ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಭ್ರಮದ ಮಹಾಶಿವರಾತ್ರಿ ಆಚರಣೆ

Last Updated 21 ಫೆಬ್ರುವರಿ 2012, 5:55 IST
ಅಕ್ಷರ ಗಾತ್ರ

ವಿಜಾಪುರ: ಜಿಲ್ಲೆಯಲ್ಲಿ ಸೋಮವಾರ ಮಹಾ ಶಿವರಾತ್ರಿಯ ಸಂಭ್ರಮ. ಭಕ್ತರು ನಸುಕಿನಲ್ಲಿಯೇ ಎದ್ದು, `ಪುಣ್ಯ ಸ್ನಾನ~ ಮಾಡಿ ದೇವರ ಪೂಜೆಯಲ್ಲಿ ತಲ್ಲಿನರಾದರು. ಇಡೀ ದಿನ ಉಪವಾಸ ವ್ರತ ಆಚರಿಸಿ ಒಳಿತಿಗಾಗಿ ಶಿವನಲ್ಲಿ ಪ್ರಾರ್ಥಿಸಿದರು.

ವಿಜಾಪುರದಲ್ಲಿ ಬೃಹತ್ ಗಾತ್ರದ ಶಿವನ ಮೂರ್ತಿ ಇರುವ ಶಿವಗಿರಿ, 770 ಲಿಂಗಗಳಿರುವ ಲಿಂಗದ ಗುಡಿ, ದರ್ಗಾ ಪ್ರದೇಶದ ಅಡವಿ ಶಂಕರಲಿಂಗ ದೇವಸ್ಥಾನ, ಜೋರಾಪುರ ಪೇಠೆಯ ಶಂಕರಲಿಂಗ ದೇವಸ್ಥಾನವೂ ಸೇರಿದಂತೆ ವಿವಿಧೆಡೆ ಇರುವ ಶಿವ, ಕಪಿಲೇಶ್ವರ, ಚಂದ್ರಮೌಳೇಶ್ವರ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಈ ದೇವಸ್ಥಾನಗಳ ಎದುರು ನಸುಕಿನಿಂದಲೇ ಭಕ್ತರು ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ಬಿಲ್ವ ಪತ್ರೆ, ಹೂವು, ಕಾಯಿ, ಕರ್ಪೂರ, ಹಣ್ಣು ಸಮರ್ಪಿಸಿದರು. ಅಭಿಷೇಕ ನೆರವೇರಿಸಿದರು. ಭಕ್ತಿಯಿಂದ ಪೂಜೆ ಸಲ್ಲಿಸಿ, ತಮ್ಮ ಇಷ್ಟಾರ್ಥಗಳ ಸಿದ್ಧಿಗಾಗಿ ಪ್ರಾರ್ಥಿಸಿದರು.

ಶಿವಗಿರಿ ಉತ್ಸವ:
ಇಲ್ಲಿಯ ಉಕ್ಕಲಿ ರಸ್ತೆಯಲ್ಲಿರುವ ಶಿವಗಿರಿಯಲ್ಲಿ ಮಹಾಶಿವರಾತ್ರಿಯ ಅಂಗವಾಗಿ ಟಿ.ಕೆ. ಪಾಟೀಲ (ಬೆನಕಟ್ಟಿ) ಚಾರಿಟೇಬಲ್ ಟ್ರಸ್ಟ್‌ನಿಂದ `ಮಹಾಶಿವರಾತ್ರಿ ಉತ್ಸವ~ ಆಚರಿಸಲಾಗುತ್ತಿದೆ.

ಸೋಮವಾರ ಬೆಳಿಗ್ಗೆ 5ಕ್ಕೆ ಕಾಶಿ ವಿಶ್ವನಾಥನಿಗೆ ರುದ್ರಾಭಿಷೇಕದ ನಂತರ ಪ್ರತಿ ಗಂಟೆಗೊಮ್ಮೆ ನಿರಂತರ ಪೂಜೆ ನೆರವೇರಿಸಲಾಯಿತು. ಮಧ್ಯಾಹ್ನ ಇಲ್ಲಿಯ ಸಿದ್ಧೇಶ್ವರ ದೇವಸ್ಥಾನದಿಂದ ಶಿವಗಿರಿ ವರೆಗೆ ಪಲ್ಲಕ್ಕಿ, ನಂದಿ ಧ್ವಜಗಳ ಅದ್ದೂರಿ ಮೆರವಣಿಗೆ ನಡೆಯಿತು.


ಅಂಬಾರಿ ಹೊತ್ತ ಆನೆ, ಕುದುರೆ, ಆಸಂಗಿಯ ಝಾಂಜ್, ಜಗ್ಗಲಿಗೆ, ಈಶ್ವರ ಲಿಂಗದ ಪ್ರತಿರೂಪ, ಮಹಿಳಾ ಡೊಳ್ಳು ಕುಣಿತ ತಂಡ, ಸಾಂಪ್ರದಾಯಿಕ ಉಡುಗೆಯಲ್ಲಿದ್ದ ಲಂಬಾಣಿ ಮಹಿಳೆಯರು ಹಾಗೂ ವಿವಿಧ ಜಾನಪದ ಕಲಾ ತಂಡಗಳವರು ಮೆರವಣಿಗೆಗೆ ಮೆರಗು ನೀಡಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರೂ ಪಾಲ್ಗೊಂಡಿದ್ದರು.

ಶಿವಗಿರಿಯಲ್ಲಿ ರಾತ್ರಿ ನಡೆದ ಚಿತ್ತಾಕರ್ಷಕ ಮದ್ದು ಸುಡುವ  ಹಾಗೂ ರಸಮಂಜರಿ ಕಾರ್ಯಕ್ರಮ ಜನರನ್ನು ಸೆಳೆದವು.

ಮಹಾ ಶಿವರಾತ್ರಿ ಅಂಗವಾಗಿ ಶಿವಗಿರಿ (ಬಸಂತ ವನ)ಯ ಶಿವನ ದರ್ಶನಕ್ಕೆ ಉಚಿತ ಪ್ರವೇಶ ಕಲ್ಪಿಸಲಾಗಿತ್ತು. ದೇಶದಲ್ಲಿಯೇ ಅತೀ ದೊಡ್ಡದಾಗಿರುವ ಶಿವನ ಮೂರ್ತಿಯ ದರ್ಶನ ಪಡೆಯಲು ವಿಜಾಪುರ ನಗರ ಹಾಗೂ ಜಿಲ್ಲೆ-ನೆರೆ ಜಿಲ್ಲೆಗಳಿಂದ ಅಪಾರ ಸಂಖ್ಯೆಯ ಭಕ್ತರು ಆಗಮಿಸಿದ್ದರು. ಹೀಗಾಗಿ ಇಲ್ಲಿ ಸದರಿ ಸಾಲು ಅತ್ಯಂತ ದೊಡ್ಡದಾಗಿತ್ತು.

ಶಿವಸಿಂಪಿ ಸಮಾಜ: ಶಿವಸಿಂಪಿ ಸಮಾಜ ಕಲ್ಯಾಣ ಸಂಘದಿಂದ ಇಲ್ಲಿಯ 770 ಶಿವಲಿಂಗಗಳ ದೇವಸ್ಥಾನದ ಆವರಣದಲ್ಲಿ ಮಹಾಶಿವರಾತ್ರಿ ಅಂಗವಾಗಿ ಭಕ್ತರಿಗೆ ಪ್ರಸಾದ ವಿತರಿಸಲಾಯಿತು.


ಎಂ.ಎಸ್. ಹಳಕಟ್ಟಿ, ಎಂ.ಬಿ. ಕನ್ನೂರ, ಎಸ್.ಎಂ. ಸಿಂದಗಿ, ವೈ.ಸಿ. ಚೋಳಕೆ, ಮೊರಬ, ಗಲಗಲಿ, ಜಿ.ಎಸ್. ಹಳಕಟ್ಟಿ, ಮೇತ್ರಿ, ಶಿವಕುಮಾರ, ಮಸಳಿ, ಕಲ್ಯಾಣಶೆಟ್ಟಿ, ಲಂಗೋಟಿ, ರುದ್ರಾಕ್ಷಿ ಇತರರು ಪಾಲ್ಗೊಂಡಿದ್ದರು.

ಶಿವನಿಗೆ ಪೂಜೆ, ಭಜನೆ
ಬಸವನಬಾಗೇವಾಡಿ: ವಿರಕ್ತಮಠ ಸೇರಿದಂತೆ ಪಟ್ಟಣದ ವಿವಿಧ ದೇವಾಲಯಗಳಲ್ಲಿ ಸೋಮವಾರ ಲಿಂಗಪೂಜೆ ಭಜನೆಯೊಂದಿಗೆ ಭಕ್ತರು ಶಿವರಾತ್ರಿ ಹಬ್ಬವನ್ನು ಭಕ್ತಿ ಭಾವದಿಂದ ಆಚರಿಸಿದರು.

ಬೆಳಿಗ್ಗೆಯಿಂದಲೇ ಪಟ್ಟಣದಲ್ಲಿ ಭಕ್ತರು ತಮ್ಮ ಮನೆಯನ್ನು ಶುಚಿಗೊಳಿಸಿ ಅಂದದ ರಂಗವಲ್ಲಿ ಚಿತ್ತಾರ ಬಿಡಿಸಿ ಮನೆಯ ದೇವರಿಗೆ ಪೂಜೆ ಸಲ್ಲಿಸಿ ಕುಟುಂಬ ಪರಿವಾರದೊಂದಿಗೆ ಉಪವಾಸ ಆಚರಿಸಿ ಸಂಜೆ ಪೂಜೆಗಾಗಿ ದೇವಾಲಯಕ್ಕೆ ತೆರಳಿದರು.

ಮಹಾಶಿವರಾತ್ರಿ ನಿಮಿತ್ತ ಬಸವೇಶ್ವರ ದೇವಾಲಯದಲ್ಲಿ ಭಕ್ತರು ವಿಶೇಷ ಪೂಜೆ, ಅಭಿಷೇಕ ಮಾಡಿಸಿದರು. ಪಟ್ಟಣದ ವಿವಿಧ ದೇವಾಲಯಗಳಿಗೆ ತೆರಳಿ ಭಕ್ತರು ಶಿವ ದೇವರನ್ನು (ಲಿಂಗು)  ಪೂಜಿಸಿದ ನಂತರ  ಗೆಣಸು, ಗಜ್ಜರಿ, ಮಜ್ಜಿಗೆ, ಖರ್ಜೂರ್, ದ್ರಾಕ್ಷಿ, ಬಾಳೆಹಣ್ಣು ಮುಂತಾದವುಗಳನ್ನು ನೈವೇದ್ಯ ಹಿಡಿದು ಶಿವನ  ನಾಮಸ್ಮರಣೆ ಮಾಡಿದರು.

ವಿರಕ್ತಮಠದಲ್ಲಿ ನಡೆದ  ಪೂಜೆಯಲ್ಲಿ ಮುರುಘೇಂದ್ರ ಸ್ವಾಮೀಜಿ, ಸಿದ್ಧಲಿಂಗದೇವರು ಅವರು ಪೂಜೆಯ ಮಹತ್ವ ತಿಳಿಸಿದರು. ಎಫ್.ಡಿ. ಮೇಟಿ, ಎಸ್.ಎಸ್. ಝಳಕಿ, ವೀರೇಶ ಕುಂಟೋಜಿ, ಎಸ್.ಎಸ್. ಬಶೆಟ್ಟಿ, ಬಿರಾದಾರ, ಶರಣಪ್ಪ ಬೇವನೂರ ಮುಂತಾದವರು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT