ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಧಾನ ಮಾಡಿಕೊಳ್ಳಿ; ಸುಖವಾಗಿರಿ

Last Updated 23 ಮಾರ್ಚ್ 2011, 6:25 IST
ಅಕ್ಷರ ಗಾತ್ರ

ಗದಗ: ಕೌಟುಂಬಿಕ ವಿಷಯ ಹಾಗೂ ಗಂಡ-ಹೆಂಡತಿಯ ಜಗಳಗಳನ್ನು ಕೋರ್ಟಿನವರೆಗೂ ತರದೆ ಮಧ್ಯಸ್ಥಿಕೆ ಕೇಂದ್ರದಲ್ಲಿ ಬಗೆಹರಿಸಿಕೊಳ್ಳಬೇಕು ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಜೆ.ಎನ್. ಹಾವನೂರ ಸಲಹೆ ನೀಡಿದರು. ಜಿಲ್ಲಾ ಮಧ್ಯಸ್ಥಿಕೆ ಕೇಂದ್ರ, ಜಿಲ್ಲಾ ನ್ಯಾಯವಾದಿಗಳ ಸಂಘ, ಎಸ್.ಎ.ಮಾನ್ವಿ ಕಾನೂನು ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ನಡೆದ ಮಧ್ಯಸ್ಥಗಾರಿಕೆ ಕುರಿತ ಕಾನೂನು ಸಾಕ್ಷರತಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೌಟುಂಬಿಕ ವಿಷಯಗಳು ನ್ಯಾಯಾಲಯದ ಮೆಟ್ಟಿಲು ಏರಿದರೆ, ಅದು ಗಂಡ-ಹೆಂಡತಿಯರಲ್ಲಿ, ಸಂಬಂಧಿಕರಲ್ಲಿ ಬಾಂಧವ್ಯ- ಸಂಬಂಧ ಹಳಸಲು ಕಾರಣವಾಗುತ್ತದೆ. ಸಣ್ಣ ಕಾರಣಕ್ಕಾಗಿ ಕೋರ್ಟಿಗೆ ಎಳೆದರು ಎನ್ನುವ ದ್ವೇಷದ ಭಾವನೆ ಎಲ್ಲರಲ್ಲೂ ಮನೆ ಮಾಡಿಕೊಳ್ಳುತ್ತದೆ. ಆದ್ದರಿಂದ ನ್ಯಾಯಾಲಯವೂ ರೂಪಿಸಿರುವ ಮಧ್ಯಸ್ಥಿಕೆ ಕೇಂದ್ರದಲ್ಲಿ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಸುಖವಾಗಿ ಸಂಸಾರ ಸಾಗಿಸುವುದು ಉತ್ತಮವಾದ ಕೆಲಸ ಎಂದರು.

ನ್ಯಾಯಲಯ ಇಲ್ಲಿವರೆಗೂ ರೂಪಿಸಿದ್ದ ಲೋಕ ಅದಾಲತ್ ಮುಂತಾದ ಕಾರ್ಯಕ್ರಮಗಳಿಗಿಂತ ಮಧ್ಯಸ್ಥಗಾರಿಕೆ ಭಿನ್ನವಾಗಿದೆ. ಇಲ್ಲಿ ವಾದಿ-ಪ್ರತಿವಾದಿಗಳೇ ನ್ಯಾಯಾ ತೀರ್ಮಾನ ಮಾಡಿಕೊಳ್ಳಬಹುದು. ಮಧ್ಯಸ್ಥಗಾರರು ಅವರಿಬ್ಬರಿಗೂ ಸಂಧಾನ ಮಾಡಿಕೊಳ್ಳಲು ಅನುಕೂಲವಾಗುವಂತಹ ವಾತಾವರಣ ನಿರ್ಮಾಣ ಮಾಡುತ್ತಾರೆ ಎಂದು ತಿಳಿಸಿದರು.

ಸಂಧಾನ ಮಾಡಿಕೊಳ್ಳುವುದು ಒಂದು ಉತ್ತಮವಾದ ಕೆಲಸ. ಮಹಾಭಾರತದಲ್ಲಿ ಕೃಷ್ಣ ಸಂಧಾನ ಮುರಿದು ಬಿದ್ದ ಕಾರಣ ಕುರುಕ್ಷೇತ್ರ ಯುದ್ದವೇ ನಡೆದು ಹೋಯಿತು. ಆದ್ದರಿಂದ ಜನರು ಕೋರ್ಟಿಗೆ ಬರುವುದಕ್ಕಿಂತ ಸಂಧಾನಕ್ಕೆ ಮನಸ್ಸು ಮಾಡಬೇಕು ಎಂದರು. ಪ್ರಾಚಾರ್ಯ ವಿ.ಎಂ. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ನ್ಯಾಯಾಧೀಶ ಉಮೇಶ ಮೂಲಿಮನಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಸ್.ಎಸ್. ಹುರಕಡ್ಲಿ, ಕಾರ್ಯದರ್ಶಿ ಕೆ.ಪಿ. ಕೋಟಿಗೌಡರ ಅತಿಥಿಗಳಾಗಿ ಭಾಗವಹಿಸಿದ್ದರು. ವಕೀಲ ಎಂ.ಎ. ಫಣಿಬಂದ ಉಪನ್ಯಾಸ ನೀಡಿದರು. ಸುಪ್ರೀಯಾ ಬಣ್ಣದಬಾವಿ ಪ್ರಾರ್ಥಿಸಿದರು. ಎಂ.ವಿ. ಹಿರೇಮಠ ಸ್ವಾಗತಿಸಿದರು. ಉಪನ್ಯಾಸಕ ಎಸ್.ಟಿ. ಮೂರಶಿಳ್ಳಿನ ಕಾರ್ಯಕ್ರಮ ನಿರೂಪಿಸಿದರು. ಶೇಖರಗೌಡ ಹಳೇಮನಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT