ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಯಮ ಅಗತ್ಯ; ದೇವೇಗೌಡ ಸಲಹೆ

Last Updated 2 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕಾವೇರಿ ನದಿ ಪ್ರಾಧಿಕಾರದ (ಸಿಆರ್‌ಎ) ಅಧ್ಯಕ್ಷರೂ ಆದ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ದೆಹಲಿಯಲ್ಲಿ ಸೋಮವಾರ ಭೇಟಿ ಮಾಡಿ ನಗರಕ್ಕೆ ಬಂದ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಜತೆ ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಮಂಗಳವಾರ ಮಾತುಕತೆ ನಡೆಸಿದರು.

ಕುಮಾರಕೃಪಾ ಅತಿಥಿ ಗೃಹದಲ್ಲಿ ಗೌಡರನ್ನು ಬೊಮ್ಮಾಯಿ ಭೇಟಿ ಮಾಡಿದರು. ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ.ರಂಗನಾಥ ಸೇರಿದಂತೆ ಇತರ ಹಿರಿಯ ಅಧಿಕಾರಿಗಳು ಹಾಜರಿದ್ದರು. ಗೌಡರು ಭೇಟಿ ಸಂದರ್ಭದಲ್ಲಿ ಸಲಹೆ ನೀಡಿದ್ದು, ಸದ್ಯದಲ್ಲೇ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವ ಸಾಧ್ಯತೆ ಇದೆ.

`ರಾಜ್ಯದ ಜಲಾಶಯಗಳಿಂದ ತಮಿಳುನಾಡಿಗೆ ನೀರು ಬಿಟ್ಟಾಗ ರೈತರು ಮತ್ತು ಜನಸಾಮಾನ್ಯರಿಗೆ ಆಗುವ ನೋವು ನನಗೆ ತಿಳಿದಿದೆ. ಆದರೆ ನೀರು ಬಿಡುವ ಕ್ರಮ ಅನಿವಾರ್ಯವಾಗಿತ್ತು. ಪ್ರತಿಭಟನಾಕಾರರು ಸಂಯಮ ಪ್ರದರ್ಶಿಸಬೇಕು. ಪ್ರತಿಭಟನೆಯ ವೇಳೆ ಸಿಆರ್‌ಎ ನೀಡಿರುವ ತೀರ್ಪು ಅಥವಾ ಸುಪ್ರೀಂ ಕೋರ್ಟ್ ನೀಡಿರುವ ಆದೇಶವನ್ನು ಪ್ರಶ್ನಿಸಬಾರದು~ ಎಂದು ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಗೌಡರು ಕಿವಿಮಾತು ಹೇಳಿದರು.

`ನ್ಯಾಯಾಲಯದ ಆದೇಶ ಪ್ರಶ್ನಿಸುವುದರಿಂದ ರಾಜ್ಯಕ್ಕೆ ಕೆಟ್ಟ ಹೆಸರು ಬರುತ್ತದೆ. ಹಿಂದೆಯೂ ರಾಜ್ಯಕ್ಕೆ ಇದೇ ವಿಚಾರದಲ್ಲಿ ಕೆಟ್ಟ ಹೆಸರು ಬಂದಿದೆ. ಇದಕ್ಕೆ ಯಾರು ಕಾರಣರು ಎಂಬುದು ಗೊತ್ತಿದೆ. ರಾಜ್ಯದ ಕೆಲವೊಂದು ವಾಸ್ತವ ಸಂಗತಿಗಳು ಪ್ರಧಾನ ಮಂತ್ರಿಗಳಿಗೆ ತಿಳಿದಿರಲಿಲ್ಲ. ಆ ಕುರಿತು ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದೇನೆ~ ಎಂದು ಹೇಳಿದರು.

`ಪ್ರಧಾನ ಮಂತ್ರಿಗಳು ಒಳ್ಳೆಯ ನಿರ್ಧಾರ ಕೈಗೊಂಡಾಗ, ಅದರ ಖ್ಯಾತಿಯನ್ನೂ ಅವರೇ ಪಡೆದುಕೊಳ್ಳಲಿ. ರಾಜ್ಯ ಸರ್ಕಾರ ಕೈಗೊಂಡ ಕ್ರಮಗಳು ಎಷ್ಟು ಸರಿ, ಎಷ್ಟು ತಪ್ಪು ಎಂಬ ಕುರಿತು ಈ ಸಂದರ್ಭದಲ್ಲಿ ಚರ್ಚಿಸಲಾರೆ. ಆ ಕೆಲಸ ಮಾಡುವ ಸಮಯ ಇದಲ್ಲ. ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರತಿನಿಧಿಸುತ್ತಿರುವ ಹಿರಿಯ ವಕೀಲ ಫಾಲಿ ಎಸ್. ನಾರಿಮನ್ ಅವರನ್ನೂ ಸೋಮವಾರ ಭೇಟಿಯಾಗಿದ್ದೇನೆ. ರಾಜ್ಯದ ರೈತರ ಹಿತ ಕಾಯಲು ಅಗತ್ಯ ಕಾನೂನು ಹೋರಾಟ ಕೈಗೊಳ್ಳಬೇಕು~ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬೊಮ್ಮಾಯಿ ಮಾತನಾಡಿ, `ಕಾವೇರಿ ಜಲಾನಯನ ಪ್ರದೇಶದಲ್ಲಿ ಮೋಡ ಬಿತ್ತನೆಗೆ ಶೀಘ್ರ ಟೆಂಡರ್ ಕರೆಯಲಾಗುವುದು. ನಾನು ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ. ರಂಗನಾಥ್ ಅವರು ದೇವೇಗೌಡ ಜೊತೆ ವಿವಾದದ ಕುರಿತು ಚರ್ಚಿಸಿದ್ದೇವೆ. ಈ ವಿವಾದ ಕುರಿತು ಅವರಿಗೆ ಇರುವ ಮಾಹಿತಿ, ಕೋರ್ಟ್ ಹಿಂದೆ ನೀಡಿರುವ ಆದೇಶಗಳನ್ನು ಇಟ್ಟುಕೊಂಡು ದೇವೇಗೌಡರು ಸಾಕಷ್ಟು ಸೂಚನೆ ನೀಡಿದ್ದಾರೆ. ರಾಜ್ಯದ ರೈತರ ಹಿತ ಕಾಯುವ ವಿಚಾರದಲ್ಲಿ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು. ಈ ವಿಚಾರದಲ್ಲಿ ರಾಜಕೀಯ ಸಲ್ಲದು ಎಂಬ ಕುರಿತೂ ಮಾತುಕತೆ ನಡೆಸಿದ್ದೇವೆ~ ಎಂದು ತಿಳಿಸಿದರು.

ಮಠಕ್ಕೆ ಭೇಟಿ: ಇದಕ್ಕೂ ಮುನ್ನ ಸಚಿವರಾದ ಬಸವರಾಜ ಬೊಮ್ಮಾಯಿ ಮತ್ತು ಸಿ.ಪಿ.ಯೋಗೇಶ್ವರ್ ಅವರು ವಿಜಯನಗರದಲ್ಲಿನ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿ ಬಾಲಗಂಗಾಧರನಾಥ ಸ್ವಾಮೀಜಿ ಜತೆ ಮಾತುಕತೆ ನಡೆಸಿದರು.

ಕಾವೇರಿ ಹೋರಾಟ ಉಗ್ರ ಸ್ವರೂಪ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಭೇಟಿ ಹೆಚ್ಚು ಮಹತ್ವ ಪಡೆದುಕೊಂಡಿದೆ. ಸುಪ್ರೀಂಕೋರ್ಟ್ ಆದೇಶ ಪಾಲಿಸಬೇಕಾದ ಅನಿವಾರ್ಯ ಪರಿಸ್ಥಿತಿ ಬಗ್ಗೆಯೂ ಬೊಮ್ಮಾಯಿ ಅವರು ಸ್ವಾಮೀಜಿ ಅವರಿಗೆ ಮನವರಿಕೆ ಮಾಡಿಕೊಟ್ಟರು ಎನ್ನಲಾಗಿದೆ.  ಮೋಡ ಬಿತ್ತನೆಗೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಸಚಿವ ಬೊಮ್ಮಾಯಿ ಅವರು ಸ್ವಾಮೀಜಿಗಳಿಗೆ ವಿವರಿಸಿದರು ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT