ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪೂರ್ಣ ನಿಸರ್ಗ ಸಂತೆ

Last Updated 2 ಜುಲೈ 2012, 19:30 IST
ಅಕ್ಷರ ಗಾತ್ರ

ಸದಾ ಮಾಲ್, ಮಲ್ಟಿಪ್ಲೆಕ್ಸ್‌ಗಳಲ್ಲಿ ಓಡಾಡುವ ನಗರಿಗರಿಗೆ ಭಿನ್ನವಾದ ನೋಟವೊಂದನ್ನು ನೀಡಲು ಕಾಲಿಟ್ಟಿದೆ ನೇಚರ್ ಬಜಾರ್.ಇಲ್ಲಿರುವ ಶೇಕಡಾ 90ರಷ್ಟು ವಸ್ತುಗಳು ನೈಸರ್ಗಿಕವಾಗಿರುವುದರಿಂದ ಇದಕ್ಕೆ `ನೇಚರ್ ಬಜಾರ್~ (ನಿಸರ್ಗ ಸಂತೆ) ಎಂಬ ಹೆಸರಿಡಲಾಗಿದೆ ಎನ್ನುತ್ತದೆ ಮೇಳ ಆಯೋಜಿಸಿರುವ `ಸಂಪೂರ್ಣ~ ಸಂಸ್ಥೆ.

ಭಾರತದ ಹಲವು ರಾಜ್ಯಗಳ ವೈಶಿಷ್ಟ್ಯವನ್ನು ಈ ಮೇಳಕ್ಕೆ ಭೇಟಿ ಕೊಟ್ಟರೆ ಒಮ್ಮೆಲೇ ಕಾಣಬಹುದು. ತಮ್ಮದೇ ವಿಭಿನ್ನ ಕಲಾ ಪ್ರಕಾರಗಳನ್ನು ಹೊಂದಿರುವ ಸುಮಾರು 20 ರಾಜ್ಯಗಳ ಮಳಿಗೆಗಳು ಈ ಮೇಳದಲ್ಲಿವೆ. ತಮ್ಮ ನೆಲದ ಸೊಗಡನ್ನು ಸಾರುವ ಕಲಾಪರಿಕರಗಳು, ಕೈಮಗ್ಗ, ಅಲಂಕಾರಿಕ ವಸ್ತುಗಳ ಜತೆಗೆ ತಿಂಡಿತಿನಿಸುಗಳನ್ನು ಬೆಂಗಳೂರಿಗರಿಗೆ ಪರಿಚಯಿಸಲು ಬಂದಿವೆ.

ಇಂತಹ ಪ್ರದರ್ಶನಗಳು ಇಲ್ಲಿ ದಿನಕ್ಕೊಂದು ನಡೆಯುತ್ತವೆ, ಇಲ್ಲೇನು ವಿಶೇಷತೆ ಎನ್ನುವವರ ಕುತೂಹಲ ಇಲ್ಲಿಗೆ ಭೇಟಿ ಕೊಟ್ಟಾಗ ತಣಿಯುತ್ತದೆ. ಅಂದಹಾಗೆ ಈ ನೇಚರ್ ಬಜಾರ್ ನಡೆಯುತ್ತಿರುವುದು ನಗರದ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ.

ಪರಿಷತ್ತಿನೊಳಗೆ ಕಾಲಿಡುತ್ತಿದ್ದಂತೆ ಅಲಂಕಾರಿಕ ಮರದ ಕೆತ್ತನೆಗಳು ಕಣ್ಮನ ಸೆಳೆಯುತ್ತವೆ. ಅಲ್ಲಿಂದೀಚೆಗೆ ಸಾಗಿದರೆ ಮಣ್ಣಿನ ವಸ್ತುಗಳ ಮೇಲೆ ಬಿಡಿಸಿದ ಚಿತ್ತಾರಗಳು ಚಿತ್ತಾಕರ್ಷಕವೆನಿಸುತ್ತವೆ. ಒಳಗೆ ಹೋಗುತ್ತಿದ್ದಂತೆ ಟೆರಕೋಟಾ, ಪಿಂಗಾಣಿಯ ಅಲಂಕಾರಿಕ, ಗೃಹೋಪಯೋಗಿ ಸಾಮಗ್ರಿಗಳು ಆವರಣದಲ್ಲಿ ಸ್ವಾಗತಿಸುತ್ತವೆ.

ಸುಮಾರು 150 ಮಳಿಗೆಗಳನ್ನು ಹೊಂದಿರುವ ಈ ಮೇಳದಲ್ಲಿ ಬಿದಿರಿನ ಅಲಂಕಾರಿಕ ವಸ್ತುಗಳು, ಗೋಡೆಗೆ ತೂಗು ಹಾಕುವ ಬಣ್ಣಬಣ್ಣದ ಬಟ್ಟೆಯ ಆಕಾಶಬುಟ್ಟಿ, ಚಿತ್ತಾರಗಳು, ಮಣ್ಣಿನ ತೂಗು ಗಂಟೆಗಳು, ಲೋಹದ ಪ್ರತಿಮೆಗಳು, ಜೂಟ್ ಬ್ಯಾಗ್- ಮ್ಯಾಟ್‌ಗಳು, ಮಧುಬನಿ, ಬಂಗಾಳಿ ಮತ್ತು ರಾಜಸ್ತಾನಿ ಪೇಂಟಿಂಗ್‌ಗಳು, ಗೃಹಾಲಂಕಾರಕ್ಕೆಂದು ಮರ, ಲೋಹ ಮತ್ತು ಬಟ್ಟೆಯಿಂದ ತಯಾರಿಸಿದ ವಸ್ತುಗಳೆಲ್ಲವೂ ಇವೆ. ಇವೆಲ್ಲವೂ ಕರಕುಶಲ ಎಂಬುದೇ ವಿಶೇಷ.

ನಿಸರ್ಗ ಸಂತೆ ಆದ್ದರಿಂದ ಇಲ್ಲಿ ನೈಸರ್ಗಿಕ ವಸ್ತುಗಳಿಗೇ ಆದ್ಯತೆ. ಪರಿಸರ ಪ್ರೇಮಿ ಪರಿಕರಗಳೇ ಇಲ್ಲಿನ ವಸ್ತುಗಳ ಮೂಲ. ಪರಂಪರೆ ಮತ್ತು ಆಧುನಿಕತೆ ಎರಡನ್ನೂ ಬಯಸುವವರಿಗೆ ಆಯ್ಕೆ ಹಲವು ಎನ್ನುತ್ತದೆ ಸಂಸ್ಥೆ.

ಉಡುಪುಗಳ ವಿಷಯಕ್ಕೆ ಹೆಂಗಸರ ಮನಮೆಚ್ಚುವ ವಸ್ತ್ರ ಭಂಡಾರವೇ ಇಲ್ಲಿದೆ. ಟಸ್ಸಾರ್, ಚಾಂದೇರಿ, ಜಾಮ್ದಾನಿ, ಸೌತ್ ಕಾಟನ್, ಖಾದಿ, ಕುಟ್ಚಿ ಹಾಗೂ ರಾಜಸ್ತಾನಿ, ಜೈಪುರ್ ಕಾಟನ್‌ಗಳಿವೆ. ರಾಜಸ್ತಾನಿ ದುಪ್ಪಟಾ, ಬಗೆ ಬಗೆ ಕುರ್ತಾಗಳು, ಸೀರೆಗಳು, ಸ್ಟಾಲ್, ಕನ್ನಡಿ ಕುಸುರಿ ಕಲೆಯ ಉಡುಪು, ಬ್ಲಾಕ್ ಪ್ರಿಂಟ್, ಉಣ್ಣೆ, ಧೋಕ್ರಾ ಕಾಸ್ಟ್ ಮೆಟಲ್ ಹೀಗೆ ಹಲವು ಚಿತ್ತಾರ ವರ್ಣ ರಂಜಿತ ಉಡುಪುಗಳನ್ನು ಕೊಳ್ಳಬಹುದು.

ಆಭರಣಗಳಲ್ಲಿ ಬೆಳ್ಳಿ, ಮೆಟಲ್, ಬ್ಲಾಕ್ ಮೆಟಲ್, ಟೆರಕೋಟಾ, ಮೀನಾಕರಿ, ಹರಳು ಮುತ್ತಿನ ಆಭರಣ, ಇನ್ನಿತರ ಫ್ಯಾನ್ಸಿ ಆಭರಣಗಳ ಸಂಗ್ರಹವೇ ಇಲ್ಲಿರುತ್ತವೆ. ಸಾವಯವ ಆಹಾರ ಧಾನ್ಯಗಳು, ನೈಸರ್ಗಿಕ ಸಾಬೂನು, ತೈಲಗಳು, ಸಾಂಬಾರು ಪದಾರ್ಥಗಳು, ಒಣ ಹಣ್ಣುಗಳೂ ಇಲ್ಲಿ ಜಾಗ ಪಡೆದಿವೆ.

`ಕರಕುಶಲಗಾರರಿಗೆ ಒಳ್ಳೆಯ ಮಾರುಕಟ್ಟೆ ಒದಗಿಸಬೇಕೆಂಬುದು ನಮ್ಮ ಉದ್ದೇಶ. ಅದಕ್ಕಾಗಿ ಸಂಪೂರ್ಣ್ ಸಂಸ್ಥೆ ಪ್ರಯತ್ನ ಮಾಡುತ್ತಿದೆ. ಈ ಬಾರಿ ನೈಸರ್ಗಿಕ ವಸ್ತುಗಳಿಗೇ ಪ್ರಾಮುಖ್ಯ. ಎಲ್ಲಾ ವಸ್ತುಗಳನ್ನೂ ಒಂದೇ ಸೂರಿನಡಿ ದೊರೆಯುವಂತೆ ಮಾಡಿರುವ ಈ ನೇಚರ್ ಬಜಾರ್ ಬೆಂಗಳೂರಿಗರಿಗೆ ಮೆಚ್ಚಾಗುವುದರಲ್ಲಿ ಎರಡು ಮಾತಿಲ್ಲ~ ಎನ್ನುತ್ತಾರೆ ನಿಸರ್ಗ ಸಂತೆಯ ಸಂಯೋಜಕಿ ಶಾಲಿನಿ ಕೈಲಾಶ್.

ಇನ್ನು, ನಿಮಗೂ ಈ ಆಕರ್ಷಕ ಕಲಾಸಾಮಗ್ರಿಗಳನ್ನು ನೋಡುವ, ಕೊಂಡುಕೊಳ್ಳುವ ಮನಸ್ಸಿದ್ದರೆ ಒಮ್ಮೆ ಚಿತ್ರಕಲಾ ಪರಿಷತ್ತಿಗೆ ಭೇಟಿ ನೀಡಿ.  ಜೂನ್ 29ರಿಂದ ಆರಂಭಗೊಂಡಿರುವ ಈ ನಿಸರ್ಗ ಸಂತೆ ಜುಲೈ 8ರವರೆಗೂ ನಡೆಯುತ್ತದೆ. ಬೆಳಿಗ್ಗೆ 10.30ರಿಂದ ರಾತ್ರಿ 8.30ರವರೆಗೆ ಸಾರ್ವಜನಿಕರಿಗೆ ಮುಕ್ತ ಪ್ರವೇಶ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT