ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಭ್ರಮದ ವಾಲ್ಮೀಕಿ ಜಯಂತ್ಯುತ್ಸವ

Last Updated 12 ಅಕ್ಟೋಬರ್ 2011, 10:40 IST
ಅಕ್ಷರ ಗಾತ್ರ

ರಾಯಚೂರು: ಮಹರ್ಷಿ ವಾಲ್ಮೀಕಿ ಅವರ ಜಯಂತ್ಯುತ್ಸವ ಆಚರಣೆ ಅದ್ಧೂರಿ ಆಚರಣೆಗೆ ಮಾತ್ರ ಸೀಮಿತವಾಗಬಾರದು. ಪ್ರತಿಯೊಬ್ಬರು ಅವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಶಿಕ್ಷಣದಿಂದಲೇ ಸಮಾಜ ಏಳ್ಗೆ ಎಂಬ ಸತ್ಯ ಮನಗಾಣಬೇಕು ಎಂದು ವಿಧಾನ ಪರಿಷತ್ ಸದಸ್ಯ ಎನ್. ಶಂಕರಪ್ಪ ವಕೀಲ ಹೇಳಿದರು.

ಇಲ್ಲಿನ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಮಂಗಳವಾರ ಆಯೋಜಿಸಿದ್ದ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನಗರಸಭೆ  ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಜಿಲ್ಲಾ ವಾಲ್ಮೀಕಿ ನಾಯಕ ಸಂಘದ ಸಂಯುಕ್ತ ಆಶ್ರಯದಲ್ಲಿ `ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ~ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪ್ರಾಚೀನ ಕಾಲದಿಂದಲೂ ವಾಲ್ಮೀಕಿ ಸಮಾಜವು ಪ್ರಬಲವಾದ ಶಕ್ತಿಯನ್ನು ಹೊಂದಿದೆ. ಅಲ್ಲದೇ ಪ್ರಸ್ತುತ ದಿನಗಳಲ್ಲಿ ಅನ್ವಯಿಸುತ್ತದೆ ಎಂದು ಹೇಳಿದರು.ಅತಿ ಹೆಚ್ಚು ಶಿಕ್ಷಣ ಪಡೆದವರಿಂದಲೂ ದೇಶದಲ್ಲಿ ಲೂಟಿ, ವಂಚನೆ ಪ್ರಕರಣಗಳು ನಡೆಯುತ್ತವೆ. ಶಿಕ್ಷಣ ಎನ್ನುವುದು ಪರೋಪಕಾರವಾಗಿರಬೇಕು.

ಶಿಕ್ಷಣದಿಂದ ಸಮಾಜಕ್ಕೆ ಉತ್ತಮ ಕೊಡುಗೆ ನೀಡಬೇಕು. ಮಹರ್ಷಿ ವಾಲ್ಮೀಕಿ ಅವರ ರಾಮಾಯಣವು ಸಮಾಜಕ್ಕೆ ಅನ್ವಯಿಸುವಂಥ ಎಲ್ಲ ವಿಷಯಗಳ ಅಂಶಗಳನ್ನೊಳಗೊಂಡಿದೆ. ಇಂದೊಂದು ದೇಶದ ಪವಿತ್ರ ಗ್ರಂಥವಾಗಿದೆ ಎಂದು ತಿಳಿಸಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕ ರಾಜಾ ರಾಯಪ್ಪ ನಾಯಕ ಅವರು, ಶಿಕ್ಷಣಕ್ಕೆ ಹೆಚ್ಚಿನ ಪ್ರಾತಿನಿಧ್ಯ ನೀಡಬೇಕು. ವಾಲ್ಮೀಕಿ ಸಮಾಜದ ಪ್ರತಿಯೊಬ್ಬರು ಮಕ್ಕಳಿಗೆ ಶಿಕ್ಷಣ ದೊರಕಿಸಿಕೊಡುವ ನಿಟ್ಟಿನಲ್ಲಿ ಶ್ರಮಿಸಬೇಕು ಎಂದು  ಅವರು ಹೇಳಿದರು.

ಸಮಾಜದಲ್ಲಿನ ಶಿಕ್ಷಣ ಕೊರತೆಯಿಂದಾಗಿ ಭಿನ್ನಾಭಿಪ್ರಾಯಗಳ ಹೆಚ್ಚಾಗುತ್ತಿವೆ. ಸಮಾಜದಲ್ಲಿರುವ ಭಿನ್ನಾಭಿಪ್ರಾಯಗಳನ್ನು ಹೋಗಲಾಡಿಸುವ ನಿಟ್ಟಿನಲ್ಲಿ ವಾಲ್ಮೀಕಿ ಸಮಾಜದ ಪ್ರತಿಯೊಬ್ಬರು ಶಿಕ್ಷಣದ ಬಗ್ಗೆ ಗಮನಹರಿಸಬೇಕು ಎಂದು ತಿಳಿಸಿದರು.

ಉಪನ್ಯಾಸಕರಾಗಿ ಆಗಮಿಸಿದ್ದ ಡಾ.ಅಮರೇಶ ಯಾತಗಲ್ ಮಾತನಾಡಿ, ಮಹರ್ಷಿ ವಾಲ್ಮೀಕಿ ಅವರು ಒಂದು ಜನಾಂಗದ ಸ್ವತಲ್ಲ. ಅವರನ್ನು ಜಾತಿ ಆಧಾರದ ಮೇಲೆ ಗುರುತಿಸುವುದು ಒಂದು ಕಳಂತಕವಾಗಿದೆ. ಜಗತ್ತಿಗೆ ಮಿನುಗುವ ತಾರೆಯಾಗಿದ್ದಾರೆ. ರಾಮಾಯಣ ಗ್ರಂಥದ ಮೂಲಕ ಪ್ರಸಿದ್ಧಿಗೆ ಬಂದ ಮಹಾನ್ ವ್ಯಕ್ತಿ ಅವರಾಗಿದ್ದಾರೆ ಎಂದು ತಿಳಿಸಿದರು.

ಈ ರಾಮಾಯಣ ಗ್ರಂಥವು ದೇಶದ ಪವಿತ್ರ ಗ್ರಂಥಗಳಲ್ಲಿ ಒಂದಾಗಿದೆ. ಮಹಾತ್ಮ ಗಾಂಧೀಜಿ ಅವರು ರಾಮರಾಜ್ಯದ ಕನಸನ್ನು ಕಂಡಿದ್ದರು. ರಾಜಕೀಯ, ಆಧ್ಯಾತ್ಮಿಕ ಜೀವನದಲ್ಲಿಯೂ ವಾಲ್ಮೀಕಿ ಸಮಾಜದ ಕೊಡುಗೆ ಅಪಾರವಾಗಿದೆ. ವಾಲ್ಮೀಕಿ ಸಮಾಜದವರು ಮಹರ್ಷಿ ವಾಲ್ಮೀಕಿ ಅವರ ಸಂದೇಶ ಹಾಗೂ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಜಿಲ್ಲಾ ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷ ಹಾಗೂ ಮಾಜಿ ಶಾಸಕ ಗಂಗಾಧರ ನಾಯಕ ಮಾತನಾಡಿ, ಸಂಘದ ಮನವಿ ಸ್ವೀಕರಿಸಿ ಸಮಾಜದ ಪ್ರತಿಯೊಬ್ಬರು ಈ ಜಯಂತ್ಯುತ್ಸವದಲ್ಲಿ ಪಾಲ್ಗೊಂಡಿರುವುದು ಸಂತಸದ ಸಂಗತಿಯಾಗಿದೆ ಎಂದು ತಿಳಿಸಿದರು.

ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ವಾಲ್ಮೀಕಿ ಭವನ ನಿರ್ಮಾಣ, ಯಾವುದಾದರೂ ಒಂದು ವಿಶ್ವವಿದ್ಯಾಲಯದಲ್ಲಿ ಮಹರ್ಷಿ ವಾಲ್ಮೀಕಿ ಅಧ್ಯಯನ ಕೇಂದ್ರದ ಸ್ಥಾಪನೆ ಮಾಡಬೇಕು, ಗ್ರಾಮೀಣ ಪ್ರದೇಶದಲ್ಲಿ ವಾಲ್ಮೀಕಿ ಅವರ ನಾಟಕ ಪ್ರದರ್ಶನ ಮಾಡಬೇಕು ಎಂಬ ಬೇಡಿಕೆಗಳನ್ನು ಈಡೇರಿಕೆಗೆ ಜಿಲ್ಲಾಡಳಿತವು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಮನವಿ ಮಾಡಿದರು.

ಅಧ್ಯಕ್ಷತೆಯನ್ನು ಶಾಸಕ ಸಯ್ಯದ್ ಯಾಸಿನ್ ವಹಿಸಿದ್ದರು. ಪ್ರಾಸ್ತಾವಿಕ ಭಾಷಣವನ್ನು  ಹೆಚ್ಚುವರಿ ಜಿಲ್ಲಾಧಿಕಾರಿ ರಾಧಾಕೃಷ್ಣ ಮದನಕರ್ ಮಾಡಿದರು.ಬಿಜೆಪಿ ಮುಖಂಡ ಆರ್.ತಿಮ್ಮಯ್ಯ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಪಿ.ಚಂದ್ರಶೇಖರರೆಡ್ಡಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ರಾಜಾ ಪಾಂಡುರಂಗ ನಾಯಕ, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎ.ವಸಂತಕುಮಾರ, ನಗರಸಭೆ ಉಪಾಧ್ಯಕ್ಷ ಸುಲೋಚನಾ ಕರಿಯಪ್ಪ, ಜಿಲ್ಲಾ ಪಂಚಾಯಿತಿ ಕಾರ್ಯದರ್ಶಿ ಮುಕ್ಕಣ್ಣ ಕರಿಗಾರ, ಭೂಮಾಪನಾ ಇಲಾಖೆ ಉಪನಿರ್ದೇಶಕ ಉಮೇಶ ಹಾಗೂ ಮತ್ತಿತರರು ಪಾಲ್ಗೊಂಡಿದ್ದರು. ಡಿಎಚ್‌ಒ ವೆಂಕಟೇಶ ನಾಯಕ ಸ್ವಾಗತಿಸಿದರು.

ವಿವಿಧ ಸಂಘ-ಸಂಸ್ಥೆಗಳಿಂದ ವಾಲ್ಮೀಕಿ ಜಯಂತ್ಯುತ್ಸವ

ರಾಯಚೂರು: ವಿವಿಧ ಸಂಘ ಸಂಸ್ಥೆಗಳಿಂದ ಮಂಗಳವಾರ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಶ್ರೀ ಮಹರ್ಷಿ ವಾಲ್ಮೀಕಿಯವರ ವಾಲಜಯಂತ್ಯುತ್ಸವನ್ನು ಆಚರಣೆ ಮಾಡಲಾಯಿತು.

ಶಕ್ತಿನಗರದಲ್ಲಿ: ಕರ್ನಾಟಕ ವಿದ್ಯುತ್ ನಿಗಮ ನಿಯಮಿತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ನೌಕರರ ಸಂಘದವತಿಯಿಂದ ಮಂಗಳವಾರ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ಆಚರಣೆ ಮಾಡಲಾಯಿತು.

ಕಾರ್ಯಕ್ರಮ ಉದ್ಘಾಟಿಸಿದ ಆರ್‌ಟಿಪಿಎಸ್ ಮುಖ್ಯ ಎಂಜಿನಿಯರ್ ಚನ್ನಪ್ಪಳ್ಳಿ ಶಿವರಾಜ್ ಅವರು,  ವಾಲ್ಮೀಕಿ ಮಹರ್ಷಿಗಳ ಆದರ್ಶ ಮತ್ತು ತತ್ವಗಳನ್ನು ದಿನ ನಿತ್ಯ ಬದುಕಿನಲ್ಲಿ ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಪ್ರಾಸ್ತಾವಿಕ ಮಾತನಾಡಿ ಸಂಘದ ಕಾರ್ಯದರ್ಶಿ ಭೀಮಯ್ಯ ನಾಯಕ ಅವರು ಮಹರ್ಷಿ ವಾಲ್ಮೀಕಿ ಅವರ ಜೀವನ, ಆದರ್ಶಗಳ ಬಗ್ಗೆ ವಿವರಿಸಿದರು. ರಾಮಾಯಣದಂಥ ಕೃತಿಯನ್ನು ಈ ದೇಶಕ್ಕೆ ಕೊಟ್ಟ ಮಹಾಕವಿ ಎಂದು ನುಡಿದರು.ಆರ್‌ಟಿಪಿಎಸ್ ಯುನಿಯನ್‌ನ ಜೆವಿಎಲ್ ರೆಡ್ಡಿ, ಕೆಪಿಸಿ ಯುನಿಯನ್‌ನ ಮಹಿಬೂಬ್ ಕೆರೂರ, ಬಿಎಂಎಸ್ ಯುನಿಯನ್‌ನ ಸತ್ಯನಾಥ ಮಾತನಾಡಿದರು.

ಸಂಘದ ರಂಗಪ್ಪ, ತಿರುಮಲರಾವ್, ನಾರಾಯಣ ಪಾಂಡೆ, ವೆಂಕಟರಮಣ, ರಂಗಪ್ಪ ಜೆ, ಬಸಪ್ಪ, ಮಂಜುನಾಥ, ವಾಲ್ಮೀಕಿ ನೌಕರರ ಸಂಘದ ನರಸಪ್ಪ, ಈರಪ್ಪ ಬಾಪೂರ, ರುದ್ರಪ್ಪ, ವೆಂಕಟೇಶ ಭಾಗವಹಿಸಿದ್ದರು. ಮಂಜುನಾಥ ಸೊನ್ನದ ವಂದಿಸಿದರು.

ಹಿಂದೂ ಜನಜಾಗೃತಿ ಸಮಿತಿ: ಇಲ್ಲಿನ ಗಾಜಗಾರಪೇಟೆ ಬಡಾವಣೆಯ ಶ್ರೀರಾಮದೊಡ್ಡಿ ದೇವಸ್ಥಾನದಲ್ಲಿ  ವಾಲ್ಮೀಕಿ ಸಮಾಜ ಹಾಗೂ ಹಿಂದೂ ಜನಜಾಗೃತಿ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಶ್ರಿಮಹರ್ಷಿ ವಾಲ್ಮೀಕಿ ಅವರ ಜಯಂತ್ಯುತ್ಸವ ಕಾರ್ಯಕ್ರಮ ನಡೆಯಿತು.

ನಗರಸಭೆ ಸದಸ್ಯ ಶಶಿರಾಜ, ಹಿಂದೂ ಜನಜಾಗೃತಿ ಸಮಿತಿ ಸದಸ್ಯ ಡಾ.ಆನಂದ ಫಡ್ನೀಸ್,ರಾಮಚಂದ್ರ ನಾಯಕ, ಮಾರೆಪ್ಪ ನಾಯಕ, ನರಸಿಂಹಲು, ವೀರೇಶ ನಾಯಕ, ರಾಮು, ಗುರುರಾಜ, ಜಿ.ರಮೇಶ ಹಾಗೂ ಮತ್ತಿತರರು ಪಾಲ್ಗೊಂಡಿದ್ದರು.

ಎಸ್‌ಕೆಇ ಕಾಲೇಜು: ನಗರದ ಸುವರ್ಣ ಕರ್ನಾಟಕ ಶಿಕ್ಷಣ ಸಂಸ್ಥೆಯ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ಶ್ರಿಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ಕಾರ್ಯಕ್ರಮ ಅದ್ಧೂರಿ ನಡೆಸಲಾಯಿತು.ಪ್ರಾಚಾರ್ಯ ನರಸಿಂಹಮೂರ್ತಿ ಮಾತನಾಡಿ,  ವಾಲ್ಮೀಕಿ ಅವರು ರಾಮಾಯಣ ಎಂಬ ಪವಿತ್ರ ಗ್ರಂಥವನ್ನು ರಚಿಸಿ ದೇಶಕ್ಕೆ ಕಾಣಿಕೆಯಾಗಿ ನೀಡಿದ್ದಾರೆ ಎಂದು ವಿವರಿಸಿದರು.

ಅಧ್ಯಕ್ಷತೆಯನ್ನು ಸುಧಾರಾಣಿ ವಹಿಸಿದ್ದರು. ಎಎನ್‌ಎಂ ಕಾಲೇಜಿನ ಪ್ರಾಚಾರ್ಯ ಶ್ರವಣಕುಮಾರ, ಸಂಸ್ಥೆಯ ನಿರ್ದೇಶಕ ಮಲ್ಲಿಕಾರ್ಜುನ, ಚಂದ್ರಶೇಖರ, ಹಾಗೂ ವಿದ್ಯಾರ್ಥಿ -ವಿದ್ಯಾರ್ಥಿನಿಯರ ಪಾಲ್ಗೊಂಡಿದ್ದರು.

ನವೋದಯ ಡಿಎಡ್ ಕಾಲೇಜು: ಇಲ್ಲಿನ ನವೋದಯ ಶಿಕ್ಷಕರ ತರಬೇತಿ ಕೇಂದ್ರದಲ್ಲಿ ಶ್ರಿಮಹರ್ಷಿ ವಾಲ್ಮೀಕಿ ಜಯಂತಿಯನ್ನು ಮಂಗಳವಾರ ಹಮ್ಮಿಕೊಳ್ಳಲಾಗಿತ್ತು.ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕೆಪಿಇಎಸ್‌ಡಿಎಡ್ ಕಾಲೇಜಿನ ಪ್ರಾಚಾರ್ಯ ಚಂದ್ರಾಯ ಬಾಡಿಯಾಲ್ ಮಾತನಾಡಿ, ವಿದ್ಯಾರ್ಥಿಗಳು ವಿಷಯ ಕಲಿಕೆಯಲ್ಲಿ ಶ್ರಿಮಹರ್ಷಿ ವಾಲ್ಮೀಕಿ ಅವರಿಗೆ ಇರುವಂಥ ಚಿಂತನಾ ಶಕ್ತಿ ಹಾಗೂ ಆಸಕ್ತಿಯನ್ನು ಹೊಂದಿರಬೇಕು ಎಂದು ತಿಳಿಸಿದರು.

ಅಧ್ಯಕ್ಷತೆಯನ್ನು ಪ್ರಾಚಾರ್ಯ ಪ್ರಾಣೇಶ ಕುಲಕರ್ಣಿ ವಹಿಸಿದ್ದರು.ಉಪನ್ಯಾಸಕರಾದ ಶಿವಕುಮಾರ ಪಾಟೀಲ್, ಬಸವಲಿಂಗಪ್ಪ, ಕೆ.ಎಲ್ ರೆಡ್ಡಿ, ಗಂಗಾಧರ ಹಾಗೂ ಪ್ರಥಮ, ದ್ವಿತೀಯ ವರ್ಷ ಪ್ರಶಿಕ್ಷಣಾರ್ಥಿಗಳು ಭಾಗವಹಿಸಿದ್ದರು. ಅಮೀನಾ ನಿರೂಪಿಸಿದರು. ರಮೇಶ ವಂದಿಸಿದರು.

ಮರ್ಚಟಹಾಳ ಗ್ರಾಮ: ತಾಲ್ಲೂಕಿ ಮರ್ಚೆಟಹಾಳ ಗ್ರಾಮ ಪಂಚಾಯಿತಿಯಲ್ಲಿ ಮಂಗಳವಾರ ಶ್ರಿಮಹರ್ಷಿ ವಾಲ್ಮೀಕಿ ಅವರ ಜಯಂತ್ಯುತ್ಸವ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗರೆಡ್ಡಿ ಅವರು ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.
ಪಿಡಿಒ ದತ್ತುಕುಮಾರ, ಕರವಸೂಲಿಗಾರ ಕೆ.ಹನುಮಂತ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT