ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವಾದ: ಕಂದಾಚಾರ ಪೋಷಣೆಯಲ್ಲಿ ಅಭ್ಯುದಯ

Last Updated 19 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಕೆ.ವಿ.ಅಕ್ಷರ ಅವರ ‘ಹರಕೆ ಹರಾಜು’ ವಿಚಾರ ಮಂಡನೆ ಅಕ್ಷರಸ್ಥ ಮನಸ್ಸುಗಳ ಆಲೋಚನೆಯಂತೆ ತೋರಿಬರಲಿಲ್ಲವೆಂಬುದು ಕೂಡ ಸೋಜಿಗ ಹುಟ್ಟಿಸಲಿಲ್ಲ. ಪುರೋಹಿತಶಾಹಿಗಳ ಮನಸ್ಥಿತಿ ವ್ಯಕ್ತವಾಗುವುದೇ ಹಾಗೆ. ಕ್ರಿಕೆಟಿಗರ ಹರಾಜೆಂಬ ವ್ಯಾಪಾರಕ್ಕೂ ಮಡೆಸ್ನಾನವೆಂಬ ಮೌಢ್ಯಾಚರಣೆಗೂ ಮಾಡುವ ಹೋಲಿಕೆ ಯಲ್ಲಮ್ಮನ ಗುಡಿಗೂ ಮುಲ್ಲಾಸಾಬಿಗೂ ಸಂಬಂಧ ಕಲ್ಪಿಸಿದಂತಿತ್ತು.

ಸ್ವಾಮಿ, ನಗಣ್ಯವೆನ್ನುಬಹುದಾದ ಪುಟ್ಟ ಊರೇ ಈ ಕುಕ್ಕೆ ಸುಬ್ರಹ್ಮಣ್ಯ? ಅಲ್ಲಿ, ಶತಶತಮಾನಗಳಿಂದ ಸತತವಾಗಿ ನಡೆದುಕೊಂಡು ಬಂದಿರುವುದನ್ನು ಮೂಢನಂಬಿಕೆಯೆಂದು ಚಿತ್ರಿಸಿದವೆಂದು ಮಾಧ್ಯಮಗಳ ಮೇಲೆ ಲೇಖಕರು ಮುನಿಸಿಕೊಳ್ಳುತ್ತಾರೆ! ಒಂದಿಷ್ಟು ಜನ ತಮ್ಮದೇ ಸ್ವಂತ ನಂಬಿಕೆಯಿಂದ ಪ್ರೇರಿತರಾಗಿ ಮಾಡಬಹುದಾದ ಒಂದು ಕೆಲಸ ಅವರಿಗೇ ಅದು ಅಪಮಾನ ಅಸಹ್ಯವೆನ್ನಿಸದಿರುವಾಗ ಇತರರೇಕೆ ಪ್ರಶ್ನಿಸಬೇಕು ಎನ್ನುವುದು ಅವರ ಪ್ರಶ್ನೆ. ಆಚರಿಸುವವರಿಗೆ ಅರಿವಿಲ್ಲದೆ ಹೋದಾಗ ಅರಿವು ಮೂಡಿಸಬೇಕಾದ ಹೊಣೆಗಾರಿಕೆ ಎಲ್ಲರದ್ದೂ ಅಲ್ಲವೆ?

ತಾವು ಕನಿಷ್ಠರಾಗಿಯೇ ಬದುಕಬೇಕೇನೋ ಎಂದು ಹೊಂದಿಕೊಂಡುಬಿಟ್ಟಿದ್ದ ಅಸ್ಪಶ್ಯರಿಗೆ ಅರಿವು ಮೂಡಿಸಲು ಬಸವಣ್ಣ ಬರಬೇಕಾಯಿತು. ಸತಿ ಸಹಗಮನ ಪದ್ಧತಿಯನ್ನು ಹಿಂಸೆಯೆಂದು ತಿಳಿಯದೆ, ಪತಿಯ ಮೇಲಿನ ಭಕ್ತಿಗಾಗಿ ಸ್ವ-ಇಚ್ಛೆಯಿಂದ ಮಾಡುತ್ತಿದ್ದಾರೆಂದೇ ನಂಬಿಸಲಾಗಿತ್ತು. ರಾಜರಾಮ ಮೋಹನರಾಯರಂಥ ದಿಟ್ಟವ್ಯಕ್ತಿ ಪ್ರತಿಭಟಿಸದೆ ಹೋಗಿದ್ದಿದ್ದರೆ ಸಹಗಮನ ಪದ್ಧತಿ ಇಂದಿಗೂ ಉಳಿದುಬಿಡುತ್ತಿತ್ತೇನೋ. ಗಂಡಸತ್ತವಳಿಗೆ ತಲೆಬೋಳಿಸಿ ಕೆಂಪು ಸೀರೆ ಉಡಿಸುವುದನ್ನು ವಿರೋಧಿಸದೆ ಹೋಗಿದ್ದರೆ ಇವತ್ತಿಗೂ ಅಗ್ರಹಾರದಲ್ಲಿ ಬೋಳಮ್ಮಂದಿರನ್ನು ಕಾಣಬೇಕಾಗುತ್ತಿತ್ತು. ಗಾಂಧಿ ಗಟ್ಟಿಯಾಗಿ ದನಿ ಎತ್ತದಿದ್ದರೆ, ಅಂಬೇಡ್ಕರ್ ಸಂವಿಧಾನ ರಚಿಸದೆ ಹೋಗಿದ್ದರೆ, ಇಂದಿಗೂ ದಲಿತ ವಿದ್ಯಾವಂತರನ್ನು ದೊಡ್ಡ ಕಚೇರಿಗಳಲ್ಲಿ ಕಾಣಲು ಅಸಾಧ್ಯವಾಗುತ್ತಿತ್ತು. ಮಲಹೊರುವವರಿಗೆ ಕೂಡ ಅದೂ ಒಂದು ಉದ್ಯೋಗವೆಂದೇ ನಂಬಿಸಿ ಸೇವೆಗಿಳಿಸಲಾಗಿತ್ತು. ದಲಿತ ನಾಯಕ ಬಸವಲಿಂಗಯ್ಯ ಪ್ರತಿಭಟಿಸದಿದ್ದರೆ ಆ ಪದ್ಧತಿ ಕೂಡ ಈಗಲೂ ಮುಂದುವರೆಯುವ ಅಪಾಯವಿತ್ತು.

ಕ್ರಿಕೆಟ್ ಆಟಗಾರರ ಪ್ರತಿಭೆಯನ್ನು ಮೆಚ್ಚಿ ಹರಾಜಿನಲ್ಲಿ ಕೊಳ್ಳುತ್ತಾರೆಯೇ ಹೊರತು ಅಕ್ಷರ ಅವರು ಹೋಲಿಕೆ ಮಾಡುವಂತೆ ಅವರೇನೂ ರೋಮ್‌ನಲ್ಲಿ ಹರಾಜು ಹಾಕಲಾಗುತ್ತಿದ್ದ ನಿಗ್ರೋ ಗುಲಾಮರಂತಲ್ಲ. ಸ್ವತಂತ್ರ ನಿರ್ಧಾರ ಕೈಗೊಳ್ಳುವ ಅವಕಾಶ ಅವರಿಗಿದ್ದೇ ಇದೆ. ಅರಿವಿಲ್ಲದ ಭಕ್ತರಿಗೆ ಅರಿವು ಮೂಡಿಸುವ ಕನಿಷ್ಠ ಪ್ರಯತ್ನವನ್ನು ಪೂಜಾರಿಗಳು ಮಾಡಬಹುದಾದರೂ ಅದವರ ಕಸುಬು-ವ್ಯಾಪಾರಕ್ಕೆ ಸಂಚಕಾರವಾಗುತ್ತದಲ್ಲವೆ? ಹೀಗಾಗಿ ಮೌಢ್ಯ, ಕಂದಾಚಾರ ಪದ್ಧತಿಗಳನ್ನು ಪೋಷಿಸಿಕೊಂಡು ಬರುವುದರಲ್ಲೇ ತಮ್ಮ ಅಭ್ಯುದಯ ಸುಖವನ್ನು ಕಂಡುಕೊಂಡಿರುವ ಪುರೋಹಿತಶಾಹಿಗಳು, ಮಡೆಸ್ನಾನದಂತಹ ಕ್ರಿಯೆಗಳನ್ನು ತುಂಬಾ ಹಗುರವಾಗಿ ಕಾಣುವುದರ ಹಿಂದೆ ಅಡಗಿರುವ ಸತ್ಯವನ್ನು ಅರಿಯದಷ್ಟು ಜನರೀಗ ದಡ್ಡರಾಗುಳಿದಿಲ್ಲ. ಕ್ರಿಕೆಟ್ ಹರಾಜಿಗಿಂತ ಜನರ ಮೌಢ್ಯವನ್ನೇ ಹರಾಜಿಗಿಡುವುದು ಅಮಾನವೀಯ.   
 -ಬಿ.ಎಲ್.ವೇಣು

ಸಂಕಟದ ಹುಟ್ಟಿನ ಮರೆಮಾಚುವಿಕೆ
ಮಡೆಸ್ನಾನದಂತ ಹರಕೆಯ ಆಚರಣೆಯನ್ನು ಮೌಢ್ಯವೆಂದು ಒಪ್ಪಿಕೊಳ್ಳುತ್ತಲೇ- ಬೆರಳೆಣಿಕೆಯಷ್ಟು ಮೇಲ್ಜಾತಿ ಜನ ಭಾಗವಹಿಸಿದ್ದೇ ಈ ಆಚರಣೆಗೆ ಒಪ್ಪಿತ ಸ್ವರೂಪ ಬಂದಿದೆ ಎನ್ನುವಂತೆ ವೈದೇಹಿ ಅವರು ಬರೆದಿರುವುದು ಸರಿಯಲ್ಲ.

ವೈದೇಹಿಯವರು ಉಲ್ಲೇಖಿಸಿದ ‘ಸಂಕಟ ವರ್ಗ’ದ ಸಂಕಟಗಳು ವೈಯಕ್ತಿಕ ಎಂದು ಕಂಡರೂ, ಅದಕ್ಕೆ ಕಾರಣ ಸಾಮೂಹಿಕ ಪಾಪದ ಫಲ ಹಾಗೂ ವ್ಯವಸ್ಥಿತ ಶೋಷಣೆಯ ಪರಿಣಾಮ. ಹೆಣ್ಣಿನ ಬಂಜೆತನಕ್ಕೆ ಬರಡು ಭೂಮಿಗೆ ಇರುವಷ್ಟೇ ಕಾರಣ- ಆದಿ ಕಾಲದಿಂದಲೂ ಪ್ರಕೃತಿಯನ್ನು ದುರ್ಬಳಕೆ ಮಾಡಿಕೊಂಡಿದ್ದು. ಆಧುನಿಕ ಕಾಲದಲ್ಲೂ ಪ್ರಕೃತಿಯ ಕಡೆಗಣನೆ ಮುಂದುವರಿದೇ ಇದೆ. ಬೀಜ ಸಂಸ್ಕರಣೆ, ಅಂಗಾಂಶ ಕಸಿ, ಕೃತಕವಾಗಿ ಸೃಷ್ಟಿಸುವ ಹಸಿರು ಮನೆ- ಇವುಗಳಿಗೆ ಕೊಡುವ ಮಹತ್ವ ನೋಡಿದರೆ, ಮನುಷ್ಯ ನೆಲದ ಮೇಲೆ ನಡೆಯುತ್ತಲೇ ಇಲ್ಲ ಎನ್ನುವುದು ಸ್ಪಷ್ಟ. ಮಡಿಲನ್ನು ಬಾಡಿಗೆಗೆ ಕೊಡುವ, ತೆಗೆದುಕೊಳ್ಳುವ (ಬಾಡಿಗೆ ತಾಯ್ತನ) ಈ ಕಾಲದಲ್ಲೂ ಬಂಜೆತನದ ಹೊಣೆ ತಾನೊಬ್ಬಳೇ ಹೊತ್ತು ಸಂಕಟದ ವರ್ಗಕ್ಕೆ ಮಹಿಳೆ ಸೇರುತ್ತಾಳೆಂದರೆ, ಅದಕ್ಕೆ ಮೌಢ್ಯವಲ್ಲದೆ ಇನ್ನೇನೂ ಕಾರಣವಿರುವುದಿಲ್ಲ.

‘ಸಂಕಟ ವರ್ಗ’ದ ( ಹರಕೆ ವರ್ಗ) ಸಂಕಟಗಳ (ಕೊನೆಯೇ ಕಾಣದ ಸಂಕಟಗಳ) ಹಿಂದೆ ಸಂಕಟ ನಿರ್ಮಾಣ ಮಾಡುವ ಒಂದು ವ್ಯವಸ್ಥಿತ ಹುನ್ನಾರ ಇರುತ್ತದೆಯೇ ವಿನಾ ಯಾರೂ ತನ್ನಷ್ಟಕ್ಕೆ ತಾನು ಹರಕೆಯನ್ನು ಸೃಷ್ಟಿಮಾಡಿಕೊಳ್ಳುವುದಿಲ್ಲ. ಇಲ್ಲದಿದ್ದಲ್ಲಿ ಅಷ್ಟೊಂದು ಜನ ಒಂದೇ ರೀತಿಯ ಹರಕೆ ಆಚರಣೆಯನ್ನು ಕೈಗೊಳ್ಳುವುದು ಹೇಗೆ? ಇನ್ನೊಂದು ಗಮನಿಸಬೇಕಾದ ಅಂಶ- ಪಟ್ಟಣವಾಸಿಗಳಲ್ಲೇ ಇಂಥ ಮೌಢ್ಯ ಹೆಚ್ಚುತ್ತಿರುವುದು. ವಾಸ್ತು ಹಾವಳಿ, ಅಕ್ಷಯ ತದಿಗೆ ದಿನ ಬಂಗಾರ ಖರೀದಿಸಬೇಕು ಎಂಬ ಹುಚ್ಚು, ಅಲ್ಲಲ್ಲಿ ಉದ್ಭವವಾಗುವ ಅಮ್ಮ-ಭಗವಾನ್ ರೀತಿಯ ದೇವರುಗಳು ಸೂಚಿಸುವುದು ಸಂಕಟವರ್ಗದ ಹುಟ್ಟನ್ನು. ಸಂಕಟದ ನಿಜವಾದ ಕಾರಣಗಳನ್ನು ಮರೆಮಾಚಿ ಜನರನ್ನು ಮೂಢರನ್ನಾಗಿಯೇ ಇರಿಸುವ ಪ್ರಯತ್ನವಾಗಿ ಇವು ಕಂಡುಬರುತ್ತವೆ.

ನಾನು ಹತ್ತಿರದಿಂದ ಕಂಡ ಒಂದು ಕುಟುಂಬದ ಕಥೆ ಹೀಗಿದೆ: ನಮ್ಮ ಮನೆಯ ಆಳು ಮಗ ಅನಕ್ಷರಸ್ಥ, ಹೊಲೆಯರು ಎಂದು ಕರೆಯಲ್ಪಡುವ ಜಾತಿಗೆ ಸೇರಿದವ. ಮಕ್ಕಳಿಲ್ಲ. ಮೊದಲು ಹೋದದ್ದು ವೈದ್ಯರ ಬಳಿ. ಫಲ ಕಾಣಲಿಲ್ಲ. ಮಕ್ಕಳಿಗಾಗಿ ಪರಿತಪಿಸುವ ಹೆಂಡತಿಗೆ ಇವನ ಸಮಾಧಾನ- ‘ಮಕ್ಳಾಗ್ದಿದ್ರೆ ಇಲ್ಲ ಬಿಡು, ಯಾವ ರಾಜ ವಂಸ ನಿಲ್ತು?’. ಕೊನೆಗವರು ಕೈಗೊಂಡ ನಿರ್ಧಾರ- ಒಂದು ಮಗುವನ್ನು ದತ್ತು ತೆಗೆದುಕೊಳ್ಳುವುದು. ಆದರೆ ಅಲ್ಲೂ ಅವರು ವಂಚಿತರು. ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದ ಇವರಿಗೆ ಯಾವ ಆಸ್ಪತ್ರೆಯೂ ಮಗುವನ್ನು ಕೊಡುವುದಿಲ್ಲ. ಇವರು ನಿರಕ್ಷರಕುಕ್ಷಿಗಳೇ ಅಥವಾ ಶೈಕ್ಷಣಿಕವಾಗಿ ಮುಂದುವರೆದು ಅಕ್ಷರಸ್ಥರೆನಿಸಿಕೊಂಡು ವೈಯಕ್ತಿಕ ‘ಸಂಕಟ’ಕ್ಕೆ ದೇವರಿಗೆ ಆಮಿಷ ತೋರಿಸಿ ಪರಿಹಾರ ಕಂಡುಕೊಳ್ಳಲು ಬರುವ ಡಾಕ್ಟರು, ಲಾಯರು, ಇತರರೆ?

ಬ್ರಾಹ್ಮಣರು ಉಂಡ ಎಲೆಗಳ ಮೇಲೆ ಚರ್ಮ ವ್ಯಾಧಿ ಉಳ್ಳವರು ಹೊರಳಾಡಿದರೆ ರೋಗ ವಾಸಿಯಾಗುತ್ತದೆಂಬ ನಂಬಿಕೆ ಹುಟ್ಟಿಸಿ ಹುಟ್ಟಿಕೊಂಡ ಆಚರಣೆ ಇದು. ಇದೇ ನಂಬಿಕೆಯ ಹೊಸ ಅವತಾರವಾಗಿ ಬ್ರಾಹ್ಮಣರ ಎಂಜಲನ್ನು ಬಾಟಲಿಗಳಲ್ಲಿ ಸಂಗ್ರಹಿಸಿ ಮಠದ ಅಂಗಡಿಗಳಲ್ಲಿ ಮಾರಾಟಕ್ಕೆ ಇಟ್ಟರೆ ಆಶ್ಚರ್ಯಪಡಬೇಕಾದ್ದಿಲ್ಲ! 
 -ವೃಂದಾ ಹೆಗಡೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT