ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಭ್ರಮದ ಶೋಭಾಯಾತ್ರೆ

Last Updated 15 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಸಂಘ ಪರಿವಾರದ ನೇತೃತ್ವದಲ್ಲಿ ನಡೆಯುತ್ತಿರುವ ದತ್ತ­ಮಾಲಾ ಅಭಿಯಾನ ಮತ್ತು ದತ್ತ ಜಯಂತಿ ಅಂಗವಾಗಿ ಭಾನುವಾರ ನಗರದಲ್ಲಿ ದತ್ತ ಮಾಲಾಧಾರಿಗಳು ವಿಜೃಂಭಣೆಯ ಶೋಭಾಯಾತ್ರೆ ನಡೆಸಿದರು.

ನಗರದ ಕಾಮಧೇನು ಗಣಪತಿ ದೇವಾ­ಲಯದಿಂದ ಆರಂಭವಾದ ಶೋಭಾ­ಯಾತ್ರೆ ಬಸವನಹಳ್ಳಿ ರಸ್ತೆ, ಹನುಮಂತಪ್ಪ ವೃತ್ತ, ಎಂ.ಜಿ.ರಸ್ತೆ ಮಾರ್ಗ­ವಾಗಿ ಆಜಾದ್ ಪಾರ್ಕ್ ವೃತ್ತ­ದವರೆಗೂ ನಡೆಯಿತು. ಕೇಸರಿ ಪಂಚೆ, ಕೇಸರಿ ಶಲ್ಯ ಧರಿಸಿದ್ದ ದತ್ತ ಮಾಲಾ­ಧಾರಿಗಳು ಕೈಯಲ್ಲಿ ಭಗವಾಧ್ವಜ ಹಿಡಿದು, ದತ್ತ ಭಜನೆ ಮಾಡುತ್ತಾ ಶೋಭಾಯಾತ್ರೆ ನಡೆಸಿದರು.

ಹೂವಿನಿಂದ ಅಲಂಕರಿಸಿದ ವಾಹನ­ದಲ್ಲಿ ಪ್ರತಿಷ್ಠಾಪಿಸಿದ್ದ ದತ್ತಾತ್ರೇಯರ ಮೂರ್ತಿ ಮತ್ತು ಗ್ರಾಮ ದೇವತೆಗಳ ಮೆರವಣಿಗೆ ಮಾಡಲಾಯಿತು. ಈ ಬಾರಿ 5 ಗ್ರಾಮ ದೇವತೆಗಳು ಮೆರ­ವಣಿಗೆಯಲ್ಲಿದ್ದವು.

ದತ್ತಾತ್ರೇಯರ ಉತ್ಸವ ಮೂರ್ತಿಗೆ ಮಾರ್ಗದುದ್ದಕ್ಕೂ ಅಲ್ಲಲ್ಲಿ ಭಕ್ತಾದಿಗಳು ಹೂವು, ಹಣ್ಣು, ತೆಂಗಿನ ಕಾಯಿ ಅರ್ಪಿಸಿ, ಪೂಜೆ ಸಲ್ಲಿಸಿ­ದರು. ಶೋಭಾಯಾತ್ರೆ ಸಾಗುತ್ತಿ­ದ್ದಾಗ ನಗರ ನಿವಾಸಿಗಳು ರಸ್ತೆಯ ಇಕ್ಕೆಲಗಳ ಅಂಗಡಿ ಮುಂಗಟ್ಟುಗಳ ಮುಂದೆ ಹಾಗೂ ಎತ್ತರದ ಕಟ್ಟಡಗಳ ಮೇಲೆ ನಿಂತು ಯಾತ್ರೆ ಕಣ್ತುಂಬಿಕೊಂಡರು.

ದತ್ತ ಜಯಂತಿಗೆ ಮುನ್ನಾ ದಿನ ನಡೆಯುವ ಶೋಭಾಯಾತ್ರೆಯಲ್ಲಿ ನಗರ ಸೇರಿದಂತೆ ಜಿಲ್ಲೆ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಿಂದ ಸಂಘ ಪರಿವಾರದ ಕಾರ್ಯಕರ್ತರು ಮತ್ತು ದತ್ತ ಮಾಲಾಧಾರಿಗಳು ಪಾಲ್ಗೊಂಡಿ­ದ್ದರು. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದವರ ಸಂಖ್ಯೆ ಕಡಿಮೆ ಇತ್ತು.

ಶೋಭಾಯಾತ್ರೆಯ ಮಾರ್ಗ­ದುದ್ದಕ್ಕೂ ಪೊಲೀಸ್ ಬಿಗಿಭದ್ರತೆ ಕಲ್ಪಿಸಲಾಗಿತ್ತು. ಯಾತ್ರೆಗಾಗಿ ಸಂಜೆ 4 ಗಂಟೆಯಿಂದ 7 ಗಂಟೆವರೆಗೂ ಎಂ.ಜಿ.­ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿ­ಸಲಾಗಿತ್ತು. ಆಜಾದ್ ಪಾರ್ಕ್‌ ವೃತ್ತ­ದಲ್ಲಿ ಧಾರ್ಮಿಕ ಸಭೆ ನಡೆಯಿತು.

ಬಜರಂಗದಳ ರಾಜ್ಯ ಸಂಚಾಲಕ ಸೂರ್ಯನಾರಾಯಣ, ಶಾಸಕ ಸಿ.ಟಿ.ರವಿ, ಸಂಘ ಪರಿವಾರದ ಮುಖಂಡರಾದ ಶಿವಶಂಕರ್, ಯೋಗೀಶ್ ರಾಜ್ ಅರಸ್, ಪ್ರೇಮ್‌ ಕಿರಣ್, ಸಿ.ಆರ್.ಪ್ರೇಮ್‌ಕುಮಾರ್, ಎಚ್.ಡಿ.ತಮ್ಮಯ್ಯ, ವರಸಿದ್ಧಿ  ವೇಣು­ಗೋಪಾಲ್ ಮತ್ತಿತರರು ಶೋಭಾ­ಯಾತ್ರೆ ಮುಂಚೂಣಿ­ಯಲ್ಲಿದ್ದರು.

ಇಂದು ಪಾದುಕೆ ದರ್ಶನ: ಒಂದು ವಾರದಿಂದ ದತ್ತ ಮಾಲೆ ಧರಿಸಿ ವ್ರತಧಾರಿಗಳಾಗಿರುವ ದತ್ತ ಭಕ್ತರು ಸೋಮವಾರ ಬೆಳಿಗ್ಗೆ ದತ್ತ ಪೀಠಕ್ಕೆ ಭೇಟಿ ನೀಡಿ, ದತ್ತ ಗುಹೆಯಲ್ಲಿರುವ ದತ್ತಾತ್ರೇಯರ ಪಾದುಕೆಗಳ ದರ್ಶನ ಪಡೆಯಲಿದ್ದಾರೆ. ಬೆಳಿಗ್ಗೆ 8ರಿಂದ ಸಂಜೆ 6ರವರೆಗೆ ಪಾದುಕೆಗಳ ದರ್ಶನಕ್ಕೆ ಜಿಲ್ಲಾಡಳಿತ ಅವಕಾಶ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT