ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಭ್ರಮದ ಮುಗಿಲೇರಿದ ಯುವ ಕ್ರಿಕೆಟಿಗರು

ಕೆಎಸ್‌ಸಿಎ ಧಾರವಾಡ ವಲಯ ಲೀಗ್ ಕ್ರಿಕೆಟ್ ಪ್ರಶಸ್ತಿ ಪ್ರದಾನ
Last Updated 17 ಜುಲೈ 2013, 6:23 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನೆಟ್ಸ್‌ನಲ್ಲಿ ಬೆವರು ಸುರಿಸಿ ಅಭ್ಯಾಸ ಮಾಡಿ, ಮೈದಾನದಲ್ಲಿ ಹೋರಾಟಕಾರಿ ಕ್ರಿಕೆಟ್ ಆಡಿದ ಅವರೆಲ್ಲರೂ ಪಟ್ಟ ಪ್ರಯತ್ನಕ್ಕೆ ಫಲ ಸಿಕ್ಕಿದ ಖುಷಿಯಲ್ಲಿದ್ದರು. ಕ್ರಿಕೆಟ್ ಲೋಕದ ದಿಗ್ಗಜ, ಕರ್ನಾಟಕದ ಕಲಿ ಅನಿಲ್ ಕುಂಬ್ಳೆ ಅವರು ನಸುನಕ್ಕು ನೀಡಿದ ಪ್ರಶಸ್ತಿಯನ್ನು ಪಡೆದಾಗ ಅವರ ಮುಖದಲ್ಲಿ ಸಿಕ್ಸರ್, ಬೌಂಡರಿ ಹೊಡೆದಷ್ಟು ಸಂಭ್ರಮ ಮನೆ ಮಾಡಿತ್ತು; ಸಂತಸ ಅಲೆಯಾಡಿತ್ತು.

ನಗರದ ಕೆಎಸ್‌ಸಿಎ ಮೈದಾನದಲ್ಲಿ ಮಂಗಳವಾರ ಸಂಜೆ ನಡೆದ ಕೆಎಸ್‌ಸಿಎ ಧಾರವಾಡ ವಲಯದ ಪ್ರಥಮ, ದ್ವಿತೀಯ ಮತ್ತು ತೃತೀಯ ಡಿವಿಜನ್ ಲೀಗ್ ಕ್ರಿಕೆಟ್ ಟೂರ್ನಿ ಮತ್ತು ಬೆಳಗಾವಿ ಲೀಗ್‌ನ ಪ್ರಥಮ, ದ್ವಿತೀಯ ಡಿವಿಜನ್ ಕ್ರಿಕೆಟ್ ಟೂರ್ನಿಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ತಂಡ ಪ್ರಶಸ್ತಿ ಪಡೆದವರು ಮತ್ತು ವೈಯಕ್ತಿಕ ಸಾಧನೆಯ ಬಹುಮಾನಗಳನ್ನು ಗಳಿಸಿದವರ ಖುಷಿ ಮುಗಿಲೆತ್ತರಕ್ಕೆ ಏರಿತ್ತು.

ಗೂಗ್ಲಿ ಚತುರನ ಕೈಯಿಂದ ಪ್ರಶಸ್ತಿ ಪಡೆದದ್ದು ಅವರ ಸಂತಸ ಇಮ್ಮಡಿಗೊಳ್ಳಲು ಕಾರಣವಾಗಿತ್ತು. ಕ್ರಿಕೆಟ್‌ನಲ್ಲಿ ಸಾಧನೆಯ ಶಿಖರವನ್ನು ಮುಟ್ಟಿರುವ ಅನಿಲ್ ಕುಂಬ್ಳೆ ಯಾವುದೇ ಹಮ್ಮು-ಬಿಮ್ಮು ಇಲ್ಲದೆ ಹಸನ್ಮುಖಿಯಾಗಿ ಪ್ರಶಸ್ತಿಗಳನ್ನು ವಿತರಿಸಿ, ಯುವ ಕ್ರಿಕೆಟಿಗರಲ್ಲಿ ಹುಮ್ಮಸ್ಸು ತುಂಬಿದರು. ವೈಯಕ್ತಿಕ ಬಹುಮಾನ ಗಳಿಸಿದವರನ್ನು ಮಾತನಾಡಿಸಿ, ಬೆನ್ನು ತಟ್ಟಿ ಕಳುಹಿಸಿದರು.

ಧಾರವಾಡ ವಲಯ ಪ್ರಥಮ ಡಿವಿಜನ್ ಟೂರ್ನಿಯ ವಿಜೇತ ಹುಬ್ಬಳ್ಳಿ ಕ್ರಿಕೆಟ್ ಅಕಾಡೆಮಿ, ದ್ವಿತೀಯ ಡಿವಿಜನ್ ವಿಜೇತ ತಂಡ ಹುಬ್ಬಳ್ಳಿಯ ಮಿಡ್‌ಮ್ಯಾಕ್, ತೃತೀಯ ಡಿವಿಜನ್ ವಿಜೇತ ಹುಬ್ಬಳ್ಳಿಯ ಫೀನಿಕ್ಸ್ ಕ್ಲಬ್, ಬೆಳಗಾವಿ ಲೀಗ್‌ನ ಪ್ರಥಮ ಡಿವಿಜನ್ ವಿಜೇತ ಬೆಳಗಾವಿ ಸ್ಪೋರ್ಟ್ಸ್ ಕ್ಲಬ್ ಮತ್ತು ದ್ವಿತೀಯ ಲೀಗ್ ವಿಜೇತ ತಂಡ ನೀನಾ ಸ್ಪೋರ್ಟ್ಸ್ ಕ್ಲಬ್‌ಗಳ ಆಟಗಾರರು `ಪ್ರಥಮ'ದ ಸಂಭ್ರಮದಲ್ಲಿ ಮಿಂದರು.

ಎಲ್ಲ ಡಿವಿಜನ್‌ಗಳಲ್ಲೂ ಕ್ರಮವಾಗಿ ದ್ವಿತೀಯ ಪ್ರಶಸ್ತಿ ಪಡೆದ ಬಿಡಿಕೆ ಸ್ಪೋರ್ಟ್ಸ್ ಫೌಂಡೇಷನ್, ಸ್ಪೋರ್ಟ್ಸ್ ಅಕಾಡೆಮಿ ಆಫ್ ಗದಗ, ಓರಿಯೆಂಟಲ್ ಕ್ರಿಕೆಟ್ ಅಕಾಡೆಮಿ, ಯೂನಿಯನ್ ಜಿಮ್ಖಾನಾ ಮತ್ತು ಯುವರಾಜ ಸ್ಪೋರ್ಟ್ಸ್ ಕ್ಲಬ್ ತಂಡಗಳ ಸಂತಸವೂ ಕಡಿಮೆ ಇರಲಿಲ್ಲ.

ಭರವಸೆಯ ಕ್ರಿಕೆಟಿಗರಾಗಿ ಹೊರ ಹೊಮ್ಮಿದ ಶಿಶಿರ್ ಭವಾನೆ, ಪರಪ್ಪ ಮೊರಡಿ, ಪುಷ್ಪಾ ಕಿರೇಸೂರ, ಅರ್ಜುನ ಪಾಟೀಲ, ಸಮರ್ಥ ಊಟಿ ಮತ್ತು ರೋನಿತ್ ಮೋರೆ ಅವರನ್ನೂ ಗುರುತಿಸಲಾಯಿತು. ಕೆಲವರ ಪರವಾಗಿ ಅವರ ಪಾಲಕರು ಪ್ರಶಸ್ತಿ ಪಡೆದುಕೊಂಡರೆ ಕೆಲವರಿಗೆ ಖುದ್ದಾಗಿ ಕುಂಬ್ಳೆ ಕೈಕುಲುಕುವ ಅವಕಾಶ ಸಿಕ್ಕಿತು.

ಸಮಾರಂಭದಲ್ಲಿ ಮಾತನಾಡಿದ ಕುಂಬ್ಳೆ, ಹುಬ್ಬಳ್ಳಿಯಲ್ಲಿ ಹೆಚ್ಚು ಕ್ರಿಕೆಟ್ ಪಂದ್ಯಗಳಿಗೆ ಅವಕಾಶ ಮಾಡಿಕೊಡಲು ಶ್ರಮ ನಡೆಯುತ್ತಿದೆ ಎಂದು ಹೇಳಿ ಕ್ರಿಕೆಟ್ ಪ್ರಿಯರ ಹುಮ್ಮಸ್ಸು ಹೆಚ್ಚಿಸಿದರು.  ಬೆಳಗಾವಿಯಲ್ಲಿ ಸಿದ್ಧವಾಗುತ್ತಿರುವ ಮೈದಾನದಲ್ಲಿ ಕ್ರಿಕೆಟ್ ಪಂದ್ಯಗಳನ್ನು ಈ ವರ್ಷವೇ ಆಡಿಸಬಹುದಾಗಿದೆ ಎಂದು ಹೇಳುತ್ತಿದ್ದಂತೆ ಕುಂದಾ ನಗರಿಯಿಂದ ಬಂದಿದ್ದ ಕ್ರಿಕೆಟಿಗರು ರೋಮಾಂಚನಗೊಂಡರು.

`ಸೌಲಭ್ಯಗಳನ್ನು ಸಮರ್ಥವಾಗಿ ಬಳಸಿಕೊಂಡರೆ ಕರ್ನಾಟಕದಲ್ಲಿ ಉತ್ತಮ ಕ್ರಿಕೆಟಿಗರು ಬೆಳೆದು ಬರಬಹುದು. ಭಾರತ ತಂಡದಲ್ಲಿ ಮತ್ತೆ ಕರ್ನಾಟಕದ ಪ್ರಾಬಲ್ಯ ಎದ್ದು ಕಾಣಬಹುದಾಗಿದೆ' ಎಂದು ಅವರು ಹೇಳಿದರು.

ಕೆಎಸ್‌ಸಿಎ ಧಾರವಾಡ ವಲಯ ಸಂಯೋಜಕ ಎಂ.ಕೆ.ಕೃಷ್ಣ, ಸಂಚಾಲಕ ಬಾಬಾ ಬೂಸದ, ಅಧ್ಯಕ್ಷ ವೀರಣ್ಣ ಸವಡಿ, ಟೂರ್ನಮೆಂಟ್ ಸಮಿತಿ ಅಧ್ಯಕ್ಷ ಅಲ್ತಾಫ್ ನವಾಜ್ ಕಿತ್ತೂರ ಮತ್ತಿತರರು ಉಪಸ್ಥಿತರಿದ್ದರು.

ಕುಂಬ್ಳೆ ಆಡಿದ ಅನೇಕ ಅಂತರರಾಷ್ಟ್ರೀಯ ಪಂದ್ಯಗಳ ವರದಿ ಮಾಡಿದ `ಪ್ರಜಾವಾಣಿ'ಯ ನಿವೃತ್ತ ಸಹ ಸಂಪಾದಕ ಗೋಪಾಲಕೃಷ್ಣ ಹೆಗಡೆ ಮಾತನಾಡಿದರು. ಕೆಎಸ್‌ಸಿಎ ಹಿರಿಯ ಸದಸ್ಯ ಸುನಿಲ್ ಕೊಠಾರಿ, ರಾಷ್ಟ್ರೀಯ ಟೇಬಲ್ ಟೆನಿಸ್ ಆಟಗಾರ ವಸಂತ ಭಾರದ್ವಾಜ ಮುಂತಾದವರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT