ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವಹನ ಕೊರತೆ: ಸಾಮಾಜಿಕ ಸಮಸ್ಯೆಗಳಿಗೆ ಗಂಭೀರ ಸ್ವರೂಪ

Last Updated 16 ಫೆಬ್ರುವರಿ 2011, 19:40 IST
ಅಕ್ಷರ ಗಾತ್ರ

ಬೆಂಗಳೂರು: ‘ಒಂದು ನಿರ್ದಿಷ್ಟ ವಿಷಯ ಇಲ್ಲವೇ ಕ್ಷೇತ್ರದಲ್ಲಿ ಪರಿಣತಿ ಗಳಿಸಿದವರು, ಉಳಿದ ಕ್ಷೇತ್ರಗಳ ಬಗ್ಗೆ ಕನಿಷ್ಠ ಜ್ಞಾನ ಪಡೆಯಲೂ ಯತ್ನಿಸದ ಸ್ಥಿತಿ ಈಗ ನಿರ್ಮಾಣವಾಗುತ್ತಿದೆ. ಇದಕ್ಕೆ ಸಾಹಿತ್ಯ ಕ್ಷೇತ್ರ ಕೂಡ ಹೊರತಾಗಿಲ್ಲ’ ಎಂದು ವಿಮರ್ಶಕ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಹೇಳಿದರು.

ಅಂಕಿತ ಪುಸ್ತಕ ನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿಮರ್ಶಕ ಡಾ.ಸಿ.ಎನ್. ರಾಮಚಂದ್ರನ್ ಅವರ ‘ಕಸಾಂದ್ರ’ ಕಥಾಸಂಕಲನ, ‘ಶೋಧ’ ಕಾದಂಬರಿ ಹಾಗೂ ಪ್ರೊ.ಶ್ರೀಧರ ಬಳಗಾರ ಅವರ ‘ಕಾಲ ಪಲ್ಲಟ’ ಎಂಬ ಅಂಕಣ ಬರಹ ಕೃತಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.‘ಸಾಹಿತ್ಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಇಡಿಯಾಗಿ ನೋಡುವ ಬದಲು ಬಿಡಿಯಾಗಿ ನೋಡುವ ಮನೋಭಾವ ಹೆಚ್ಚುತ್ತಿದೆ’ ಎಂದರು.

‘ಸಂವಹನದ ಕೊರತೆ ಇಂದು ತೀವ್ರವಾಗಿದೆ. ಸಹಬಾಳ್ವೆ, ಸಾಮಾಜಿಕ ಸಂದರ್ಭಗಳಲ್ಲಿ ಭಾವನೆಯನ್ನು ಸೂಕ್ತವಾಗಿ ವ್ಯಕ್ತಪಡಿಸದ ಕಾರಣ ಸಮಸ್ಯೆಗಳು ಗಂಭೀರ ಸ್ವರೂಪ ಪಡೆಯುತ್ತವೆ. ಸಂವಹನದ ಸಮಸ್ಯೆಗೆ ಎರಡು ಕಾರಣ ಎನ್ನಬಹುದು. ವ್ಯಕ್ತಿತ್ವದ ನೆಲೆಯಲ್ಲೇ ಸಂವಹನ ಸಮಸ್ಯೆಯಿದ್ದರೆ, ಭಾಷಾ ಬಳಕೆಯಲ್ಲೂ ಲೋಪವಿರಬಹುದು. ಸಂವಹನವೇ ಇಷ್ಟು ಕಷ್ಟಕರವಾಗಿರುವಾಗ ಸತ್ಯ ಹೇಳುವುದು ಇನ್ನೂ ಸಂಕೀರ್ಣ. ಈ ಬಗ್ಗೆ ರಾಮಚಂದ್ರನ್ ಅವರು ವಿವರವಾಗಿ ನಿರೂಪಿಸಿದ್ದಾರೆ’ ಎಂದು ಹೇಳಿದರು.

ಕೃತಿ ಬಿಡುಗಡೆಗೊಳಿಸಿದ ನಿಘಂಟುತಜ್ಞ ಪ್ರೊ.ಜಿ.ವೆಂಕಟಸುಬ್ಬಯ್ಯ, ‘ರಾಮಚಂದ್ರನ್ ಅವರ ಸಣ್ಣ ಕತೆಗಳ ಬರವಣಿಗೆ ಶೈಲಿ ಆಕರ್ಷಕವಾಗಿದೆ.30 ವರ್ಷಗಳ ಹಿಂದೆ ಬಿಡುಗಡೆಯಾಗಿದ್ದ ‘ಶೋಧ’ ಕೃತಿಯನ್ನು ಈಗ ಓದಿದರೂ ನನ್ನ ಜೀವನದಲ್ಲಿ ಒಂದು ಹಂತದಲ್ಲಿ ನಡೆಸಿದ ಹುಟುಕಾಟಗಳ ನೆನಪಾಗುತ್ತದೆ. ಎಲ್ಲ ಕೃತಿಗಳು ಉತ್ತಮವಾಗಿ ಮೂಡಿಬಂದಿವೆ’ ಎಂದರು.ಸಾಹಿತಿ ಡಾ.ಗಿರಡ್ಡಿ ಗೋವಿಂದರಾಜ, ಡಾ.ಸಿ.ಎನ್. ರಾಮಚಂದ್ರನ್, ಪ್ರೊ.ಶ್ರೀಧರ ಬಳಗಾರ, ಅಂಕಿತ ಪುಸ್ತಕದ ಪ್ರಕಾಶ್ ಕಂಬತ್ತಳ್ಳಿ ಉಪಸ್ಥಿತರಿದ್ದರು.ಮಾತನಾಡಿ, ‘ರಾಮಚಂದ್ರನ್ ಅವರ ಕತೆಗಳು ನವ್ಯಕಾಲದ ಕತೆಗಳಂತಿದ್ದು, ಸಂದಿಗ್ಧದಲ್ಲೇ ಅಂತ್ಯವಾಗುತ್ತವೆ. ವಿಮರ್ಶಕರಾಗಿದ್ದವರು ಬರೆದಿರುವ ಈ ಕತೆಗಳು ಉತ್ತಮವಾಗಿವೆ’ ಎಂದರು.

‘ಆಧುನಿಕತೆಯ ಸಮಸ್ಯೆಗಳಿಗೆ ಸಾಹಿತ್ಯ ಪರಿಹಾರ ನೀಡದಿದ್ದರೂ ಆ ಸಮಸ್ಯೆಗಳ ಬಗ್ಗೆ ಎಚ್ಚರಿಕೆ ನೀಡಬಹುದು. ಇದನ್ನು ರಾಮಚಂದ್ರನ್ ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಹಾಗೆಯೇ ಶ್ರೀಧರ ಅವರ ಅಂಕಣ ಬರಹ ಚೆನ್ನಾಗಿ ಮೂಡಿಬಂದಿದೆ. ಸಣ್ಣ ಕತೆಗಳಲ್ಲಿ ಹೇಳುವುದನ್ನು ವೈಚಾರಿಕ ನೆಲೆಗಟ್ಟಿನಲ್ಲಿ ಉತ್ತಮವಾಗಿ ನಿರೂಪಿಸಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT