ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಭ್ರಮದ ಮಧ್ಯೆ ಒಲಿಂಪಿಕ್ ಕ್ರೀಡೋತ್ಸವಕ್ಕೆ ಚಾಲನೆ

Last Updated 28 ಜುಲೈ 2012, 7:35 IST
ಅಕ್ಷರ ಗಾತ್ರ

ಲಂಡನ್ (ಐಎಎನ್‌ಎಸ್): ಲಕ್ಷಾಂತರ ಮಂದಿಯ ಸಮ್ಮುಖದಲ್ಲಿ ಝಗಮಗಿಸುವ ವಿದ್ಯುತ್ ದೀಪಾಲಂಕಾರದ ಬೆಳಕಿನಲ್ಲಿ ವೈಭವೋಪೇತವಾಗಿ ಸಿಂಗಾರಗೊಂಡಿದ್ದ ಭವ್ಯ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ರಾಣಿ 2ನೇ ಎಲಿಜಬೆತ್ 30 ನೇ ಒಲಿಂಪಿಕ್ ಕ್ರೀಡೋತ್ಸವಕ್ಕೆ ಶನಿವಾರ ಮುಂಜಾನೆ ಚಾಲನೆ ನೀಡಿದರು.

ಕಣ್ಣು ಕೋರೈಸುವಂತೆ ಶೃಂಗಾರಗೊಂಡಿದ್ದ ಇಲ್ಲಿನ ಪ್ರಧಾನ ಕ್ರೀಡಾಂಗಣದಲ್ಲಿ 80 ಸಾವಿರ ಮಂದಿ ಪ್ರೇಕ್ಷಕರು ನೆರೆದಿದ್ದರು. ಒಂದು ಶತಕೋಟಿ ಜನರು ವಿಶ್ವದ ಮಹೋನ್ನತ ಕ್ರೀಡೋತ್ಸವದ ಉದ್ಘಾಟನೆಯ ಸಡಗರವನ್ನು ಕಣ್ತುಂಬಿಕೊಂಡರು.

ಯಾರು ಒಲಿಂಪಿಕ್ ಜ್ಯೋತಿ ಹೊತ್ತಿಸುತ್ತಾರೆ ಎಂಬ ಗುಟ್ಟು ಕಡೆಯತನಕವೂ ರಟ್ಟಾಗಲೇ ಇಲ್ಲ. ಅಂತಿಮವಾಗಿ 7 ಮಂದಿ ಯುವಕ-ಯುವತಿಯರು ಒಲಿಂಪಿಕ್ ಜ್ಯೋತಿಯನ್ನು ಕ್ರೀಡಾಂಗಣದಲ್ಲಿ ಹೊತ್ತಿಸಿದರು.

`ತಲೆಮಾರಿನ ಸ್ಫೂರ್ತಿ~ ಎಂಬ ಈ ಬಾರಿ ಒಲಿಂಪಿಕ್‌ನ ಧ್ಯೇಯ ವಾಕ್ಯ ಎಲ್ಲೆಡೆ ಮಾರ್ದನಿಸಿತು.

ಹಲವು ಮೊದಲುಗಳಿಗೆ ಈ ಬಾರಿಯ ಒಲಿಂಪಿಕ್ ನಾಂದಿ ಹಾಡಿತು. ಎಲ್ಲಾ ದೇಶಗಳ ಕ್ರೀಡಾ ಪ್ರತಿನಿಧಿಗಳು ಮಹಿಳೆಯರೇ ಆಗಿರುವುದು ಇದೇ ಮೊದಲು. ಅಲ್ಲದೆ  ಬ್ರೂನೈ, ಕತಾರ್ ಹಾಗೂ ಸೌದಿ ಅರೇಬಿಯಾ ಮಹಿಳಾ ಪ್ರತಿನಿಧಿಗಳನ್ನು ಕಳುಹಿಸಿದ್ದು ಇದೇ ಮೊದಲು ಹಾಗೂ ಒಟ್ಟು ಮೂರು ಬಾರಿ ಒಲಿಂಪಿಕ್ ಕ್ರೀಡೆಗಳನ್ನು ಆಯೋಜಿಸಿದ ಮೊದಲ ದೇಶ ಇಂಗ್ಲೆಂಡ್ ಎಂಬ ಐತಿಹಾಸಿಕ ಅಗ್ಗಳಿಕೆಯೂ ಒಲಿಂಪಿಕ್ ಇತಿಹಾಸದಲ್ಲಿ ದಾಖಲಾಯಿತು. (ಈ ಮುಂಚೆ 1908 ಹಾಗೂ 1948ರಲ್ಲಿ ಇಂಗ್ಲೆಂಡ್‌ನಲ್ಲಿ ಒಲಿಂಪಿಕ್ ನಡೆದಿತ್ತು.)

ಒಟ್ಟು 204 ದೇಶಗಳು ಭಾಗವಹಿಸುತ್ತಿರುವ ಈ ಬಾರಿಯ ಒಲಿಂಪಿಕ್‌ನಲ್ಲಿ 10,500 ಕ್ರೀಡಾ ಪಟುಗಳು 26 ಕ್ರೀಡೆಗಳಲ್ಲಿ ಪ್ರಶಸ್ತಿಗಾಗಿ ಸೆಣಸಾಟ ನಡೆಸಲಿದ್ದಾರೆ.

ಮಾದಕವಸ್ತು ಬಳಸದೆ ಸ್ಪರ್ಧಿಸುವುದಾಗಿ ಎಲ್ಲಾ ಕ್ರೀಡಾಪಟುಗಳ ಪರವಾಗಿ ಬ್ರಿಟನ್‌ನ ಅಥ್ಲೀಟ್ ಸರಾ ಸ್ಟೀವನಸನ್ ಅವರು ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಿದರು. ಈ ರೀತಿ ಪ್ರತಿಜ್ಞಾ ವಿಧಿ ಸ್ವೀಕರಿಸುವ ಸಂಪ್ರದಾಯ 2000ದ ಸಿಡ್ನಿ ಒಲಿಂಪಿಕ್‌ನಿಂದ ಆರಂಭವಾಗಿದೆ.

ಕ್ರೀಡೋತ್ಸವದ ಉದ್ಘಾಟನಾ ಸಮಾರಂಭದ ವಿನ್ಯಾಸಕ ಚಿತ್ರ ನಿರ್ಮಾಪಕ ಡ್ಯಾನಿ ಬಾಯಲ್ ಅವರು ಸಮಾರಂಭ ಯಶಸ್ವಿಯಾದುದಕ್ಕೆ ಹರ್ಷ ವ್ಯಕ್ತಪಡಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT