ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪತ್ತು ತೆರಿಗೆ; ನಿಮಗೆಷ್ಟು ಗೊತ್ತು?

Last Updated 18 ನವೆಂಬರ್ 2014, 19:30 IST
ಅಕ್ಷರ ಗಾತ್ರ

ವ್ಯಕ್ತಿಯ ಒಟ್ಟು ಸಂಪತ್ತಿನ ಮೌಲ್ಯವನ್ನು ಲೆಕ್ಕಹಾಕಿ ಸಂಪತ್ತು ತೆರಿಗೆಯನ್ನು ವಿಧಿಸಲಾಗುತ್ತದೆ. ಒಬ್ಬ ವ್ಯಕ್ತಿಯು ತನ್ನ ಆದಾಯಕ್ಕೆ ತೆರಿಗೆಯನ್ನು ಪಾವತಿಸಿ ನಂತರದ ಉಳಿದ ಹಣದಿಂದ ಸಂಪತ್ತನ್ನು ಗಳಿಸುತ್ತಾನೆ. ವ್ಯಕ್ತಿಯು ಸಂಪಾದಿಸಿದ ಈ ಆಸ್ತಿಗಳಿಗೆ  ವರ್ಷಾಂತ್ಯದಲ್ಲಿ ಸಂಪತ್ತು ತೆರಿಗೆ ಪಾವತಿಸಬೇಕಾಗುತ್ತದೆ. ಸಂಪತ್ತು ತೆರಿಗೆಗಳ ನಿರ್ವಹಣೆ ಹಾಗೂ ಪ್ರತಿ ವರ್ಷದ ತೆರಿಗೆ ವಸೂಲಿ ಜವಾಬ್ದಾರಿಯು ಆದಾಯ ತೆರಿಗೆ ಇಲಾಖೆ ವ್ಯಾಪ್ತಿಗೆ ಒಳಪಡುತ್ತದೆ.

ಆದಾಯ  ತೆರಿಗೆಯನ್ನು ವ್ಯಕ್ತಿಯ ಆದಾಯಕ್ಕೆ  ವಿಧಿಸಲಾಗುತ್ತದೆ. ಮೌಲ್ಯವರ್ಧಿತ ತೆರಿಗೆಯನ್ನು (ವ್ಯಾಟ್) ಸರಕುಗಳ ಮಾರಾಟದ ಮೌಲ್ಯವನ್ನು ಅನುಸರಿಸಿ ವರ್ತಕರಿಂದ ಸಂಗ್ರಹಿಸಲಾಗುತ್ತದೆ.  ಸೇವಾ ತೆರಿಗೆಯನ್ನು ಸೇವೆಗಳ ಮೌಲ್ಯಕ್ಕೆ ಅನುಸಾರವಾಗಿ ವಿಧಿಸಲಾಗುತ್ತದೆ. ಈ ತೆರಿಗೆಗಳು  ಬಹಳಷ್ಟು ಮಂದಿಗೆ ತಿಳಿದಿರುವಂತಹ ವಿಷಯಗಳೇ ಆಗಿವೆ. ಆದರೆ, ಸಂಪತ್ತು ತೆರಿಗೆ ಬಗ್ಗೆ ಹೆಚ್ಚಿನವರಿಗೆ ತಿಳಿದಿರುವುದು ಕಡಿಮೆ.

ಸಂಪತ್ತು ತೆರಿಗೆ?
ವ್ಯಕ್ತಿಯ ಒಟ್ಟು ಸಂಪತ್ತಿನ ಮೌಲ್ಯವನ್ನು ಲೆಕ್ಕಹಾಕಿ ಸಂಪತ್ತು ತೆರಿಗೆಯನ್ನು ವಿಧಿಸಲಾಗುತ್ತದೆ. ಒಬ್ಬ ವ್ಯಕ್ತಿಯು ತನ್ನ ಆದಾಯಕ್ಕೆ ತೆರಿಗೆಯನ್ನು ಪಾವತಿಸಿ ನಂತರದ ಉಳಿದ ಹಣದಿಂದ ಸಂಪತ್ತನ್ನು ಗಳಿಸುತ್ತಾನೆ. ವ್ಯಕ್ತಿಯು ಸಂಪಾದಿಸಿದ ಈ ಆಸ್ತಿಗಳಿಗೆ  ವರ್ಷಾಂತ್ಯದಲ್ಲಿ ಸಂಪತ್ತು ತೆರಿಗೆ ಪಾವತಿಸಬೇಕಾಗುತ್ತದೆ. ಸಂಪತ್ತು ತೆರಿಗೆಗಳ ನಿರ್ವಹಣೆ ಹಾಗೂ ಪ್ರತಿ ವರ್ಷದ ತೆರಿಗೆ ವಸೂಲಿ ಜವಾಬ್ದಾರಿಯು ಆದಾಯ ತೆರಿಗೆ ಇಲಾಖೆ ವ್ಯಾಪ್ತಿಗೆ ಒಳಪಡುತ್ತದೆ.

ತೆರಿಗೆದಾರರು ವಾರ್ಷಿಕವಾಗಿ ಸಂಪತ್ತು ತೆರಿಗೆಯನ್ನೂ ಸಹ ಆದಾಯ ತೆರಿಗೆ ಪಾವತಿಸುವ ಹಾಗೆಯೇ ತೆರಿಗೆ ಇಲಾಖೆಗೆ ವರ್ಷಕ್ಕೊಮ್ಮೆ ತೆರಿಗೆ ಪಾವತಿಸಬೇಕಾಗುತ್ತದೆ. ಜತೆಗೆ ಸಂಪತ್ತು ತೆರಿಗೆಗೆ ಒಳಪಡುವ ಆಸ್ತಿಗಳು ಮತ್ತು ಅದರ ಮೌಲ್ಯ ಮೊದಲಾದ ವಿವರಗಳನ್ನು ಒಳಗೊಂಡ ಲೆಕ್ಕಪತ್ರವನ್ನೂ (ರಿಟರ್ನ್) ಜುಲೈ 31ರಂದು ಸಲ್ಲಿಸಬೇಕಾಗುತ್ತದೆ.
ಸಂಪತ್ತು ತೆರಿಗೆ ವಿಚಾರವಾಗಿ ಜನಸಾಮಾನ್ಯರು ಕೇಳಿರುವುದು ವಿರಳ. ಸಂಪತ್ತು ತೆರಿಗೆ ಕಾಯ್ದೆ 1957ರಿಂದ ಜಾರಿಯಲ್ಲಿದೆ.

ತೆರಿಗೆಗೊಂದು ಕಾರಣ!
ಸರ್ಕಾರ ಈ ತೆರಿಗೆಯನ್ನು ಸಂಪತ್ತಿನ ಮೇಲೆ ವಿಧಿಸುವುದಕ್ಕೆ ಒಂದು ಕಾರಣವಿದೆ. ಜನರು ಸಂಪತ್ತನ್ನು ಸಂಗ್ರಹಿಸಿ, ಅದರಿಂದ ಆದಾಯವನ್ನು ಗಳಿಸಬೇಕು. ಸಂಪತ್ತು ಆದಾಯವನ್ನು ಗಳಿಸದೇ ಇದ್ದರೆ ಅದು ವ್ಯರ್ಥ  ಸ್ವತ್ತಾಗುತ್ತದೆ. ಸಂಪತ್ತು ತೆರಿಗೆಯನ್ನು ಪ್ರತಿ ವರ್ಷವೂ ನೀಡಬೇಕಾಗಿ ಬರುವುದರಿಂದ, ಕೆಲವು  ಜನರು ವಿಪರೀತವಾಗಿ ಸಂಪತ್ತು ಶೇಖರಿಸುವುದಕ್ಕೆ  ಕಡಿವಾಣ ಹಾಕಲೂ ಈ ತೆರಿಗೆ  ಕ್ರಮವು ಸಹಕಾರಿಯಾಗುತ್ತದೆ ಎಂಬ ಅಭಿಪ್ರಾಯವೂ ಇದೆ.

ಯಾವುದು ಸಂಪತ್ತು?
ಈ ಕೆಳಕಂಡ ಸ್ವತ್ತುಗಳನ್ನು ಸಂಪತ್ತು ಎಂದು  ಪರಿಗಣಿಸಲಾಗುತ್ತದೆ.
ಕಟ್ಟಡಗಳು
ಕಟ್ಟಡ ಹಾಗೂ ಮನೆಗಳು ಸಂಪತ್ತು ತೆರಿಗೆ ವ್ಯಾಪ್ತಿಗೆ ಒಳಪಡುತ್ತವೆ. ಆದರೆ, ವ್ಯಕ್ತಿಯೊಬ್ಬನಿಗೆ ಸಂಬಂಧಿಸಿದಂತೆ ಈ ಕೆಳಗಿನ ಕಟ್ಟಡಗಳಿಗೆ ಸಂಪತ್ತು ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ.

*ಒಂದು ವಾಸದ ಮನೆ
* ಬಾಡಿಗೆಗೆ ನೀಡಿರುವ ಯಾವುದೇ  ಮನೆ
*ವಾಣಿಜ್ಯ ಕಟ್ಟಡಗಳು
ವಾಣಿಜ್ಯ ಉದ್ದೇಶಕ್ಕೆ ಬಳಸುತ್ತಿರುವ  ಯಾವುದೇ  ಮನೆ.
ಆದ್ದರಿಂದ ಒಬ್ಬ ವ್ಯಕ್ತಿಯು ಒಂದಕ್ಕಿಂತ ಹೆಚ್ಚು ವಾಸದ  ಮನೆಯನ್ನು ಹೊಂದಿದ್ದರೆ ಹಾಗೂ ಬಾಡಿಗೆಗೆ ನೀಡದೇ ಇದ್ದರೆ ಆಗ ಆ ಮನೆಯ ಮೌಲ್ಯಕ್ಕೆ ಅನುಸಾರವಾಗಿ ಸಂಪತ್ತು ತೆರಿಗೆಯನ್ನು ಪಾವತಿಸಬೇಕಾಗುತ್ತದೆ.

ಆಭರಣ
* ಚಿನ್ನ, ಬೆಳ್ಳಿ, ಪ್ಲಾಟಿನಂ ಮತ್ತು ಮುತ್ತುಗಳಿಂದ ತಯಾರಿಸಿದ ಆಭರಣಗಳು ಸಹ ಸಂಪತ್ತು ತೆರಿಗೆಗೆ  ಒಳಪಡುತ್ತವೆ.
ಕಾರು
*ಕಾರುಗಳ  ಮೌಲ್ಯಕ್ಕೆ  ಸಂಪತ್ತು ತೆರಿಗೆ ವಿಧಿಸಲಾಗುತ್ತದೆ.  ಆದರೆ ಬಾಡಿಗೆಗೆ ನೀಡುವ ಕಾರು  ಹಾಗೂ ಟ್ಯಾಕ್ಸಿಗಳಿಗೆ ಈ ತೆರಿಗೆಯಿಂದ ವಿನಾಯ್ತಿ ನೀಡಲಾಗಿದೆ. ದೋಣಿ, ಹಡಗು ಮತ್ತು ಹೆಲಿಕಾಪ್ಟರ್‌, ವಿಮಾನ ಮೊದಲಾದ ಸಂಚಾರದ ವಾಹನಗಳೂ ಕೂಡ ಸಂಪತ್ತು ತೆರಿಗೆಗೆ  ಒಳಪಡುತ್ತವೆ.

ನಗರ ಪ್ರದೇಶದಲ್ಲಿನ ನಿವೇಶನ
*ನಗರ ವ್ಯಾಪ್ತಿಯಲ್ಲಿರುವ ಖಾಲಿ  ನಿವೇಶನಗಳು ಸಂಪತ್ತು ತೆರಿಗೆಗೆ ಗುರಿಯಾಗುತ್ತವೆ. ಆದರೆ, 500 ಚ.ಮೀ.ಗಿಂತ ಕಡಿಮೆ ವಿಸ್ತೀರ್ಣದ ನಿವೇಶನಗಳಿಗೆ ಸಂಪತ್ತು ತೆರಿಗೆ ವ್ಯಾಪ್ತಿಯಿಂದ ವಿನಾಯಿತಿ  ನೀಡಲಾಗಿದೆ.
* ಗ್ರಾಮೀಣ  ಪ್ರದೇಶದಲ್ಲಿನ ನಿವೇಶನ ಹಾಗೂ ಕೃಷಿ ಭೂಮಿಗೆ ಸಂಪತ್ತು ತೆರಿಗೆ ಅನ್ವಯಿಸುವುದೇ ಇಲ್ಲ.

ನಗದು ಹಣ
*ಒಬ್ಬ ವ್ಯಕ್ತಿಯು ರೂ50 ಸಾವಿರಕ್ಕಿಂತ ಹೆಚ್ಚು ನಗದು ಹಣವನ್ನು ಹೊಂದಿದ್ದರೆ ಸಂಪತ್ತು ತೆರಿಗೆ  ನೀಡಬೇಕಾಗುತ್ತದೆ. ಬ್ಯಾಂಕ್ ಖಾತೆಯಲ್ಲಿ ಜಮಾ  ಆಗಿರುವ ಹಣಕ್ಕೆ ವಿನಾಯಿತಿ ಇರುತ್ತದೆ.
ಹಾಗೆಂದು ಎಲ್ಲ ವ್ಯಕ್ತಿ, ಸಂಘ ಸಂಸ್ಥೆಗಳ ಆಸ್ತಿಗಳೂ ಸಂಪತ್ತು ತೆರಿಗೆಗೆ ಒಳಪಡುವುದಿಲ್ಲ.

ಉದಾಹರಣೆಗೆ ಹೇಳುವುದಾದರೆ, ಮುಂಬೈ ಕ್ರಿಕೆಟ್‌ ಮಂಡಳಿ ನಗರ ಪ್ರದೇಶದಲ್ಲಿ ಹಲವು ಸ್ಥಿರಾಸ್ತಿಗಳನ್ನು ಹೊಂದಿತ್ತು. ಕ್ರಿಕೆಟ್ ಮಂಡಳಿಯು ಸಾರ್ವಜನಿಕ ಸೇವಾ ಸಂಸ್ಥೆಯಾಗಿದ್ದುದರಿಂದ ಟ್ರಸ್ಟ್‌ ಕಾಯ್ದೆಯಡಿ ನೋಂದಣಿಯಾಗಿತ್ತು. ಟ್ರಸ್ಟ್‌ ಮತ್ತು ಸೇವಾ ಸಂಸ್ಥೆಗಳು ಸಂಪತ್ತು ತೆರಿಗೆಗೆ ಒಳಪಡುವುದಿಲ್ಲ. ಆದ್ದರಿಂದ ಮುಂಬೈ ಕ್ರಿಕೆಟ್ ಮಂಡಳಿಯ ಆಸ್ತಿಗಳು ಸಂಪತ್ತು ತೆರಿಗೆಗೆ ಒಳಪಡುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ ತೀರ್ಪಿನಲ್ಲಿ ಹೇಳಲಾಗಿದೆ.

ಸಂಪತ್ತು ತೆರಿಗೆಯ ಲೆಕ್ಕ ಹೇಗೆ?
ಒಬ್ಬ ವ್ಯಕ್ತಿಯು ತನ್ನ ಒಟ್ಟು ಸಂಪತ್ತುಗಳ ಮೌಲ್ಯವನ್ನು ಪ್ರತಿ ವರ್ಷವೂ ಮಾರ್ಚ್‌ 31ರಂದು ಲೆಕ್ಕ ಹಾಕಬೇಕು.
ಒಟ್ಟು ಮೌಲ್ಯವು ರೂ30 ಲಕ್ಷ ಮೀರಿದರೆ ಮಾತ್ರ  ಸಂಪತ್ತು ತೆರಿಗೆ ನೀಡಬೇಕಾಗುತ್ತದೆ. ಸಂಪತ್ತುಗಳ ಮೌಲ್ಯ ರೂ30 ಲಕ್ಷ ಮೀರದೇ ಇದ್ದರೆ ಯಾವುದೇ ತೆರಿಗೆ ನೀಡಬೇಕಾಗುವುದಿಲ್ಲ.

ಸಂಪತ್ತು ಮೌಲ್ಯ ರೂ30 ಲಕ್ಷ ಮೀರಿದರೆ, ರೂ30  ಲಕ್ಷಕ್ಕಿಂತ ಹೆಚ್ಚಿನ ಮೌಲ್ಯಕ್ಕೆ ತೆರಿಗೆ  ವಿಧಿಸಲಾಗುತ್ತದೆ. ಅಂದರೆ, ಮೊದಲ ರೂ30 ಲಕ್ಷಕ್ಕೆ ಸಂಪತ್ತು ತೆರಿಗೆ ಯಿಂದ ವಿನಾಯ್ತಿ ನೀಡಲಾಗಿದೆ. ವರ್ಷಾಂತ್ಯದ ಮೊದಲು ಸಂಪತ್ತು  ಮಾರಾಟ ಮಾಡಿದರೆ, ಆ ಆಸ್ತಿಯು ತೆರಿಗೆಗೆ ಒಳಪಡುವುದಿಲ್ಲ.

ಸಂಪತ್ತು ತೆರಿಗೆ ಪ್ರಮಾಣ
ಒಬ್ಬ ವ್ಯಕ್ತಿಯ ಮಾಲೀಕತ್ವದಲ್ಲಿರುವ ಎಲ್ಲ ಸಂಪತ್ತುಗಳ (ರೂ30  ಲಕ್ಷಕ್ಕಿಂತ ಅಧಿಕ) ಮೌಲ್ಯಕ್ಕೆ ಶೇ 1ರಷ್ಟು ಸಂಪತ್ತು ತೆರಿಗೆಯನ್ನು ವಿಧಿಸಲಾಗುತ್ತದೆ. ಆದರೆ, ಈ ಸಂಪತ್ತು ತೆರಿಗೆಗೆ ಸೆಸ್ ಹಾಗೂ ಸರ್ಚಾರ್ಜ್ ವಿಧಿಸಲಾಗುವುದಿಲ್ಲ.

ಸಂಪತ್ತು ತೆರಿಗೆಯನ್ನು  ತಪ್ಪಿಸುವುದಕ್ಕೆ ಕೆಲವರು ಸ್ವತ್ತನ್ನು ಕುಟುಂಬದ ಇತರೆ ಸದಸ್ಯರ ಹೆಸರಿಗೆ ಅಂದರೆ, ಹೆಂಡತಿ, ಗಂಡ, ಮಕ್ಕಳ ಹೆಸರಿಗೆ ವರ್ಗಾವಣೆ ಮಾಡುತ್ತಾರೆ. ಈ ಕಾರಣದಿಂದ  ಕುಟುಂಬದಲ್ಲಿ ವರ್ಗಾವಣೆಯಾದ ಸ್ವತ್ತುಗಳು ಸಂಪತ್ತು ತೆರಿಗೆಗೆ ಗುರಿಯಾಗುತ್ತವೆ.

ಆದರೆ, ಪ್ರತಿ ಸದಸ್ಯರ ಹೆಸರಿನಲ್ಲಿ ನೇರವಾಗಿ ಖರೀದಿಸಿದ ಆಸ್ತಿಗಳಿಗಾದರೆ ರೂ30 ಲಕ್ಷ ಮೌಲ್ಯ ದಾಟುವವರೆಗೂ ಆ ವ್ಯಕ್ತಿಯ ಆಸ್ತಿಗಳಿಗೆ ಸಂಪತ್ತು ತೆರಿಗೆ ಹೊರೆ ಬೀಳುವುದಿಲ್ಲ. ಸಂಪತ್ತು ತೆರಿಗೆಯನ್ನು ಪ್ರತಿ ಹಣಕಾಸು ವರ್ಷದ ಅಂತ್ಯದಲ್ಲಿ ಪಾವತಿಸಬೇಕಾಗುತ್ತದೆ. ಉದಾಹರಣೆಗೆ ನಿವೇಶನ ಮೌಲ್ಯಕ್ಕೆ ಈ ವರ್ಷ ತೆರಿಗೆ ನೀಡಿದರೆ, ಅದೇ ನಿವೇಶನಕ್ಕೆ ಮುಂದಿನ ವರ್ಷ ಮತ್ತೆ ಸಂಪತ್ತು ತೆರಿಗೆ ನೀಡಬೇಕು. ಮಾರ್ಚ್ ಕಡೆಯ ದಿನಗಳಲ್ಲಿ ಹೊಸದಾಗಿ ಒಂದು ಆಸ್ತಿಯನ್ನು ಖರೀದಿಸಿದರೂ  ಆ ಆಸ್ತಿಯು ಹಣಕಾಸು ವರ್ಷದ ಸಂಪತ್ತು ತೆರಿಗೆ ವ್ಯಾಪ್ತಿಗೆ ಒಳಪಡುತ್ತದೆ.

ತೆರಿಗೆಗೆ ಒಳಪಡುವ ಸ್ವತ್ತುಗಳ ಸಂಬಂಧಿಸಿದ ಸಾಲದ ಮೊತ್ತವನ್ನು, ಸ್ವತ್ತಿನ ಮೌಲ್ಯದಿಂದ ಕಳೆದು ಉಳಿದ ಮೌಲ್ಯಕ್ಕೆ ಮಾತ್ರ ತೆರಿಗೆ ವಿಧಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT