಳು ನಿರಂತರವಾಗಿ ಮಾತನಾಡಲು ಪ್ರಯತ್ನಿಸುತ್ತಾರೆ. ಆದರೆ ಸಮಯೋಚಿತವಾಗಿ, ಸೂಕ್ತವಾದ ಹಾವಭಾವ, ಧ್ವನಿ ಮತ್ತು ಭಾವದಿಂದ ಮಾತನಾಡುವುದಲ್ಲದೇ ಸಂದರ್ಶಕರು ಮಾತನಾಡುತ್ತಿರುವಾಗ ಗಮನವಿಟ್ಟು ಆಲಿಸುವುದೂ ಸಂವಹನ ಕೌಶಲದ ಪ್ರಮುಖ ಅಂಶ.

ಉದ್ಯೋಗದ ಅಗತ್ಯಗಳು

ಕ್ಯಾಂಪಸ್‌ಗೆ ಬರುವ ಕಂಪೆನಿಗಳಲ್ಲಿ ಅನೇಕ ಉದ್ಯೋಗಾವಕಾಶಗಳಿರುತ್ತವೆ. ಉದಾಹರಣೆಗೆ ಮಾರ್ಕೆಟಿಂಗ್, ಅಕೌಂಟ್ಸ್, ಪ್ರೊಡಕ್ಷನ್, ಮಾನವ ಸಂಪನ್ಮೂಲಗಳ ವಿಭಾಗ ಇತ್ಯಾದಿ. ನೀವೇ ಊಹಿಸಬಹುದಾದಂತೆ ಈ ಉದ್ಯೋಗಗಳನ್ನು ನಿರ್ವಹಿಲು ವಿವಿಧ ಕೌಶಲಗಳ ಅಗತ್ಯವಿರುತ್ತದೆ. ನಿಮ್ಮಲ್ಲಿ ಆ ಕೌಶಲಗಳಿವೆಯೇ ಎಂಬುದನ್ನು  ಸಂದರ್ಶನದಲ್ಲಿ ಪರೀಕ್ಷಿಸುತ್ತಾರೆ.

ಮನೋಧರ್ಮ: ನಿಮ್ಮ ಸಮಗ್ರ ಸಾಮರ್ಥ್ಯದ ಜೊತೆಗೆ ನಿಮ್ಮಲ್ಲಿ ಸಕಾರಾತ್ಮಕ ಮನೋಧರ್ಮವಿದ್ದರೆ ಮಾತ್ರ ನೀವು ವೃತ್ತಿಯಲ್ಲಿ ಯಶಸ್ವಿಯಾಗಬಹುದು. ಆದ್ದರಿಂದ ಕೆಲವೊಂದು ಸನ್ನಿವೇಶಗಳಲ್ಲಿ ನೀವು ಹೇಗೆ ವರ್ತಿಸುತ್ತಿರಿ ಎನ್ನುವಂತಹ ಪ್ರಶ್ನೆಗಳನ್ನೂ ಸಂದರ್ಶಕರು ಕೇಳುತ್ತಾರೆ.

ಪ್ರಮಾಣ ಪತ್ರಗಳು, ದಾಖಲೆಗಳು: ಸಂದರ್ಶನಗಳಲ್ಲಿ ನಿಮ್ಮ ಅರ್ಹತಾ ಪತ್ರಗಳು, ದಾಖಲೆಗಳನ್ನು ಪರೀಕ್ಷಿಸುವುದು ಸಾಮಾನ್ಯ. ಇದರಿಂದ ನಿಮ್ಮ ಬಯೋಡಾಟ ಮತ್ತು ದಾಖಲೆಗಳ  ದೃಢೀಕರಣವಾಗುತ್ತದೆ.

ಎದುರಿಸುವುದು ಹೇಗೆ?

ತಯಾರಿಯೇ ಯಶಸ್ಸಿಗೆ ಮೂಲ: ಕ್ಯಾಂಪಸ್ ಪ್ರಕ್ರಿಯೆಯನ್ನು ಅರಿತು ನಿರಂತರವಾದ ಅಭ್ಯಾಸದಿಂದ ತಯಾರಾಗುವುದೇ ನಿಮ್ಮ ಯಶಸ್ಸಿಗೆ ಮೂಲ ಕಾರಣವೇ ಹೊರತು ಅದೃಷ್ಟದಿಂದಲ್ಲ.
 
ನಿಮಗೆ ಉದ್ಯೋಗಾವಕಾಶದ ಅವಶ್ಯಕತೆಯಿರುವಂತೆಯೇ, ಕಂಪೆನಿಯವರೂ ಉತ್ತಮ ಅಭ್ಯರ್ಥಿಗಳನ್ನು ನೇಮಕಾತಿ ಮಾಡಲು ಉತ್ಸಾಹದಿಂದ ಇರುತ್ತಾರೆ. ನಿಮ್ಮ ಶಕ್ತಿ, ಸಾಮರ್ಥ್ಯ ಮತ್ತು ದೌರ್ಬಲ್ಯಗಳ ಅರಿವಿದ್ದರೆ ಸಂದರ್ಶನವನ್ನು ಎದುರಿಸುವುದು ಸಲೀಸು.

ಇದಲ್ಲದೆ ಕ್ಯಾಂಪಸ್‌ಗೆ ಬರುವ ಕಂಪೆನಿಗಳ ಬಗ್ಗೆ ಮತ್ತು ನೀವು ಬಯಸುವ ಉದ್ಯೋಗದ ಅವಕಾಶ ಮತ್ತು ಸವಾಲುಗಳ ಕುರಿತು, ನೀವು ಸಂಶೋಧನೆ ಮಾಡಿರಬೇಕು.

ಅಂತರ್ಜಾಲ, ಷೇರು ಮಾರುಕಟ್ಟೆ, ಕಂಪೆನಿ ಜಾಲತಾಣ, ಸೋಷಿಯಲ್ ಮೀಡಿಯ ಫೇಸ್ ಬುಕ್, ಲಿಂಕಡ್‌ಇನ್‌ಹಾಗೂ ಟ್ವಿಟರ್‌ಗಳ ಮುಖಾಂತರ ಕಂಪೆನಿಯ ದೂರದೃಷ್ಟಿ, ಉದ್ದೇಶ, ಬಂಡವಾಳ, ನೀತಿ- ನಿಯಮ, ಕಾರ್ಯಾಚರಣೆ, ಆಯವ್ಯಯ, ಉತ್ಪನ್ನಗಳ ವಿವರ, ಮಾರುಕಟ್ಟೆಯ ಪಾಲು ಸೇರಿದಂತೆ ಸಾಕಷ್ಟು ಮಾಹಿತಿ ದೊರಕುತ್ತದೆ. ಈ ವಿವರಗಳ ಅರಿವು ನಿಮಗಿದ್ದರೆ ಕಂಪೆನಿಗೆ ಸಂಬಂಧಪಟ್ಟ ಎಲ್ಲಾ ಪ್ರಶ್ನೆಗಳನ್ನು ಲೀಲಾಜಾಲವಾಗಿ ಉತ್ತರಿಸಿ ಸಂದರ್ಶಕರ ಪ್ರಶಂಸೆಯನ್ನೂ ಗಿಟ್ಟಿಸಬಹುದು.

ಆತ್ಮವಿಶ್ವಾಸವಿರಲಿ: ನಿಮ್ಮ ಆಸಕ್ತಿ, ಅಭಿರುಚಿ ಮತ್ತು ಸಾಮರ್ಥ್ಯದ ಅರಿವಿನ ಜೊತೆ ಕಂಪೆನಿಯ ಬಗ್ಗೆ ಮೂಲಭೂತ ಮಾಹಿತಿಯಿದ್ದಲ್ಲಿ, ಆತ್ಮವಿಶ್ವಾಸ ಸ್ವಾಭಾವಿಕವಾಗಿಯೇ ಮೂಡುತ್ತದೆ. ಈ ಆತ್ಮವಿಶ್ವಾಸ ಸಂದರ್ಶಕರಿಗೆ ಅಹಂಕಾರದಂತೆ ಕಾಣದಂತೆ ನಿಮ್ಮ ನಡೆನುಡಿಯಿರಲಿ.

ಸಹಜ, ಸ್ವಾಭಾವಿಕ ಆಂಗಿಕ ಭಾಷೆ: ಮನೋವಿಜ್ಞಾನಿಗಳು ಹೇಳುವಂತೆ ನಿಮ್ಮ ಮುಖದಲ್ಲಿನ ಭಾವಗಳಿಂದ ಸಂದರ್ಶಕರು ನಿಮ್ಮ ಮನಸ್ಸಿನ ಆಲೋಚನೆಗಳನ್ನು ಅರಿಯಬಲ್ಲರು. ಅಂದರೆ ನಿಮ್ಮ ಉತ್ತರಗಳಲ್ಲಿ ಪ್ರಾಮಾಣಿಕತೆ ಇಲ್ಲದಿದ್ದಲ್ಲಿ ಪರಿಣತ ಸಂದರ್ಶಕರು ನಿಮ್ಮ ಹಾವಭಾವಗಳಿಂದ ನಿಜಾಂಶವನ್ನು ಅರಿಯಲು ಸಾಧ್ಯವಿದೆ. 

ಆದ್ದರಿಂದಲೇ ನಿಮ್ಮ ದೇಹಭಾಷೆಗೂ (ಬಾಡಿ ಲ್ಯಾಂಗ್ವೇಜ್) ನಿಮ್ಮ ಆಲೋಚನೆಗಳಿಗೂ ಸಾಮ್ಯತೆಯಿದ್ದು ಸಂದರ್ಶನ ನಡೆಯುವಾಗ ನಿಮ್ಮ ದೇಹದ ನಿಲುವು ಮತ್ತು ಚಲನೆ, ನಿಮ್ಮಳಗಿನ ಸಕಾರಾತ್ಮಕ ಆಲೋಚನೆಗಳಿಗೆ ಪೂರಕವಾಗಿರಲಿ.

ಸಂದರ್ಶನದ ಕ್ರಮ: ಸಂದರ್ಶಕರು ಕೇಳುವ ಸರಳ ಮತ್ತು ಸಾಮಾನ್ಯ ಪ್ರಶ್ನೆಗಳ ಹಿಂದೆಯೂ ಒಂದು ವಿಷಯವನ್ನು ಗ್ರಹಿಸುವ ಗುರಿಯಿರುತ್ತದೆ.
 
ಅಂದರೆ ಒಂದು ವಿಷಯಕ್ಕೆ ಸಂಬಂಧಿಸಿದಂತೆ ವಿವಿಧ ಪ್ರಶ್ನೆಗಳನ್ನು ಕ್ರಮವಾಗಿ ಕೇಳುತ್ತಾ ಹೋಗುವುದು ಸಂದರ್ಶನದ ಒಂದು ಕಾರ್ಯತಂತ್ರ. ಉದಾಹರಣೆಗೆ,  ನೀವು ಬಿಡುವಿನಲ್ಲಿ ಏನನ್ನು ಮಾಡುತ್ತೀರಿ  ಎನ್ನುವುದು ಅತ್ಯಂತ ಸಾಮಾನ್ಯ ಪ್ರಶ್ನೆಯೆಂದು ನಿಮಗೆ ಮೊದಲು ಅನಿಸಬಹುದು.
 
ಆದರೆ ಈ ನಿಟ್ಟಿನಲ್ಲಿ ಪ್ರಶ್ನೆಗಳಿಗೆ ಉತ್ತರಿಸುತ್ತಾ ಹೋದಂತೆ, ಉತ್ತಮ ಹವ್ಯಾಸಗಳಿಲ್ಲದಿದ್ದರೆ ನೀವು ಸೋಮಾರಿಯೆನ್ನುವ ಅಭಿಪ್ರಾಯ ಅಥವಾ ನಿಮ್ಮ ಕಾರ್ಯಕ್ಷಮತೆಯ ಬಗ್ಗೆ ನೀವೇ ಸಂದೇಹವನ್ನು ಮೂಡಿಸುವ ಸಾಧ್ಯತೆಗಳಿವೆ ಎನ್ನುವುದರ ಬಗ್ಗೆ ಎಚ್ಚರವಿರಲಿ.

ವೃತ್ತಿಜೀವನದಲ್ಲಿ ಅನೇಕ ಸವಾಲುಗಳನ್ನೂ, ಸಂದಿಗ್ಧ ಸನ್ನಿವೇಶಗಳನ್ನೂ ಎದುರಿಸುವಾಗ, ಮಾನಸಿಕ ಒತ್ತಡವಾಗುವುದು ಸಹಜ. ಹಾಗಾಗಿ, ಸಂದರ್ಶಕರು ಉದ್ದೇಶಪೂರ್ವಕವಾಗಿ ಒತ್ತಡ ತರುವಂತ ಪ್ರಶ್ನೆಗಳನ್ನೂ, ಸನ್ನಿವೇಶಗಳನ್ನೂ ಸೃಷ್ಟಿಸಿ ಅಭ್ಯರ್ಥಿಗಳ ಪ್ರತಿಕ್ರಿಯೆಯನ್ನು ನೋಡುವುದು, ಸಂದರ್ಶನ ಪ್ರಕ್ರಿಯೆಯ ಮುಖ್ಯ ಅಂಶ. ಇಂತಹ ಒತ್ತಡ ತರುವ ಪ್ರಶ್ನೆಗಳಿಂದ ಕಂಗಾಲಾಗದೆ ಅಥವಾ ಉಗ್ರವಾಗಿ ಪ್ರತಿಕ್ರಿಯಿಸದೆ, ಸೌಮ್ಯವಾಗಿ ಉತ್ತರಿಸುವುದರಿಂದ ನಿಮ್ಮ ವ್ಯಕ್ತಿತ್ವದ ಪ್ರೌಢತೆ ಎದ್ದುಕಾಣುತ್ತದೆ.

ಆದ್ದರಿಂದ ಸಂದರ್ಶನದಲ್ಲಿ ಕೇಳುವ ಪ್ರಶ್ನೆಗಳನ್ನು ನಿರೀಕ್ಷಿಸಿ, ಸೂಕ್ತವಾಗಿ ತಯಾರಾಗುವುದೇ ನಿಮ್ಮ ಕಾರ್ಯತಂತ್ರವಾಗಿರಬೇಕು.

ಮಾದರಿ ಪ್ರಶ್ನೆಗಳು: ಸಂದರ್ಶನದಲ್ಲಿ ಸಾಮಾನ್ಯವಾಗಿ ಕೇಳುವ ಅನೇಕ ಪ್ರಶ್ನೆಗಳು ನಿಮ್ಮ ಕೌಟುಂಬಿಕ ಹಿನ್ನೆಲೆ, ಸಾಮರ್ಥ್ಯ ಮತ್ತು ದೌರ್ಬಲ್ಯಗಳು, ವೃತ್ತಿ ಜೀವನದ ಧ್ಯೇಯ ಮತ್ತು ಸಾಧಿಸುವ ಮಾರ್ಗ, ಉದ್ಯೋಗದ ಬಗ್ಗೆ ನಿಮ್ಮ ನಿರೀಕ್ಷೆ ಮತ್ತು ಅಪೇಕ್ಷೆ ಇತ್ಯಾದಿಗಳನ್ನು ಅವಲಂಬಿಸುತ್ತದೆ. ಈ ರೀತಿಯ ಪ್ರಶ್ನೆಗಳನ್ನು ನೀವು ನಿರೀಕ್ಷಿಸಬಹುದು:


ನಿಮ್ಮ ಬಗ್ಗೆ ಏನನ್ನು ಹೇಳಲು ಬಯಸುತ್ತೀರ?

ನಮ್ಮ ಕಂಪೆನಿಯ ಬಗ್ಗೆ ನಿಮಗೇನು ತಿಳಿದಿದೆ?

ನಿಮ್ಮ ವೃತ್ತಿ ಜೀವನದ ಧ್ಯೇಯಗಳೇನು, ಕನಸುಗಳೇನು? ಅದನ್ನು ಸಾಧಿಸುವ ಬಗೆ ಹೇಗೆ?

ನಿಮ್ಮ ಸಾಮರ್ಥ್ಯ ಮತ್ತು ದೌರ್ಬಲ್ಯಗಳೇನು?

ವೃತ್ತಿಯಲ್ಲಿ ನಿಮ್ಮ ಪ್ರೇರಣೆಗಳೇನು?

ಈ ಉದ್ಯೋಗದಲ್ಲಿ ಸಫಲವಾಗಲು, ಯಾವ ಕೌಶಲಗಳ ಅಗತ್ಯವಿರುತ್ತದೆ?

ನಿಮ್ಮ ಶೈಕ್ಷಣಿಕ ಹಾದಿಯಲ್ಲಿನ ಸಾಧನೆಗಳೇನು?

ನಮ್ಮ ಕಂಪೆನಿಯನ್ನು ಏಕೆ ಸೇರಬಯಸುತ್ತೀರ?

ಅಭ್ಯರ್ಥಿಗಳ ಮಾದರಿ ಪ್ರಶ್ನೆಗಳು: ಸಂದರ್ಶನದ ಅಂತಿಮ ಘಟ್ಟದಲ್ಲಿ ಅಭ್ಯರ್ಥಿಗಳಿಗೂ ಪ್ರಶ್ನೆಗಳನ್ನು ಕೇಳುವ ಅವಕಾಶ ಲಭಿಸುತ್ತದೆ. ನಿಮ್ಮ ಪ್ರಶ್ನೆಗಳೇನಾದರೂ ಇವೆಯೇ ಎಂದು ಸಂದರ್ಶಕರು ಕೇಳಿದಾಗ, ನಿರಾಳತೆಯಿಂದ `ಏನೂ ಇಲ್ಲ~ ಎನ್ನದೆ ಸಮಯೋಚಿತವಾಗಿ ಜಾಣತನದ ಪ್ರಶ್ನೆಗಳನ್ನು ಕೇಳುವುದರಿಂದ ನಿಮ್ಮ ವ್ಯಕ್ತಿತ್ವದ ಬೇರೊಂದು ದೃಷ್ಟಿಕೋನವನ್ನು ಪರಿಚಯಿಸಿ ನಿಮ್ಮ  ಆಯ್ಕೆ ಖಚಿತವಾಗುವಂತಹ ಸನ್ನಿವೇಶವನ್ನು ಮೂಡಿಸಬಹುದು.

ನೀವು ಕೇಳಬಹುದಾದ ಮಾದರಿ ಪ್ರಶ್ನೆಗಳು:

ಉದ್ಯೋಗಕ್ಕೆ ಆಯ್ಕೆ ಆದಲ್ಲಿ, ನಮಗೆ ನೀಡುವ ತರಬೇತಿಯ ಕುರಿತು ಮಾಹಿತಿ ಸಾಧ್ಯವೇ?

ವೃತ್ತಿಗೆ ಸಂಬಂಧಿಸಿದಂತೆ, ಕಂಪೆನಿಯಲ್ಲಿ ನಮ್ಮ ವೈಯಕ್ತಿಕ ಬೆಳವಣಿಗೆ ಮತ್ತು ಪ್ರಗತಿಗೆ ಇರುವ ಅವಕಾಶಗಳೇನು?

ಕಂಪೆನಿಯ ಉತ್ಪನ್ನಗಳ ಮಾರಾಟಕ್ಕೆ ಅನುವಾಗಲು ಪ್ರಚಾರ ಮತ್ತು ಜಾಹೀರಾತುಗಳ ಬಗ್ಗೆ ನಿಮ್ಮ ಯೋಜನೆಗಳೇನು?

ಕಂಪೆನಿಯ ಗ್ರಾಹಕರ ಆಸಕ್ತಿ ಮತ್ತು ಅಭಿರುಚಿಯಲ್ಲಿ ಬದಲಾವಣೆಯ ಸಾಧ್ಯತೆಗಳಿವೆಯೇ?

ಈ ಸಂದರ್ಶನದ ಬಗ್ಗೆ ನಿಮ್ಮ ನಿರ್ಣಯವನ್ನು ಯಾವಾಗ ನಿರೀಕ್ಷಿಸಬಹುದು?

ಆದರೆ ಪ್ರಶ್ನೆಗಳನ್ನು ಕೇಳುವ ಧಾಟಿಯಲ್ಲಿ ಸೌಮ್ಯತೆಯಿರಲಿ; ವಿಷಯವನ್ನು ಗ್ರಹಿಸುವ ಅಸಕ್ತಿಯಿರಲಿ. ಸಾಮಾನ್ಯವಾಗಿ, ನೀವು ಪ್ರಶ್ನೆಗಳನ್ನು ಕೇಳಿದ ನಂತರ ಸಂದರ್ಶನ ಮುಕ್ತಾಯವಾಗುತ್ತದೆ. ಎಲ್ಲ ಸಂದರ್ಶಕರಿಗೂ ನಿಮ್ಮ ಧನ್ಯವಾದಗಳನ್ನು ತಿಳಿಸಿ, ಮುಗುಳ್ನಗೆಯಿಂದ ಹೊರಬನ್ನಿ.

ಸಂದರ್ಶನದಲ್ಲಿ ಆತ್ಮವಿಶ್ವಾಸವೇ ಯಶಸ್ಸಿನ ಗುಟ್ಟೆಂದು ಮರೆಯದಿರಿ.
(ಲೇಖಕರು ಮ್ಯೋನೇಜ್‌ಮೆಂಟ್ ಮತ್ತು ವೃತ್ತಿ ಸಲಹೆಗಾರರು. info@promaxintl.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT