ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಭ್ರಮದ ಕೈಲ್‌ಮುಹೂರ್ತ ಆಚರಣೆ

Last Updated 30 ಆಗಸ್ಟ್ 2011, 8:20 IST
ಅಕ್ಷರ ಗಾತ್ರ

ನಾಪೋಕ್ಲು: ಕೊಡಗಿನ ಪ್ರಮುಖ ಹಬ್ಬಗಳಲ್ಲಿ ಒಂದಾದ ಕೈಲ್ ಮುಹೂರ್ತ ಹಬ್ಬವನ್ನು ನಾಲ್ಕು ನಾಡು ವ್ಯಾಪ್ತಿಯಲ್ಲಿ ಸೋಮವಾರ ಸಂಭ್ರಮದಿಂದ ಆಚರಿಸಲಾಯಿತು.

ಕಡಿಯತ್ತನಾಡು, ನಾಲ್ಕುನಾಡು, ಬಲ್ಲತ್ತನಾಡು ಭಾಗದಲ್ಲಿ ಈ ಹಬ್ಬದ ಆಚರಣೆಯ ಭಿನ್ನತೆ ಹಿಂದಿನಿಂದಲೇ ನಡೆದುಕೊಂಡು ಬಂದಿದೆ. ಶೌರ್ಯ ಪ್ರದರ್ಶನದ ಸ್ಪರ್ಧೆಗಳು, ಮನರಂಜನಾ ಕ್ರೀಡೆಗಳು ಸೇರಿದಂತೆ ವಿವಿಧ ಆಚರಣೆಗಳೊಂದಿಗೆ ಸೆಪ್ಟೆಂಬರ್ 3ರಂದು ಕೊಡಗಿನ ಇತರ ಭಾಗಗಳಲ್ಲಿ ಕೈಲ್ ಮುಹೂರ್ತ ಹಬ್ಬವನ್ನು ಆಚರಿಸಲಾಗುತ್ತದೆ.

ಆದರೆ ನಾಲ್ಕುನಾಡು ವ್ಯಾಪ್ತಿಯಲ್ಲಿ ಆರು ದಿನಗಳ ಮೊದಲೇ ಕೈಲ್‌ಪೊಳ್ದ್ ಹಬ್ಬವನ್ನು ಆಚರಿಸಿ ಸಂಭ್ರಮಿಸಲಾಯಿತು. ಕೈಲ್‌ಪೊಳ್ದನ್ನು ಮನರಂಜನಾ ಹಬ್ಬವಾಗಿ ಕೊಡಗಿನಲ್ಲಿ ಆಚರಿಸಲಾಗುತ್ತದೆ. ಕೈಲ್ ಎಂದರೆ ಆಯಧ. ಪೋಳ್ದು ಎಂದರೆ ಪೂಜೆ ಎಂದರ್ಥ. ಅಂತೆಯೇ ಕೈಲ್‌ಪೊಳ್ದುವನ್ನು ಆಯುಧ ಪೂಜೆಯೆಂದು ಕರೆಯುತ್ತಾರೆ. ಹಿಂದೆ ಪ್ರಾಣಿಗಳ ಬೇಟೆಗೆ ಕೋವಿ ಕತ್ತಿಗಳನ್ನು ಬಳಸುತ್ತಿದ್ದರು. ಆದರೆ ವ್ಯವಸಾಯದ ಸಂದರ್ಭದಲ್ಲಿ ಅಂದರೆ ಸಿಂಹ ಮಾಸದಲ್ಲಿ ಆಯುಧಗಳನ್ನು ಮುಟ್ಟದೆ ತಮ್ಮ ಮನೆಯ ಕನ್ನಿಕೊಂಬರೆಯಲ್ಲಿಡುತ್ತಾರೆ. ಕೃಷಿ ಕಾರ್ಯ ಮುಗಿದ ನಂತರ ಆಯುಧಗಳಿಗೆ ಪೂಜೆ ಸಲ್ಲಿಸುವುದರ ಮೂಲಕ ಅವುಗಳನ್ನು ಹೊರಗೆ ತೆಗೆಯಲಾಗುತ್ತದೆ. ಭಕ್ತಿಯಿಂದ ಪೂಜಿಸಲಾಗುತ್ತದೆ. ಹೀಗೆ ಕೈಲ್ ಮುಹೂರ್ತವೆಂದರೆ ಒಂದರ್ಥದಲ್ಲಿ ಕೊಡಗಿನ ಆಯುಧ ಪೂಜೆ.

ಸಮೀಪದ ಬಲ್ಲಮಾವಟಿಯ ಅಪ್ಪಚೆಟ್ಟೋಳಂಡ ಐನ್‌ಮನೆಯಲ್ಲಿ ಸೋಮವಾರ ಕುಟುಂಬಸ್ಥರು ಒಗ್ಗೂಡಿ ಕೈಲ್ ಮುಹೂರ್ತವನ್ನು ಸಂಭ್ರಮದಿಂದ ಆಚರಿಸಿದರು. ಗದ್ದೆ ವ್ಯವಸಾಯದಲ್ಲಿ ನೇಗಿಲು, ನೊಗ ಗುದ್ದಲಿ ಮುಂತಾದ ವ್ಯವಸಾಯ ಉಪಕರಣಗಳನ್ನು ತೊಳೆದು ಪೂಜಿಸಲಾಯಿತು. ಉಳುಮೆ   ಮಾಡಿದ ಎತ್ತುಗಳ         ಮೈತೊಳೆದು ಗಂಧ ಹಚ್ಚಿ ಪೂಜಿಸಲಾಯಿತು. ವಿವಿಧ ಆಯುಧಗಳನ್ನು ಒಟ್ಟಾಗಿ ಜೋಡಿಸಿಟ್ಟು ಪೂಜೆ ಸಲ್ಲಿಸಲಾಯಿತು.

ಐನ್‌ಮನೆಯ ಮುಂಭಾಗದಲ್ಲಿ ಕೋವಿಯ ಮೂಲಕ ಗುಂಡು    ಹಾರಿಸಿ ಹಬ್ಬದ ಆಚರಣೆಯನ್ನು ಸಾರಲಾಯಿತು. ಮಕ್ಕಳಾದಿಯಾಗಿ ಹಿರಿಯರವರೆಗೆ ಎಲ್ಲರಿಗೂ ಅಲ್ಲಿ ಶೌರ್ಯಪ್ರದರ್ಶನದ ಸ್ಪರ್ಧೆ ನಡೆಯಿತು. ಮರದ ತುದಿಗೆ ತೆಂಗಿನಕಾಯಿ ಕಟ್ಟಿ ಅದಕ್ಕೆ ಗುಂಡು ಹೊಡೆಯಲಾಯಿತು. ಕಡುಂಬಿಟ್ಟು ಹಾಗು ಹಂದಿ ಮಾಂಸದ ಊಟ ಕೈಲ್ ಮುಹೂರ್ತ ಹಬ್ಬದ ವಿಶೇಷ. ಮದ್ಯಸೇವನೆಗೂ ವಿಶೇಷ ಆದ್ಯತೆ. ಹಿಂದೆ ಹಬ್ಬದ ಬಳಿಕ ಎಲ್ಲರೂ ಊರಿನ ಮಂದ್‌ನಲ್ಲಿ ಸೇರುತ್ತಿದ್ದರು. ಬೇಟೆಯಾಡುವ ಸಮಯವನ್ನು ನಿರ್ಧರಿಸುತ್ತಿದ್ದರು. ಆಧುನಿಕತೆಯ ಭರಾಟೆಯಲ್ಲಿ ಬಹುತೇಕ ಆಚರಣೆಗಳು ಮರೆಯಾಗಿವೆ ಎನ್ನುತ್ತಾರೆ.

ಅಪ್ಪಚೆಟ್ಟೋಳಂಡ ಮನುಮುತ್ತಪ್ಪ. ನಾಪೋಕ್ಲು    ಭಗವತಿ ಯುವಕ ಸಂಘದ   ವತಿಯಿಂದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಹಾಗೂ ಬಲ್ಲಮಾವಟಿಯ ನೇತಾಜಿ ಪ್ರೌಢಶಾಲೆಯ ಆಟದ    ಮೈದಾನದಲ್ಲಿ ಅಪೊಲೋ      ಯುವಕ ಸಂಘದ ವತಿಯಿಂದ    ಹಬ್ಬದ ಪ್ರಯುಕ್ತ ಆಟೋಟ ಕೂಟವನ್ನು ಏರ್ಪಡಿಸಲಾಗಿತ್ತು. ಸೆಪ್ಟೆಂಬರ್3ರಂದು ಕೊಡಗಿನ     ಇತರ ಭಾಗಗಳಲ್ಲಿ ಕೈಲ್ ಮುಹೂರ್ತವನ್ನು ಊರ ಜನರೊಂದಿಗೆ ಕೂಡಿ ಸಂತಸದಿಂದ ಆಚರಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT