ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಬಂಧಗಳ ಹುಡುಕಾಟ ನವಿರು ಭಾವಗಳ ರಸದೂಟ

Last Updated 5 ಜುಲೈ 2016, 19:30 IST
ಅಕ್ಷರ ಗಾತ್ರ

‘ಗಂಡ-ಹೆಂಡತಿ ಸಂಬಂಧ ಅಂದರೆ ಫಿಕ್ಸೆಡ್ ಡೆಪಾಸಿಟ್ ಅಂದುಕೊಂಡಿದ್ದೆ. ಅಲ್ಲ, ಅದು ರೆಕರಿಂಗ್ ಡೆಪಾಸಿಟ್. ಪ್ರತಿ ದಿನವೂ ಸೇರಿಸ್ತಾ ಹೋಗಬೇಕು...’ ನಗರದ ಎಚ್‌.ಎನ್.ಕಲಾಕ್ಷೇತ್ರದಲ್ಲಿ ಈಚೆಗೆ ಪ್ರಯೋಗಗಳನ್ನೊಳಗೊಂಡ ‘ಹೀಗೇಕೆ ನೀ ದೂರ ಓಡುವೆ’ ನಾಟಕದ ಸಂಭಾಷಣೆ ಇದು. ಯಶವಂತ್ ಸರದೇಶಪಾಂಡೆ ನಿರ್ದೇಶನದಲ್ಲಿ ಮೂಡಿ ಬಂದ ನಾಟಕ ಹಲವು ಆರ್ದ್ರ ದೃಶ್ಯಗಳೊಂದಿಗೆ ಕಣ್ಣಂಚು ತೇವಗೊಳಿಸಿತು.

ನಿವೃತ್ತಿಯ ನಂತರ ಹೆಂಡತಿಯ ಆಸೆಗಳನ್ನು ತೀರಿಸಬೇಕು ಎಂದು ಯೋಜನೆಗಳನ್ನು ಹಾಕಿಕೊಂಡ ವ್ಯಕ್ತಿಯೊಬ್ಬನ ಕಥೆ ಇದರಲ್ಲಿದೆ. ಆದರೆ ಹೆಣ್ಣಿನ ಭಾವಲೋಕವನ್ನು, ಗಂಡಿನ ಏಕಾಂಗಿತನವನ್ನು ಮತ್ತು ಅದಕ್ಕೆ ಕಾರಣವಾಗುವ ಅಂಶಗಳನ್ನು ಸಶಕ್ತವಾಗಿ ದಾಟಿಸುವ ನಾಟಕ ಇದು.

ನಾಲ್ಕು ಪಾತ್ರಗಳ ಮೂಲಕ ದಾಂಪತ್ಯದ ಸವಾಲುಗಳು, ಹೊಂದಾಣಿಕೆ, ಸಣ್ಣ-ಸಣ್ಣ ಗುಟ್ಟು, ಹೇಳಲು ಮರೆತ ಪುಟ್ಟ ಸಂಗತಿಗಳು ಕೊನೆಗಾಲದ ನೆಮ್ಮದಿಗೆ ಹೇಗೆ ಮುಖ್ಯವಾಗುತ್ತವೆ ಎಂಬುದನ್ನು ಮನಸಿನ ಆಳಕ್ಕೆ ಇಳಿಯುವಂತೆ ನಾಟಕ ನಿರೂಪಿಸಿತು.

ಇಂಥವರ ಹೆಂಡತಿ, ಇಂಥವರ ತಾಯಿ, ಇಂಥವರ ಅಜ್ಜಿ ಎಂಬ ಗುರುತಿನಿಂದಲೇ ಸುತ್ತಲಿನ ಜನಕ್ಕೆ ಪರಿಚಯ ಇರುವ ವಂದನಾ ಎಂಬ ಹೆಣ್ಣುಮಗಳಿಗೆ ತನ್ನದೇ ಗುರುತು ಸೃಷ್ಟಿಸಿಕೊಳ್ಳುವ ಹಂಬಲ. ನಿವೃತ್ತಿಯ ನಂತರ ಹೆಂಡತಿಯನ್ನು ವಿದೇಶಕ್ಕೆ ಕರೆದೊಯ್ಯಬೇಕು, ಆಕೆಗೆ ಅಡುಗೆ ಮಾಡಿ ಹಾಕಬೇಕು ಎಂದು ಹಂಬಲಿಸುವ ಆಕೆಯ ಪತಿ ಅರುಣ್ ನಗರಕರ್. ಪ್ರೀತಿ-ಕಾಳಜಿಗಾಗಿ ಹಪಹಪಿಸುವ ವೃದ್ಧಾಪ್ಯದ ದಿನಗಳು.

ತನ್ನ ಸಂಸಾರದಲ್ಲಿ ಬಿಡುವಾಗದ ಮಗಳು ರಾಧಿಕಾ, ವಿದೇಶದಲ್ಲಿರುವ ಮಗ ರೋಹಿತ್. ಇದರ ಜತೆಗೆ ಅನಾರೋಗ್ಯದ ಕಾರಣಕ್ಕೆ ತನ್ನ ಗುರುತೇ ಹಿಡಿಯದಿದ್ದರೂ ಹೆಂಡತಿಗಾಗಿ ಪ್ರತಿ ದಿನವೂ ಮಲ್ಲಿಗೆ ಹೂವನ್ನು ಕೊಂಡೊಯ್ಯುವ ಗಿರಿಗೌಡರು ಇಲ್ಲಿದ್ದಾರೆ. ತಿಳಿ ಹಾಸ್ಯದ ಧಾಟಿಯಲ್ಲಿ ಗಂಭೀರವಾದ ವಿಷಯಗಳನ್ನು ರಂಗದ ಮೇಲೆ ತಂದಿರುವುದು ಈ ನಾಟಕದ ಹೆಚ್ಚುಗಾರಿಕೆ.

ಶೇಖರ್ ಡವಳೀಕರ್ ಅವರ ಮೂಲ ಮರಾಠಿ ನಾಟಕವನ್ನು ಯಶವಂತ ಸರದೇಶಪಾಂಡೆ ಅನುವಾದಿಸಿ, ನಿರ್ದೇಶಿಸಿದ್ದಾರೆ. ವಂದನಾ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮಾಲತಿ ಸರದೇಶಪಾಂಡೆ ನಾಟಕವನ್ನು ಆವರಿಸಿ ನಿಂತುಕೊಳ್ಳುತ್ತಾರೆ. ಗಿರಿಗೌಡರ್‌ ಪಾತ್ರದಲ್ಲಿರುವ ಕಲಾಗಂಗೋತ್ರಿ ಕಿಟ್ಟಿ ಅವರ ಪಾತ್ರವೂ ಮನೋಜ್ಞವಾಗಿದೆ.

ಸರಳವಾದ ರಂಗಸಜ್ಜಿಕೆ, ಒಂದೇ ಮನೆಯಲ್ಲಿ ನಡೆಯುವ ನಾಟಕದ ದೃಶ್ಯಾವಳಿಗಳಿಗೆ ಪೂರಕವಾಗಿತ್ತು. ಸಂಬಂಧಗಳ ಕಟ್ಟಡ ಸಡಿಲವಾಗುತ್ತಿದೆ ಎಂಬ ಆತಂಕ ವ್ಯಕ್ತವಾಗುತ್ತಿರುವ ಕಾಲಘಟ್ಟದಲ್ಲಿ ಅದಕ್ಕೆ ಕಾರಣಗಳನ್ನು ಹೆಕ್ಕಿ ತೋರಿಸುವಂತಿರುವ ಈ ನಾಟಕ ಎಲ್ಲ ವಯಸ್ಸಿನವರಿಗೂ ಖುಷಿಕೊಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT