ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವಾದ: ಹರಕೆಯ ಸಮಸ್ಯೆಯಲ್ಲ ಗ್ರಹಿಕೆಯ ಸಮಸ್ಯೆ

Last Updated 26 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

‘ಪ್ರಜಾವಾಣಿ’ಯ ಸಾಪ್ತಾಹಿಕ ಪುರವಣಿಯಲ್ಲಿ ನಾನು ಬರೆದ ಲೇಖನಕ್ಕೆ ಪ್ರತಿಕ್ರಿಯಿಸಿದ ಎಲ್ಲರಿಗೂ ನಾನು ಕೃತಜ್ಞ; ಆ ಎಲ್ಲ ಪ್ರತಿಕ್ರಿಯೆಗಳೂ ನಾನು ಈ ಕುರಿತು ಮತ್ತೆಮತ್ತೆ ಯೋಚಿಸುವಂತೆ ಮತ್ತು ನನ್ನೊಳಗೇ ನಾನು ಸ್ಪಷ್ಟಗೊಳ್ಳುವಂತೆ ಮಾಡಿವೆ.  ಆ ಪ್ರತಿಸ್ಪಂದನೆಗಳಲ್ಲಿ ಕಾಣಿಸಿದ ಕೆಲವು ವಿಚಾರಗಳಿಗೆ ಸಂಬಂಧಿಸಿ ನನ್ನ ನಿರ್ದಿಷ್ಟ ಪ್ರತಿಕ್ರಿಯೆಗಳು ಹೀಗಿವೆ:

1. ನನ್ನ ಲೇಖನವು ಹರಕೆ ಮತ್ತು ಹರಾಜುಗಳೆಂಬ ಪರಸ್ಪರ ಸಂಬಂಧವಿಲ್ಲದ ಎರಡು ವಿದ್ಯಮಾನಗಳನ್ನು ನಮ್ಮ ಸಮಾಜವು ಗ್ರಹಿಸಿದ ವಿಧಾನದಲ್ಲಿರುವ ವ್ಯತ್ಯಾಸವನ್ನು ಕುರಿತದ್ದು. ಅಂಥ ಗ್ರಹಿಕೆಯ ವ್ಯತ್ಯಾಸಕ್ಕೆ ಕಾರಣಗಳೇನು ಎಂಬ ಪ್ರಶ್ನೆಯನ್ನು ಎತ್ತಲು ನಾನು ಪ್ರಯತ್ನಪಟ್ಟಿದ್ದೆ.  ಈ ಎರಡು ವಿದ್ಯಮಾನಗಳಲ್ಲಿ ಯಾವುದರ ಪರವಾಗಿಯೂ ವಕಾಲತ್ತು ಮಾಡುವ ಇರಾದೆ ನನಗಿಲ್ಲ ಎಂದು ಆ ಲೇಖನದಲ್ಲಿ ನಾನು ಸ್ಪಷ್ಟವಾಗಿಯೇ ಹೇಳಿದ್ದೆ. ಆದರೂ ಹಲವರು ನಾನು ಹರಕೆಯ ಪರವಾಗಿದ್ದೇನೆ ಎಂದು ತೀರ್ಮಾನಿಸಿಕೊಂಡಿದ್ದಾರೆ. ನಿಜ, ಕೆಲವು ದಿನಗಳ ಹಿಂದೆ ವರದಿಯಾದ ಸುಬ್ರಹ್ಮಣ್ಯದ ದೇವಾಲಯದ ಹರಕೆಯ ವಿಚಾರವು ನಮ್ಮ ಸಮಾಜದ ಹಿಂದುಳಿದಿರುವಿಕೆಗೆ ಸಂಕೇತವೇನೂ ಅಲ್ಲದಿರಬಹುದು ಎಂಬ ಅನುಮಾನ ನನ್ನ ಲೇಖನದ ಹಿಂದಿದೆ. ಅಂದಮಾತ್ರಕ್ಕೆ ನಾನು ಸಹಗಮನದಿಂದ ಆರಂಭಿಸಿ ಮಡೆಸ್ನಾನದವರೆಗಿನ ಎಲ್ಲ ಆಚರಣೆಗಳ ಪರವಾಗಿದ್ದೇನೆ ಎಂದು ಹೇಗೆ ತೀರ್ಮಾನವಾದೀತು?

2. ತುಸು ಸ್ಪಷ್ಟೀಕರಿಸಿ ಹೇಳುವುದಾದರೆ, ಯಾತಕ್ಕೆ ನಮ್ಮ ಬುದ್ಧಿವಂತ ಸಮೂಹಕ್ಕೆ ಇಂಥದೊಂದು ಸಾಂಪ್ರದಾಯಿಕ ಆಚರಣೆಯು ಮೌಢ್ಯವೆಂದು ಕಾಣುತ್ತದೆ- ಎಂಬ ಗ್ರಹಿಕೆಯ ಪ್ರಶ್ನೆಯನ್ನು ನಾನು ಎತ್ತಿದ್ದೇನೆ. ಹಾಗಿದ್ದರೆ, ಇದು ಮೌಢ್ಯವಲ್ಲದೆ ಅಧ್ಯಾತ್ಮವೇ?- ಎಂಬ ಮರುಪ್ರಶ್ನೆ ಏಳುತ್ತದೆ. ಮೌಢ್ಯವಲ್ಲದ್ದೆಲ್ಲ ಆಧ್ಯಾತ್ಮಿಕವಾದದ್ದೇ ಆಗಬೇಕಿಲ್ಲ ಎಂಬುದು ನನ್ನ ನಿಲುವು.
ಮತ್ತು, ನಮ್ಮ ಸಮಾಜದ ಹಲವು ಪರಂಪರಾಗತ ಆಚರಣೆಗಳು ಅತ್ತ ಮೌಢ್ಯವೂ ಅಲ್ಲದ, ಇತ್ತ ಆಧ್ಯಾತ್ಮಿಕವೂ ಅಲ್ಲದ ಸಾಮುದಾಯಿಕ ಪಾಲ್ಗೊಳ್ಳುವಿಕೆಯ ಒಂದು ಚಟುವಟಿಕೆ ಮಾತ್ರವೆ ಇರಬಹುದೆ? ವೈದೇಹಿಯವರ ಪ್ರತಿಕ್ರಿಯೆಯಲ್ಲಿ ಸೂಚಿತವಾಗುವಂತೆ ಅದು ಲೌಕಿಕ ಸಂಕಟಗಳ ಅನಿವಾರ್ಯ ಅಭಿವ್ಯಕ್ತಿ ಇರಬಹುದೆ? ವಿಶಾಲಾರ್ಥದಲ್ಲಿ ‘ಸಮೂಹ ಸಂವಹನ’ ಇರಬಹುದೆ?- ಎಂಬುದು ನನ್ನ ಆಲೋಚನೆ. ಖ್ಯಾತ ಸಂಸ್ಕೃತಿಶಾಸ್ತ್ರಜ್ಞ ಫ್ರಿಟ್ಸ್ ಸ್ಟಾಲ್ ಅವರು ಭಾರತದ ಕರ್ಮವಿಧಿಗಳಲ್ಲಿ ‘ಭಾಷೆ’ಯ ಲಕ್ಷಣ ಇದೆಯೆಂದು ಗುರುತಿಸಿರುವುದು ನನ್ನ ಈ ಆಲೋಚನೆಗೆ ಪ್ರೇರಕವಾಗಿದೆ. ಆದ್ದರಿಂದ, ಹರಕೆ ಮತ್ತು ಹರಾಜುಗಳನ್ನು ಕುರಿತು ನನ್ನ ನಿಖರ ನೈತಿಕ ನಿಲುವೇನು? ಎಂಬ ಪ್ರಶ್ನೆಗೆ ಉತ್ತರ ಇಷ್ಟೇ- ಇಂಥ ವಿಚಾರಗಳನ್ನು ಕುರಿತು ಸಾಕಷ್ಟು ತಿಳಿವಳಿಕೆಯಿಲ್ಲದೆ ನೈತಿಕ ನಿಲುವುಗಳನ್ನು ತೆಗೆದುಕೊಳ್ಳುವುದು ಸರಿಯಲ್ಲ ಎಂಬುದೇ ಸದ್ಯದ ನನ್ನ ನೈತಿಕ ನಿಲುವು. ಹಾಗಂತ, ನಾನು ಪಾಶ್ಚಾತ್ಯ ವಿಶ್ಲೇಷಣಾ ಕ್ರಮಗಳ ವಿರೋಧಿಯೂ ಅಲ್ಲ, ದೇಶೀ ಚಿಂತನೆಗಳ ವಕ್ತಾರನೂ ಅಲ್ಲ. ನಾನು ಎತ್ತಿರುವುದು ಇನ್ನೂ ಸೀಮಿತ ವಿಚಾರ- ಯಾವುದು ಸಹಜ ಮತ್ತು ಯಾವುದು ಅವಮಾನ ಎಂಬ ಪ್ರಶ್ನೆಯನ್ನೇ ಯಾಕೆ ನಾವಿವತ್ತು ಎತ್ತುತ್ತಿಲ್ಲ? ಇದು ಈಗಾಗಲೇ ಅಂತಿಮವಾಗಿ ತೀರ್ಮಾನಿಸಲಾಗಿರುವ ಸತ್ಯವೆಂದೂ, ಆ ಪ್ರಶ್ನೆಯನ್ನು ಮತ್ತೆ ಎತ್ತಬೇಕಾಗಿಯೇ ಇಲ್ಲವೆಂದೂ, ಮತ್ತು ಹಾಗೆ ಹೊಸತಾಗಿ ಎತ್ತಬಯಸುವವರು ಪ್ರತಿಗಾಮಿಗಳೆಂದೂ ಯಾಕೆ ನಮಗಿವತ್ತು ಕಾಣುತ್ತಿದೆ?- ಇದು ನನ್ನ ಪ್ರಶ್ನೆಯ ತಿರುಳು.

3. ಬ್ರಾಹ್ಮಣರು ಉಂಡ ಎಲೆಗಳ ಮೇಲೆ ಶೂದ್ರರು ಉರುಳಾಡಿದರೆ ಅದು ಹುಟ್ಟಿನ ಮೂಲದ ಅಸಮಾನತೆಯ ಸಂಕೇತ; ಆದ್ದರಿಂದಲೇ ಅದು ಖಂಡನಾರ್ಹ ಎಂದು ರಘುನಂದನ ವಾದಿಸಿದ್ದಾರೆ. ನಿಜ, ಹುಟ್ಟಿನ ಮೂಲದ ಅಸಮಾನತೆಗಳು ಯಾವ ರೂಪದಲ್ಲಿದ್ದರೂ ಖಂಡನಾರ್ಹವೇ. ಆದರೆ, ಹಲವೊಮ್ಮೆ ನಿಜಜೀವನದ ಮಾಹಿತಿಗಳು ನಮ್ಮ ಸಿದ್ಧಾಂತಕ್ಕೆ ಸುಲಭವಾಗಿ ಸಿಲುಕುವುದಿಲ್ಲ. ಉದಾಹರಣೆಗೆ, ನನಗೆ ಸಿಕ್ಕ ಮಾಹಿತಿಯ ಪ್ರಕಾರ, ಈ ವರ್ಷ ಸುಬ್ರಹ್ಮಣ್ಯ ದೇವಾಲಯದ ಉರುಳುವ ಹರಕೆಯನ್ನು ಹೊತ್ತಿದ್ದವರಲ್ಲಿ ಗಣನೀಯ ಸಂಖ್ಯೆಯ ಬ್ರಾಹ್ಮಣರೂ ಇದ್ದರಂತೆ; ಹಿಂದಿನ ವರ್ಷಗಳಲ್ಲಿ ಹೆಚ್ಚಾಗಿ ಬ್ರಾಹ್ಮಣರೇ ಈ ಹರಕೆ ಹೊರುತ್ತಿದ್ದರೆ, ಈಚೀಚೆಗೆ ಅದರಲ್ಲಿ ಅಬ್ರಾಹ್ಮಣರ ಸಂಖ್ಯೆ ಹೆಚ್ಚುತ್ತಿದೆಯಂತೆ. ಆದರೆ ಸಮಸ್ಯೆಯೆಂದರೆ, ನಮ್ಮ ಹಲವು ವೈಚಾರಿಕರಿಗೆ ಈ ಬಗೆಯ ವಾಸ್ತವ ಮಾಹಿತಿಗಳ ಸಂಗ್ರಹ ಮತ್ತು ವಿಶ್ಲೇಷಣೆಗಿಂತ ತಮ್ಮ ದೃಢವಾದ ನಂಬಿಕೆಗಳನ್ನು ಘೋಷಿಸುವುದರಲ್ಲೇ ಹೆಚ್ಚು ವಿಶ್ವಾಸ ಇದೆ. ಈ ಬಗೆಯ ರಾಜಕೀಯ ಸಮರ್ಪಕತೆಯ ಪ್ರದರ್ಶನದಿಂದ ಯಾವ ವೈಜ್ಞಾನಿಕ ಸಮಾಜಶಾಸ್ತ್ರವೂ ಬೆಳೆಯುವುದಿಲ್ಲವೆಂಬುದನ್ನು ಅರ್ಥ ಮಾಡಿಕೊಳ್ಳಬೇಕಾದ ಕಾಲವೀಗ ಬಂದಿದೆ. ಉದಾಹರಣೆಗೆ, ಅವಮಾನಕ್ಕೆ ಸಂಬಂಧಿಸಿ ನಾನು ಕೊಟ್ಟ ರೂಪಕದ ಹಿಂದೆ ಎಸ್.ಎನ್.ಬಾಲಗಂಗಾಧರ ಅವರ ಪ್ರಭಾವ ಇದೆಯೆಂದು ರಘುನಂದನ ಊಹಿಸಿದ್ದಾರೆ. ಈ ಬಗೆಯಲ್ಲಿ ಅಂದಾಜಿಗೆ ಗುರಿ ಹಿಡಿಯುವ ಬದಲು, ತಮ್ಮ ಯಾವ ಲೇಖನದಲ್ಲಿ ಬಾಲಗಂಗಾಧರ ಅವರು ಈ ರೂಪಕವನ್ನು ಕೊಟ್ಟಿದ್ದಾರೆಂಬುದನ್ನು ರಘುನಂದನ ಅವರು ತಿಳಿಸಬೇಕು. ಇದು ಈ ಬಗೆಯ ಲೇಖನ ಬರೆಯುವವರಿಗೆ ಇರಬೇಕಾದ ಕನಿಷ್ಠ ಶಿಸ್ತು ಎಂದು ನಾನು ತಿಳಿಯುತ್ತೇನೆ.

4. ನಾನು ಆ ಲೇಖನದಲ್ಲಿ ಪ್ರಸ್ತಾಪಿಸಿದ ‘ಕೂತವ-ನಿಂತವ-ನೋಡುವವ’ ಎಂಬ ರೂಪಕವು ಹಲವು ಅಪಾರ್ಥಗಳಿಗೆ ಕಾರಣವಾಗಿದೆ.  ನೋಡುವವರಿಗೆ ಯಾವುದೇ ಸಂಗತಿಯು ಅನ್ಯಾಯವೆಂದು ಕಂಡರೆ ಅವರು ಪ್ರತಿಭಟಿಸಬಾರದು ಎಂದು ನಾನು ಎಲ್ಲಿಯೂ ಹೇಳಿಲ್ಲ.  ಹಾಗೆಯೇ, ಮಡೆಸ್ನಾನವನ್ನು ವಿರೋಧಿಸಿ ಪ್ರತಿಭಟನೆ ಮಾಡುವುದೇ ತಪ್ಪು ಎಂದೂ ನಾನು ಹೇಳಲಾರೆ; ಆ ಹಕ್ಕು ಪ್ರಜಾಸತ್ತೆಯಲ್ಲಿ ಇದ್ದೇ ಇದೆ. ಆದರೆ, ಯಾವುದೇ ಸಂಗತಿಯನ್ನು ಅವಮಾನವೆಂದು ತೀರ್ಮಾನಿಸುವುದಕ್ಕೆ ನೋಡುವವರ ಅಭಿಪ್ರಾಯವೊಂದೇ ಸಾಕಾಗಲಾರದು- ಎಂಬುದು ನನ್ನ ಸೂಚನೆ. ಯಾವುದೇ ಕ್ರಿಯೆಯಲ್ಲಿ ಪಾಲ್ಗೊಂಡವರು ಮತ್ತು ಅದನ್ನು ನೋಡಿ ವಿಶ್ಲೇಷಿಸುವವರು- ಇವರ ಸಂವಾದದಲ್ಲಿ ಒಂದು ಸಂಸ್ಕೃತಿಯು ಅವಮಾನ ಎಂದರೇನೆಂಬುದನ್ನು ಅರ್ಥೈಸಿಕೊಳ್ಳಬೇಕು ಎಂಬುದು ಈ ರೂಪಕದ ಮೂಲಕ ನಾನು ಸೂಚಿಸಲು ಬಯಸಿದ ವಿಷಯ. ಈ ವಿಚಾರವನ್ನು ಹೇಳುತ್ತಿರುವ ಮೊದಲಿಗನೇನೂ ನಾನಲ್ಲ. ನಿಜವಾಗಿ, ಈ ರೂಪಕವನ್ನು ನಾನು ರೂಪಿಸಿದ್ದು ಅವಮಾನವೆಂಬ ಪರಿಕಲ್ಪನೆಯನ್ನು ಕುರಿತಂತೆ ಅಶೀಶ್ ನಂದಿಯವರು ಬರೆದ ‘ಹ್ಯುಮಿಲಿಯೇಷನ್’ ಎಂಬ ಲೇಖನವನ್ನು ಆಧರಿಸಿ. ಒಂದು ಸಂಸ್ಕೃತಿಯೊಳಗಡೆ ಯಾವುದು ಅವಮಾನ, ಯಾವುದು ಅಲ್ಲ ಎಂಬುದನ್ನು ನಿರ್ಧರಿಸುವುದು ಎಷ್ಟು ಸಂಕೀರ್ಣವಾದ ಸಮಸ್ಯೆಯೆಂಬುದನ್ನು ನಂದಿಯವರು ಆ ಲೇಖನದಲ್ಲಿ ವಿವರವಾಗಿ ವಿಶ್ಲೇಷಿಸಿದ್ದಾರೆ. ಉದಾಹರಣೆಗೆ, ಸ್ವತಃ ಅವಮಾನಿತರೇ ಅವಮಾನವೆಂದು ಭಾವಿಸದಿರುವುದನ್ನು ಮೂರನೆಯವರು ಅವಮಾನಕರವೆಂದು ಹೇಳುವುದರಲ್ಲಿ ಏನು ಸಮಸ್ಯೆಯಿದೆ? ಈ ಕುರಿತು, ಮೇಲೆ ಉಲ್ಲೇಖಿಸಿದ ನಂದಿಯವರ ಲೇಖನವು ತುಂಬ ಮಾರ್ಮಿಕವಾದ ಮಾತೊಂದನ್ನು ಹೇಳುತ್ತದೆ- ‘ಹಿಂದು ರಾಷ್ಟ್ರೀಯವಾದಿಗಳು ತಾವು ಎಲ್ಲ ಹಿಂದುಗಳ ಪರವಾಗಿ ಮಾತಾಡುವುದಾಗಿ ಹೇಳಿಕೊಳ್ಳುತ್ತ, ಹಲವು ಶತಮಾನಗಳ ಕಾಲ ಮುಸ್ಲಿಮರು ಹಿಂದುಗಳನ್ನು ಅವಮಾನ ಮಾಡಿದ್ದಾರೆಂದೂ ಆದರೆ ಅದು ಹಿಂದುಗಳಿಗೆ ಗೊತ್ತಾಗದಷ್ಟು ಅವರು ಜಡರಾಗಿದ್ದಾರೆಂದೂ ವಾದಿಸುತ್ತದೆ- ಇದನ್ನು ನಾವು ಮರೆಯದಿರೋಣ’ (ಪುಟ 131, ಟೈಮ್ ಟ್ರೆಕ್ಸ್, ಪರ್ಮನೆಂಟ್ ಬ್ಲಾಕ್, 2007). ಆದ್ದರಿಂದಲೇ, ಗಾಂಧಿಯವರೇ ಆಗಲಿ ಅಂಬೇಡ್ಕರ್‌ರೇ ಆಗಲಿ ಕೇವಲ ಇನ್ನೊಬ್ಬರ ‘ಪರವಾಗಿ’ ಹೋರಾಟ ಮಾಡಲಿಲ್ಲ ಎಂಬುದನ್ನೂ ನಾವು ನೆನಪಿಸಿಕೊಳ್ಳಬೇಕು. ಜೊತೆಯಾಗಿ ಮಾಡುವುದಕ್ಕೂ ಪರವಾಗಿ ಮಾಡುವುದಕ್ಕೂ ದೊಡ್ಡ ವ್ಯತ್ಯಾಸವಿದೆ. ಜೊತೆಯಾಗಿ ಮಾಡುವ ಕೆಲಸಕ್ಕೆ ಆಳವಾದ ನೈತಿಕ ಶಕ್ತಿಯೂ ವೈಯಕ್ತಿಕ ಚಾರಿತ್ರ್ಯವೂ ಅಗತ್ಯವಾಗುತ್ತದೆ; ಪರವಾಗಿ ಮಾಡುವ ಕೆಲಸ ಹಾಗಲ್ಲ.

5.  ನನ್ನ ವಾದವು ವಿಶಾಲವ್ಯಾಪ್ತಿಯ ಬ್ರಾಹ್ಮಣ ಕುತಂತ್ರವೊಂದರ ಭಾಗ ಎಂಬ ಅರ್ಥದಲ್ಲಿ ಕೆಲವರು ಪ್ರತಿಕ್ರಿಯಿಸಿದ್ದಾರೆ. ಇಂಥ ಅಭಿಪ್ರಾಯಕ್ಕೆ ವ್ಯಾಪಕವಾದೊಂದು ಐತಿಹಾಸಿಕ ಭಿತ್ತಿಯೂ ಇದೆ. ಭಾರತದಲ್ಲಿ ಇವತ್ತು ನಾವು ಕಾಣುತ್ತಿರುವ ಹಲವು ರೀತಿಯ ಅನ್ಯಾಯ ಮತ್ತು ಅಸಮಾನತೆಗಳಿಗೆಲ್ಲ ‘ಪುರೋಹಿತಶಾಹಿ’ಯ ಹುನ್ನಾರವೇ ಕಾರಣ- ಎಂಬುದು ನಮ್ಮ ಹಲವು ಉಗ್ರವಾದಿ ಸೆಕ್ಯುಲರಿಸ್ಟರ ನಂಬಿಕೆ (ಪುರೋಹಿತಶಾಹಿ ಅಂದರೇನು? ಅದು ಜಾತಿಸೂಚಕವೇ? ವೃತ್ತಿಸೂಚಕವೆ? ಅಥವಾ ನಿರ್ದಿಷ್ಟ ಧೋರಣೆಗಳ ಸಮುಚ್ಚಯವೆ?). ಅದೇನೇ ಇರಲಿ, ಈ ವಾದದಲ್ಲೊಂದು ಸಮಸ್ಯೆಯಿದೆ. ಈ ವಾದವನ್ನು ಒಪ್ಪುವುದಾದರೆ, ಭಾರತದ ಜನಸಂಖ್ಯೆಯ ಶೇಕಡಾ 10ಕ್ಕೂ ಕಡಿಮೆಯಿರುವ ಈ ‘ಬ್ರಾಹ್ಮಣ’ ಸಮುದಾಯವು ಸುಮಾರು ಎರಡು ಸಹಸ್ರಮಾನಕ್ಕಿಂತ ಹೆಚ್ಚು ಕಾಲ ಈ ಇಡೀ ಸಮಾಜದ ಮೇಲೆ ತನ್ನ ನಿಯಂತ್ರಣವನ್ನು ಕಾದುಕೊಂಡು ಬಂದಿದೆ ಎಂದು ನಂಬಬೇಕಾಗುತ್ತದೆ. ಆದರೆ, ಹಾಗೆ ನಂಬುವುದು ಬ್ರಾಹ್ಮಣ ಸಮುದಾಯಕ್ಕೆ ಇಲ್ಲದ ಅತಿಮಾನುಷ ಶಕ್ತಿಯೊಂದನ್ನು ಆರೋಪಿಸುವ ವೈಭವೀಕರಣವಲ್ಲವೆ? ಬದಲು, ಈ ಸಮಸ್ಯೆಗಳನ್ನು ಕುರಿತು ಹೊಸ ದಿಕ್ಕಿನಲ್ಲಿ ಯೋಚಿಸಿದರೆ ಹೆಚ್ಚು ಸಮರ್ಥ ಉತ್ತರಗಳು ಕಾಣಬಹುದಲ್ಲವೆ? ನಿಜ, ಈ ಉತ್ತರಗಳು ಸುಲಭಕ್ಕೆ ಸಿಗದಿರಬಹುದು; ತಪ್ಪು ಉತ್ತರಗಳೂ ಸಿಕ್ಕಬಹುದು. ಹಾಗಂತ ಹುಡುಕುವುದೇ ತಪ್ಪೆ?

ಕಡೆಯದಾಗಿ, ಈ ಲೇಖನವನ್ನು ನಾನೇಕೆ ಬರೆದೆನೆಂಬ ಬಗ್ಗೆ ಒಂದು ಮಾತು- ನನ್ನ ಸ್ನೇಹಿತರೇ ಹೆಚ್ಚಿರುವ ಸೆಕ್ಯುಲರ್ ಸಮೂಹದೊಂದಿಗೆ ಕಾಲು ಕೆರೆದು ಜಗಳ ಮಾಡುವುದು ನನ್ನ ಆಸೆಯಲ್ಲ; ಅಥವಾ ಹೊಸ ರೀತಿಯ ವಿಶ್ಲೇಷಣೆಯೊಂದನ್ನು ಮಾಡುವ ರೂಪಕವಿಲಾಸದಲ್ಲೂ ನನಗೆ ಆಸಕ್ತಿಯಿಲ್ಲ. ನನ್ನ ಪ್ರೇರಣೆ ಅದಕ್ಕಿಂತ ಹೆಚ್ಚು ಪ್ರಾಥಮಿಕವಾದದ್ದು ಮತ್ತು ವೈಯಕ್ತಿಕವಾದದ್ದು- ನನ್ನ ತಂದೆ ಪುರಸೊತ್ತಾದಾಗ ಪೂಜೆ ಮಾಡುತ್ತಿದ್ದರು; ನನ್ನ ಅಜ್ಜಿ ಹರಕೆಗಳನ್ನೂ ಹೊರುತ್ತಿದ್ದರು. ಇನ್ನು ನನ್ನ ಸುತ್ತಮುತ್ತಲಿರುವ, ಎಲ್ಲ ಜಾತಿಯ ಜನರೂ ಕೂಡಿರುವ (ಹಾಗೂ ನಗರ/ಹಳ್ಳಿ, ಪರಂಪರೆ/ಆಧುನಿಕತೆ ಮೊದಲಾದ ವರ್ಗೀಕರಣಗಳಿಗೆ ಸಿಗದೆ ನುಣುಚಿಕೊಳ್ಳುವ) ಸಮುದಾಯವು ದಿನಬೆಳಗಾದರೆ ಪೂಜೆ-ಪುನಸ್ಕಾರ-ಹಬ್ಬ-ಹರಕೆಗಳಲ್ಲೇ ಮುಳುಗಿರುವಂಥದು. ಇಂಥ ನಮ್ಮನ್ನೆಲ್ಲ ಹಿಂದುಳಿದವರೆಂದೂ ಪ್ರತಿಗಾಮಿಗಳೆಂದೂ ಮೂಢರೆಂದೂ ಯಾರಾದರೂ ಬಿಂಬಿಸಲೆತ್ನಿಸಿದರೆ ಅದು ನನಗೆ ಬೌದ್ಧಿಕ ಅಹಂಕಾರವಾಗಿ ಕಾಣುತ್ತದೆ. ಅಷ್ಟೇ ಅಲ್ಲ, ಈ ಬಗೆಯ ಅಹಂಕಾರ ಮತ್ತು ಜನಸಮುದಾಯಗಳ ನಂಬಿಕೆಗಳ ಕುರಿತು ತಿರಸ್ಕಾರ- ಇವೆರಡೂ ಸೇರಿದಾಗ ‘ಜನಪರ’ ಚಳವಳಿಗಳಿಂದ ಜನರೇ ದೂರವಾಗುವ ವಿಪರ್ಯಾಸ ಕಾಣಿಸಿಕೊಳ್ಳುತ್ತದೆ; ಮತ್ತು ಅದರ ಫಲವಾಗಿ- ಫಣಿರಾಜ್ ಅವರು ತಮ್ಮ ಪ್ರತಿಕ್ರಿಯೆಯಲ್ಲಿ ಉಲ್ಲೇಖಿಸಿದಂತೆ- ಅದೇ ಅದೇ ಹತ್ತಾರು ಜನರೇ ಎಲ್ಲ ಹೋರಾಟಗಳಲ್ಲೂ ಮುಂದೆ ನಿಲ್ಲುವ ಪ್ರಸಂಗ ಹುಟ್ಟುತ್ತದೆ. ನಾನು ಗ್ರಹಿಸಿದ ಇವತ್ತಿನ ಇಂಥ ವಿರೋಧಾಭಾಸಕ್ಕೆ ನನ್ನ ಲೇಖನ ಒಂದು ಕಿರುಸ್ಪಂದನೆ, ಅಷ್ಟೇ.
‘ಹರಕೆ-ಹರಾಜು’ ಲೇಖನಕ್ಕೆ ಸಂಬಂಧಿಸಿದ ಸಂವಾದ ಇಲ್ಲಿಗೆ ಮುಗಿಯಿತು.
-ಸಂ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT