ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪರ್ಕ ಶಿಕ್ಷಣ ವಿದ್ಯಾಲಯಕ್ಕೆ ಸುವರ್ಣ ಸಂಭ್ರಮ

Last Updated 4 ಜೂನ್ 2013, 5:39 IST
ಅಕ್ಷರ ಗಾತ್ರ

ಧಾರವಾಡ: ರಾಜ್ಯದ ಎರಡನೇ ಹಳೆಯ ವಿಶ್ವವಿದ್ಯಾಲಯವಾದ ಕರ್ನಾಟಕ ವಿ.ವಿ.ಯ ಭಾಗವಾಗಿ ಬೆಳೆದು ಬಂದ ಸಂಪರ್ಕ ಶಿಕ್ಷಣ ವಿದ್ಯಾಲಯಕ್ಕೆ ಇದೀಗ 50 ವರ್ಷಗಳ ಸುವರ್ಣ ಸಂಭ್ರಮ.

ಕವಿವಿಯ ಕುಲಪತಿಯಾಗಿ ದಕ್ಷ ಆಡಳಿತ ನಡೆಸಿದ ರ‌್ಯಾಂಗ್ಲರ್ ಡಾ.ಡಿ.ಸಿ.ಪಾವಟೆ ಅವರ ಕನಸಿನ ಕೂಸು ಈ ವಿದ್ಯಾಲಯ. 1963ರಲ್ಲಿ ಬಿಎ ಕೋರ್ಸ್ ಆರಂಭಿಸಿ, ಬಳಿಕ ಬಿ.ಕಾಂ. ಎಂ.ಎ., ಎಂ.ಕಾಂ ಕೋರ್ಸ್‌ಗಳನ್ನು ಆರಂಭಿಸಿದ್ದರಿಂದ ಇಲ್ಲಿಯವರೆಗೂ ಲಕ್ಷಕ್ಕೂ ಅಧಿಕ ಅಭ್ಯರ್ಥಿಗಳು ಇಲ್ಲಿಂದ ಪದವಿಪಡೆದು ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದಾರೆ.

ಕಳೆದ ತಿಂಗಳು ನಡೆದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ನೂತನವಾಗಿ `ಹಳೆ ವಿದ್ಯಾರ್ಥಿಗಳ ಸಂಘ' ಅಸ್ತಿತ್ವಕ್ಕೆ ಬಂದಿದ್ದು, ಕುಲಪತಿ, ಕುಲಸಚಿವರು (ಆಡಳಿತ), ಕುಲಸಚಿವರು (ಮೌಲ್ಯಮಾಪನ) ಸಂಘದ ಮಹಾಪೋಷಕರಾಗಿರುತ್ತಾರೆ. ಈ ವಿದ್ಯಾಲಯದ ಹಳೆ ವಿದ್ಯಾರ್ಥಿ, ನಿವೃತ್ತ ಐಜಿಪಿ ಶಂಕರ ಬಿದರಿ ಅಧ್ಯಕ್ಷರು ಹಾಗೂ ಪ್ರಸ್ತುತ ಇಲ್ಲಿ ಎಂ.ಎ. ಸಮಾಜಶಾಸ್ತ್ರ ಕೋರ್ಸ್ ಓದುತ್ತಿರುವ ಚಿತ್ರನಟಿ ಅನು ಪ್ರಭಾಕರ್ ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ. 50 ವರ್ಷಗಳ ಸಾರ್ಥಕ ವಸಂತಗಳನ್ನು ಪೂರೈಸಿರುವ ಈ ಸಂಸ್ಥೆಯಿಂದ ಪದವಿ ಪಡೆಯಲು ದೂರದ ನೈಜೀರಿಯಾ, ಭಾರತದ ಪಂಜಾಬ್, ಮಹಾರಾಷ್ಟ್ರ, ಗೋವಾ ಸೇರಿದಂತೆ ವಿವಿಧ ರಾಜ್ಯಗಳಿಂದಲೂ ಅಭ್ಯರ್ಥಿಗಳು ಬರುತ್ತಾರೆ. ಉಳಿದ ವಿಶ್ವವಿದ್ಯಾಲಯಗಳಲ್ಲಿ ಸಾಕಷ್ಟು ನಕಲು, ಹೆಚ್ಚಿನ ಅಂಕ ಕೊಡುವುದು ಸೇರಿದಂತೆ ಹಲವು ಅಕ್ರಮಗಳು ನಡೆಯುತ್ತವೆ. ಆದರೆ ನಾವು ನಡೆಸುವ ಪರೀಕ್ಷೆಗಳಲ್ಲಿ ಯಾವುದೇ ಅಕ್ರಮ ನಡೆಸಲು ನಾವು ಅವಕಾಶ ನೀಡಿಲ್ಲಿ ಎನ್ನುತ್ತಾರೆ ಸಂಸ್ಥೆಯ ಉಪ ಕುಲಸಚಿವ ವೈ.ಎಂ.ಸಮಗಾರ.

ಇನ್ನೊಂದು ವಿಶಿಷ್ಟ ಅಂಶವನ್ನು ಸಮಗಾರ ಮುಂದಿಡುತ್ತಾರೆ. ಗೋವಾದ ವಿವಿಧ ಚರ್ಚುಗಳಲ್ಲಿ ಪಾದ್ರಿಗಳಾಗುವವರಿಗೆ ಸಂಸ್ಕೃತ ಕಲಿಕೆ ಕಡ್ಡಾಯ. ಎಂ.ಎ. ಸಂಸ್ಕೃತ ಮಾಡಿದವರಿಗೇ ಈ ಹುದ್ದೆ ನೀಡಬೇಕೆಂಬ ನಿಯಮ ಇರುವುದರಿಂದ ಹಲವು ಪಾದ್ರಿಗಳು ಕವಿವಿ ಸಂಪರ್ಕ ಶಿಕ್ಷಣ ವಿದ್ಯಾಲಯದ ಪದವಿ ಪಡೆಯಲು ಬರುತ್ತಾರೆ. ಅದಕ್ಕಾಗಿಯೇ ನಮ್ಮ ಸಂಸ್ಕೃತ ಕೋರ್ಸ್‌ಗೆ ಬೇಡಿಕೆ ಕಡಿಮೆಯಾಗಿಲ್ಲ ಎನ್ನುತ್ತಾರೆ.

ವರ್ಷದಿಂದ ವರ್ಷಕ್ಕೆ ಪದವಿ ಪಡೆಯುವ ಅಭ್ಯರ್ಥಿಗಳ ಸಂಖ್ಯೆಯಲ್ಲಿಯೂ ಹೆಚ್ಚಳವಾಗಿದೆ. ಪದವಿ ಹಾಗೂ ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆದ ಸಂಖ್ಯೆಯನ್ನು ಗಮನಿಸಿದರೆ, 2008-09ರಲ್ಲಿ 17,365, 2009-10ರಲ್ಲಿ 20,853, 2010-11ರಲ್ಲಿ 23,909 ಅಭ್ಯರ್ಥಿಗಳು ಪ್ರವೇಶ ಪಡೆದಿದ್ದರು, ಆ ಬಳಿಕ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಕೊಂಚ ಇಳಿಮುಖವಾಗಿದೆ. 2012-13ರಲ್ಲಿ 21,919 ಅಭ್ಯರ್ಥಿಗಳು ಪದವಿ ಪಡೆಯಲು ಹೆಸರು ನೋಂದಾಯಿಸಿದ್ದರು.

ಕನ್ನಡ, ಇಂಗ್ಲಿಷ್, ಮರಾಠಿ, ಸಂಸ್ಕೃಯ ಭಾಷಾ ಕೋರ್ಸ್‌ಗಳಲ್ಲದೇ, ಸಮಾಜ ವಿಜ್ಞಾನ ನಿಕಾಯದ ಇತಿಹಾಸ, ಅರ್ಥಶಾಸ್ತ್ರ, ಸಮಾಜಶಾಸ್ತ್ರ, ತತ್ವಶಾಸ್ತ್ರ, ಎಂ.ಕಾಂ. ಕೋರ್ಸ್‌ಗಳಲ್ಲಿ ಬ್ಯಾಂಕಿಂಗ್ ಹಾಗೂ ಮಾನವ ಸಂಪನ್ಮೂಲ ವಿಭಾಗಗಳನ್ನು ನಡೆಸಲಾಗುತ್ತಿದೆ.

ಈ ವಿದ್ಯಾಲಯದ ಕೋರ್ಸ್‌ಗೆ ಹೆಚ್ಚಿನ ಬೇಡಿಕೆ ಇದ್ದು, ಸಾವಿರಾರು ವಿದ್ಯಾರ್ಥಿಗಳು ಧಾರವಾಡಕ್ಕೇ ಬಂದು ಅರ್ಜಿಗಳನ್ನು ಪಡೆಯುವ ಬದಲು ಆಯಾ ಪಟ್ಟಣ ಗ್ರಾಮಗಳಲ್ಲಿಯೇ ಅರ್ಜಿ ದೊರೆಯುವ ವ್ಯವಸ್ಥೆ ಮಾಡಲಾಗಿದೆ. ಜಿಲ್ಲಾ ಅಥವಾ ತಾಲ್ಲೂಕು ಕೇಂದ್ರದಲ್ಲಿ ಹಳೆಯ ವಿದ್ಯಾರ್ಥಿ ಸಂಘದಿಂದ ಒಂದು ಕಚೇರಿಯನ್ನು ತೆರೆದು ಅಲ್ಲಿಯೂ ಅರ್ಜಿ ಪಡೆಯುವ, ಮಾಹಿತಿ ನೀಡುವ ವ್ಯವಸ್ಥೆ ಮಾಡುವ ಯೋಜನೆ ಇದೆ ಎಂದು ಸಮಗಾರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT