ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಭ್ರಮದಲ್ಲಿ ಕಿಕ್ಕೇರಮ್ಮ

Last Updated 15 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ಕಿಕ್ಕೇರಿ ಎಂದರೆ ಥಟ್ಟನೆ ನೆನಪಾಗುವುದು ಇಷ್ಟಾರ್ಥ ಸಿದ್ಧಿಯ ಶಕ್ತಿ ದೇವಿ ಕಿಕ್ಕೇರಮ್ಮನವರ ಆಲಯ. 5 ಅಡಿ ಎತ್ತರದ ಕೃಷ್ಣಶಿಲೆಯಲ್ಲಿ ನಿರ್ಮಿತವಾಗಿರುವ ಕಿಕ್ಕೇರಮ್ಮ ದೇವಿಗೆ ಉಜ್ಜಯಿನಿ ದೇವಿ, ಕಾಳಿಕಾದೇವಿ, ಲಕ್ಕಮ್ಮ, ಮಹಾಲಕ್ಷ್ಮೀ ಎಂಬ ವಿವಿಧ ನಾಮಗಳು. ತುಸು ಸನಿಹದಲ್ಲಿ ಶ್ರವಣಬೆಳಗೊಳದ ಬಾಹುಬಲಿ ಮೂರ್ತಿ ಇದ್ದರೆ, ದೇಗುಲದ ಮುಂದೆ ಗರುಡಗಂಬ, ಕಲ್ಯಾಣಿ, ಅಮಾನಿಕೆರೆ ಇವೆ. ಇವು ದೇಗುಲದ ರಮ್ಯ ನೋಟಕ್ಕೆ ಸಾಕ್ಷಿ. ಇಂತಹ ಪ್ರಾಚೀನ, ನಯನ ಮನೋಹರ ಕಿಕ್ಕೇರಿಯಲ್ಲಿ ನಾಳೆ ಉತ್ಸವ.

ಯುಗಾದಿ ಹಬ್ಬದಂದು ಜಾತ್ರಾ ಸಡಗರ ಆರಂಭವಾದರೆ, ರಥೋತ್ಸವ ನಡೆಯುವುದು ಸರಿಯಾಗಿ ಏಳನೆ ದಿನಕ್ಕೆ. ರಾಜ್ಯದ ವಿವಿಧೆಡೆಯಿಂದ ಸಹಸ್ರಾರು ಭಕ್ತರು ಸೇರುವುದು ವಿಶೇಷ. ಹೂವಿನ ಪಲ್ಲಕ್ಕಿ, ವಸಂತನ ಹಬ್ಬ, ತೆಪ್ಪೋತ್ಸವ ಎಲ್ಲವೂ ನೆನಪಿನಲ್ಲಿ ಉಳಿಯುವ ಅಪೂರ್ವ ರಸ ಘಳಿಗೆಗಳು. ಇಲ್ಲಿನ ಅರ್ಚಕರ ಕಟ್ಟುನಿಟ್ಟಿನ ವ್ರತಾಚರಣೆಯ ಆರಾಧನೆ ಇಡೀ ರಾಜ್ಯದಲ್ಲಿಯೇ ಮಾದರಿ.

ಸ್ಥಳ ಪುರಾಣ
ಹೆಬ್ಬಾರ ವಂಶಸ್ಥರು ವಿಜಯನಗರದಿಂದ ದೇವಿಯನ್ನು ಕರೆತರುತ್ತಿದ್ದರು. ತಾನು ಬರುವುದನ್ನು ಹಿಂದಿರುಗಿ ನೋಡಬಾರದು ಎಂದು ದೇವಿ ಹೇಳಿದ್ದಳು. ಆಕೆಯ ಗೆಜ್ಜೆ ಸಪ್ಪಳ ನಿಂತಿದ್ದರಿಂದ ಹೆಬ್ಬಾರರು ಹಿಂತಿರುಗಿ ನೋಡಿದರು. ಆದುದರಿಂದ ದೇವಿ ಅದೇ ಗ್ರಾಮದಲ್ಲಿಯೇ ನೆಲೆಸಿದಳು. ಇದೇ ಕಿಕ್ಕೇರಿ ಎನ್ನುತ್ತದೆ ಪುರಾಣ. ಜಾತ್ರೆಯ ಹಿಂದಿನ ದಿನ ಮಾತ್ರ ಬ್ರಾಹ್ಮಣರಿಗೆ ವಿಶೇಷ ಪೂಜೆ ಇಲ್ಲಿದೆ.

ಅಂದು ವಿದೇಶದಿಂದಲೂ ಕುಲಾರಾಧಕರು ಆರಾಧನೆಗೆ ಬರುವುದು ವಿಶೇಷ. ದೇಗುಲದಲ್ಲಿ ಮಂಗಳವಾರ, ಶುಕ್ರವಾರ ನಡೆಯುವ ಹೂವಿನ ಫಲ ಪ್ರಶ್ನೆ, ನವಜೋಡಿಗಳಿಗಾಗಿ ನಡೆಯುವ ವೀಳ್ಯೆದೆಲೆ ಪೂಜೆಗೆ ಬಲು ಮಹತ್ವವಿದೆ. ಬಲಗಡೆ ಹೂ ಪ್ರಸಾದವಾದರೆ ಜಯ ಖಚಿತ. ಇದಕ್ಕಾಗಿ ದೂರದ ಊರುಗಳಿಂದ ಬರುವ ಭಕ್ತರ ದಂಡೇ ಸಾಕ್ಷಿ. ಉಪವಾಸ ವ್ರತದಿಂದ ದೇವರನ್ನು ಆರಾಧಿಸುವ ಅರ್ಚಕ ಪದ್ಧತಿ ನಾಡಿನಲ್ಲಿಯೇ ವಿಶೇಷವಾಗಿದೆ. ಮಡಿಲಕ್ಕಿ ಎತ್ತುವ ಲಕ್ಕಮ್ಮನವರ ವ್ರತ, ಶುಕ್ರವಾರದ ಅನ್ನ ದಾಸೋಹ ಪ್ರಸಾದ ದೇಗುಲದ ನಿಷ್ಠೆಗೆ ಕನ್ನಡಿ.

ಬರಲು ಮಾರ್ಗ: ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನಲ್ಲಿನ ಕಿಕ್ಕೇರಿಯ ದೇವಿಯ ದರ್ಶನ ಮಾಡಲು ರಸ್ತೆ, ರೈಲು ಸಂಪರ್ಕವಿದೆ. ಮಂದಗೆರೆಯ ರೈಲು ನಿಲ್ದಾಣಕ್ಕೆ 7ಕಿ.ಮೀ ಹತ್ತಿರ. ಶ್ರವಣಬೆಳಗೂಳಕ್ಕೆ 15ಕಿ.ಮೀ, ಕೆ.ಆರ್.ಪೇಟೆಗೆ 15ಕಿ.ಮೀ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT