ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಯಮದ ನಡೆ ಇರಲಿ

Last Updated 25 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಭಾರತ - ಚೀನಾ ಮಧ್ಯೆ ಹೊಸದೊಂದು ಬಿಕ್ಕಟ್ಟು ತಲೆದೋರಿದೆ. ಲಡಾಖ್ ಬಳಿ ಗಡಿಯೊಳಗೆ ಚೀನಾ ಸೇನೆಯ ಅತಿಕ್ರಮಣ ಈ ಬಿಕ್ಕಟ್ಟಿಗೆ ಕಾರಣ. ಪೂರ್ವಲಡಾಖ್‌ನ ದೌಲತ್ ಬೇಗ್ ಓಲ್ಡಿ (ಡಿಬಿಓ) ಪ್ರದೇಶದಲ್ಲಿ  ವಾಸ್ತವಿಕ ನಿಯಂತ್ರಣ ರೇಖೆಯನ್ನು ದಾಟಿ ಭಾರತದೊಳಗೆ 10 ಕಿಮೀ ವ್ಯಾಪ್ತಿಯಲ್ಲಿ ಚೀನಾ ಲಿಬರೇಷನ್ ಆರ್ಮಿ(ಪಿಎಲ್‌ಎ)ಗೆ ಸೇರಿದ ಸುಮಾರು 50 ಸೈನಿಕರು ಬೀಡುಬಿಟ್ಟಿದ್ದಾರೆ.

ಹಾಗೆಯೇ ಎರಡು ಚೀನಾ ಮಿಲಿಟರಿ ಹೆಲಿಕಾಪ್ಟರ್‌ಗಳು ಭಾರತ ವಾಯುಪ್ರದೇಶವನ್ನು ಪ್ರವೇಶಿಸಿ ಹಾರಾಟ ನಡೆಸಿವೆ. ಬೀಜಿಂಗ್‌ನಲ್ಲಿ ನಾಯಕತ್ವ ಬದಲಾವಣೆಯಾದ ನಂತರ ಸಂಭವಿಸುತ್ತಿರುವ ಮೊದಲ ಅತಿಕ್ರಮಣದ ಘಟನೆ ಇದು. ಚೀನಾದ ಹೊಸ ಪ್ರಧಾನಿ ಲಿ ಕೆಕಿಯಾಂಗ್ ಅವರು ಮುಂದಿನ ತಿಂಗಳು ಭಾರತಕ್ಕೆ ಭೇಟಿ ನೀಡಲಿದ್ದಾರೆ.

ಇದಕ್ಕಾಗಿ ನವದೆಹಲಿ ಹಾಗೂ ಬೀಜಿಂಗ್ ಸಜ್ಜಾಗುತ್ತಿರುವಾಗಲೇ ಈ ಬಿಕ್ಕಟ್ಟು ಎದುರಾಗಿದೆ. ಈ ವರ್ಷಾಂತ್ಯಕ್ಕೆ ಪ್ರಧಾನಿ ಮನಮೋಹನ್ ಸಿಂಗ್ ಅವರೂ ಚೀನಾಗೆ ಭೇಟಿ ನೀಡುವ ನಿರೀಕ್ಷೆ ಇದೆ. ಇಂತಹ ಸಂದರ್ಭದಲ್ಲಿ ಉದ್ಭವಿಸಿರುವ ಈ ಬಿಕ್ಕಟ್ಟನ್ನು  ಸಂಯಮಪೂರ್ಣವಾಗಿ ಶೀಘ್ರ ಶಮನಗೊಳಿಸುವತ್ತ ಹೆಜ್ಜೆ ಹಾಕುವುದು ಮುಖ್ಯ.      

ಈ ಬಗೆಯ ಗಡಿ ತಂಟೆಗಳು ಚೀನಾದ ವಿಚಾರದಲ್ಲಿ ಹೊಸದೇನಲ್ಲ. 1962ರಲ್ಲಿ ಉಭಯ ದೇಶಗಳ ಮಧ್ಯೆ ಅಲ್ಪಕಾಲದ ಯುದ್ಧವೂ ನಡೆದಿದೆ. ಆಗಾಗ್ಗೆ ಭಾರತದ ಗಡಿಯೊಳಗೆ ನುಸುಳಿ ಸಣ್ಣಪುಟ್ಟ ಕೀಟಲೆ ಮಾಡಿ  ಓಡಿ ಹೋಗುವ ಚೀನಿ ಸೈನಿಕರ ದುಸ್ಸಾಹಸ ಪ್ರಕರಣಗಳು ನಡೆಯುತ್ತಲೇ ಇರುತ್ತವೆ. ಭಾರತ - ಚೀನಾ ಯುದ್ಧವಾಗಿ 50 ವರ್ಷಗಳು ಕಳೆದಿದ್ದರೂ ಚೀನಾ ಜೊತೆಗೆ ಭಾರತಕ್ಕಿರುವ ಸೂಕ್ಷ್ಮ ಸಂಬಂಧವನ್ನು ಇಂತಹ ಘಟನೆಗಳು ನೆನಪಿಸುತ್ತಲೇ ಇರುತ್ತವೆ. ಈ ವಿಚಾರ ಸಂಕೀರ್ಣವಾದುದು.

ಏಕೆಂದರೆ ಎರಡೂ ದೇಶಗಳ ಗಡಿಗಳನ್ನು ನಿಖರವಾಗಿ ಗುರುತಿಸದಿರುವುದು ಸಮಸ್ಯೆಯ ಮೂಲ. 4000 ಕಿ.ಮೀ. ಉದ್ದದ ಗಡಿ ರೇಖೆಗಳನ್ನು ಸ್ಪಷ್ಟವಾಗಿ ಎಳೆಯುವವರೆಗೆ ಈ ವಿವಾದ ಇದ್ದೇ ಇರುತ್ತದೆ. ಹೀಗಾಗಿ ಉಭಯ ದೇಶಗಳು ಹೆಚ್ಚಿನ ಸಂಯಮ ಕಾಯ್ದುಕೊಂಡು ಯಥಾಸ್ಥಿತಿ ಮುಂದುವರಿಸುವುದು ಮುಖ್ಯ.

ವಿಶೇಷವಾಗಿ 1993ರ ಸೆಪ್ಟೆಂಬರ್‌ನಲ್ಲಿ ಭಾರತ - ಚೀನಾ ಗಡಿಯಲ್ಲಿನ ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ ಶಾಂತಿ ಕಾಪಾಡುವಿಕೆಯ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಇದನ್ನು ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಚೀನಾ ರಕ್ಷಣಾ ಸಚಿವ ಭಾರತಕ್ಕೆ ಭೇಟಿ ನೀಡಿದ ಸಂದರ್ಭದ್ಲ್ಲಲಿ ಬಿಡುಗಡೆ ಮಾಡಲಾದ ಜಂಟಿ ಸಂದೇಶದಲ್ಲೂ ಪುನರುಚ್ಚರಿಸಲಾಗಿತ್ತು.

ಗಡಿ ವಿವಾದವಿದ್ದರೂ ಉಭಯ ದೇಶಗಳ ನಡುವೆ ವ್ಯಾಪಾರ ಬಾಂಧವ್ಯ ಉನ್ನತ ಮಟ್ಟದಲ್ಲೇ ಇದೆ ಎಂಬುದು ಮಹತ್ವದ ಅಂಶ. ಹೀಗಾಗಿ ಈ ದ್ವಿಪಕ್ಷೀಯ ಬಾಂಧವ್ಯ ಬಲವರ್ಧನೆಗೆ ತೊಡಕಾಗಬಹುದಾದ ಗಡಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಉಭಯ ದೇಶಗಳೂ ಯತ್ನಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT