ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪುಟ ವಿಸ್ತರಣೆ: ಮಾಲಕರಡ್ಡಿಗೆ ಮತ್ತೆ ನಿರಾಸೆ?

Last Updated 1 ಜನವರಿ 2014, 9:25 IST
ಅಕ್ಷರ ಗಾತ್ರ

ಯಾದಗಿರಿ: ಸಚಿವ ಸಂಪುಟದ ವಿಸ್ತರಣೆ ಮಾಡಲು ಕಾಂಗ್ರೆಸ್ ವರಿಷ್ಠರು ನಿರ್ಧರಿ­ಸಿದ್ದು, ಕಾಂಗ್ರೆಸ್‌ ಹಿರಿಯ ನಾಯಕರಲ್ಲಿ ಒಬ್ಬರಾಗಿರುವ ಯಾದಗಿರಿ ಕ್ಷೇತ್ರದ ಶಾಸಕ ಡಾ. ಎ.ಬಿ. ಮಾಲಕರಡ್ಡಿ ಅವರಿಗೆ ಈ ಬಾರಿಯೂ ಸಚಿವ ಸ್ಥಾನ ಸಿಗುವ ಸಾಧ್ಯತೆಗಳು ಕ್ಷೀಣಿಸಿದೆ ಎನ್ನಲಾಗುತ್ತದೆ.

ಕೆಪಿಸಿಸಿ ಶಿಸ್ತು ಸಮಿತಿಯ ಅಧ್ಯಕ್ಷರೂ ಆಗಿರುವ ಡಾ. ಮಾಲಕರಡ್ಡಿ, ಐದು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು, ಎಸ್.ಎಂ. ಕೃಷ್ಣ ಸರ್ಕಾರದಲ್ಲಿ ಸಚಿವರಾಗಿಯೂ ಕೆಲಸ ಮಾಡಿದ್ದಾರೆ. ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಈ ಬಾರಿ ಡಾ.ಮಾಲಕರಡ್ಡಿ ಮತ್ತೊಮ್ಮೆ ಸಚಿವರಾಗಲಿ­ದ್ದಾರೆ ಎಂಬ ಕ್ಷೇತ್ರದ ಜನರ ನಿರೀಕ್ಷೆ ಈಗಾಗಲೇ ಹುಸಿಯಾಗಿದೆ. ಸಚಿವ ಸಂಪುಟದ ವಿಸ್ತರಣೆ­ಯಲ್ಲಾದರೂ ಡಾ. ಮಾಲಕರಡ್ಡಿ ಅವರಿಗೆ ಸಚಿವ ಸ್ಥಾನ ಸಿಗಲಿದೆಯೇ ಎಂಬ ಕುತೂಹಲ ಜನರನ್ನು ಕಾಡುತ್ತಿದೆ.

ಸರ್ಕಾರದಲ್ಲಿ ಜಿಲ್ಲೆಯ ಗುರುಮಠಕಲ್‌ ಕ್ಷೇತ್ರದ ಶಾಸಕ ಬಾಬುರಾವ ಚಿಂಚನಸೂರ ಅವರಿಗೆ ಸಚಿವ ಸ್ಥಾನ ನೀಡಲಾಗಿದ್ದು, ಜಿಲ್ಲೆಗೆ ಇನ್ನೊಂದು ಸಚಿವ ಸ್ಥಾನ ಸಿಗಬ­ಹುದು ಎಂಬ ನಿರೀಕ್ಷೆಯನ್ನು ಪಕ್ಷದ ಕಾರ್ಯಕರ್ತರು ಮಾಡಿದ್ದರು. ಮಾಲಕರಡ್ಡಿ ಅವರಿಗೆ ಸಚಿವ ಸ್ಥಾನ ನೀಡುವಂತೆ ಸ್ಥಳೀಯ ಕಾರ್ಯಕರ್ತರು ಆಗ್ರಹಿಸು­ತ್ತಲೇ ಬಂದಿದ್ದಾರೆ. ಕಾಂಗ್ರೆಸ್‌ನ ಒಂದು ಮೂಲಗಳ ಪ್ರಕಾರ ಸಚಿವ ಸಂಪುಟದಲ್ಲಿ ಡಿ.ಕೆ. ಶಿವಕುಮಾರ ಹಾಗೂ ರೋಷನ್‌ ಬೇಗ್‌ ಅವರಿಗೆ ಮಾತ್ರ ಅವಕಾಶ ನೀಡಲಾಗುತ್ತಿದ್ದು, ಡಾ. ಮಾಲಕರಡ್ಡಿ ಅವರ ಹೆಸರು ಪಟ್ಟಿಯಲ್ಲಿ ಇಲ್ಲ ಎಂದು ಹೇಳಲಾಗುತ್ತಿದೆ. ಬುಧವಾರ (ಜ.1) ನಡೆಯಲಿರುವ ನೂತನ ಸಚಿವರ ಪ್ರಮಾಣ ವಚನದ ಬಳಿಕವೇ ಸ್ಪಷ್ಟ ಚಿತ್ರಣ ಲಭ್ಯವಾಗಲಿದೆ ಎಂದು ಜಿಲ್ಲೆಯ ಹಿರಿಯ ಕಾಂಗ್ರೆಸ್‌ ಮುಖಂಡರೊಬ್ಬರು ತಿಳಿಸಿದ್ದಾರೆ.

ಸಚಿವ ಸ್ಥಾನ ನೀಡಲು ಆಗ್ರಹ: ಈ ಭಾಗದ ಅಭಿವೃದ್ಧಿ ಮತ್ತು ಈ ಭಾಗದ ಕಾರ್ಯಕರ್ತರ ಹಿತಾಸಕ್ತಿಗಾಗಿ ಹಿರಿಯ ಶಾಸಕ ಡಾ.ಎ.ಬಿ. ಮಾಲಕರಡ್ಡಿ ಅವರಿಗೆ ಸಚಿವ ಸ್ಥಾನ ನೀಡುವ ಅವಶ್ಯಕತೆ ಇದೆ ಎಂದು ಕೆಪಿಸಿಸಿ ಕಾರ್ಮಿಕ ಘಟಕದ ಉಪಾದ್ಯಕ್ಷ ಸತೀಶ ಕಂದಕೂರ ಹೇಳಿದ್ದಾರೆ.

ಯಾದಗಿರಿ ಮತಕ್ಷೇತ್ರವಲ್ಲದೇ, ಹೈದರಾಬಾದ್‌ ಕರ್ನಾಟಕದ ಅಭಿವೃದ್ಧಿಗಾಗಿ ಡಾ. ಮಾಲಕರಡ್ಡಿ ಅವರಿಗೆ ಸಚಿವ ಸ್ಥಾನದ ಅವಶ್ಯಕತೆ ಇದೆ. ಮುಂಬರುವ ಲೋಕಸಭಾ ಚುನಾವಣೆಯ ದೃಷ್ಟಿಯಿಂದ ಸಚಿವ ಸ್ಥಾನ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT