ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಸಂಯುಕ್ತ' ಸಂಸ್ಥಾನದೊಳು...

Last Updated 25 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ಸುರುಳಿ ಕೂದಲು. ರೆಪ್ಪೆಯ ಅಂದ ಹೆಚ್ಚಿಸಿದ ಕಣ್ಣುಕಪ್ಪು. ಸುಮ್ಮನೆ ನಿಲ್ಲಲಾರೆ ಎನ್ನುವ ಕಿವಿಯ ಲೋಲಾಕು. ಸೀರೆಗೂ ಜೀನ್ಸಿಗೂ ಒಪ್ಪುವಂತಹ ದೇಹ... ರೂಪದರ್ಶಿಯರನ್ನೂ ನಾಚಿಸುವ ಮೈಮಾಟ...

ಸಂಯುಕ್ತಾ ಹೊರನಾಡು ಎಂದರೆ ಅನೇಕರಿಗೆ ತಬ್ಬಿಬ್ಬಾಗಬಹುದು. ಆದರೆ ಅದೇ ಹೆಸರಿಗೆ `ಬೆಳವಾಡಿ' ಎಂಬ ಮನೆಹೆಸರು ಸೇರಿಕೊಂಡರೆ ಅಸ್ಪಷ್ಟತೆಯ ತೆರೆ ಸರಿಯುತ್ತದೆ. ಬೆಳವಾಡಿ ವಂಶದ ಮೂರನೇ ತಲೆಮಾರಿನ ಕುಡಿ ಸಂಯುಕ್ತಾ. ಅಜ್ಜಿ ಭಾರ್ಗವಿ ನಾರಾಯಣ್‌ರ ಮೊಮ್ಮಗಳು, ಸುಧಾ ಬೆಳವಾಡಿ ಅವರ ಮಗಳು.

ದಿಗಂತ್ ಅಭಿನಯದ `ಬರ್ಫಿ' ಚಿತ್ರದಲ್ಲಿ ದ್ವಿತೀಯ ನಾಯಕಿಯಾಗಿ ಸಂಯುಕ್ತಾ ಅಭಿನಯಿಸುತ್ತಿದ್ದಾರೆ. ಪುಟ್ಟ ಪಾತ್ರವಾದರೂ ಅದು ಮನಸ್ಸಿನಲ್ಲಿ ಅಚ್ಚಳಿಯದ ಪಾತ್ರವಂತೆ. ಕಾರ್ಪೊರೇಟ್ ಹುಡುಗಿಯಾಗಿ ಕಾಣಿಸಿಕೊಳ್ಳುತ್ತಿರುವ ಅವರಿಗೆ ಇಂದ್ರಜಿತ್ ಲಂಕೇಶ್ ಬಾಸ್. ಇಂದ್ರಜಿತ್ ಕೈ ಕೆಳಗೆ ದಿಗಂತ್ ಹಾಗೂ ಸಂಯುಕ್ತಾ ಕಂಪ್ಯೂಟರ್ ಟ್ಯಾಬ್ಲೆಟ್‌ಗಳನ್ನು ಬಡ ಮಕ್ಕಳಿಗೆ ಹಂಚುವ ಕಾರ್ಯ ಮಾಡುತ್ತಾರೆ.
ದಿಗಂತ್ ಸ್ನೇಹಿತೆಯಾಗಿ ಕಾಣಿಸಿಕೊಳ್ಳುತ್ತಿದ್ದೀರಾ ಎಂಬ ಪ್ರಶ್ನೆಗೆ ಅವರು ಒಗಟಾದರು.

ಚಿತ್ರ ನೋಡಿ ತಮ್ಮ ಪಾತ್ರದ ಕುರಿತು ತಿಳಿಯಿರಿ ಎನ್ನುತ್ತ ಗೋಪ್ಯತೆ ಕಾಯ್ದುಕೊಂಡರು. ಚಿತ್ರದಲ್ಲಿ ತಾಯಿ ಸುಧಾ ಕೂಡ ಇದ್ದಾರೆ. ಅವರು ದಿಗಂತ್ ಅಮ್ಮನ ಪಾತ್ರ ವಹಿಸಿದ್ದಾರೆ. ಅಲ್ಲಿಗೆ ಅಮ್ಮ- ಮಗಳು ಇಬ್ಬರನ್ನೂ ಒಂದೇ ಚಿತ್ರದಲ್ಲಿ ಕಾಣುವ ಭಾಗ್ಯ ಪ್ರೇಕ್ಷಕರದು. ಸಂಯುಕ್ತಾರಿಗೆ ನಟನೆ ಬೇರೆ, ಬದುಕು ಬೇರೆ ಅನ್ನಿಸಲಿಲ್ಲವಂತೆ.

ಏಕೆಂದರೆ ಮನೆಯಲ್ಲಿದ್ದವರಿಗೆ ಅಭಿನಯವೇ ಸರ್ವಸ್ವವೂ ಆಗಿತ್ತು. ಅಜ್ಜಿ ನಿರ್ದೇಶಿಸಿದ್ದ `ಉಂಡಾಡಿ ಗುಂಡ' ನಾಟಕದಲ್ಲಿ ಪಾರ್ಟು ಮಾಡಿದಾಗ ಅವರಿಗೆ ಕೇವಲ ಆರು ವರ್ಷ. ಆಮೇಲೆ ಅನೇಕ ನಾಟಕಗಳಲ್ಲಿ ಅಭಿನಯಿಸಿದರು. ಸುಧಾರ ಸೊಸೆಯಾಗಿ, ಮಗಳಾಗಿ ನಟಿಸಿದರು. ಬಿ.ಜಯಶ್ರೀ ಅವರ ಜತೆ ಸೇರಿ ನಾಟಕಗಳಿಗೆ ದುಡಿದರು.

ಈ ಮಧ್ಯೆ ನಿರ್ದೇಶಕ ಪವನ್‌ಕುಮಾರ್‌ರ `ಲೈಫು ಇಷ್ಟೇನೆ' ಚಿತ್ರಕ್ಕೆ ಆಹ್ವಾನ ಬಂತು. ಆಕೆ ಮೊದಲ ಬಾರಿ ಕ್ಯಾಮೆರಾ ಎದುರಿಸುವಾಗ ಅನೇಕರಿಗೆ ಅಚ್ಚರಿ. ಕಾರಣ ಕ್ಯಾಮೆರಾ ಭೀತಿ ಇಲ್ಲದೆ ಅನುಭವಿ ನಟಿಯಂತೆ ಎಲ್ಲವನ್ನೂ ನಿಭಾಯಿಸಿದ್ದರು. ಅಷ್ಟೇ ಆಸ್ಥೆಯಿಂದ ನಾಟಕಕ್ಕೂ ಸಿನಿಮಾಕ್ಕೂ ಇರುವ ವ್ಯತ್ಯಾಸಗಳನ್ನು ಅರಿತರು.

ಭಾವನೆಗಳ ಮೇಲೆ ನಿಯಂತ್ರಣ ಸಾಧಿಸುವ ಕಲೆ ಕಲಿತರು. ಇದಾದ ಮೇಲೆ ಅನೇಕ ಅವಕಾಶಗಳು ಅವರನ್ನು ಅರಸಿ ಬಂದವು. ಆದರೆ ಓದಿನ ಕಾರಣ ನೀಡಿ ಅವುಗಳಿಂದ ದೂರ ಉಳಿದರು. ಸಮೂಹ ಸಂವಹನ ವಿಷಯದಲ್ಲಿ ಪದವಿ ಪಡೆದಿರುವ ಸಂಯುಕ್ತಾರಿಗೆ ಕ್ರೈಸ್ಟ್ ಕಾಲೇಜಿನಲ್ಲಿ ಓದುತ್ತಿದ್ದ ವಾತಾವರಣವೂ ವರದಾನವಾಗಿ ಬಂತು. ಅಲ್ಲಿಂದಲೇ ವಿವಿಧ ರಂಗಪ್ರಯೋಗಗಳಲ್ಲಿ ತೊಡಗಿಕೊಂಡರು.

ಪದವಿ ನಂತರ ಅವರ ಬಳಿ ಅನೇಕ ಆಯ್ಕೆಗಳಿದ್ದವು. ಛಾಯಾಗ್ರಹಣ, ರಂಗಶಿಕ್ಷಣ ಮತ್ತಿತರ ವಲಯಗಳಲ್ಲಿ ತೊಡಗಿಕೊಳ್ಳಬಹುದಾದರೂ ಅವರ ಸದ್ಯದ ಕ್ಷೇತ್ರ ನಟನೆ. ಕನ್ನಡವನ್ನೂ ಇಂಗ್ಲಿಷ್‌ನಂತೆ ಮಾತನಾಡುವ ಸಂಯುಕ್ತಾರಿಗೆ ತಕ್ಕ ಪಾತ್ರ `ಬರ್ಫಿ'ಯಲ್ಲಿ ದೊರೆತಿದೆ. ಮನೆಯಲ್ಲಿ ಅಷ್ಟೊಂದು ಕನ್ನಡ ವಾತಾವರಣ ಇದ್ದರೂ ಹೀಗೇಕೆ ಎಂಬ ಅಚ್ಚರಿ ವ್ಯಕ್ತಪಡಿಸಿದಾಗ ತಮ್ಮ ಕಾನ್ವೆಂಟು ಕಲಿಕೆಯತ್ತ ಬೊಟ್ಟು ಮಾಡಿದರು.

ದೀಪಕ್ ತಿಮ್ಮಯ್ಯ ಅವರ ಚಿತ್ರವೊಂದರಲ್ಲಿ ಆಕೆ ಸದ್ಯ ತಲ್ಲೆನ. ನೈಜ ಪಾತ್ರಗಳೆಂದರೆ ಇಷ್ಟ ಎನ್ನುವ ಅವರು ಕಲಾತ್ಮಕ- ವಾಣಿಜ್ಯ ಸಿನಿಮಾಗಳ ನಡುವೆ ಸುಂದರ ಸೇತುವೆಯೊಂದು ನಿರ್ಮಾಣವಾಗಬೇಕು ಎಂಬ ಕನಸು ಕಾಣುತ್ತಾರೆ. ಗೊಂಬೆ ಥರ ಇರುವ ಪಾತ್ರಗಳು ಬೇಡವೇ ಬೇಡ ಎನ್ನುವಾಗ ಅಮ್ಮನ ನಟನಾ ವೈವಿಧ್ಯವನ್ನು ನೆನಪಿಸಿಕೊಳ್ಳುತ್ತಾರೆ. ಎಂಥ ಪಾತ್ರವಾದರೂ ಸರಿ ಆದರೆ ಬಂದು ಹೋಗುವ ನೆಪಮಾತ್ರದ ಪಾತ್ರಗಳನ್ನು ಒಲ್ಲೆ ಎಂಬ ದೃಢ ನಿರ್ಧಾರಕ್ಕೆ ಬಂದಿದ್ದಾರೆ.

ಮುಂದೊಂದು ದಿನ ರಂಗಶಾಲೆ ಕಟ್ಟುವ ಉತ್ಸಾಹದಲ್ಲಿರುವ ಆಕೆ ಅದಕ್ಕಾಗಿ ಈಗಾಗಲೇ ಭೂಮಿಕೆಯನ್ನು ಸಿದ್ಧಪಡಿಸಿಕೊಳ್ಳುತ್ತಿದ್ದಾರೆ. ಈಗಿನ್ನೂ ಇಪ್ಪತ್ತೊಂದರ ಹೊಸ್ತಿಲಲ್ಲಿದ್ದಾರೆ ಸಂಯುಕ್ತಾ. ಸದ್ಯಕ್ಕೆ `ಮದುವೆ- ಗಿದುವೆ' ಬಗ್ಗೆ ಅವರಿಗೆ ಯೋಚನೆಗಳಿಲ್ಲ. ಇನ್ನು ಆರೇಳು ವರ್ಷ ಸಾಂಸಾರಿಕ ಬಂಧನಕ್ಕೆ ತುತ್ತಾಗುವುದಿಲ್ಲ ಎಂಬುದು ಅವರು ಬದುಕಿನ ಖಡಕ್ ನಿರ್ಧಾರಗಳಲ್ಲಿ ಒಂದಂತೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT