ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪುಟ ಸಭೆ: ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಸಾಧ್ಯತೆ

Last Updated 27 ಅಕ್ಟೋಬರ್ 2011, 19:15 IST
ಅಕ್ಷರ ಗಾತ್ರ

ಬೆಂಗಳೂರು:  ಅಕ್ರಮ ಗಣಿಗಾರಿಕೆ ಕುರಿತ ಲೋಕಾಯುಕ್ತ ವರದಿಯಲ್ಲಿ ಹೆಸರು ಪ್ರಸ್ತಾಪವಾಗಿರುವ 617 ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವ ಬಗ್ಗೆ ಶುಕ್ರವಾರ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ.

ಸಚಿವ ಸಂಪುಟ ಸಭೆಯಲ್ಲಿ ಈ ವಿಷಯ ಪ್ರಮುಖವಾಗಿ ಚರ್ಚೆಗೆ ಬರಲಿದೆ. ಕೆ.ಜೈರಾಜ್ ಸಮಿತಿ ವರದಿಯನ್ನು ಅಂಗೀಕರಿಸಿ ಅದರ ಅನ್ವಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ನಿರ್ಧರಿಸುವ ಸಾಧ್ಯತೆ ಇದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಇದಲ್ಲದೆ 12ಕ್ಕೂ ಹೆಚ್ಚು ಪ್ರಮುಖ ವಿಷಯಗಳು ಸಂಪುಟದ ಮುಂದೆ ಚರ್ಚೆಗೆ ಬರಲಿದ್ದು, ನವೆಂಬರ್ ಮೂರನೇ ವಾರದಲ್ಲಿ ವಿಧಾನ ಮಂಡಲದ ಅಧಿವೇಶನ ನಡೆಸುವ ಬಗ್ಗೆಯೂ ನಿರ್ಧಾರ ತೆಗೆದುಕೊಳ್ಳುವ ಸಂಭವವಿದೆ.

ರಾಜ್ಯದಲ್ಲಿನ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಜುಲೈ 27ರಂದು ಆಗಿನ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಅವರು ಸರ್ಕಾರಕ್ಕೆ ವರದಿ ಸಲ್ಲಿಸಿದ್ದು, ಅಕ್ರಮ ಗಣಿಗಾರಿಕೆಗೆ ನೆರವು ನೀಡಿರುವ 787 ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಶಿಫಾರಸು ಮಾಡಿದ್ದಾರೆ.

ಈ ಹಿನ್ನೆಲೆಯಲ್ಲಿ ವರದಿಯ ಪರಿಶೀಲನೆಗಾಗಿ ರಾಜ್ಯ ಸರ್ಕಾರವು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೆ.ಜೈರಾಜ್ ನೇತೃತ್ವದಲ್ಲಿ ರಚಿಸಿದ್ದ ಸಮಿತಿಯು ಇದೇ 24ರಂದು ಮುಖ್ಯಕಾರ್ಯದರ್ಶಿ ಎಸ್.ವಿ.ರಂಗನಾಥ್ ಅವರಿಗೆ ವರದಿ ಸಲ್ಲಿಸಿದೆ. ಅದರ ಆಧಾರದ ಮೇಲೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ.

ಬಿ.ಎಸ್.ಯಡಿಯೂರಪ್ಪ ಅವರ ಪದಚ್ಯುತಿಗೆ ಕಾರಣವಾದ ಲೋಕಾಯುಕ್ತ ವರದಿಯಲ್ಲಿ ರಾಜಕಾರಣಿಗಳ ಜೊತೆಗೆ ಅಧಿಕಾರಿಗಳೂ ಅಕ್ರಮ ಗಣಿಗಾರಿಕೆಗೆ ಕುಮ್ಮಕ್ಕು ನೀಡಿದ್ದಾರೆ ಎಂದು ಪ್ರಸ್ತಾಪಿಸಲಾಗಿದೆ. ಲೋಕಾಯುಕ್ತ ವರದಿ ರಾಜ್ಯ ರಾಜಕೀಯದಲ್ಲಿ ಬದಲಾವಣೆಗೆ ಕಾರಣವಾದ ಬೆನ್ನಲ್ಲೇ ಅಧಿಕಾರಿಗಳ ವರ್ಗದಲ್ಲೂ ಆತಂಕವನ್ನುಂಟು ಮಾಡಿದೆ.

ಲೋಕಾಯುಕ್ತರು ವರದಿ ಕೊಟ್ಟ ಮೂರು ತಿಂಗಳ ಒಳಗಾಗಿ ಅದನ್ನು ಒಪ್ಪುವ ಅಥವಾ ತಿರಸ್ಕರಿಸುವ ಬಗ್ಗೆ ಸರ್ಕಾರ ತೀರ್ಮಾನ ತೆಗೆದುಕೊಳ್ಳಬೇಕು. ಕೆಲ ವಿಷಯಗಳಲ್ಲಿ ಈಗಾಗಲೇ ಸ್ಪಷ್ಟೀಕರಣ ಕೇಳಿ ಲೋಕಾಯುಕ್ತಕ್ಕೆ ಪತ್ರ ಬರೆಯಲಾಗಿದೆ. ಲೋಕಾಯುಕ್ತ ವರದಿ ಹಿನ್ನೆಲೆಯಲ್ಲಿ ಮಾಜಿ ಸಚಿವರಾದ ಜಿ.ಕರುಣಾಕರ ರೆಡ್ಡಿ, ಜಿ.ಜನಾರ್ದನ ರೆಡ್ಡಿ ಮತ್ತು ಬಿ.ಶ್ರೀರಾಮುಲು ಅವರನ್ನು ಸಂಪುಟಕ್ಕೆ ತೆಗೆದುಕೊಂಡಿಲ್ಲ.

ಅಕ್ರಮ ಗಣಿಗಾರಿಕೆ ಕಾರಣಕ್ಕಾಗಿ ಈಗಾಗಲೇ ಸಿಬಿಐ ಬಲೆಗೆ ಬಿದ್ದಿರುವ ಜನಾರ್ದನ ರೆಡ್ಡಿ ಸೆಪ್ಟೆಂಬರ್ 5ರಿಂದ ಆಂಧ್ರಪ್ರದೇಶದ ಚಂಚಲಗೂಡ ಜೈಲಿನಲ್ಲಿದ್ದರೆ, ಭ್ರಷ್ಟಾಚಾರ ಪ್ರಕರಣದಲ್ಲಿ ಸಿಲುಕಿರುವ ಯಡಿಯೂರಪ್ಪ ಇದೇ 15ರಿಂದ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿದ್ದಾರೆ.

ರಾಜ್ಯದಲ್ಲಿ 2000ನೇ ಇಸವಿಯಿಂದ 2010ರ ಜುಲೈವರೆಗೆ ನಡೆದಿರುವ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಲೋಕಾಯುಕ್ತರು ವಿವರವಾದ ವರದಿ ನೀಡಿದ್ದು, ಅದರಲ್ಲಿ ಹೆಸರು ಪ್ರಸ್ತಾಪವಾಗಿರುವ ಅಧಿಕಾರಿಗಳಲ್ಲಿ ಈಗ ನಡುಕ ಹುಟ್ಟಿದೆ.

ಬಳ್ಳಾರಿಯಲ್ಲಿ ಕೆಲಸ ಮಾಡುತ್ತಿದ್ದ ಅರಣ್ಯ ಇಲಾಖೆಯ 29 ಅಧಿಕಾರಿಗಳನ್ನು ಈಗಾಗಲೇ ಅಮಾನತುಗೊಳಿಸಲಾಗಿದೆ. ಅಲ್ಲದೆ ಹಿಂದೆ ಬಳ್ಳಾರಿಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದ ಐಎಫ್‌ಎಸ್ ಅಧಿಕಾರಿ ಮುತ್ತಯ್ಯ ಅವರನ್ನು ಈಚೆಗಷ್ಟೇ ಅಮಾನತು ಮಾಡಲಾಗಿದೆ. ಕಂದಾಯ, ಸಾರಿಗೆ, ಗಣಿ ಮತ್ತು ಭೂ ವಿಜ್ಞಾನ ಹಾಗೂ ಅರಣ್ಯ ಇಲಾಖೆಯ ಹಲವು ಅಧಿಕಾರಿಗಳು ಶಿಸ್ತುಕ್ರಮಕ್ಕೆ ಒಳಗಾಗುವ ಭೀತಿಯಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT