ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಂಗಿ ಲಂಚ ಪ್ರಕರಣ ವಿಚಾರಣೆ ಫೆ. 2ಕ್ಕೆ

Last Updated 9 ಜನವರಿ 2012, 20:00 IST
ಅಕ್ಷರ ಗಾತ್ರ

ಬೆಂಗಳೂರು: ಕೆಜಿಎಫ್ ಶಾಸಕ ವೈ.ಸಂಪಂಗಿ ಲಂಚ ಪ್ರಕರಣದ ವಿಚಾರಣೆಯನ್ನು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ (ಲೋಕಾಯುಕ್ತ) ವಿಶೇಷ ನ್ಯಾಯಾಲಯ ಫೆಬ್ರುವರಿ 2ಕ್ಕೆ ಮುಂದೂಡಿದೆ. ಸಚಿವ ಜಗದೀಶ ಶೆಟ್ಟರ್ ಅವರು ಸಾಕ್ಷಿ ಹೇಳಲು ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ವಿಚಾರಣೆ ಮುಂದೂಡಲಾಗಿದೆ.

ಶೆಟ್ಟರ್ ಅವರು ವಿಧಾನಸಭೆಯ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಸಂಪಂಗಿ ವಿರುದ್ಧ ಆರೋಪಪಟ್ಟಿ ಸಲ್ಲಿಸಲು ಲೋಕಾಯುಕ್ತ ಪೊಲೀಸರಿಗೆ ಅನುಮತಿ ನೀಡಿದ್ದರು. ಆರೋಪಪಟ್ಟಿ ಸಲ್ಲಿಕೆಗೆ ಅನುಮತಿ ನೀಡಿರುವ ಬಗ್ಗೆ ಸಾಕ್ಷಿ ಹೇಳುವಂತೆ ವಿಶೇಷ ನ್ಯಾಯಾಲಯ ಶೆಟ್ಟರ್ ಅವರಿಗೆ ಸಮನ್ಸ್ ಜಾರಿಮಾಡಿತ್ತು.

ಸೋಮವಾರ ಬೆಳಿಗ್ಗೆ ನ್ಯಾಯಾಲಯಕ್ಕೆ ಹಾಜರಾದ ಸಚಿವರು, ಪ್ರಕರಣಕ್ಕೆ ಸಂಬಂಧಿಸಿದ ಕಡತಗಳನ್ನು ಅಧ್ಯಯನ ಮಾಡಬೇಕಿರುವುದರಿಂದ ಕಾಲಾವಕಾಶ ನೀಡುವಂತೆ ಕೋರಿದರು. ಅವರ ಬೇಡಿಕೆಯನ್ನು ಮಾನ್ಯ ಮಾಡಿದ ನ್ಯಾಯಾಧೀಶ ಎನ್.ಕೆ.ಸುಧೀಂದ್ರ ರಾವ್ ಅವರು, ವಿಚಾರಣೆಯನ್ನು ಮುಂದೂಡಿದರು.

ಮೃತ ಎಂಜಿನಿಯರ್ ಪತ್ನಿ ಆತ್ಮಹತ್ಯೆಗೆ ಯತ್ನ
ಬೆಂಗಳೂರು: ಆನೇಕಲ್‌ನಲ್ಲಿ ಇತ್ತೀಚೆಗೆ ಆನೆಗಳು ದಾಳಿ ಮಾಡಿದ ಸಂದರ್ಭದಲ್ಲಿ ಮೃತಪಟ್ಟ ಐಬಿಎಂ ಉದ್ಯೋಗಿ ರಮೇಶ್ ಅವರ ಪತ್ನಿ ಯಶೋದಾ (34) ವಿಷ ಕುಡಿದು ಆತ್ಮ ಹತ್ಯೆಗೆ ಯತ್ನಿಸಿರುವ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ.

ತಮ್ಮ ಪತಿಯ ಸಾವಿನಿಂದ ಮನನೊಂದಿದ್ದ ಯಶೋದಾ ತಮ್ಮ ಕುಮಾರಸ್ವಾಮಿ ಲೇಔಟ್‌ನ ನಿವಾಸದಲ್ಲಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕುಟುಂಬ ಸದಸ್ಯರು ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ ಎಂದು ಕುಮಾರಸ್ವಾಮಿ ಲೇಔಟ್ ಪೊಲೀಸರು ತಿಳಿಸಿದ್ದಾರೆ.

ಇ- ಮೇಲ್ ವಂಚನೆ: ನೈಜೀರಿಯಾ ಪ್ರಜೆ ಬಂಧನ
ಬೆಂಗಳೂರು: ನಗದು ಬಹುಮಾನ ಬಂದಿದೆ ಎಂದು ಇ-ಮೇಲ್ ಮೂಲಕ ತಿಳಿಸಿ ವಂಚಿಸುತ್ತಿದ್ದ ನೈಜೀರಿಯನ್ ಪ್ರಜೆಯೊಬ್ಬನನ್ನು ಹಲಸೂರು ಪೊಲೀಸರು ಇತ್ತೀಚೆಗೆ  ಬಂಧಿಸಿದ್ದಾರೆ.

ಎಮಾನ್ಯುಯಲ್ ಜಾನ್ಸನ್(34) ಬಂಧಿತ ಆರೋಪಿ.
ನಗರದ ಜಯಚಂದ್ರ ರೆಡ್ಡಿ ಎಂಬುವವರಿಗೆ 10 ಕೋಟಿ ರೂ.ಗಳ ನಗದು ಬಹುಮಾನ ಬಂದಿದೆ ಎಂದು ಇ-ಮೇಲ್ ಮೂಲಕ ತಿಳಿಸಿ ಅವರಿಂದ ಸುಮಾರು 21 ಲಕ್ಷ ರೂ.ಗಳನ್ನು ವಿವಿಧ ಖಾತೆಗಳಿಗೆ ಈತ ಜಮಾ ಮಾಡಿಸಿಕೊಂಡಿದ್ದಾನೆ.

ಹತ್ತು ಕೋಟಿ ರೂ.ಗಳ ಆಸೆಗೆ ಬಿದ್ದ ಜಯಚಂದ್ರ ರೆಡ್ಡಿ ಹಣ ಕಳೆದುಕೊಂಡ ನಂತರ ಮೋಸದ ಅರಿವಾಗಿ ಹಲಸೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನಿರಂತರವಾಗಿ ಆರೋಪಿಯ ಜಾಡು ಹಿಡಿದ ಪೊಲೀಸರು ಮುಂಬೈನಿಂದ ನಗರಕ್ಕೆ ಬಂದ ಜಾನ್ಸನ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮೋಸ ಜಾಲದಲ್ಲಿ ಮಾರ್ಟಿನ್ ಎಂಬ ವ್ಯಕ್ತಿಯ ಪಾತ್ರ ಪ್ರಮುಖವಾಗಿದೆ. ಜಾನ್ಸನ್ ಈ ಮೋಸ ಜಾಲದ ದಲ್ಲಾಳಿ. ಮಾರ್ಟಿನ್‌ನ ಬಗ್ಗೆಯೂ ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT