ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವಹನ ತಾಣಗಳ ದುಷ್ಪರಿಣಾಮಗಳು...

Last Updated 23 ಅಕ್ಟೋಬರ್ 2010, 18:30 IST
ಅಕ್ಷರ ಗಾತ್ರ

ಫೇಸ್‌ಬುಕ್, ಆರ್ಕುಟ್ ಸೇರಿದಂತೆ ವಿವಿಧ ಸಂವಹನ ತಾಣಗಳು ಎಲ್ಲರ ಮೇಲೂ ಗಾಢ ಪ್ರಭಾವ ಬೀರುತ್ತಿವೆ. ಕೆಲವರಂತೂ ಈ ತಾಣಗಳ ದಾಸರಾಗಿ ಬಿಟ್ಟಿದ್ದಾರೆ. ಫೇಸ್‌ಬುಕ್, ಆರ್ಕುಟ್, ಟ್ವಿಟರ್ ತಾಣಗಳಿಗೆ ದಿನಕ್ಕೊಮ್ಮೆ ಭೇಟಿ ನೀಡಿ ಗೆಳೆಯರೊಂದಿಗೆ, ಅಪರಿಚಿತರೊಂದಿಗೆ ಹರಟದಿದ್ದರೆ ಅವರ ಮನಸ್ಸು ತಳಮಳಗೊಳ್ಳುತ್ತದೆ.

ಅಲ್ಲದೇ ಏನೋ ಕಳೆದುಕೊಂಡಂತಹ ಅನುಭವ. ಸಾಮಾಜಿಕ ಸಂವಹನ ತಾಣಗಳಿಂದ ಸಾಕಷ್ಟು ಮಾಹಿತಿ ಸಿಗುತ್ತದೆ. ಹಾಗೆಯೇ ನಮ್ಮ ಜ್ಞಾನ ಭಂಡಾರವೂ ಹೆಚ್ಚುತ್ತದೆ ಎಂಬುದೇನೋ ನಿಜ. ಆದರೆ, ಅದರಿಂದಾಗುವ ದುಷ್ಪರಿಣಾಮಗಳು ಅಷ್ಟಿಷ್ಟಲ್ಲ. ಕೆಟ್ಟ ವಿಷಯಗಳತ್ತ ಹುಚ್ಚುಕೋಡಿ ಮನಸ್ಸು ಹರಿಯುತ್ತದೆ. ಸಾಮಾನ್ಯವಾಗಿ ಒಳ್ಳೆಯ ವಿಷಯಗಳಿಗಿಂತ ಕೆಟ್ಟ ಸಂಗತಿಗಳಿಗೆ ಎಲ್ಲರೂ ಮಾರು ಹೋಗುತ್ತಾರೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. 

ದೇಶದಲ್ಲಿ ಸದ್ಯ ಫೇಸ್‌ಬುಕ್ ತಾಣ  ಬಳಸುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ವಿಶ್ವದ ಇತರ ರಾಷ್ಟ್ರಗಳಿಗಿಂತ ಭಾರತದಲ್ಲಿ ಸಂವಹನ ತಾಣಗಳನ್ನು ಬಳಸುತ್ತಿರುವವರ ಸಂಖ್ಯೆ ಅಧಿಕ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಸಂವಹನ ತಾಣಗಳನ್ನು ಬಳಸುವ ಮಕ್ಕಳ ಸಂಖ್ಯೆಯೂ ದ್ವಿಗುಣಗೊಳ್ಳುತ್ತಿದೆ. ಮಕ್ಕಳು ಬ್ಲಾಗ್‌ಗಳ ಅಡಿಯಾಳಾಗಿದ್ದಾರೆ. ಸನ್ನಡತೆ ಕಲಿಯಬೇಕಾದ ವಯಸ್ಸಿನಲ್ಲಿ ಕೆಟ್ಟ ವಿಚಾರಗಳನ್ನು ಮನಸ್ಸಿನಲ್ಲಿ ತುಂಬಿಕೊಳ್ಳುತ್ತಿದ್ದಾರೆ.

ಇದಕ್ಕೆ ಉದಾಹರಣೆ ಚಂಡೀಗಢದ ವಿವೇಕ ಪ್ರೌಢಶಾಲೆಯ ವಿದ್ಯಾರ್ಥಿಗಳು ಫೇಸ್‌ಬುಕ್‌ನಲ್ಲಿ ಶಾಲೆಯ ಶಿಕ್ಷಕಿಯೊಬ್ಬರ ವ್ಯಕ್ತಿತ್ವಕ್ಕೆ ಚ್ಯುತಿ ಉಂಟಾಗುವಂತೆ ಅವಹೇಳನಕಾರಿ ಶಬ್ದಗಳನ್ನು ಬಳಸಿ ನಿಂದಿಸಿದ್ದರು. ಇದಕ್ಕೆ ಆತನ ಸಹಪಾಠಿಗಳು ಕುಮ್ಮಕ್ಕು ನೀಡಿದ್ದರು. ಪರಿಣಾಮ ಶಾಲೆಯ 16 ವಿದ್ಯಾರ್ಥಿಗಳು ಅಮಾನತುಗೊಂಡ ಪ್ರಕರಣ ನಮ್ಮ ಕಣ್ಮುಂದೆಯೇ ಇದೆ. ಇದಕ್ಕೆ  ಗಣಿತ ವಿಷಯದಲ್ಲಿ ಶಿಕ್ಷಕಿಯು ಇವರಿಗೆ ಕಡಿಮೆ ಅಂಕ ನೀಡಿರುವುದೇ ಕಾರಣ. ಕಾಲ ಕ್ರಮೇಣ ಶಾಲಾ ಮಕ್ಕಳ ಮನಸ್ಥಿತಿಯಲ್ಲಿ ಬದಲಾವಣೆಯಾಗುತ್ತಿದೆ ಎಂಬುದಕ್ಕೆ ಇದೇ ಸಾಕ್ಷಿ.

ಪ್ರೌಢಶಾಲೆಯ ವಿದ್ಯಾರ್ಥಿ ಅಸಫ್ ಪರ್ವೀಜ್ ಅಂತರ್ಜಾಲದಲ್ಲಿ ಅಸಭ್ಯವಾದಂತಹ ದೃಶ್ಯಗಳನ್ನು ಟೆಸ್ಟ್ ಕ್ರಿಕೆಟ್‌ನ ಸ್ಕೋರ್‌ನೊಂದಿಗೆ ಕಳುಹಿಸಿದ್ದ. ಶಾಲೆಯ ಹಿರಿಯ ವಿದ್ಯಾರ್ಥಿಗಳು ನಿರಂತರವಾಗಿ ಇಂತಹ ದೃಶ್ಯಗಳನ್ನು ಕಳುಹಿಸುತ್ತಿದ್ದರು. ಸಾಮಾಜಿಕ ಸಂವಹನ ತಾಣಗಳು ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕವಾಗಿವೆ ಎಂಬುದು ಇದರಿಂದ ವ್ಯಕ್ತವಾಗುತ್ತದೆ.

ಆಧುನಿಕ ತಂತ್ರಜ್ಞಾನಗಳನ್ನು ಸುಲಲಿತವಾಗಿ ಬಳಸುವ ಚಾಕಚಕ್ಯತೆಯನ್ನು ಇಂದಿನ ಯುವ ಸಮೂಹ ಕರಗತ ಮಾಡಿಕೊಂಡಿದೆ. ಇದು ಏನೆಲ್ಲಾ ಅವಾಂತರಗಳ ಸೃಷ್ಟಿಗೆ ಕಾರಣವಾಗುತ್ತದೆ ಎಂಬುದು ಈ ಘಟನೆಗಳಿಂದ ಸ್ಪಷ್ಟವಾಗುತ್ತದೆ. ಅಲ್ಲದೇ ಎರಡು ವರ್ಷಗಳ ಒಳಗಿನ ಶೇಕಡ 82ರಷ್ಟು ಮಕ್ಕಳು ಇಂದು ಅಂತರ್ಜಾಲದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಫೇಸ್‌ಬುಕ್‌ನ ವೆಬ್‌ಸೈಟ್‌ನಲ್ಲಿ ಮಕ್ಕಳ ಚಿತ್ರಗಳ ಹಂಚಿಕೊಳ್ಳುವಿಕೆ ವ್ಯಾಪಕವಾಗುತ್ತಿದೆ. 10 ವಿವಿಧ ರಾಷ್ಟ್ರಗಳ ಶೇಕಡ 82ರಷ್ಟು ಮಕ್ಕಳು ಕೇವಲ ಎರಡು ವರ್ಷಗಳಲ್ಲೇ ಅಂತರ್ಜಾಲಕ್ಕೆ ಅಡಿ ಇಡುತ್ತಿದ್ದಾರೆ ಎಂಬುದು ಅಂತರ್ಜಾಲ ಭದ್ರತಾ ಸಂಸ್ಥೆಯಾದ ಎ.ವಿ.ಜಿ ನಡೆಸಿರುವ ಸಂಶೋಧನೆಯಿಂದ ತಿಳಿದು ಬಂದಿದೆ.

ಅಮೆರಿಕದ ಎರಡು ವರ್ಷ ವಯೋಮಾನದ ಶೇಕಡ 92ರಷ್ಟು ಪುಟಾಣಿಗಳ ಅಂತರ್ಜಾಲದಲ್ಲಿ ಭಾವಚಿತ್ರಗಳನ್ನು ಅಂತರ್ಜಾಲಕ್ಕೆ ಹಾಕಲಾಗುತ್ತಿದೆ.ನ್ಯೂಜಿಲೆಂಡ್‌ನಲ್ಲಿ ಈ ಟ್ರೆಂಡ್ ಶೇ. 91ರಷ್ಟಿದೆ. ಕೆನಡಾ ಮತ್ತು ಆಸ್ಟ್ರೇಲಿಯಾಗಳಲ್ಲಿ ಇದು ಸ್ವಲ್ಪ ಮಟ್ಟಿಗೆ ಕಡಿಮೆ ಇದೆ. ಫ್ರಾನ್ಸ್, ಜರ್ಮನಿ, ಸ್ಪೈನ್ ಮತ್ತು ಇಟಲಿಯಲ್ಲೂ ಸಂಶೋಧನೆ ನಡೆಸಲಾಗಿದ್ದು, ಜಪಾನ್‌ನಲ್ಲಿನ ಅರ್ಧದಷ್ಟೂ ಮಕ್ಕಳ ಭಾವಚಿತ್ರಗಳು ಅಂತರ್ಜಾಲದಲ್ಲಿ ಕಾಣಿಸಿಕೊಳ್ಳುತ್ತಿವೆ.

ಜೊಗ್‌ಬೇ ಇಂಟರ್‌ನ್ಯಾಷನಲ್ ಸಂಸ್ಥೆಯು ಜಗತ್ತಿನ ವಿವಿಧ ರಾಷ್ಟ್ರಗಳ 2,200 ಮಹಿಳೆಯರನ್ನು ಸಂಶೋಧನೆಗೆ ಒಳಪಡಿಸಿದಾಗ ಶೇಕಡ 33 ರಷ್ಟು ತಾಯಂದಿರು ತಮ್ಮ ಎಳೆಯ ಮಕ್ಕಳ ಭಾವಚಿತ್ರಗಳನ್ನು ಅಂತರ್ಜಾಲದಲ್ಲಿ ಹಾಕುತ್ತಾರೆ. ಆ ನಂತರ ಇತರ ಕುಟುಂಬದವರು ಆ ಮಗುವಿನ ಚಿತ್ರಗಳನ್ನು ಹಂಚಿಕೊಳ್ಳಲು ಬಯಸುತ್ತಾರೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

ಪ್ರತಿಯೊಬ್ಬರೂ ಮುದ್ದಾದ ಮಗುವಿನ ಭಾವಚಿತ್ರಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳಲು ಇಷ್ಟ ಪಡುತ್ತಾರೆ. ಅಲ್ಲದೇ ಮಕ್ಕಳೂ ಸಹ ಅತಿ ಹೆಚ್ಚಿನ ಮಾಹಿತಿಗಳನ್ನು ಅಂತರ್ಜಾಲ ಮತ್ತು ಸಾಮಾಜಿಕ ಸಂವಹನ ತಾಣಗಳಲ್ಲಿ ವಿನಿಮಯ ಮಾಡಿಕೊಳ್ಳಲು ಬಯಸುತ್ತಾರೆ.ಶೇಕಡ 75ರಷ್ಟು ಮಕ್ಕಳು ಅಂತರ್ಜಾಲದಲ್ಲಿ ತಮ್ಮ ಖಾಸಗಿ ವಿಷಯಗಳನ್ನು ಹಂಚಿಕೊಳ್ಳಲು ಬಯಸುತ್ತಾರೆ. ಸಂವಹನ ತಾಣಗಳು ಜೀವನದ ಖಾಸಗಿ ವಿಷಯಗಳನ್ನು ಬೆತ್ತಲುಗೊಳಿಸುತ್ತಿವೆ.
     

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT