ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಭ್ರಮದಿಂದ ವಾರ್ಷಿಕೋತ್ಸವ ಆಚರಣೆ

Last Updated 16 ಸೆಪ್ಟೆಂಬರ್ 2011, 9:25 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ತಾಲ್ಲೂಕಿನ ಮಳ್ಳೂರು ಸುತ್ತಮುತ್ತಲ ಗ್ರಾಮಸ್ಥರಿಗೆ ಬುಧವಾರ ಸಂಜೆಯು ವಿಶೇಷ ಕ್ಷಣಗಳಿಂದ ಕೂಡಿತ್ತು. ಎಲ್ಲೆಡೆ ಸಂಭ್ರಮ - ಸಡಗರ -ಸಂತಸ ಆವರಿಸಿಕೊಂಡಿತ್ತು.

ಸೂರ್ಯ ಮುಳುಗಿ ಕತ್ತಲು ಅವರಿಸಿದ್ದರೂ ದೀಪ ಗಳ ನೆರವಿನಿಂದ ರಾತ್ರಿಯು ಮಿನುಗು ತಿತ್ತು. ಗಾಳಿ ಬೀಸಿದಾಗಲ್ಲೆಲ್ಲ ಮಿಸುಕಾಡುತ್ತಿದ್ದ ಎಲೆಗಳು ತಂಪಾದ ಹವೆಯನ್ನು ನೀಡುತಿದ್ದವು. ಒಟ್ಟಿನಲ್ಲಿ ಮಳ್ಳೂರು ಸಮೀಪದ ಸಾಯಿನಾಥ ಜ್ಞಾನಮಂದಿರದ ಆರನೇ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಈ ಎಲ್ಲ ಸಂಗತಿಗಳು ಇನ್ನಷ್ಟು ಮೆರಗು ತಂದಿದ್ದವು.

ಸೋಮವಾರದಿಂದ ಬುಧವಾರ ದವರೆಗೆ ಪ್ರತಿ ದಿನ ವೈವಿಧ್ಯಮಯ ಕಾರ್ಯಕ್ರಮಗಳನ್ನು  ಸಾಯಿನಾಥ ಜ್ಞಾನಮಂದಿರ ಉಣಬಡಿಸಿತು.

ಗಣ ಹೋಮ, ಸುದರ್ಶನ ಹೋಮ, ದುರ್ಗಾ ಹೋಮ, ಮಹಾಲಕ್ಷ್ಮೀ ದೇವಿ ವಿಗ್ರಹಕ್ಕೆ ಲಕ್ಷಾರ್ಚನೆ, ಸತ್ಯನಾರಾಯಣಸ್ವಾಮಿ ಪೂಜೆ, ಕಲಶಗಳ ಸಮೇತ ಲಕ್ಷ್ಮೀ ನರ ಸಿಂಹ ಸ್ವಾಮಿ ದೇವಾಲಯಕ್ಕೆ ಪಲ್ಲಕ್ಕಿ ಮೆರವಣಿಗೆ, ವಿವಿಧ ದೇವರುಗಳಿಗೆ ಕುಂಭಾಭಿಷೇಕ, ತೀರ್ಥ, ಪ್ರಸಾದ ವಿನಿಯೋಗಗಳು ನಡೆದವು. 

ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಶ್ರೀದೇವಿ ಭರತನಾಟ್ಯ ಪ್ರದರ್ಶಿಸಿದರೆ, ಯುಕ್ತ ಅಕಾಡೆಮಿ ತಂಡದವರು ನೃತ್ಯ, ಯೋಗ ಮತ್ತು ಜಂಬೆ ಪ್ರದರ್ಶನ ನಡೆಸಿ ಕೊಟ್ಟರು. ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಯಿತು.

 `ಚಿಕ್ಕಬಳ್ಳಾಪುರ ಜಿಲ್ಲೆಯವನಾದ ನನ್ನನ್ನು ನಾಡಿನ ಕಲಾಭಿಮಾನಿಗಳು ಪೋಷಿಸಿದ್ದಾರೆ. ನಮ್ಮ ಜಿಲ್ಲೆಯಲ್ಲಿ ಕಲಾವಿದರಿಗೆ ಕೊರತೆಯಿಲ್ಲ. ನಾಟ್ಯ ಪ್ರದರ್ಶನ ನೀಡಿರುವ ಮಕ್ಕಳು ಇದನ್ನು ಪುಷ್ಟೀಕರಿಸಿದ್ದಾರೆ.

ಮಳ್ಳೂರಿಗೆ ನಾನು ಹಲವು ಬಾರಿ ಭೇಟಿ ನೀಡಿದ್ದು, ಇಲ್ಲಿ ಆಪ್ತ ಸ್ನೇಹಿತರು ಇದ್ದಾರೆ. ಗ್ರಾಮೀಣ ಭಾಗದಲ್ಲಿದ್ದರೂ ಧಾರ್ಮಿಕ, ಆಧ್ಯಾತ್ಮ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ಈ ದೇವಾಲಯದಲ್ಲಿ ನಡೆಯುತ್ತಿರುವುದು ಹೆಮ್ಮೆಯ ಸಂಗತಿ~ ಎಂದು ನಟ ಶ್ರೀನಿವಾಸಮೂರ್ತಿ ತಿಳಿಸಿದರು.

`ಕಾರ್ಯಕರ್ತರು ಶ್ವೇತ ವಸ್ತ್ರಧಾರಿ ಗಳಾಗಿ ತಮ್ಮದೇ ಆದ ಚಟುವಟಿಕೆ ಗಳಲ್ಲಿ ನಿರತರಾಗಿದ್ದರೆ, ಭಕ್ತರು ಪ್ರಶಾಂತವಾದ ವಾತಾವರಣದಲ್ಲಿ ತಮ್ಮ ದುಗುಡವನ್ನು ಮರೆತು ಮನಸ್ಸಿಗೆ ಶಾಂತಿ ಮತ್ತು ನೆಮ್ಮದಿಯಿಂದ ಕಾಲ ಕಳೆಯುತ್ತಿದ್ದರು. ದೇವರನ್ನು ಮತ್ತು ದೇವಾಲಯವನ್ನು ವಿವಿಧ ಹೂಗಳಿಂದ ಅಲಂಕರಿಸಲಾಗಿತ್ತು.

ದೂರದ ಊರುಗಳಿಂದ ಆಗಮಿಸಿದ್ದ ಭಕ್ತರಿಗೆ ನೀರು, ಊಟ ಮುಂತಾದ ಉಪಚಾರ ಮಾಡಿದರು. ಶಿರಡಿಗೆ ಹೋಗಲು ಕಷ್ಟ ವಾಗುವವರಿಗೆ ನಮ್ಮಲ್ಲೇ ಶಿರಡಿಯ ದೇವರನ್ನು ಸಾಕ್ಷಾತ್ಕರಿಸಿಕೊಂಡಂತಹ ಅನುಭವ ಈ ದೇವಾಲಯದ್ಲ್ಲಲಿ ಆಗುತ್ತಿದೆ~ ಎಂದು ಶಿಕ್ಷಕ ದೇವರಾಜ್ ತಿಳಿಸಿದರು.

ನಟ ರಮೇಶ್‌ಭಟ್, ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಕಂಠ, ರಂಗನಾಥ ರಾವ್ ಸ್ವಾಮೀಜಿ, ಕೆ.ಎಸ್. ಮುನಿ ನಾರಾಯಣಪ್ಪ, ಎಂ.ನಾರಾಯಣ ಸ್ವಾಮಿ, ಜಿ.ಎಂ.ರಾಮರೆಡ್ಡಿ, ಎಂ.ವೆಂಕಟೇಶ್, ಎ.ಫಿರೋಜ್ ಅಹಮದ್, ಗೋಪಾಲಪ್ಪ, ಅಮರ್, ವೆಂಕಟರೆಡ್ಡಿ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT