ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಭ್ರಮದ ಅದೇ ಕಾವು

Last Updated 1 ಜನವರಿ 2013, 19:59 IST
ಅಕ್ಷರ ಗಾತ್ರ

ಕೇಕೆ, ಸಂಭ್ರಮದ ಅಪ್ಪುಗೆ, ಶುಭಾಶಯ ವಿನಿಮಯದ ಹಸ್ತಲಾಘವ, ವಾಹನಗಳಲ್ಲಿ ಸ್ನೇಹಿತರ ನಗರ ಪ್ರದಕ್ಷಿಣೆ, ಪರಿಚಯವಿಲ್ಲದಿದ್ದರೂ ಪರಸ್ಪರ ಶುಭಾಶಯ ಹಂಚಿಕೊಳ್ಳುವ ಮೂಲಕ ಇಡೀ ಬೆಂಗಳೂರೇ 2012 ಅನ್ನು ಬೀಳ್ಕೊಟ್ಟು ನೂತನ ವರ್ಷ 2013 ಬರಮಾಡಿಕೊಂಡು ಸಂಭ್ರಮಪಟ್ಟಿತು.

ಹೊಸ ವರ್ಷಾಚರಣೆಗೆಂದೇ ದೀಪಾಲಂಕಾರದಿಂದ ಕಂಗೊಳಿಸುತ್ತಿದ್ದ ಎಂ.ಜಿ. ರಸ್ತೆಯಲ್ಲಿ ಕತ್ತಲಾಗುತ್ತಿದ್ದಂತೆ ಕಿಕ್ಕಿರಿದು ತುಂಬಿದ್ದ ಯುವಜನ ಸಮೂಹ ಹೊಸ ವರ್ಷ ಬರಮಾಡಿಕೊಳ್ಳುವ ತವಕದಲ್ಲಿತ್ತು. ಸಂಜೆ ಆರು ಗಂಟೆಯ ನಂತರ ವಾಹನ ಸಂಚಾರ ಹಾಗೂ ನಿಲುಗಡೆ ನಿಷೇಧಿಸಿದ್ದರೂ ಮಂದಿಯ ದಟ್ಟಣೆ ವಾಹನಗಳು ಕಾಣದಷ್ಟಾಗಿತ್ತು. ಮಹಾತ್ಮಗಾಂಧಿ ರಸ್ತೆ, ಬ್ರಿಗೇಡ್ ಹಾಗೂ ಚರ್ಚ್ ಸ್ಟ್ರೀಟ್‌ಗಳಲ್ಲಿ ಗುಂಪು ಗುಂಪಾಗಿ ಸ್ನೇಹಿತರು ಸುತ್ತುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಜತೆಗೆ ಪಬ್ ಹಾಗೂ ಡಿಸ್ಕ್‌ಗಳು ತುಂಬಿ ತುಳುಕುತ್ತಿದ್ದವು. ಮೊದಲೇ ನೋಂದಾಯಿಸಿಕೊಂಡವರಿಗೆ ಮಾತ್ರ ಪ್ರವೇಶ ನೀಡುತ್ತಿದ್ದ ಕ್ಲಬ್ ಹಾಗೂ ಪಬ್‌ಗಳು ಪ್ರಖ್ಯಾತ ಡಿಜೆ ಹಾಗೂ ಬಾಲಿವುಡ್ ಮಂದಿಯನ್ನು ಕರೆಸಿ ಕುಣಿಸಿದ್ದು ವಿಶೇಷ.

ಸಂಭ್ರಮಾಚರಣೆಗೆಂದೇ ಸೇರಿದ್ದ ಈ ಸಂದರ್ಭವನ್ನು ಸದುಪಯೋಗಪಡಿಸಿಕೊಳ್ಳಬೇಕೆಂಬ ದೃಷ್ಟಿಯಿಂದ ಐಟಿ ಉದ್ಯೋಗಿಗಳ ತಂಡವೊಂದು ದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ತಡೆಯಲು ನಡೆಸುತ್ತಿರುವ ಹೋರಾಟಕ್ಕೆ ನೆರವಾಗುವಂತೆ ಕರೆ ನೀಡಿತು. ಮೋಜಿಗೆಂದು ಬಂದವರ ಕಿವಿಗೆ ಇವರ ಮೊರೆತ ಕೇಳದೇ ಹೋದದ್ದು ವಿಪರ್ಯಾಸ. ಮಧ್ಯರಾತ್ರಿ 12 ಗಂಟೆ ಸಮೀಪಿಸುತ್ತಿದ್ದಂತೆ `ವೆಲ್‌ಕಮ್ ಟು ನ್ಯೂ ಇಯರ್ 2013' ಎಂಬ ಕೇಕೆ ಮುಗಿಲು ಮುಟ್ಟಿತು. ಅರ್ಧ ಗಂಟೆ ತರುವಾಯ ಪೊಲೀಸರು ಬ್ರಿಗೇಡ್ ರಸ್ತೆಯನ್ನು ತೆರವುಗೊಳಿಸಲು ಸೂಚಿಸಿದರು.

ಎಂ.ಜಿ ರಸ್ತೆಯ ಗುಂಪು, ಪೊಲೀಸರ ಲಾಟಿ ರುಚಿ ಇತ್ಯಾದಿಗಳ ಸಹವಾಸವೇ ಬೇಡವೆಂದವರು, ದುಬಾರಿ ಶುಲ್ಕ ನೀಡಿ ಕ್ಲಬ್‌ಗಳಿಗೆ ಹೋಗಲು ಒಲ್ಲದವರು ಅದೇ ದುಡ್ಡಿನಲ್ಲಿ ಅವರವರ ಇಷ್ಟದ ಪದಾರ್ಥಗಳನ್ನು ತಂದು ಸ್ನೇಹಿತರ ಮನೆಯ ಟೆರಸ್ ಮೇಲೋ ಸ್ನೇಹಿತನ ಕಾರನ್ನೋ ಏರಿ ನಗರದ ಹೊರವಲಯದಲ್ಲಿ ವರ್ಷಾಚರಣೆಗೆ ಇಳಿದಿದ್ದರು. ಅಂಥವರ ಸಂಖ್ಯೆ ಈ ಸಲ ಹೆಚ್ಚೆಂಬುದು ವಿಶೇಷ. ಹೀಗಾಗಿ ನಗರದ ಬಹುತೇಕ ಬಡಾವಣೆಗಳ ಮದ್ಯದ ಅಂಗಡಿಗಳು ತುಂಬಿ ತುಳುಕುತಿದ್ದವು. ಗ್ರಾಹಕರ ಸಂಭ್ರಮದಲ್ಲೇ ತಮ್ಮ ವಹಿವಾಟು ಹೆಚ್ಚಿಸಿಕೊಳ್ಳುವ ತವಕದಲ್ಲಿದ್ದ ಅಂಗಡಿಗಳೂ ದೀಪಾಲಂಕೃತಗೊಂಡು ಗ್ರಾಹಕರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದ್ದವು. ಮದ್ಯದ ಜತೆಗೆ ಮಾಂಸಾಹಾರ ಖಾದ್ಯದ ಹೋಟೆಲ್‌ಗಳೂ ಅದೇ ರೀತಿಯಲ್ಲಿ ಗ್ರಾಹಕರನ್ನು ಸೆಳೆಯಲು ತಯಾರಿ ನಡೆಸಿದ್ದವಾದರೂ ಸೋಮವಾರವಾದ ಕಾರಣ ಮಾಂಸಾಹಾರ ಖಾದ್ಯಗಳ ಮಾರಾಟದಲ್ಲಿ ಕೊಂಚ ಹಿನ್ನಡೆಯಾಗಿತ್ತು.

ಕುಟುಂಬ ವರ್ಗದವರು ಹಾಗೂ ಯುವತಿಯರ ಪಿಜಿಗಳಲ್ಲಿರುವವರು ಕೇಕ್ ಅಂಗಡಿಗಳ ಮುಂದೆ ತಮ್ಮ ಮೆಚ್ಚಿನ ರುಚಿಯ ಕೇಕ್ ಹಾಗೂ ಪೇಸ್ಟ್ರಿಗಳ ಖರೀದಿಯಲ್ಲಿ ಮಗ್ನರಾಗಿದ್ದರು. ದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ದಿನೇದಿನೇ ಹೆಚ್ಚಾಗುತ್ತಿದ್ದರೂ ವರ್ಷಾಚರಣೆಯ ಸಂಭ್ರಮ ಯುವತಿಯರನ್ನು ಕುಗ್ಗಿಸಿರಲಿಲ್ಲ. ಎಂ.ಜಿ. ರಸ್ತೆ ಅಥವಾ ಬ್ರಿಗೇಡ್ ಆಗಲೀ, ಪಬ್ ಅಥವಾ ಡಿಸ್ಕ್ ಆಗಲೀ, ಮಾಲ್‌ಗಳು ಅಥವಾ ಬಡಾವಣೆಗಳ ರಸ್ತೆಗಳೇ ಆಗಿರಲಿ ಯುವತಿಯರು ಯಾವ ಭಯವಿಲ್ಲದೆ ಓಡಾಡಿ ಸಂಭ್ರಮಿಸಿದ್ದು ವಿಶೇಷವಾಗಿತ್ತು.

ರಾತ್ರಿ ಹನ್ನೆರಡರ ನಂತರವೂ ಇಡೀ ಬೆಂಗಳೂರು ಎದ್ದಿತ್ತು. ರಸ್ತೆ ಮೇಲಿನ ವಾಹನಗಳ ಒತ್ತಡ ಹಗಲಿನಷ್ಟೇ ಇದ್ದದ್ದು ವಿಶೇಷ. ಮದ್ಯದ ಬಾಟಲಿ ಕೈಯಲಿ ಹಿಡಿದು ಕೇಕೆ ಹಾಕುತ್ತಾ ಕಾರಿನ ಕಿಟಿಕಿಗಳಿಂದ ಹೊರಗೆ ತಲೆ ಹಾಕುತ್ತಾ ಸಾಗುವ ದೃಶ್ಯಗಳು ಕೆಲವೊಂದು ಬಡಾವಣೆಗಳಲ್ಲಿ ಕಂಡುಬಂದವು. ಮೈಸೂರು ರಸ್ತೆ, ರಿಂಗ್ ರಸ್ತೆ, ಮಲ್ಲೇಶ್ವರ, ಬಸವನಗುಡಿ ಇತ್ಯಾದಿ ವಸತಿ ಪ್ರದೇಶಗಳಲ್ಲಿ ಇಂಥ ದೃಶ್ಯಗಳು ಸಾಮಾನ್ಯವಾಗಿದ್ದವು. ಇನ್ನು ಕೆಲವು ಬಡಾವಣೆಗಳಲ್ಲಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಕಾರುಗಳ ಗಾಜುಗಳನ್ನು ಪುಡಿ ಮಾಡಿ ಸಂಭ್ರಮದ ಹೆಸರಿನಲ್ಲಿ ದಾಂಧಲೆ ಮಾಡಿದ್ದು ವಿಪರ್ಯಾಸ. ಒಟ್ಟಿನಲ್ಲಿ ಬಂದ ಮತ್ತೊಂದು ಹೊಸ ವರ್ಷಾಚರಣೆಗೆ ಬೆಂಗಳೂರು ಸಾಕ್ಷಿಯಾಯಿತು. ಪ್ರಳಯದ ಭೀತಿಯಿಂದ ಹೊರಬಂದಿದ್ದ ನಗರ ನೂತನ ವರ್ಷವನ್ನು ಅತ್ಯಂತ ಜೋಶ್‌ನಿಂದ ಬರಮಾಡಿಕೊಂಡಿತು.

ರಾತ್ರಿಯ ಪಾರ್ಟಿ ಮೋಜು ಮುಗಿದು ಮನೆ ಸೇರಿದವರಲ್ಲಿ ಬಹುತೇಕರು ಬೆಳಿಗ್ಗೆಯಾಗುತ್ತಲೇ ಹೊಸ ವರ್ಷ ಹರುಷದಾಯಕವಾಗಿರಲೆಂದು ದೇವರ ಮೊರೆ ಹೋದರು. ದೇವಾಲಯಗಳು ಹಾಗೂ ಪ್ರಾರ್ಥನಾ ಮಂದಿರಗಳು ಹೊಸ ವರ್ಷದ ಮೊದಲ ದಿನಕ್ಕೆಂದು ಸಿಂಗಾರಗೊಂಡಿದ್ದವು. ದೇವಾಲಯಗಳಲ್ಲಿ ವಿಶೇಷ ಅಲಂಕಾರ ಹಾಗೂ ಪೂಜೆ ಆಯೋಜಿಸಲಾಗಿತ್ತು. ಎಂದಿಗಿಂತ ಭಕ್ತರ ದಂಡು ಹೆಚ್ಚಾಗಿತ್ತು. ನಗರ ಕೆಲವು ಶಾಲೆಗಳು ರಜೆ ನೀಡಿದ ಕಾರಣ ಹಾಗೂ ಬಹಳಷ್ಟು ಖಾಸಗಿ ಕಂಪೆನಿಗಳು ಮುಚ್ಚಿದ್ದರಿಂದ ಇಂದು ರಸ್ತೆಗಳಲ್ಲಿ ವಾಹನ ದಟ್ಟಣೆ ಅಷ್ಟಾಗಿ ಇರಲಿಲ್ಲ. ಮೋಜಿನಲ್ಲಿ ಮಿಂದೆದ್ದ ಮಂದಿ ಮೊದಲ ದಿನ ಮೈಮನ ಹಗುರಾಗಿಸಿ ಹೊಸ ವರ್ಷಕ್ಕೆ ಹೊಸ ಧ್ಯೇಯಗಳೊಂದಿಗೆ ಸಜ್ಜಾದರು.

ಮೊದಲ ಅನುಭವ
ಬೆಂಗಳೂರಿನಲ್ಲಿ ಇದು ನನ್ನ ಮೊದಲ ಅನುಭವ. ಇಲ್ಲಿನ ಹೊಸ ವರ್ಷಾಚರಣೆ ಬಗ್ಗೆ ಕೇಳಿದ್ದೆ. ಆದರೆ ನೋಡಿರಲಿಲ್ಲ. ಈ ಬಾರಿ ನೋಡಿ ನಿಜಕ್ಕೂ ದಂಗಾಗಿ ಹೋದೆ. ಇಲ್ಲಿನ ಹುಡುಗಿಯರ ಉಡುಪು, ವಯ್ಯಾರ ಸಂಭ್ರಮಾಚರಣೆಯ ಬಿಸಿಯನ್ನು ಏರಿಸಿತ್ತು. ರಸ್ತೆಗಳು ಕಿಕ್ಕಿರಿದ್ದಿದ್ದವು. ಹೊಸತಾಗಿ ಮದುವೆಯಾದ ನನಗೆ ಈ ವರ್ಷ ಪತಿಯೊಂದಿಗೆ ನೂತನ ವರ್ಷದ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳುವ ಅವಕಾಶ. ಹೀಗಾಗಿ ಅಲ್ಲಲ್ಲಿ ಸುತ್ತಾಡಿ ಹನ್ನೆರಡರೊಳಗೆ ಮನೆ ಸೇರುವ ನಿರ್ಧಾರ ಮಾಡಿದ್ದೆವು. ಅದರಂತೆ ಹನ್ನೊಂದರ ನಂತರ ಜಯನಗರ, ಬಸವನಗುಡಿಯ ರಸ್ತೆಗಳಲ್ಲಿ ಜನಜಂಗುಳಿ, ವಾಹನಗಳ ಅಬ್ಬರ ಹೆಚ್ಚಾಗಿತ್ತು. ಬೆಂಗಳೂರಿನ ಹೊಸ ವರ್ಷಾಚರಣೆ ರೋಚಕವೆನಿಸಿತು.
- ಸುಷ್ಮಾ, ಖಾಸಗಿ ಕಂಪೆನಿ ಉದ್ಯೋಗಿ

ಬೈಕ್ ಮೇಲೆ ಸುತ್ತಿದೆ

 

ನೂತನ ವರ್ಷಾಚರಣೆಯ ಸಂಭ್ರಮವನ್ನು ಸವಿಯಲು ಬೈಕ್‌ನಲ್ಲೇ ನಗರವನ್ನು ಸುತ್ತಾಡಿದೆ. ಎಂ.ಜಿ ರಸ್ತೆ, ಬ್ರಿಗೇಡ್ ರಸ್ತೆಗಳು ಎಂದಿನಂತೆಯೇ ಜನಜಂಗುಳಿಯಿಂದ ತುಂಬಿ ತುಳುಕುತ್ತಿದ್ದವು. ಆದರೆ ವಿಶೇಷವೆನಿಸಿದ್ದು ಲ್ಯಾವೆಲ್ಲೆ ರಸ್ತೆ, ವಿಠಲ ಮಲ್ಯ ರಸ್ತೆ ಹಾಗೂ ಯುಬಿ ಸಿಟಿ. ಯುವತಿಯರ ಆಕರ್ಷಕ ಪಾರ್ಟಿ ಉಡುಪು, ಶ್ರೀಮಂತರ ದುಬಾರಿ ಕಾರಿನ ದರ್ಶನ... ಅಬ್ಬಾ!

ಉಳಿದಂತೆ ಮೈಸೂರು ರಸ್ತೆ ತುಂಬಿ ತುಳುಕುತ್ತಿತ್ತು. ಮದ್ದೂರು, ಚನ್ನಪಟ್ಟಣ ಕಾಫೀ ಡೇ ಕಡೆ ಹೋಗುವ ಹಾಗೂ ಬರುವವರ ಸಂಖ್ಯೆ ಹೆಚ್ಚಾಗಿತ್ತು. ಪಬ್ ಹಾಗೂ ಕ್ಲಬ್ ಒಳಗೆ ಇರುವುದಕ್ಕಿಂತ ಬೆಂಗಳೂರಿನ ರಸ್ತೆ ಮೇಲೆ ಸಂಭ್ರಮ ಜೋರಾಗಿತ್ತು. ಇಂಥ ಸಂದರ್ಭದಲ್ಲಿ ಬೈಕ್‌ನಲ್ಲಿ ಸುತ್ತುವ ಮಜ ಹಿತವೆನಿಸಿತು.
- ವಿನ್ಯಾಸ ಪ್ರೇಮಚಂದ್ರ, ಸಾಫ್ಟ್‌ವೇರ್ ಎಂಜಿನಿಯರ್

ಶೇ. 5ರಷ್ಟು ಮದ್ಯ ಮಾರಾಟ ಹೆಚ್ಚಳ
ಕಳೆದ ಡಿಸೆಂಬರ್‌ಗೆ ಹೋಲಿಸಿದಲ್ಲಿ ಈ ಬಾರಿ ಮದ್ಯ ಮಾರಾಟ ಸುಮಾರು 50 ಕೋಟಿಯಷ್ಟು ಹೆಚ್ಚಿನ  ವಹಿವಾಟು ನಡೆಸಿದೆ. ಡಿಸೆಂಬರ್ ಕೊನೆಯ ವಾರದಲ್ಲಿ ಮಾರಾಟ ಪ್ರಮಾಣ ಹೆಚ್ಚಾಗಿತ್ತು. ಬೆಂಗಳೂರಿನ ಇತರ ಭಾಗಗಳಿಗೆ ಹೋಲಿಸಿದಲ್ಲಿ ಬೆಂಗಳೂರು ನಗರದಲ್ಲೇ ಅತಿ ಹೆಚ್ಚು ಮದ್ಯ ಮಾರಾಟವಾಗಿದೆ.

ಬೆಂಗಳೂರಿಗರು ದಿನವೊಂದಕ್ಕೆ ಮೂವತ್ತು ಸಾವಿರ ಕೇಸ್ ದೇಶೀಯ ಮದ್ಯವನ್ನು ಸೇವಿಸಿದರೆ, 20 ಸಾವಿರ ಕೇಸ್ ಬಿಯರ್ ಹೀರುತ್ತಾರೆ. ವರ್ಷದ ಕೊನೆಯಲ್ಲಿ ಈ ಪ್ರಮಾಣ ಶೇ. 4-5 ಹೆಚ್ಚಾಗಿದೆ. ವರ್ಷದ ಕೊನೆಯಲ್ಲಿನ ಒತ್ತಡ ತಗ್ಗಿಸುವ ಸಲುವಾಗಿ ಹೊಟೇಲ್ ಹಾಗೂ ಬಾರ್ ಮಾಲೀಕರು ವಾರಕ್ಕೂ ಮುಂಚಿತವಾಗಿ ಹೆಚ್ಚುವರಿ ದಾಸ್ತಾನು ಕಾಯ್ದಿರಿಸಿದ್ದರಿಂದ ಕೊನೆ ಕ್ಷಣದ ಅಷ್ಟಾಗಿ ಒತ್ತಡ ಕಂಡುಬರಲಿಲ್ಲ ಎಂದು ಅಬಕಾರಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT