ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಧಾನ ಸಾಧ್ಯವಾಗದಿದ್ದರೆ ಮತ್ತೆ ನ್ಯಾಯಾಲಯಕ್ಕೆ ಮೋದಿ-ಕ್ಲಾರ್ಕ್

Last Updated 23 ಫೆಬ್ರುವರಿ 2011, 17:20 IST
ಅಕ್ಷರ ಗಾತ್ರ

ಲಂಡನ್ (ಪಿಟಿಐ): ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಮುಖ್ಯಸ್ಥ ಜೈಲ್ಸ್ ಕ್ಲಾರ್ಕ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿರುವ ಐಪಿಎಲ್ ಮಾಜಿ ಮುಖ್ಯಸ್ಥ ಲಲಿತ್ ಮೋದಿ ಹಾಗೂ ಇಂಟರ್‌ನ್ಯಾಷನಲ್ ಮ್ಯಾನೇಜ್‌ಮೆಂಟ್ ಗ್ರೂಪ್ (ಐಎಂಜಿ) ಆಡಳಿತಗಾರರು ಜುಲೈ ನಾಲ್ಕರ ಹೊತ್ತಿಗೆ ಪರಿಹಾರ ಸಿಗುವುದೆನ್ನುವ ಆಶಯ ಹೊಂದಿದ್ದಾರೆ.

ಜೈಲ್ಸ್ ವಿರುದ್ಧ ಮೋದಿ ಹಾಗೂ ಐಎಂಜಿ ನ್ಯಾಯಾಲಯದಲ್ಲಿ ಸುದೀರ್ಘ ಹೋರಾಟ ನಡೆಸುವುದು ಸ್ಪಷ್ಟವಾಗಿದೆ. ಇಂಗ್ಲೆಂಡ್‌ನ ಬೇಸಿಗೆ ಕಾಲದ ಹೊತ್ತಿಗೆ ಈ ಮಾನನಷ್ಟ ಮೊಕದ್ದಮೆಯ ವಿಚಾರಣೆಯೂ ಕಾವೇರುವ ಸಾಧ್ಯತೆ ಇದೆ.

ಜುಲೈ ನಾಲ್ಕರ ಹೊತ್ತಿಗೆ ನ್ಯಾಯಾಲಯದ ಹೊರಗೆ ಸಂಧಾನ ಮಾಡಿಕೊಳ್ಳುವುದಕ್ಕೆ ಅವಕಾಶವಿದೆ. ಆದರೆ ಅದು ಸಾಧ್ಯವಾಗದಿದ್ದರೆ ವಿಚಾರಣೆ ಎದುರಿಸಬೇಕು. ಕಷ್ಟ ಎದುರಾಗುವುದು ಕ್ಲಾರ್ಕ್‌ಗೆ. ಏಕೆಂದರೆ ಅವರು ಮಾನನಷ್ಟ ಮೊಕದ್ದಮೆಯಲ್ಲಿ ಮೋದಿ ಹಾಗೂ ಐಎಂಜಿ ಗೆದ್ದರೆ, ನ್ಯಾಯಾಲಯ ವೆಚ್ಚ ಹಾಗೂ ಭಾರಿ ಪ್ರಮಾಣದ ಪರಿಹಾರವನ್ನು ನೀಡಬೇಕು.

ನ್ಯಾಯಾಲಯ ವೆಚ್ಚವು ಅಂದಾಜು ಏಳು ಕೋಟಿ ರೂಪಾಯಿಗೂ ಅಧಿಕವಾಗುವ ಸಾಧ್ಯತೆ ಇದೆ. ಜೊತೆಗೆ ಮಾನನಷ್ಟವಾಗುವಂಥ ಅಭಿಪ್ರಾಯವನ್ನು ಲಿಖಿತವಾಗಿ ವ್ಯಕ್ತಪಡಿಸಿದ್ದಕ್ಕಾಗಿ ಮೋದಿ ಹಾಗೂ ಐಎಂಜಿ ಕೇಳಿರುವಷ್ಟು ಪರಿಹಾರ ಮೊತ್ತವನ್ನೂ ನೀಡಬೇಕು. ಆದರೆ ನ್ಯಾಯಾಲಯದ ಹೊರಗೆ ಪರಿಹಾರ ಕಂಡುಕೊಂಡರೆ ಕ್ಲಾರ್ಕ್ ಸುರಕ್ಷಿತ ಎನ್ನುವ ಅಭಿಪ್ರಾಯ ಇಲ್ಲಿನ ಮಾಧ್ಯಮಗಳಲ್ಲಿ ವ್ಯಕ್ತವಾಗಿದೆ.

ಇಂಗ್ಲೆಂಡ್ ಕ್ರಿಕೆಟ್‌ಗೆ ಕುತ್ತಾಗುವಂಥ ಐಪಿಎಲ್ ಮಾದರಿಯ ಟ್ವೆಂಟಿ-20 ಟೂರ್ನಿಯನ್ನು ಇಂಗ್ಲೆಂಡ್‌ನಲ್ಲಿ ನಡೆಸುವ ಸಂಚನ್ನು ಮೋದಿ ಅವರು ಐಎಂಜಿ ಜೊತೆಗೂಡಿ ರೂಪಿಸಿದ್ದರೆಂದು ಕ್ಲಾರ್ಕ್ ಆರೋಪ ಮಾಡಿದ್ದರು. ಮೋದಿ ಕ್ರಮಗಳು ವಿಶ್ವ ಕ್ರಿಕೆಟ್‌ಗೂ ಪೆಟ್ಟು ನೀಡುವಂಥವೆಂದು ಕೂಡ ಅವರು ಇ-ಮೇಲ್ ಸಂದೇಶದಲ್ಲಿ ಅಭಿಪ್ರಾಯಪಟ್ಟಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿ ಮೋದಿ ಹಾಗೂ ಐಎಂಜಿ ಆಡಳಿತಗಾರರು ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಜುಲೈ ಮೊದಲ ವಾರದಲ್ಲಿ ಈ ಪ್ರಕರಣದ ಬಗ್ಗೆ ಸ್ಪಷ್ಟವಾದ ಚಿತ್ರ ಮೂಡಬಹುದು ಎಂದು ಇಲ್ಲಿನ ಪತ್ರಿಕೆಯೊಂದು ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT