ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಭ್ರಮಕ್ಕೆ ಒಡ್ಡಿಕೊಳ್ಳಿ...

Last Updated 24 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಫಿಟ್‌ನೆಸ್ ಕಾಪಾಡಿಕೊಂಡು ಆರೋಗ್ಯಕರವಾಗಿರಬೇಕು ಎಂಬ ವ್ಯಕ್ತಿ ಅತಿಯಾದ ಶಿಸ್ತಿನಿಂದ ತನ್ನ ಸಂಬಂಧಿಗಳು, ಸ್ನೇಹಿತರಿಗೆ ಕಿರಿಕಿರಿ ಮಾಡುತ್ತಿರಬಹುದು.

ಅಮೆರಿಕದ ಜಾನ್ ಬಳಿ ಅವನ ಅಮ್ಮ ವಾರಗಟ್ಟಲೇ ಮಾತನಾಡುವುದನ್ನೇ ಬಿಟ್ಟಿದ್ದಳು. ಸಸ್ಯಾಹಾರಿಯಾಗಿ ಬದಲಾಗಿದ್ದ ಆತ, ಕ್ರಿಸ್‌ಮಸ್ ಡಿನ್ನರ್‌ಗಾಗಿ ಅಮ್ಮ ಹುರಿದಿದ್ದ ಟರ್ಕಿ ಕೋಳಿಯ ಮಾಂಸದ ತುಣಕನ್ನೂ ತುಟಿಗೆ ತಾಗಿಸಿರಲಿಲ್ಲ. ಹಬ್ಬದ ಉತ್ಸಾಹದಲ್ಲಿ ಪಾಲ್ಗೊಳ್ಳಲು, ಕುಟುಂಬದ ಜತೆ ಕಾಲ ಕಳೆಯಲು ಬಹುದೂರದಿಂದ ಡ್ರೈವ್ ಮಾಡಿಕೊಂಡು ಬಂದ ಜಾನ್ ಅಮ್ಮ ಮಾಡಿದ ಅಡುಗೆ ತಿನ್ನಲು ನಿರಾಕರಿಸಿದ್ದ. ಇದರಿಂದ ಬೇಸತ್ತ ಅವನ ಅಮ್ಮ `ನೀನು ನನ್ನ ಮಗನೇ ಅಲ್ಲ~ ಎಂದು ಹೇಳಿದಳು. ಆತನ ಬಳಿ ಮಾತನಾಡುವುದನ್ನು ನಿಲ್ಲಿಸಿದಳು.

ವ್ಯಾಯಾಮ, ಧ್ಯಾನ, ಊಟ, ಕಡಿಮೆ ಕೊಬ್ಬುಳ್ಳ ಆಹಾರ ಪದಾರ್ಥ ಸೇವನೆ, ನಿದ್ದೆ ಇವುಗಳನ್ನು ಕ್ರಮಬದ್ಧವಾಗಿ ಮಾಡುತ್ತಿದ್ದಲ್ಲಿ ಯಾವುದು ನಿಮ್ಮನ್ನು ಉಲ್ಲಸಿತಗೊಳಿಸುತ್ತದೆ. ಯಾವುದು ನಿಮ್ಮ ಶಕ್ತಿಯನ್ನು ಹೊಸಕಿಹಾಕುತ್ತದೆ ಎಂಬುದು ನಿಮಗೇ ಅರಿವಾಗುತ್ತದೆ. ನಿಮ್ಮ ಮನಸ್ಸು ಮತ್ತು ದೇಹ ಕ್ರಿಯೆಗಳಿಗೆ ಮತ್ತಷ್ಟು ಸೂಕ್ಷ್ಮವಾಗಿ ಸ್ಪಂದಿಸುತ್ತೀರಿ.

ಮೊದಲೆಲ್ಲ ನಾನು ಎಣ್ಣೆಯಲ್ಲೇ ತೇಲಾಡುತ್ತಿರುವ ಸಾರನ್ನು ಒಂಚೂರು ಯೋಚಿಸದೇ ತಿನ್ನುತ್ತಿದ್ದೆ. ಮಾರನೇ ದಿನ ನನ್ನ ಮೈ ಭಾರವಾದಾಗ ವಾರವಿಡೀ ದೀರ್ಘಕಾಲ ಮೈಮುರಿದು ದುಡಿದಿದ್ದು ಇದಕ್ಕೆ ಕಾರಣ ಅಂದುಕೊಳ್ಳುತ್ತಿದೆ. ಈಗ ಅದರ ಕಾರಣ ನನಗೆ ಅರ್ಥವಾಗಿದೆ. ನಾನು ಒಳಕ್ಕೆ ತುಂಬಿದ ಕೊಬ್ಬನ್ನು ಜೀರ್ಣಿಸಿಕೊಳ್ಳಲು ನನ್ನ ದೇಹ ಕಷ್ಟಪಡುತ್ತದೆ. ಅದರ ಎಲ್ಲ ಶಕ್ತಿಯನ್ನೂ ಜೀರ್ಣಕ್ರಿಯೆಗಾಗಿ ವ್ಯಯಿಸುತ್ತದೆ. ಆ ಪ್ರಕ್ರಿಯೆಯಲ್ಲಿ ನನಗೆ ದಣಿವಾಗುತ್ತದೆ. ನಿತ್ಯದ ಕೆಲಸ ಮಾಡಲೂ ನನ್ನಲ್ಲಿ ಶಕ್ತಿ ಉಳಿದಿರುವುದಿಲ್ಲ.

ಇಂತಹ ಸಂದರ್ಭಗಳಲ್ಲಿ ಸುಮ್ಮನೇ ಕುಳಿತುಕೊಳ್ಳಿ. ಒಂದೆರಡು ಗಂಟೆಗಳಲ್ಲಿ ಆ ಭಾರ, ಆಲಸ್ಯ ಎಲ್ಲವೂ ಕಡಿಮೆಯಾಗುತ್ತದೆ. ಹಾಗೆಯೇ ರಾತ್ರಿ ತಡವಾಗಿ ತಿಂದಾಗ, ಮಾಂಸ, ಮೈದಾ, ಸಕ್ಕರೆ, ಪಿಷ್ಟ ಅಥವಾ ಕೆಫಿನ್ ಅಂಶವಿರುವ ಆಹಾರ ಸೇವಿಸಿದಾಗ ನನಗೆ ಸುಖ ನಿದ್ದೆ ಬರುವುದಿಲ್ಲ. ಮಾರನೇ ದಿನ ವ್ಯಾಯಾಮ ಮಾಡುವಾಗ ನನ್ನ ದೇಹ ಮೃದುತ್ವ ಕಳೆದುಕೊಂಡಿರುತ್ತದೆ. ನನ್ನ ಮನಸ್ಸು ಸಹ ಅತ್ತಿಂದಿತ್ತ ಅಲೆದಾಡುತ್ತದೆ. ಒಂದೇ ಕಡೆ ಕುಳಿತುಕೊಳ್ಳಲು ಆಗದೇ, ಆಳವಾಗಿ ಉಸಿರೆಳೆದುಕೊಳ್ಳಲು ಆಗದೇ, ಧ್ಯಾನ ಮಾಡಲು ಆಗದೇ ಒದ್ದಾಡುತ್ತೇನೆ.

ಯಾವುದೋ ಕಾಣದ ಆತಂಕ, ಉದ್ವೇಗ, ತಳಮಳ ನನ್ನಲ್ಲಿ ಮನೆಮಾಡಿರುತ್ತದೆ. ದೇಹದ ಜೈವಿಕ ಗಡಿಯಾರ,ನೈಸರ್ಗಿಕ ಚಕ್ರದಲ್ಲಿ ಏರುಪೇರಾದಾಗ ಹಳೆಯನೋವೊಂದು ಧುತ್ತನೆ ಕಾಣಿಸಿಕೊಳ್ಳುತ್ತದೆ. ನೀನು ಅಶಿಸ್ತಿನಿಂದ ವರ್ತಿಸಿದಲ್ಲಿ, ಜಡತ್ವ ಮೈಗೂಡಿಸಿಕೊಂಡಲ್ಲಿ ಏನಾಗುತ್ತದೆ ಎಂದು ನೆನಪಾಯಿತೇ ಎಂದು ಕೆಣಕುತ್ತದೆ.

ಹಾಗಾದರೆ ಶಿಸ್ತುಬದ್ಧ ವ್ಯಕ್ತಿ ಪಾರ್ಟಿಯಲ್ಲಿ ಏನು ಮಾಡಬೇಕು? ಏನು ತಿನ್ನಬೇಕು? ಯಾವುದೇ ಒತ್ತಡಕ್ಕೆ ಒಳಗಾಗದೇ ಆರಾಮವಾಗಿ ಇರಿ.... ಈ ಉತ್ತರದಿಂದ ನಿಮಗೆ ಆಶ್ಚರ್ಯವಾಗಬಹುದು.

ನೀವು ಒತ್ತಡಕ್ಕೆ ಒಳಗಾಗಿದ್ದಲ್ಲಿ `ನಾನು ನನ್ನನ್ನು ರಕ್ಷಿಸಿಕೊಳ್ಳಲು ಬಯಸುತ್ತೇನೆ~ ಎಂಬ ಮಾನಸಿಕ ಸಂದೇಶವನ್ನು ಸುತ್ತಲಿನವರಿಗೆ ಕಳುಹಿಸುತ್ತೀರಿ. ಅವರು ಅದನ್ನು ಹಾಗೆಯೇ ಗ್ರಹಿಸುತ್ತಾರೆ.

ನಿಮ್ಮ ಮನಸ್ಸು, ದೇಹ ಎಲ್ಲವೂ ವಿಶ್ರಾಂತ ಸ್ಥಿತಿಯಲ್ಲಿದ್ದಾಗ, ಎಲ್ಲವನ್ನೂ ಶಾಂತಚಿತ್ತದಿಂದ ಆಲಿಸಿದಾಗ, ಗಡಿಬಿಡಿಯಲ್ಲಿ ಇಲ್ಲದಾಗ ನಿಮ್ಮ ಸುತ್ತಲೂ ಇರುವ ಜನ ಸಹ ಸಮಾಧಾನ ತಾಳುತ್ತಾರೆ. ಒತ್ತಡ ಅವರ ಗಮನ ಸೆಳೆಯುತ್ತದೆ. ಸಮಾಧಾನದಿಂದ ವರ್ತಿಸಿದಾಗ ಅವರು ನಿಮ್ಮೆಡೆ ವಾತ್ಸಲ್ಯ ಹರಿಸುತ್ತಾರೆ.

ಮನಸ್ಸು ಮತ್ತು ದೇಹ ಸಮಾಧಾನ ತಾಳಿದಾಗ ಹೃದಯ ಸಹ ಸಮಾಧಾನ ಸ್ಥಿತಿಯಲ್ಲಿರುತ್ತದೆ. ನೀವು ಪಾರ್ಟಿಗೆ ತೆರಳುವುದು ಅವರು ಅನಾರೋಗ್ಯಕರ ಆಹಾರ ತಿನ್ನುತ್ತಾರೆ ಎಂದು ಟೀಕಿಸಲು ಅಲ್ಲ. ಸುಮಧುರ ಸಂಬಂಧ ಬೆಳೆಸಿಕೊಳ್ಳಲು ನೀವು ಅಲ್ಲಿಗೆ ಹೋಗಿರುತ್ತೀರಿ.

ಎಲ್ಲಕ್ಕಿಂತ ಶ್ರೇಷ್ಠವಾದ, ಉನ್ನತವಾದ ಈ ಬ್ರಹ್ಮಾಂಡ ಸೃಷ್ಟಿಸಿದ ವಿಶ್ವಶಕ್ತಿಯೊಂದಿದೆ. ಆ ಶಕ್ತಿಯೇ ಎಲ್ಲವನ್ನೂ ನೋಡಿಕೊಳ್ಳುತ್ತದೆ. ಔತಣಕೂಟದಲ್ಲಿ ಭಾಗವಹಿಸಿದಾಗ ನಿಮಗೇನು ಬೇಡ ಎಂಬುದರ ಕುರಿತು ತಲೆಕೆಡಿಸಿಕೊಳ್ಳಬೇಡಿ. ನಿಮಗೇನು ಬೇಕು ಎಂಬುದರತ್ತ ಗಮನ ನೀಡಿ.  ಎಲ್ಲರೊಂದಿಗೆ ಬೆರೆಯಿರಿ. ನೀರು ಕುಡಿಯಿರಿ. ಸಲಾಡ್, ರೋಟಿ ಸೇವಿಸಿ. ಆ ಸಂಭ್ರಮದಲ್ಲಿ ಭಾಗಿಯಾಗಿ.

ಯಾವುದೇ ಪ್ರತಿರೋಧವಿಲ್ಲದೇ ನಿಮ್ಮನ್ನು ನೀವು ಆ ಸಂಭ್ರಮ, ಆ ಸಂದರ್ಭಕ್ಕೆ ಪೂರ್ಣವಾಗಿ ಅರ್ಪಿಸಿಕೊಂಡಾಗ ನಿಮ್ಮಲ್ಲಿ ಪ್ರೀತಿ, ಸ್ತಬ್ಧತೆ ಎಲ್ಲವೂ ಮೂಡುತ್ತದೆ. ತಡವಾಗಿ ಮಲಗಿದರೂ, ಹೊಟ್ಟೆ ತುಂಬ ತಿಂದರೂ ಮಾರನೇ ದಿನ ನಿಮ್ಮ ಮೈ, ಮನಸ್ಸು ಭಾರವಾಗಿರುವುದಿಲ್ಲ.

ಶಿಸ್ತಿಗೆ ಗುಲಾಮರಾಗಿರುವುದು ನಮ್ಮ ವ್ಯಕ್ತಿತ್ವದಲ್ಲಿ ಶುಷ್ಕತನ ಹುಟ್ಟುಹಾಕುತ್ತದೆ. ಜ್ಞಾನಕ್ಕೆ ಗುಲಾಮರಾಗಿರುವುದು ನಮ್ಮ ವ್ಯಕ್ತಿತ್ವದಲ್ಲಿ ಅಹಂಕಾರ ಹುಟ್ಟುಹಾಕುತ್ತದೆ. ಆದರೆ, ಶಿಸ್ತು ಮತ್ತು ಜ್ಞಾನವನ್ನು ನಾವು ಮೆಟ್ಟಿಲಿನಂತೆ ಬಳಸಿಕೊಂಡಾಗ, ನಾವು ಇಡುವ ಪ್ರತಿ ಹೆಜ್ಜೆಯೂ ಪ್ರೀತಿಯಿಂದ ಕೂಡಿದ್ದಾಗ ನಳನಳಿಸುವ ಆರೋಗ್ಯ ನಮ್ಮದಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT