ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂರಕ್ಷಣೆಯ ನಿರೀಕ್ಷೆಯಲ್ಲಿ ಐಸೂರಿನ ಶಿಲಾ ಮೂರ್ತಿ

Last Updated 21 ಏಪ್ರಿಲ್ 2013, 9:41 IST
ಅಕ್ಷರ ಗಾತ್ರ

ಸಿದ್ದಾಪುರ ತಾಲ್ಲೂಕಿನ ಐಸೂರು ಐತಿಹಾಸಿಕ ಹಿನ್ನೆಲೆ ಹೊಂದಿರುವ ಹಳ್ಳಿ. ಬಿಳಗಿಯನ್ನು ರಾಜಧಾನಿಯಾಗಿಸಿಕೊಂಡು ರಾಜ್ಯವಾಳಿದ ಬಿಳಗಿ ಅರಸರ ಮೊದಲಿನ ರಾಜಧಾನಿ ಐಸೂರು. ಸುಂದರ ಗಿರಿಶ್ರೇಣಿಗಳು, ದಟ್ಟ ಕಾಡು, ಹರಿಯುವ ಹೊಳೆ, ಹಸಿರಿನ ಪರಿಸರ ನೋಡಿಯೇ ಬಿಳಗಿ ಅರಸರ ಮೊದಲ ದೊರೆ ಐಸೂರನ್ನೇ ರಾಜಧಾನಿಯಾಗಿ ಆಯ್ಕೆ ಮಾಡಿಕೊಂಡಿರಬಹುದು ಎಂಬುದು ಇತಿಹಾಸ ತಜ್ಞರ ಅಭಿಪ್ರಾಯ.

ಐಸೂರಿನಲ್ಲಿರುವ ವೀರಭದ್ರ ಮತ್ತು ಗೌರಿ ಶಂಕರ ದೇವಾಲಯಗಳೂ ಪುರಾತನವಾದವುಗಳು. ಸ್ಥಳೀಯ ದೇವಾಲಯದ ಆವರಣಕ್ಕಿಂತ ಕೊಂಚ ದೂರದಲ್ಲಿ ಬಯಲಲ್ಲಿ ಬೆತ್ತಲಾಗಿ ನಿಂತಿರುವ  ಮೂರ್ತಿಯೊಂದು ಗಮನ ಸೆಳೆಯುತ್ತದೆ. ಕೊಂಚ ಎತ್ತರ ಸ್ಥಳದಲ್ಲಿರುವ ಈ ಮೂರ್ತಿಯ ಸುತ್ತಮುತ್ತಲೂ ಮರ-ಗಿಡಗಳು ಹಬ್ಬಿವೆ. ದಿಗಂಬರನಾಗಿರುವ ಈ ಮೂರ್ತಿಯ ಶರೀರದ ಮೇಲೆ ಶಿರವಿಲ್ಲ. ಕೇವಲ ಕುತ್ತಿಗೆಯವರೆಗೆ ಮಾತ್ರವಿರುವ ಈ `ಮುಂಡ ದೇವರ' ತಲೆಯ ಭಾಗ ಸಮೀಪದಲ್ಲಿ ಎಲ್ಲಿಯೂ ಕಾಣುವುದಿಲ್ಲ.

ಕೆಲವು ವರ್ಷಗಳ ಹಿಂದೆ ಈ ಮೂರ್ತಿಯ ಸಮೀಪವೇ ಅದರ ಶಿರವೂ ಬಿದ್ದುಕೊಂಡಿತ್ತು ಎಂದು ಸ್ಥಳೀಯರು ಹೇಳುತ್ತಾರೆ.ಒಟ್ಟಾರೆ ಈ ಭಗ್ನ ಮೂರ್ತಿಯ ಹಿನ್ನೆಲೆಯ ಬಗ್ಗೆ ಸ್ಥಳೀಯರಿಗೆ ಅರಿವಿಲ್ಲ. ಈ ವಿಗ್ರಹ ನೋಡಿದರೆ ಜೈನ ತೀರ್ಥಂಕರ ಮೂರ್ತಿ ಎಂದು ಊಹಿಸಬಹುದಾಗಿದೆ. ಐಸೂರಿನ ಅರಸರು ಆರಂಭದಲ್ಲಿ ಜೈನ ಮತಾವಲಂಬಿಗಳಾಗಿದ್ದರಿಂದ ಈ  ಮೂರ್ತಿ ಅವರ ಕಾಲದ್ದಾಗಿರಬಹುದು ಎಂಬುದು ಈ ಊಹೆಗೆ ಪುಷ್ಟಿ ನೀಡುತ್ತದೆ. ತಾಲ್ಲೂಕಿನ ಹಿರಿಯ ಸಂಶೋಧಕ ಅತ್ತಿಮುರುಡು ವಿಶ್ವೇಶ್ವರ ಹೆಗಡೆ, ಐಸೂರಿನ ಇತಿಹಾಸದ ಬಗ್ಗೆ ಬರೆದ ಲೇಖನವೊಂದರಲ್ಲಿ, `ಐಸೂರಿನಲ್ಲಿರುವ ಶೈವ ದೇವಾಲಯ ಸಮುಚ್ಚಯದ ನೈಋತ್ಯಕ್ಕೆ  ಆದಿನಾಥ ತೀರ್ಥಂಕರರ ಕಾಯೋತ್ಸರ್ಗ ಭಂಗಿಯ ಭಗ್ನ ವಿಗ್ರಹ ಸ್ಥಾಪಿತವಾಗಿದ್ದು, ಹಿಂದೆ ಬಸದಿಯಿದ್ದ ಲಕ್ಷಣಗಳಿವೆ' ಎಂದು ಹೇಳಿದ್ದಾರೆ. ಆದರೂ ಈ ಮೂರ್ತಿ ಭಗ್ನವಾಗಿದ್ದು ಏಕೆ ಮತ್ತು ಈ ಮೂರ್ತಿಯ ಶಿರ ಏನಾಯಿತು ಎಂಬ ಪ್ರಶ್ನೆಗಳು ಸಹಜವಾಗಿಯೇ ಉಂಟಾಗುತ್ತವೆ.
ಇವೆಲ್ಲವುಗಳ ನಡುವೆಯೂ ಪುರಾತನ ವಿಗ್ರಹವನ್ನು ಸಂರಕ್ಷಣೆ ಮಾಡುವ ಅಗತ್ಯವಿದೆ. ಐಸೂರಿನ ಈ ಶಿಲಾ ಮೂರ್ತಿಯನ್ನು ರಕ್ಷಿಸುವುದಕ್ಕೆ ಸಂಬಂಧಿಸಿದವರು ಗಮನ ಹರಿಸಬೇಕಾಗಿದೆ ಎನ್ನುವುದು ಸ್ಥಳೀಯರ ಒತ್ತಾಯ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT