ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಭ್ರಮದ ಸಂಗಮನಾಥ ರಥೋತ್ಸವ

Last Updated 22 ಏಪ್ರಿಲ್ 2011, 19:00 IST
ಅಕ್ಷರ ಗಾತ್ರ

ಕೂಡಲಸಂಗಮ: ವಿಶ್ವಗುರು ಬಸವಣ್ಣನವರ ಆರಾಧ್ಯದೈವ ಸಂಗಮನಾಥನ ರಥೋತ್ಸವವು ಸಡಗರ ಸಂಭ್ರಮದಿಂದ ಶುಕ್ರವಾರ ಸಂಜೆ ನಡೆಯಿತು.ರಾಜ್ಯದ ವಿವಿಧ ಭಾಗದ ಲಕ್ಷಾಂತರ ಭಕ್ತರು ರಥವನ್ನು ಎಳೆಯುವುದರ ಮೂಲಕ ಸಂಭ್ರಮಪಟ್ಟರು.

ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಧಾರವಾಡದ ಸರ್ವಧರ್ಮ ಸಮನ್ವಯ ಪೀಠದ ಸಂಗಮಾನಂದ ಸ್ವಾಮೀಜಿ, ಕೂಡಲಸಂಗಮ ಸಾರಂಗಮಠದ ಶಿವಾಚಾರ್ಯ ಸ್ವಾಮೀಜಿ, ಹುನಗುಂದ ಶಾಸಕ ದೊಡ್ಡನಗೌಡ ಪಾಟೀಲ, ಮಾಜಿ ಶಾಸಕಿ ಗೌರಮ್ಮ ಕಾಶಪ್ಪನವರ, ರಾಜ್ಯ ಸಹಕಾರಿ ಮಹಾಮಂಡಳದ ಎಲ್.ಎಂ. ಪಾಟೀಲ, ಕೂಡಲಸಂಗಮ ಅಭಿವೃದ್ಧಿ ಮಂಡಳಿಯ ವಿಶೇಷ ಆಯುಕ್ತ ಶಿವಾನಂದ ಜಾಮದಾರ, ಹಿರಿಯರಾದ ಬಸಪ್ಪ ಆಲೂರ, ಶರಣಪ್ಪ ಗಾಣಗೇರ ಮುಂತಾದವರು ಪಾಲ್ಗೊಂಡಿದ್ದರು. ರಥೋತ್ಸವದ ನಂತರ ಕೂಡಲಸಂಗಮ ಅಭಿವೃದ್ಧಿ ಮಂಡಳಿಯ ವತಿಯಿಂದ ಪಟಾಕಿಗಳ ಪ್ರದರ್ಶನ ನಡೆಯಿತು.

ಪಾದಯಾತ್ರೆ: ಸಂಗಮೇಶ್ವರ ಜಾತ್ರೆಗೆ ಗುರುವಾರ ಸಂಜೆ ಬಾಗಲಕೋಟೆಯಿಂದ ಮೆರವಣಿಗೆಯಲ್ಲಿ ಬಂಗಾರದ ಕಳಸ ಹೊತ್ತು ಹೊರಟ ಭಕ್ತರು ಶುಕ್ರವಾರ ಮುಂಜಾನೆ ಇಲ್ಲಿಗೆ ತಲುಪಿದರು.ಮಳೆಯಲ್ಲಿಯೇ ಇಡೀ ರಾತ್ರಿ ಪಾದಯಾತ್ರೆಮೂಲಕ ಬಂದ ಸುಮಾರು ಆರು ಸಾವಿರ ಭಕ್ತರಲ್ಲಿ ಮಹಿಳೆಯರು ಸುಮಾರು ಸಾವಿರದಷ್ಟಿದ್ದರು.

ಕಳಸ ದರ್ಶನ: ವಿವಿಧ ರಾಜ್ಯಗಳಿಂದ ಬಂದ ಲಕ್ಷಾಂತರ ಭಕ್ತರು ಸಂಗಮನಾಥ, ಸಂಗಮನಾಥನ ಬಂಗಾರದ ಕಳಸ, ವಿಶ್ವಗುರು ಬಸವಣ್ಣವರ ಐಕ್ಯಮಂಟಪದ ದರ್ಶನ ಪಡೆದರು.

ಬಾಗಲಕೋಟೆಯಿಂದ ಪಾದಯಾತ್ರೆಯಲ್ಲಿ ಹೊರಟ ಸಂಗಮನಾಥನ ಬಂಗಾರ ಕಳಸ ಕೂಡಲಸಂಗಮಕ್ಕೆ ಮುಂಜಾನೆ 9.30ಕ್ಕೆ ಆಗಮಿಸಿತು. ಪೂಜಾ ವಿಧಿಗಳನ್ನು ನೆರವೆರಿಸಿದ ನಂತರ ಸಂಗಮನಾಥನ ದೇವಾಲಯದಿಂದ ಗ್ರಾಮದ ಕಳಸದ ಕಟ್ಟಿಯವರೆಗೆ ಮೆರವಣಿಗೆ ನಡೆಯಿತು.

ಸಂಗಮೇಶ್ವರ ದೇವಾಲಯದ ಆವರಣದಲ್ಲಿ ಕೂಡಲಸಂಗಮದ ಗೂಳಿ ಬಸವೇಶ್ವರ ಭಜನಾ ಮಂಡಳಿ, ಚೌಡಕಮಲದಿನ್ನಿಯ ಮಾರುತೇಶ್ವರ ಭಜನಾ ಮಂಡಳಿ, ಹಿರೆಯರನಕೆರೆ ಬಸವೇಶ್ವರ ಭಜನಾ ಮಂಡಳಿ, ಹುಲ್ಲೂರ ರಾಮಲಿಂಗೇಶ್ವರ ಭಜನಾ ಮಂಡಳಿಯಿಂದ ಭಜನೆ ಮತ್ತು ಕರಡಿ ಮಜಲು ಕಾರ್ಯಕ್ರಮ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT