ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವಾದ: ಅವಮಾನ ಸನ್ಮಾನ!

Last Updated 5 ಫೆಬ್ರುವರಿ 2011, 18:30 IST
ಅಕ್ಷರ ಗಾತ್ರ

16.1.2011ರ ಪ್ರಜಾವಾಣಿ ಸಾಪ್ತಾಹಿಕದಲ್ಲಿ ‘ಹರಕೆ ಹರಾಜು’ ಎನ್ನುವ ಅಕ್ಷರ ಅವರ ಚಿಂತನ ಬೌದ್ಧಿಕ ಪ್ರೌಢಿಮೆಯ ಪ್ರತೀಕದಂತಿದೆ. ವಿಭಿನ್ನ ಕ್ಷೇತ್ರಗಳ ಆಚರಣೆ ಕುರಿತ ನೋಟ ಅಲ್ಲಿದೆ. ‘ಹರಕೆ’ ಧಾರ್ಮಿಕ ಕ್ಷೇತ್ರಕ್ಕೆ, ‘ಹರಾಜು’ ಆರ್ಥಿಕ ಕ್ಷೇತ್ರಕ್ಕೆ ಸಂಬಂಧಿಸಿದ್ದು. ಇವುಗಳ ಬಗೆಗಿನ ವರದಿಗಳು ಚಿಂತನೆಗೆ ತೊಡಗಿಸಿವೆ ಎಂದು ಅಕ್ಷರ ಅವರೇ ಹೇಳಿಕೊಂಡಿದ್ದಾರೆ. ಆದರೆ ಆ ಚಿಂತನೆ ಆರೋಗ್ಯಕರವಾಗಿದೆಯೇ ಎನ್ನುವುದು ನಮ್ಮ ಪ್ರಶ್ನೆ.

ಎಂಜಲೆಲೆಯ ಮೇಲೆ ಉರುಳಾಡುವುದನ್ನು ಪೌರೋಹಿತ್ಯ ಪರಂಪರೆಯ ವಾರಸುದಾರರು ಸಮರ್ಥಿಸುವುದು ಅಸಹಜವೇನಲ್ಲ. ಅವರ ಆಲೋಚನೆಗಳು ಅದಕ್ಕೆ ಪೂರಕವಾಗಿರಬಲ್ಲವೇ ಹೊರತು ಅದೊಂದು ಅಜ್ಞಾನ, ಧಾರ್ಮಿಕ ಮೌಢ್ಯ, ಸುಲಿಗೆಯ ಸಾಧನ ಎಂದು ಹೇಳಲು ಖಂಡಿತ ಸಾಧ್ಯವಿಲ್ಲ. ಅವರಿಂದ ಅದನ್ನು ನಿರೀಕ್ಷಿಸುವುದು ಸಾಧ್ಯವಾಗದ ಮಾತು.

ಕಳವು ಮಾಡುವುದು ಅವಮಾನ ಎನ್ನುವುದು ಸಾರ್ವತ್ರಿಕ ಮೌಲ್ಯ. ಅದನ್ನು ಭಾಷಿಕ, ಸಾಂಸ್ಕೃತಿಕ ನೆಲೆಯಲ್ಲಿ ನೋಡಿದರೆ ಅದು ಸಾರ್ವತ್ರಿಕ ಮೌಲ್ಯವಾಗುವುದು ಅನುಮಾನ. ಒಂದು ಧಾರ್ಮಿಕ ಆಚರಣೆ ಒಂದು ವರ್ಗದ ಜನರಿಗೆ ಮೌಲ್ಯವಾಗಿ ಕಂಡರೆ ಹಲವು ವರ್ಗದ ಜನರಿಗೆ ಅಂಧಾನುಕರಣೆ, ಅಮಾನವೀಯತೆ, ಅವಮಾನ ಎನ್ನಿಸುವುದು. ಉದಾ: ಬಲಿ ಪದ್ಧತಿ. ಹಾಗಂತ ಅದನ್ನು ಮೌಲ್ಯವೆಂದು ಪರಿಗಣಿಸಲು, ಪ್ರೋತ್ಸಾಹಿಸಲು ಸಾಧ್ಯವಿಲ್ಲ.

ಸ್ವಸಂಸ್ಕೃತಿಯೊಳಗಿನ ಕೆಲವು ಆಚರಣೆಗಳು ಅದಕ್ಕೆ ಸಂಬಂಧಿಸಿದವರಿಗೆ ಸಮ್ಮತವಾಗುವುದು ಸಹಜ. ಅದಕ್ಕೆ ಅವರು ಬೌದ್ಧಿಕ ಕಸರತ್ತಿನ ಸಮರ್ಥನೆಯನ್ನೂ ನೀಡಬಲ್ಲರು. ಈ ನಿಟ್ಟಿನಲ್ಲಿ ಬೇರೆ ಬೇರೆ ಕ್ಷೇತ್ರದ ವಿಭಿನ್ನ ಪರಿಕಲ್ಪನೆಗಳನ್ನು ಒಂದೇ ತಕ್ಕಡಿಯಲ್ಲಿಟ್ಟು ತೂಗುವುದು, ಬೆಲೆ ಕಟ್ಟುವುದು ವಿವೇಕದ ಕಾರ್ಯವಲ್ಲ.

ಕ್ರಿಕೆಟ್ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಜಾಗತೀಕರಣ, ಖಾಸಗೀಕರಣದ ಹುನ್ನಾರವಿದೆ. ಭಾರತೀಯ ಆಟಗಳಲ್ಲಿ ಇಂಥ ಹರಾಜು ಪ್ರಕ್ರಿಯೆ ಇಲ್ಲ. ಪ್ರದರ್ಶನಕ್ಕೆ ಒಂದು ವೇದಿಕೆ ಸಿಕ್ಕರೆ ಸಾಕು. ಕ್ರಿಕೆಟ್ ಹಾಗಲ್ಲ. ಇದು ಹಣದ ಪ್ರಪಂಚ. ಕಲೆಗಾಗಿ ಕಲೆ, ಕ್ರೀಡೆಗಾಗಿ ಕ್ರೀಡೆ, ಸೇವೆಗಾಗಿ ಸೇವೆ ಎಂಬ ಪರಿಸ್ಥಿತಿ ಇಲ್ಲ.

ಇಂದು ಎಲ್ಲ ಕ್ಷೇತ್ರಗಳೂ ವಾಣಿಜ್ಯೀಕರಣಗೊಳ್ಳುತ್ತಲಿವೆ. ಕ್ರೀಡಾಕ್ಷೇತ್ರವೂ ಇದರಿಂದ ಹೊರತಾಗಿಲ್ಲ. ಪ್ರತಿಭಾಶಾಲಿಗಳಿಗೆ ಎಲ್ಲೆಲ್ಲೂ ಬೇಡಿಕೆ ಇದ್ದೇ ಇದೆ. ಹಾಗಾಗಿ ತಮ್ಮ ತಂಡಕ್ಕೆ ಬೇಕಾದ ಸಮರ್ಥ ಕ್ರಿಕೆಟ್ ಆಟಗಾರರನ್ನು ಹರಾಜ್‌ನಲ್ಲಿ ಆಯ್ಕೆ ಮಾಡಿಕೊಂಡರೆ ಅದನ್ನು ಅವಮಾನ ಎಂದು ಭಾವಿಸುವುದು ಸರಿಯೇ ಎನ್ನುವುದು ಹಲವರ ಪ್ರಶ್ನೆ. ಇದು ಕ್ರೀಡೆಗೆ ನೀಡುವ ಪ್ರೋತ್ಸಾಹ, ಕ್ರೀಡಾಪಟುಗಳಿಗೆ ಕೊಡುವ ಗೌರವ ಎನ್ನುವುದು ಹರಾಜುದಾರರ ಮತ್ತು ಕ್ರೀಡಾಪಟುಗಳ ಅಭಿಪ್ರಾಯ.

ಪ್ರಾಚೀನ ರೋಮ್‌ನ ಕಥೆಗೆ ಕ್ರೀಡಾಪಟುಗಳ ಹರಾಜನ್ನು ಹೋಲಿಸುವುದು ಸಮರ್ಥನೀಯವಲ್ಲ. ಅದು ಕ್ರೀಡಾಪಟುಗಳಿಗೆ ಮಾಡುವ ಅವಮಾನ. ಕ್ರೀಡಾಪಟುಗಳ ಹರಾಜನ್ನು ಧಾರ್ಮಿಕ ಕಂದಾಚಾರಗಳ ಹರಕೆಗೆ ಹೋಲಿಸುವುದು ದೊಡ್ಡ ಕಳ್ಳತನದ ಮೂಲಕ ಸಣ್ಣ ಕಳ್ಳತನ ಸಮರ್ಥಿಸುವ ಒಳರಾಜಕಾರಣವೆಂಬಂತೆ ಭಾಸವಾಗುವುದು. ಏಕೆಂದರೆ ಇಲ್ಲಿ ಆಟಗಾರರಿಗೆ ಸ್ವಾತಂತ್ರ್ಯ ಇದೆ. ತಮಗೆ ಒಪ್ಪಿಗೆ ಆಗದಿದ್ದರೆ ಅವರು ನಿರಾಕರಿಸಬಹುದು. ಅವರು ಯಾರಿಗೂ ಗುಲಾಮರಲ್ಲ.

ಪ್ರತಿಭೆಯ ಮಾರಾಟ ಎಲ್ಲಿಲ್ಲ? ವಿವಿಧ ಕಂಪನಿಗಳು ಸ್ಪರ್ಧೆಯ ಮೇಲೆ ವೇತನ ನೀಡಿ ನೌಕರರನ್ನು ನೇಮಿಸಿಕೊಳ್ಳುವುದನ್ನು ಯಾರು ತಾನೆ ವಿರೋಧಿಸಿದ್ದಾರೆ? ಧಾರ್ಮಿಕ ವಲಯದಲ್ಲೂ ಬಾವುಟ, ಹೂವಿನ ಹಾರ, ಬಾಳೆಹಣ್ಣು, ಪೋಟೋ, ತೆಂಗಿನ ಕಾಯಿ ಮುಂತಾದವುಗಳನ್ನು ಹರಾಜು ಹಾಕುವ ಪ್ರಕ್ರಿಯೆ ಇರುವುದು ಲೇಖಕರ ಗಮನಕ್ಕೆ ಬಂದಂತೆ ಕಾಣುವುದಿಲ್ಲ.

ಒಂದು ಕ್ಷೇತ್ರದ ಆಚರಣೆಗಳನ್ನು ಇನ್ನೊಂದು ಕ್ಷೇತ್ರದ ಆಚರಣೆಗಳೊಂದಿಗೆ ತುಲನೆ ಮಾಡುವುದು ಆರೋಗ್ಯಕರ ಆಲೋಚನೆ ಅಲ್ಲ. ಎರಡೂ ಘಟನೆಗಳನ್ನು ತುಲನೆ ಮಾಡುವಾಗ ಸಮಾನ ಅಂಶಗಳಿರಬೇಕು. ಹರಕೆ, ಹರಾಜು ಪ್ರಕ್ರಿಯೆಯಲ್ಲಿ ಅಂತಹ ಸಮಾನ ಅಂಶಗಳು ಇಲ್ಲ. ಅವೆರಡಕ್ಕೂ ವಿಭಿನ್ನ ನೆಲೆಗಳಿವೆ.

ಅಕ್ಷರ ಅವರು ಕೊಟ್ಟಿರುವ ರೂಪಕದಲ್ಲಿ ‘ಅವಮಾನ ಅನುಭವಿಸುತ್ತಿದ್ದಾನೆಂದು ಹೇಳಲಾಗುವಾತನೇ ತನಗೆ ಅವಮಾನವಾಗುತ್ತಿದೆ ಎಂಬುದನ್ನು ಒಪ್ಪಿಕೊಳ್ಳದೆ ಹೋದರೆ, ಅದನ್ನು ಅವಮಾನವೆಂದು ಹೇಳುವುದು ಕಷ್ಟವೇ ಸರಿ’ ಎನ್ನುವರು. ಇದು ಪ್ರಶ್ನಾರ್ಹ. ಅಜ್ಞಾನ, ಬಡತನ, ಜಾತಿ ಮತ್ತು ಪರಂಪರೆಯ ಕಟ್ಟುಪಾಡುಗಳು ಇದು ನಿನ್ನ ಕರ್ಮ, ನೀನು ಹೀಗೇ ಬದುಕಬೇಕೆಂಬುದು ಹಣೆಬರಹ ಎನ್ನುವ ಭಾವನೆಯನ್ನು ಹೃದ್ಗತ ಮಾಡಿಬಿಟ್ಟಿವೆ. ಹಾಗೆಂದ ಮಾತ್ರಕ್ಕೆ ಅದು ಸಹಜ, ಅವನು ಹಾಗೇ ಬದುಕಬೇಕು ಎಂದರೆ ಪಟ್ಟಭದ್ರ ಹಿತಾಸಕ್ತಿಗಳಿಗೆ ಮನ್ನಣೆ ನೀಡಿದಂತೆ ಆಗುವುದಿಲ್ಲವೇ?

ವರದಕ್ಷಿಣೆ ಪಡೆಯುವುದು ಶಿಕ್ಷಾರ್ಹ ಅಪರಾಧ. ಹಾಗಂತ ವರದಕ್ಷಿಣೆಯನ್ನು ಕೊಡುವುದು, ತೆಗೆದುಕೊಳ್ಳುವುದು ನಿಂತಿದೆಯೇ? ನಿಂತಿಲ್ಲ ಎಂದರೆ ಅದು ಸಮ್ಮಾನ ಎಂದು ಭಾವಿಸಬೇಕಿಲ್ಲ. ಅದೊಂದು ಅವಮಾನದ ಸಂಗತಿ. ವಿಚಿತ್ರವೆಂದರೆ ತಾತ್ವಿಕವಾಗಿ ವರದಕ್ಷಿಣೆ ವಿರೋಧಿಸುವವರೂ ವರದಕ್ಷಿಣೆಯ ಲೇವಾದೇವಿ ವ್ಯವಹಾರದಲ್ಲಿ ಮುಂದೆ ನಿಂತು ಮದುವೆ ಮಾಡಿಸುವುದು.

ಎಲ್ಲರೂ ಹಣದ ಗುಲಾಮತನಕ್ಕೆ ಬಲಿಯಾಗಿರುವುದರಿಂದ ಎಲ್ಲ ಕ್ಷೇತ್ರದ ಎಲ್ಲ ಘಟನೆಗಳನ್ನೂ ಯಾವುದೋ ಒಂದು ದೃಷ್ಟಿಕೋನದಿಂದ ನೋಡುವುದು ಆರೋಗ್ಯಕರ ಬೆಳವಣಿಗೆಯಾಗುವುದಿಲ್ಲ. ಯಾವುದೇ ಘಟನೆಯನ್ನು ಏಕಮುಖ ಆಲೋಚನೆಯಿಂದ ನೋಡದೆ ಬಹುಮುಖ ಆಯಾಮಗಳಿಂದ ನೋಡುವುದು ಒಳಿತು.

ಧಾರ್ಮಿಕ ಘಟನೆಗಳನ್ನು ಆರ್ಥಿಕ ದೃಷ್ಟಿಕೋನದಿಂದ, ಆರ್ಥಿಕ ಘಟನೆಗಳನ್ನು ಧಾರ್ಮಿಕ ದೃಷ್ಟಿಕೋನದಿಂದ ನೋಡುವುದು ಸಲ್ಲದು. ಹಾಗೆ ನೋಡುವುದೇ ತಪ್ಪು ಗ್ರಹಿಕೆಗೆ ಕಾರಣವಾಗುವುದು. ಒಂದು ಘಟನೆಯನ್ನು ತಮ್ಮ ಮೂಗಿನ ನೇರಕ್ಕೆ ನೋಡದೆ ಪೂರ್ಣ ದೃಷ್ಟಿಯಿಂದ ನೋಡಿದರೆ ಸಂಕುಚಿತ ಅಭಿಪ್ರಾಯಗಳಿಗೆ ಆಸ್ಪದವಾಗುವುದಿಲ್ಲ.

ಸಾಹಿತ್ಯಿಕ, ಸಾಮಾಜಿಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಮಹತ್ವದ ಸಾಧನೆ ಮಾಡಿದ ಮಹನೀಯರಿಗೆ ಪ್ರಶಸ್ತಿಯ ಜೊತೆಗೆ ಬಂಗಾರದ ಪದಕ, ಲಕ್ಷಗಟ್ಟಲೆ ಹಣ ಕೊಡುವುದು ಸಹ ಒಂದು ರೀತಿಯ ಹರಾಜಿನಂತೆ ಕಂಡರೆ ಗತಿ ಏನು? ವಾಸ್ತವವಾಗಿ ಇಂಥ ಪುರಸ್ಕಾರ ಹರಾಜು ಅಥವಾ ವ್ಯಾಪಾರವಲ್ಲ. ಅದು ಸಹಜ ಸಮ್ಮಾನವೇ ಹೊರತು ಅವಮಾನವಲ್ಲ.

ಬಂಗಾರದ ಪದಕದ ಜೊತೆ ಒಂದು ಲಕ್ಷ ರೂಪಾಯಿ ನೀಡುವ ರಾಜ್ಯೋತ್ಸವ ಪ್ರಶಸ್ತಿ ಕೆಲವೊಮ್ಮೆ ಕೊಡಲ್ಪಡುತ್ತವೆಯೋ, ಬಿಕರಿಯಾಗುತ್ತವೆಯೋ ಎಂಬುದು ಗುಟ್ಟಾಗಿ ಉಳಿದಿಲ್ಲ. ಅಲ್ಲಿರದ ಅವಮಾನ ಕ್ರಿಕೆಟ್‌ಗೆ ಏಕೆ ಬರುತ್ತದೆ? ಎಂಜಲೆಲೆಯ ಮೇಲೆ ಉರುಳುವುದು ಅವಮಾನಕರ ಎನ್ನುವುದಕ್ಕಿಂತ ಅದೊಂದು ಧಾರ್ಮಿಕ ಮೌಢ್ಯ. ಪೂಜಾರಿ ಪುರೋಹಿತರಿಂದ ನಡೆಯುವ ಪರೋಕ್ಷ ಸುಲಿಗೆ. ಅಜ್ಞಾನದ ವೈಭವೀಕರಣ. ಅದನ್ನು ಕ್ರಿಕೆಟ್ ಆಟಗಾರರ ಹರಾಜಿಗೆ ಹೋಲಿಸುವ ಪ್ರಕ್ರಿಯೆಯೇ ಸರಿಯಲ್ಲ.

‘ಯಾವುದೋ ಒಂದು ಪುಟ್ಟ ಊರಿನ ದೇವಾಲಯದಲ್ಲಿ ಯಾರೋ ಒಂದಿಷ್ಟು ಜನ ತಮ್ಮದೇ ಸ್ವಂತ ನಂಬಿಕೆಯಿಂದ ಪ್ರೇರಿತರಾಗಿ... ನಗಣ್ಯವೆನ್ನಬಹುದಾದ... ಘಟನೆಯು ಮುಖಪುಟಗಳಲ್ಲಿ ವರದಿಯಾದ ರೀತಿಯಿಂದಲೇ, ಇದು ನಮ್ಮ ಸಮಾಜವನ್ನು ಕಾಡುತ್ತಿರುವ ಮುಖ್ಯವಾದ ಪಿಡುಗಿನ ಒಂದು ಉದಾಹರಣೆ ಎಂಬ ಧ್ವನಿಯೂ ಈ ವರದಿಗಳ ಹಿಂದಿತ್ತು’ ಎನ್ನುವ ಲೇಖಕರ ಅಭಿಪ್ರಾಯ ಎಂಜಲೆಲೆಯ ಮೇಲೆ ಉರುಳುವುದು ಮೂಢನಂಬಿಕೆ ಅಲ್ಲ ಎಂದು ಅಂಥವುಗಳನ್ನು ಪ್ರೋತ್ಸಾಹಿಸುವ ಹುನ್ನಾರದಂತೆ ತೋರುವುದು. ಮೌಢ್ಯ, ಅಜ್ಞಾನ ಅಪಾಯಕಾರಿ ಅಲ್ಲ ಎಂದಾಯಿತು. ಇಂಥ ನಿಲವನ್ನೇ ಪುರೋಹಿತ ಪರಂಪರೆಯ ಮುಂದುವರಿಕೆ, ಪೋಷಣೆ ಎನ್ನುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT