ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಂಗಿ ಜೈಲು ಶಿಕ್ಷೆಗೆ ಹೈಕೋರ್ಟ್ ತಡೆ

Last Updated 5 ಜೂನ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಲಂಚ ಪಡೆದ ಆರೋಪಕ್ಕೆ ಸಂಬಂಧಿಸಿದಂತೆ ನಗರದ ಕೇಂದ್ರ ಕಾರಾಗೃಹದಲ್ಲಿ ಮೂರು ದಿನಗಳಿಂದ ಬಂದಿಯಾಗಿರುವ ಕೆಜಿಎಫ್‌ನ ಬಿಜೆಪಿ ಶಾಸಕ ವೈ.ಸಂಪಂಗಿ ಅವರ ಶಿಕ್ಷೆಯನ್ನು ಅಮಾನತಿನಲ್ಲಿಟ್ಟು ಹೈಕೋರ್ಟ್ ಮಂಗಳವಾರ ಆದೇಶಿಸಿದೆ.

ನಿವೇಶನ ವಿವಾದ ಇತ್ಯರ್ಥಪಡಿಸಲು ಉದ್ಯಮಿ  ಹುಸೇನ್ ಮೊಯಿನ್ ಫಾರೂಕ್ ಅವರಿಂದ ಐದು ಲಕ್ಷ ರೂಪಾಯಿ ಲಂಚ ಪಡೆದ ಆರೋಪದ ಮೇಲೆ ಜೈಲಿನಲ್ಲಿರುವ ಸಂಪಂಗಿ ಅವರಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿ ನ್ಯಾಯಮೂರ್ತಿ ವಿ.ಜಗನ್ನಾಥನ್ ಆದೇಶಿಸಿದ್ದಾರೆ.

ಇವರಿಗೆ ಮೂರೂವರೆ ವರ್ಷಗಳ ಜೈಲು ಶಿಕ್ಷೆ ವಿಧಿಸಿ ಇದೇ 2ರಂದು ಲೋಕಾಯುಕ್ತ ವಿಶೇಷ ಕೋರ್ಟ್ ನೀಡಿರುವ ಆದೇಶವನ್ನು ಪ್ರಶ್ನಿಸಿ ಸಂಪಂಗಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳು ನಡೆಸುತ್ತಿದ್ದಾರೆ. ಲಕ್ಷ ರೂಪಾಯಿಗಳ ಬಾಂಡ್ ನೀಡುವಂತೆ, ಹೈಕೋರ್ಟ್ ಅಥವಾ ಲೋಕಾಯುಕ್ತ ಕೋರ್ಟ್‌ನಲ್ಲಿ ವಿಚಾರಣೆ ನಡೆಯುವ ಸಂದರ್ಭಗಳಲ್ಲಿ ತಪ್ಪದೇ ಹಾಜರಾಗುವಂತೆ, ಹೈಕೋರ್ಟ್ ಅನುಮತಿ ಇಲ್ಲದೇ ದೇಶ ಬಿಟ್ಟು ಹೋಗದಂತೆ ಷರತ್ತು ವಿಧಿಸಲಾಗಿದೆ.
 

ಇಂದು ಬಿಡುಗಡೆ
ಲೋಕಾಯುಕ್ತ ಕೋರ್ಟ್ ನ್ಯಾಯಾಧೀಶರು ಸೂಚನೆ ನೀಡಿದ ನಂತರವಷ್ಟೇ ಸಂಪಂಗಿ ಅವರನ್ನು ಜೈಲಿನಿಂದ ಬಿಡುಗಡೆಗೊಳಿಸಲಾಗುವುದು. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಆದೇಶದ ಪ್ರತಿಯನ್ನು ಲೋಕಾಯುಕ್ತ ಕೋರ್ಟ್‌ಗೆ ವಕೀಲರು ಸಲ್ಲಿಸಬೇಕಿದೆ. ಮಂಗಳವಾರ ಸಂಜೆ 5 ಗಂಟೆ ಹೊತ್ತಿಗೆ ಹೈಕೋರ್ಟ್ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ, ಪ್ರತಿಯನ್ನು ಬುಧವಾರ ಬೆಳಿಗ್ಗೆ ಲೋಕಾಯುಕ್ತ ಕೋರ್ಟ್‌ಗೆ ತಲುಪಿಸಲಾಗುವುದು ಎಂದು ಸಂಪಂಗಿ ಪರ ವಕೀಲರು `ಪ್ರಜಾವಾಣಿ~ಗೆ ತಿಳಿಸಿದ್ದಾರೆ.

ಶಿಕ್ಷೆ ರದ್ದು ಮಾಡಬೇಕೋ, ಬೇಡವೋ ಎಂಬ ಬಗ್ಗೆ ಜೂನ್ 18ರಿಂದ ವಿಚಾರಣೆ ಮುಂದುವರಿಯಲಿದೆ. ಇದಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರಿಗೆ ನ್ಯಾಯಮೂರ್ತಿಗಳು ನೋಟಿಸ್ ಜಾರಿಗೆ ಆದೇಶಿಸಿದರು. ಶಿಕ್ಷೆ ರದ್ದತಿಗೆ ಆಕ್ಷೇಪಣೆಗಳಿದ್ದರೆ ಅದನ್ನು ಸಲ್ಲಿಸಲು ಪೊಲೀಸರಿಗೆ ಅವರು ನಿರ್ದೇಶಿಸಿದ್ದಾರೆ.

ಪ್ರತಿಕೂಲ ಸಾಕ್ಷಿಗಳು: `ಈ ಪ್ರಕರಣದಲ್ಲಿ, ಸಂಪಂಗಿ ಅವರ ಭದ್ರತಾ ಸಿಬ್ಬಂದಿ ಸೇರಿದಂತೆ ಕೆಲವು ಸಾಕ್ಷಿಗಳು ಪ್ರತಿಕೂಲ ಸಾಕ್ಷಿಗಳಾಗಿ ಪರಿಣಮಿಸಿವೆ. ಆದರೆ ಇದನ್ನು ಪರಿಗಣನೆಗೆ ತೆಗೆದುಕೊಳ್ಳದೆ ಶಿಕ್ಷೆ ವಿಧಿಸಿರುವುದು ಸರಿಯಲ್ಲ~ ಎಂದು ಸಂಪಂಗಿ ಪರ ವಕೀಲ ಅಶೋಕ ಹಾರ‌್ನಹಳ್ಳಿ ವಾದಿಸಿದರು.

`ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ 7ನೇ ಕಲಮಿನ ಅನ್ವಯ ಶಿಕ್ಷೆ ನೀಡಿ ಕೋರ್ಟ್ ಆದೇಶಿಸಿದೆ.
ಸಾರ್ವಜನಿಕ ಕ್ಷೇತ್ರದಲ್ಲಿ ಇರುವವರು ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡು ಭ್ರಷ್ಟಾಚಾರ ಎಸಗಿದ್ದಾರೆ ಎಂಬುದು ಸಾಬೀತಾದರೆ ಮಾತ್ರ ಅವರಿಗೆ ಶಿಕ್ಷೆ ವಿಧಿಸಬೇಕು ಎಂದು ಈ ಕಲಮು ಸ್ಪಷ್ಟಪಡಿಸಿದೆ.

ಆದರೆ ಸಂಪಂಗಿ ಅವರು ಶಾಸಕ ಸ್ಥಾನವನ್ನು ಬಳಸಿಕೊಂಡು ಲಂಚ ಪಡೆದಿದ್ದಾರೆ ಎಂಬ ಬಗ್ಗೆ ಸಾಬೀತು ಪಡಿಸುವ ಸೂಕ್ತ ಸಾಕ್ಷ್ಯಾಧಾರಗಳು ಪೊಲೀಸರ ಬಳಿ ಇಲ್ಲ. ಊಹೆ ಆಧಾರದ ಮೇಲೆ ಈ ಕಲಮಿನ ಅಡಿ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಇದು ಕಾನೂನುಬಾಹಿರ~ ಎಂದು ಅವರು ತಿಳಿಸಿದರು.

`ಸಂಪಂಗಿ ಅವರು ಯಾವ ರೀತಿ ಲಂಚದ ಬೇಡಿಕೆ ಒಡ್ಡಿದ್ದರು, ಯಾವ ರೀತಿಯಲ್ಲಿ ಅದನ್ನು ಪಡೆದುಕೊಂಡಿದ್ದರು ಎಂಬ ಬಗ್ಗೆ ಲೋಕಾಯುಕ್ತ ಕೋರ್ಟ್ ತನ್ನ ಆದೇಶದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿಲ್ಲ. ಆರೋಪಿ ಮತ್ತು ದೂರುದಾರರ ನಡುವೆ ಸಂಭಾಷಣೆ ನಡೆದಿತ್ತು ಎಂಬುದನ್ನು ಸಾಬೀತುಪಡಿಸಿದರಷ್ಟೇ ಸಾಲದು; ಲಂಚಕ್ಕೆ ಆ ಸಂಭಾಷಣೆ ಪೂರಕವಾಗಿತ್ತು ಎಂಬುದು ಕೂಡ ಸಾಬೀತಾಗಬೇಕು. ಹಾಗೆ ಸಾಬೀತಾದರೆ ಮಾತ್ರ ಶಿಕ್ಷೆ ನೀಡಬಹುದು. ಆದರೆ ಈ ಪ್ರಕರಣದಲ್ಲಿ ಹಾಗಾಗಿಲ್ಲ. ಆದರೆ ಇದಾವುದನ್ನೂ ವಿಶೇಷ ನ್ಯಾಯಾಲಯ ಪರಿಗಣಿಸಿಲ್ಲ. ಆದುದರಿಂದ ಶಿಕ್ಷೆಯನ್ನು ರದ್ದು ಮಾಡಬೇಕು~ ಎಂದು ಹಾರ‌್ನಹಳ್ಳಿ ವಾದಿಸಿದರು.

ಲೋಕಾಯುಕ್ತದ ಆಕ್ಷೇಪ: ಇದಕ್ಕೆ ಲೋಕಾಯುಕ್ತ ಪರ ವಕೀಲೆ ಗಾಯತ್ರಿ ಅವರು ಆಕ್ಷೇಪ ವ್ಯಕ್ತಪಡಿಸಿದರು. `ಕ್ರಿಮಿನಲ್ ದಂಡ ಪ್ರಕ್ರಿಯಾ ಸಂಹಿತೆಯ (ಸಿಆರ್‌ಪಿಸಿ) 389ನೇ ಕಲಮಿನ ಅನ್ವಯ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡದೆ, ಅವರ ವಾದ ಆಲಿಸದೆ ಜಾಮೀನು ಮಂಜೂರು ಮಾಡಬಾರದು ಹಾಗೂ ಶಿಕ್ಷೆಯನ್ನು ಅಮಾನತಿನಲ್ಲಿ ಇಡಬಾರದು. ಆದುದರಿಂದ ಪ್ರತಿವಾದಿಗಳಾದ ನಮ್ಮ ವಾದ ಸಂಪೂರ್ಣ ಆಲಿಸಿದ ನಂತರವೇ ಜಾಮೀನಿಗೆ ಸಂಬಂಧಿಸಿದ ಆದೇಶ ಹೊರಡಿಸಬೇಕು~ ಎಂದರು.

ಸಂಪಂಗಿ ಪರ ವಕೀಲರ ವಾದವನ್ನು ಮಾತ್ರ ಈ ಹಂತದಲ್ಲಿ ನ್ಯಾಯಮೂರ್ತಿಗಳು ಮಾನ್ಯ ಮಾಡಿದರು. `ಅಪರಾಧಿಗೆ ವಿಧಿಸಿರುವ ಶಿಕ್ಷೆಯು ಜೀವಾವಧಿ, ಮರಣದಂಡನೆ ಅಥವಾ 10 ವರ್ಷಕ್ಕಿಂತ ಹೆಚ್ಚಿನದ್ದು ಆಗಿದ್ದಲ್ಲಿ ಮಾತ್ರ ಸಿಆರ್‌ಪಿಸಿಯ 389ನೇ ಕಲಮಿನಂತೆ ಪ್ರತಿವಾದಿಗಳ ವಾದ ಆಲಿಸಿಯೇ ಜಾಮೀನು ನೀಡಬೇಕು. ಆದರೆ ಈ ಪ್ರಕರಣದಲ್ಲಿ ಆಗಿರುವ ಶಿಕ್ಷೆ ಮೂರೂವರೆ ವರ್ಷ, ಅಷ್ಟೇ. ಆದ್ದರಿಂದ ಲೋಕಾಯುಕ್ತ ಪರ ವಕೀಲರ ವಾದ ಈ ಪ್ರಕರಣಕ್ಕೆ ಅನ್ವಯ ಆಗುವುದಿಲ್ಲ~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT