ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಂಗಿ ಬಂಧನ ಅವಧಿ ವಿಸ್ತರಣೆ

Last Updated 29 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕ್ರಿಮಿನಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿದಾರರೊಬ್ಬರಿಗೆ ಬೆದರಿಕೆ ಹಾಕಿರುವ ಆರೋಪ ಹೊತ್ತ ಕೆಜಿಎಫ್ ಶಾಸಕ ವೈ.ಸಂಪಂಗಿ ಅವರ ನ್ಯಾಯಾಂಗ ಬಂಧನದ ಅವಧಿಯನ್ನು ಸೋಮವಾರದವರೆಗೆ (ಅ.31) ವಿಸ್ತರಿಸಿ ಲೋಕಾಯುಕ್ತ ವಿಶೇಷ ಕೋರ್ಟ್ ಶನಿವಾರ ಆದೇಶಿಸಿದೆ.

 ಇವರ ವಿರುದ್ಧ ಉದ್ಯಮಿ, ಸಾಕ್ಷಿದಾರ ಹುಸೇನ್ ಮೊಯಿನ್ ಫಾರೂಕ್ ಅವರು ಸಲ್ಲಿಸಿರುವ ದೂರಿಗೆ ಸಂಬಂಧಿಸಿದ ಪ್ರಕರಣ ಇದಾಗಿದ್ದು, ಇದರ ವಿಚಾರಣೆಯನ್ನು ನ್ಯಾಯಾಧೀಶ ಎನ್.ಕೆ.ಸುಧೀಂದ್ರ ರಾವ್ ನಡೆಸುತ್ತಿದ್ದಾರೆ.

ಕ್ರಿಮಿನಲ್ ಪ್ರಕರಣವೊಂದನ್ನು ಇತ್ಯರ್ಥಪಡಿಸುವ ಸಂಬಂಧ ಫಾರೂಕ್ ಅವರಿಂದ ಲಂಚ ಪಡೆದಿರುವ ಆರೋಪ ಹೊತ್ತ ಸಂಪಂಗಿ ಈ ಹಿಂದೆ ಬಂಧನಕ್ಕೆ ಒಳಗಾಗಿದ್ದರು. ಜಾಮೀನು ಪಡೆದು ಹೊರ ಬಂದ ನಂತರ ಮತ್ತೆ ಫಾರೂಕ್ ಅವರಿಗೆ ಬೆದರಿಕೆ ಹಾಕಿರುವ ಆರೋಪಕ್ಕೆ ಗುರಿಯಾಗಿದ್ದಾರೆ. 

  ಫಾರೂಕ್ ಮತ್ತು ಇನ್ನೊಬ್ಬ ಸಾಕ್ಷಿದಾರ ಅರುಣ್‌ಕುಮಾರ್ ಅವರ ಸಾಕ್ಷ್ಯಗಳನ್ನು  ಶನಿವಾರ ಲೋಕಾಯುಕ್ತ ಕೋರ್ಟ್‌ನಲ್ಲಿ ದಾಖಲಿಸಿಕೊಳ್ಳಲಾಯಿತು. ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಗೆ ಸಂಪಂಗಿ ಯಾವ ರೀತಿ ಮಾನಸಿಕ ಯಾತನೆ ನೀಡಿದರು ಎಂಬ ಬಗ್ಗೆ ಫಾರೂಕ್ ನ್ಯಾಯಾಧೀಶರೆದುರು ಸಂಪೂರ್ಣ ವಿವರಣೆ ನೀಡಿದರು.

ಸಂಪಂಗಿ ಅವರು ಲಂಚ ಕೇಳಿದ್ದ ಸಂದರ್ಭದಲ್ಲಿ, ಅದನ್ನು ಪತ್ತೆ ಹಚ್ಚಲು ಲೋಕಾಯುಕ್ತ ಪೊಲೀಸರ ಸೂಚನೆ ಮೇರೆಗೆ ತಾವು ಶಾಸಕರ ಭವನಕ್ಕೆ ತೆರಳಿದ ಘಟನೆ ಬಗ್ಗೆ ಸಾರಿಗೆ ಇಲಾಖೆಯಲ್ಲಿ ಗುಮಾಸ್ತರಾಗಿರುವ ಅರುಣ್‌ಕುಮಾರ್ ವಿವರಣೆ ನೀಡಿದರು.

ಲಂಚ ಪಡೆದಿರುವುದು ನಿಜ ಎಂದು ಸಾಬೀತುಪಡಿಸುವ ಸಂಬಂಧದ ಕೆಲವು ದಾಖಲೆಗಳನ್ನು ಕೋರ್ಟ್‌ಗೆ ಹಾಜರುಪಡಿಸಲಾಯಿತು. ಹಣ ನೀಡುವ ಸಂದರ್ಭದಲ್ಲಿ ನಡೆದ ಸಂಭಾಷಣೆಯ ಸಿ.ಡಿ, ನೋಟು ಪರೀಕ್ಷೆಗೆ ಬಳಸಿದ ರಾಸಾಯನಿಕಗಳ ಮಾದರಿಗಳು ಇತ್ಯಾದಿಗಳನ್ನು ನ್ಯಾಯಾಲಯದ ಸುಪರ್ದಿಗೆ ಒಪ್ಪಿಸಲಾಯಿತು. ಶನಿವಾರ ಮುಖ್ಯ ಸವಾಲು ಮುಗಿದ ಹಿನ್ನೆಲೆಯಲ್ಲಿ, ಸೋಮವಾರ ಪಾಟಿ ಸವಾಲು ನಡೆಯಲಿದೆ. 

 ದಿನಪೂರ್ತಿ ಕಟಕಟೆಯಲ್ಲಿ: ವಿಚಾರಣೆ ವೇಳೆ ಸಂಪಂಗಿ ಹಾಗೂ ಫಾರೂಕ್ ಇಬ್ಬರೂ ಕೋರ್ಟ್‌ನಲ್ಲಿ ಖುದ್ದು ಹಾಜರಿದ್ದರು. ಬೆಳಿಗ್ಗೆ 11 ಗಂಟೆಗೆ ಆರಂಭವಾದ ಕಲಾಪ ಸಂಜೆ 5ಗಂಟೆಯವರೆಗೆ ನಡೆಯಿತು (ಮಧ್ಯಾಹ್ನ ಊಟದ ಬಿಡುವು ಬಿಟ್ಟು). ಇಷ್ಟು ಸುದೀರ್ಘ ಅವಧಿಯವರೆಗೆ ಇಬ್ಬರೂ ಕಟಕಟೆಯಲ್ಲಿ ಅಕ್ಕಪಕ್ಕ ನಿಂತುಕೊಂಡೇ ಇದ್ದರು.

ಸಂಪಂಗಿ ಅವರ 50ಕ್ಕೂ ಅಧಿಕ ಅಭಿಮಾನಿಗಳು ಕೋರ್ಟ್‌ನಲ್ಲಿ ಹಾಜರು ಇದ್ದರು. ನ್ಯಾಯಾಂಗದ ಬಂಧನದ ಅವಧಿಯನ್ನು ವಿಸ್ತರಿಸಿ ಕೋರ್ಟ್ ಆದೇಶ ಹೊರಡಿಸಿದ ನಂತರ, ಪೊಲೀಸರು ಸಂಪಂಗಿ ಅವರನ್ನು ಕಾರಾಗೃಹಕ್ಕೆ ಕರೆದುಕೊಂಡು ಹೋದರು. ಪೊಲೀಸ್ ವಾಹನದವರೆಗೆ ಅವರ ಅಭಿಮಾನಿಗಳು ಬಂದು ಅವರನ್ನು `ಬೀಳ್ಕೊಟ್ಟರು~.

ಜಗದೀಶ ಶೆಟ್ಟರ್ ಕಟಕಟೆಗೆ...?

ಶಾಸಕ ವೈ.ಸಂಪಂಗಿ ಅವರ ಪ್ರಕರಣದ ಸಾಕ್ಷಿದಾರರಲ್ಲಿ ಒಬ್ಬರಾಗಿರುವ ಮಾಜಿ ಸ್ಪೀಕರ್, ಹಾಲಿ ಸಚಿವ ಜಗದೀಶ ಶೆಟ್ಟರ್ ಅವರನ್ನು ಸಾಕ್ಷಿ ಹೇಳಲು ಲೋಕಾಯುಕ್ತ ವಿಶೇಷ ಕೋರ್ಟ್‌ಗೆ ಕರೆದು ತರಬೇಕೆ ಎಂಬ ಪ್ರಶ್ನೆ ಶನಿವಾರ ವಿಚಾರಣೆ ವೇಳೆ ನ್ಯಾಯಾಲಯದಲ್ಲಿ ಉದ್ಭವಿಸಿತು.

ಫಾರೂಕ್ ಹಾಗೂ ಅರುಣಕುಮಾರ್ ಅವರ ಸಾಕ್ಷಿಗಳ ಹೇಳಿಕೆಯನ್ನು ದಾಖಲಿಸಿಕೊಂಡ ನಂತರ, ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರಮೋದಚಂದ್ರ ಹಾಗೂ ಸಂಪಂಗಿ ಪರ ವಕೀಲರ ನಡುವೆ ಈ ಚರ್ಚೆ ನಡೆಯಿತು.

2009ರ ಅವಧಿಯಲ್ಲಿ ಸಂಪಂಗಿ ಅವರು ಕೆಜಿಎಫ್ ಶಾಸಕರಾಗಿ ಆಯ್ಕೆಯಾಗಿದ್ದ ಸಂದರ್ಭದಲ್ಲಿ ಶೆಟ್ಟರ್ ಸ್ಪೀಕರ್ ಆಗಿದ್ದರು. ಸಂಪಂಗಿ ಅವರು ಲೋಕಾಯುಕ್ತ ಪೊಲೀಸರಿಂದ ಬಂಧಿತರಾಗಿದ್ದ ಕಾರಣ, ಈ ರೀತಿ ಬಂಧನಕ್ಕೆ ಒಳಗಾದ ಪ್ರಥಮ ಶಾಸಕ ಎನ್ನಿಸಿದ್ದರು.

ಆದುದರಿಂದ ನಿಯಮದ ಅನುಸಾರ ಇವರ ವಿರುದ್ಧ ಪ್ರಕರಣ ದಾಖಲು ಮಾಡಲು ಸ್ಪೀಕರ್ ಅವರ ಅನುಮತಿ ಕೋರಿ ಲೋಕಾಯುಕ್ತ ಪೊಲೀಸರು ಶೆಟ್ಟರ್ ಅವರಿಗೆ ಪತ್ರ ಬರೆದಿದ್ದರು. ಅದಕ್ಕೆ ಅವರು ಅನುಮತಿ ನೀಡಿದ್ದರು.

ಈ ಹಿನ್ನೆಲೆಯಲ್ಲಿ ಈಗ ಸಾಕ್ಷಿದಾರರನ್ನಾಗಿ ಅವರನ್ನು ಕರೆತರಬೇಕೆ ಎಂದು ವಕೀಲರು ನ್ಯಾಯಾಧೀಶ ಎನ್.ಕೆ.ಸುಧೀಂದ್ರ ರಾವ್ ಅವರನ್ನು ಕೇಳಿದರು. ಆದರೆ ಇದಕ್ಕೆ ಕೆಲವೊಂದು ನಿಯಮಗಳನ್ನು ಪಾಲನೆ ಮಾಡಬೇಕಾಗುತ್ತದೆ ಎಂದ ನ್ಯಾಯಾಧೀಶರು, ವಿಚಾರಣೆ ಮುಂದೂಡಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT