ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಭ್ರಮದ ಹೊಂಬುಜ ರಥೋತ್ಸವ

ಪಾರ್ಶ್ವನಾಥ, ಪದ್ಮಾವತಿ ದೇವಿಗೆ ಭಕ್ತರ ನಮನ
Last Updated 3 ಏಪ್ರಿಲ್ 2013, 8:42 IST
ಅಕ್ಷರ ಗಾತ್ರ

ರಿಪ್ಪನ್‌ಪೇಟೆ: ಜೈನರ ಪ್ರಸಿದ್ಧ ಯಾತ್ರಾ ಸ್ಥಳವಾದ ಹೊಂಬುಜ ಅತಿಶಯ ಮಹಾಕ್ಷೇತ್ರದಲ್ಲಿ ಮಂಗಳವಾರ ಭಗವಾನ್ ಪಾರ್ಶ್ವನಾಥ ಸ್ವಾಮಿ ಮತ್ತು ಮಹಾಮಾತೆ  ಪದ್ಮಾವತಿ ದೇವಿ ಅಮ್ಮನ ರಥೋತ್ಸವ ಮಂಗಳವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.

ಮಠದ ಪೀಠಾಧಿಕಾರಿ ದೇವೇಂದ್ರ ಕೀರ್ತಿಭಟ್ಟಾರಕ ಪಟ್ಟಾಚಾರ್ಯ ವರ್ಯ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ದೇವಸ್ಥಾನದ ಅರ್ಚಕ ಪದ್ಮರಾಜ್ ಪಂಡಿತ್ ಮತ್ತು ಪುರೋಹಿತ ವರ್ಗ ಮಾತೆ ಪದ್ಮಾವತಿ ದೇವಿಗೆ ಫಾಲ್ಗುಣ ಬಹುಳ ಸಪ್ತಮಿ ಮೂಲಾ ನಕ್ಷತ್ರದಲ್ಲಿ ನಿತ್ಯವಿಧಿ ಸಹಿತ ಮಹಾ ನೈವೇದ್ಯ ವಿಶೇಷ ಪೂಜೆ ಸಲ್ಲಿಸಿದರು.

ನಂತರ ದೇವಿ ಮೂರ್ತಿಯನ್ನು ದೇವಳದ ಆವರಣದಲ್ಲಿ ಪ್ರದಕ್ಷಣೆ ಹಾಕಿಸಿ, ಧಾರ್ಮಿಕ ವಿಧಿವಿಧಾನದಂತೆ ವಾದ್ಯಮೇಳದೊಂದಿಗೆ `ಯಕ್ಷಿ' ದೇವತೆಗಳಿಗೆ ಪೂಜೆ ಸಲ್ಲಿಸಿದರು.

ಮಧ್ಯಾಹ್ನ 1.50ಕ್ಕೆ ದೇವಿ ಪದ್ಮಾವತಿ ಉತ್ಸವ ಮೂರ್ತಿ ರಥಾರೋಹಣ ಆಗುತ್ತಿದ್ದಂತೆಯೇ ರಥಕ್ಕೆ ಸ್ವಾಮೀಜಿ ಚಾಲನೆ ನೀಡಿದರು. ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಆಗಮಿಸಿದ ಭಕ್ತರಿಂದ ಪದ್ಮಾವತಿ ದೇವಿ ಉಘೇ.., ಉಘೇ.., ಭಗವಾನ್ ಪಾರ್ಶ್ವನಾಥ ಸ್ವಾಮಿಜೀ  ಕೀ ಜೈ... ಎಂಬ ಉದ್ಘೋಷಗಳು ಮುಗಿಲು ಮುಟ್ಟಿದವು. 

ಮಠದ ಗಜರಾಜನೂ ಘೀಳಿಟ್ಟು ನಮಸ್ಕರಿಸಿ ಭಕ್ತಿಯನ್ನು ಪ್ರದರ್ಶಿಸಿದ. ಈ ಬಾರಿ ವಿಶೇಷವಾಗಿ ಅಲಂಕೃತಗೊಂಡ ಪಟ್ಟದ ಕುದುರೆ ರಥೋತ್ಸವದಲ್ಲಿ ಪಾಲ್ಗೊಂಡು ಮೆರಗು ನೀಡಿತ್ತು.

ಸುಡುಬಿಸಿಲು ಲೆಕ್ಕಿಸದೇ ಭಕ್ತರು ಜಾತ್ರೆಯ ಸೊಬಗನ್ನು ಸವಿದರು. ಸಂಜೆ 4ಕ್ಕೆ ರಥಬೀದಿಯಲ್ಲಿ ಸಾಗಿದ ರಥವು ಅಡ್ಡಗೇರಿ ಮೂಲಕ ಬನಶಂಕರಿ ದೇವಸ್ಥಾನ, ಗಣಪತಿ, ವೀರಾಂಜನೇಯ ದೇವಸ್ಥಾನ ಮಾರ್ಗವಾಗಿ ಶ್ರೀಮಠಕ್ಕೆ ಬಂದಿತು. ಮಾರ್ಗದ ಉದ್ದಕ್ಕೂ ತಳಿರು ತೋರಣಗಳಿಂದ ಶೃಂಗರಿಸಿ, ಮಹಿಳೆಯರು ರಂಗೋಲಿ ಇಟ್ಟು ಹಣ್ಣು ಕಾಯಿ ಸಮರ್ಪಿಸಿದರು.

ಮಠದ ಹೊರತಾಗಿ ಅರಳೀಕಟ್ಟೆ ಮನೆತನ ಹಾಗೂ ಸ್ನೇಹಿತರ ವರ್ಗದವರು ಪ್ರತಿ ವರ್ಷದಂತೆ, ಈ ಬಾರಿಯೂ ಸಾಮೂಹಿಕ ಅನ್ನಸಂತರ್ಪಣೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT