ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪುಟ ಸಭೆಯಲ್ಲಿ ವಾಗ್ಯುದ್ಧ: ಸಿ.ಎಂಗೆ ತರಾಟೆ

Last Updated 13 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಅಕ್ರಮ ಗಣಿಗಾರಿಕೆ ಬಗ್ಗೆ ಲೋಕಾಯುಕ್ತರು ಸಲ್ಲಿಸಿರುವ ವರದಿ ಕುರಿತು ತೀರ್ಮಾನ ಕೈಗೊಳ್ಳುವ ಸಂಬಂಧ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಬಿಜೆಪಿಯ ಎರಡು ಬಣಗಳ ನಡುವೆ ತೀವ್ರ ವಾಕ್ಸಮರ ನಡೆದಿದೆ. ರಹಸ್ಯವಾಗಿ ಸಂಪುಟ ಸಭೆಯ ಮುಂದೆ ವಿಷಯ ಮಂಡಿಸಿದ್ದರಿಂದ ಸಿಟ್ಟಿಗೆದ್ದ ಕೆಲ ಸಚಿವರು ಮುಖ್ಯಮಂತ್ರಿಯನ್ನೇ ತರಾಟೆಗೆ ತೆಗೆದುಕೊಂಡ ಘಟನೆಯೂ ನಡೆದಿದೆ.

ಲೋಕಾಯುಕ್ತ ವರದಿಯ ಕುರಿತು ಚರ್ಚೆ ನಡೆಸುವ ಪ್ರಸ್ತಾವ ಗುರುವಾರ ಮಧ್ಯಾಹ್ನದವರೆಗೂ ಸಂಪುಟ ಸಭೆಯ ಕಾರ್ಯಸೂಚಿಯಲ್ಲಿ ಇರಲಿಲ್ಲ. ಮುಖ್ಯಮಂತ್ರಿಯವರು ವಿಷಯ ಪ್ರಸ್ತಾಪಿಸುತ್ತಿದ್ದಂತೆ ವಿರೋಧ ವ್ಯಕ್ತಪಡಿಸಿದ ಸಚಿವರಾದ ಜಗದೀಶ ಶೆಟ್ಟರ್, ಆರ್.ಅಶೋಕ, ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತಿತರರು, `ಲೋಕಾಯುಕ್ತ ವರದಿಯ ಬಗ್ಗೆ ಪೂರ್ವಭಾವಿ ಚರ್ಚೆಯೇ ನಡೆದಿಲ್ಲ. ಅದರಲ್ಲಿ ಏನಿದೆ ಎಂಬುದು ನಮಗೆ ಗೊತ್ತೇ ಇಲ್ಲ. ವಿಷಯವನ್ನು ತಿಳಿಸದೇ ಏಕೆ ಸಂಪುಟ ಸಭೆಯ ಮುಂದೆ ಮಂಡಿಸುತ್ತಿದ್ದೀರಿ~ ಎಂದು ಏರು ದನಿಯಲ್ಲಿ ಪ್ರಶ್ನಿಸಿದ್ದಾರೆ.


ಬಳಿಕ ಅಡ್ವೊಕೇಟ್ ಜನರಲ್ ನೀಡಿರುವ ವರದಿಯನ್ನು ಆಧರಿಸಿ ಪ್ರಸ್ತಾವ ಮಂಡಿಸಿರುವುದಾಗಿ ಸಮಜಾಯಿಷಿ ನೀಡಲು ಸದಾನಂದ ಗೌಡ ಯತ್ನಿಸಿದರು. ಆದರೆ, ಅದನ್ನು ಒಪ್ಪದ ಶೆಟ್ಟರ್ ಬಣದ ಸದಸ್ಯರು, ಏಕಾಏಕಿ ಲೋಕಾಯುಕ್ತ ವರದಿ ಬಗ್ಗೆ ಚರ್ಚೆ ನಡೆಸಲು ಸಾಧ್ಯವೇ ಇಲ್ಲ ಎಂಬ ಪಟ್ಟು ಹಿಡಿದರು ಎಂದು ತಿಳಿದುಬಂದಿದೆ.

ನಾಯಕರನ್ನು ಉಳಿಸಿ: ಈ ಹಂತದಲ್ಲಿ ಯಡಿಯೂರಪ್ಪ ಬಣದ ಸದಸ್ಯರು ಕೂಡಲೇ ವರದಿ ತಿರಸ್ಕರಿಸಿ ನಿರ್ಣಯ ಕೈಗೊಳ್ಳುವಂತೆ ಪಟ್ಟು ಹಿಡಿದಿದ್ದರು. ಲೋಕಾಯುಕ್ತ ವರದಿ ಒಪ್ಪಿಕೊಂಡರೆ ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಕಷ್ಟವಾಗುತ್ತದೆ. ತಮ್ಮ ನಾಯಕರಾಗಿರುವ ಯಡಿಯೂರಪ್ಪ ಅವರಿಗೂ ತೊಂದರೆಯಾಗುತ್ತದೆ. ಆದ್ದರಿಂದ ವರದಿಯನ್ನು ತಕ್ಷಣವೇ ತಿರಸ್ಕರಿಸಬೇಕು ಎಂಬ ಒತ್ತಾಯವನ್ನು ಯಡಿಯೂರಪ್ಪ ಬಣ ಮುಂದಿಟ್ಟಿತ್ತು ಎನ್ನಲಾಗಿದೆ.

`2000ನೇ ಇಸವಿ ಜನವರಿ 1ರಿಂದಲೂ ನಡೆದ ಅಕ್ರಮ ಗಣಿಗಾರಿಕೆ ಕುರಿತು ತನಿಖೆ ನಡೆಸುವಂತೆ ಲೋಕಾಯುಕ್ತರಿಗೆ ಸೂಚಿಸಲಾಗಿತ್ತು. ಆದರೆ, ಹಿಂದಿನ ಸರ್ಕಾರಗಳ ಅವಧಿಯಲ್ಲಿ ನಡೆದ ಅಕ್ರಮಗಳ ಬಗ್ಗೆ ತನಿಖಾ ವರದಿಯಲ್ಲಿ ಹೆಚ್ಚಿನ ಪ್ರಸ್ತಾಪವೇ ಇಲ್ಲ. ಬಿಜೆಪಿ ಸರ್ಕಾರವನ್ನೇ ಗುರಿಯಾಗಿಸಿಕೊಂಡು ವರದಿ ನೀಡಿದಂತಿದೆ~ ಎಂದು ಯಡಿಯೂರಪ್ಪ ಬಣದ ಕೆಲ ಸಚಿವರು ಹೇಳಿದರೆಂದು ಮೂಲಗಳು ತಿಳಿಸಿವೆ.

ಒಂದು ಹಂತದಲ್ಲಿ ಸದಾನಂದ ಗೌಡ ಅವರ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ ಶೆಟ್ಟರ್ ಬಣದ ಕೆಲ ಸದಸ್ಯರು, `ನೀವು ಯಡಿಯೂರಪ್ಪ ಅವರ ಕೈಗೊಂಬೆಯಲ್ಲ ಎಂದು ತಿಳಿದಿದ್ದೆವು. ಆದರೆ, ನಿಜವಾಗಿಯೂ ಅವರ ಕೈಗೊಂಬೆಯೇ ಎಂಬುದು ಸಾಬೀತಾಗುತ್ತಿದೆ. ಯಡಿಯೂರಪ್ಪ ಕೂಡ ಸಚಿವರ ಗಮನಕ್ಕೆ ತಾರದೇ ವಿಷಯ ಮಂಡಿಸುತ್ತಿದ್ದರು. ನೀವು ಕೂಡ ಅದೇ ಹಾದಿಯಲ್ಲಿ ನಡೆಯುತ್ತಿದ್ದೀರಿ~ ಎಂದು ತರಾಟೆಗೆ ತೆಗೆದುಕೊಂಡಿದ್ದರು ಎಂದು ಗೊತ್ತಾಗಿದೆ.

ಶ್ರೀರಾಮುಲು ಅವರು ಶಾಸಕ ಸ್ಥಾನಕ್ಕೆ ನೀಡಿದ ರಾಜೀನಾಮೆಯನ್ನು ಅಂಗೀಕರಿಸಿದ ದಿನವೇ ಯಡಿಯೂರಪ್ಪ ಪರ ನಿರ್ಧಾರಕ್ಕೆ ಮುಂದಾಗಿರುವ ಬಗ್ಗೆಯೂ ಸಭೆಯಲ್ಲಿ ಆಕ್ಷೇಪ ವ್ಯಕ್ತವಾಗಿದೆ. ಒಬ್ಬರ ಪರ ಮತ್ತು ಒಬ್ಬರ ವಿರುದ್ಧ ಏಕೆ ನಿರ್ಣಯ ಕೈಗೊಳ್ಳಲಾಗುತ್ತಿದೆ ಎಂದು ಮುಖ್ಯಮಂತ್ರಿಯವರಿಗೆ ಸಚಿವರು ನೇರವಾಗಿ ಪ್ರಶ್ನಿಸಿದರು ಎಂದು ಮೂಲಗಳು ಹೇಳಿವೆ.

45 ನಿಮಿಷ ಗದ್ದಲ: ಸರ್ಕಾರದಲ್ಲಿನ ಎರಡೂ ಬಣಗಳ ಸಚಿವರ ನಡುವೆ ಇದೇ ವಿಷಯವಾಗಿ 45 ನಿಮಿಷಗಳ ಕಾಲ ಮಾತಿನ ಚಕಮಕಿ ನಡೆದಿದೆ. ಈ ಸಂದರ್ಭದಲ್ಲಿ ಅಧಿಕಾರಿಗಳನ್ನು ಸಭೆಯಿಂದ ಹೊರಕ್ಕೆ ಕಳುಹಿಸಲಾಗಿತ್ತು.
ಅಂತಿಮವಾಗಿ ಕೆಲ ತಾಂತ್ರಿಕ ವಿಷಯಗಳ ಬಗ್ಗೆ ಲೋಕಾಯುಕ್ತರಿಂದ ಸಲಹೆ ಕೋರುವ ತೀರ್ಮಾನಕ್ಕೆ ಒಪ್ಪಿಗೆ ನೀಡುವಂತೆ ಸದಾನಂದ ಗೌಡ ಅವರು ಶೆಟ್ಟರ್ ಬಣದ ಸದಸ್ಯರನ್ನು ಮನವೊಲಿಸಿದರು ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT