ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವಾದಗೈದ ಕಲಾಂಗೆ ವಿದ್ಯಾರ್ಥಿಗಳ ಸಲಾಂ

Last Updated 8 ಫೆಬ್ರುವರಿ 2011, 8:40 IST
ಅಕ್ಷರ ಗಾತ್ರ

ಬೆಳಗಾವಿ: ವಿಜ್ಞಾನ ಇರುವುದು ಸಮಾಜದ ಅಭಿವೃದ್ಧಿಗಾಗಿ. ನ್ಯೂಕ್ಲಿಯರ್ ಅನ್ನು ವಿದ್ಯುತ್, ಕ್ಯಾನ್ಸರ್ ಮೊದಲಾದ ಚಿಕಿತ್ಸೆಗೆ ಬಳಸಬಹುದು. ಕೆಲವೊಮ್ಮೆ ಅದನ್ನು ಕೆಟ್ಟದ್ದಕ್ಕೂ ಬಳಸಿರಬಹುದು. ಆದರೆ ಒಳ್ಳೆಯದ್ದಕ್ಕೆ ಬಳಕೆಯಾಗಬೇಕು ಎಂಬುದು ವಿಜ್ಞಾನದ ಉದ್ದೇಶ.ಹೀಗೆಂದು ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ನಗರದ ಗೋಮಟೇಶ ವಿದ್ಯಾಪೀಠದಲ್ಲಿ ಸೋಮವಾರ ವಿದ್ಯಾರ್ಥಿಗಳೊಂದಿಗೆ ನಡೆಸಿದ ಸಂವಾದದಲ್ಲಿ ನ್ಯೂಕ್ಲಿಯರ್ ಕೆಟ್ಟದ್ದಕ್ಕೂ ಬಳಕೆಯಾಗುವುದರ ಕುರಿತು ವಿದ್ಯಾರ್ಥಿ ಕೇಳಿದ ಪ್ರಶ್ನೆಗೆ ಉತ್ತರಿಸಿದರು.

ಸುಡು ಬಿಸಿಲಿನಲ್ಲಿ ಕಾಯ್ದು ನಿಂತಿದ್ದ ಮಕ್ಕಳು ಅಷ್ಟೇ ಬಿಸಿ ಹಾಗೂ ಕಠಿಣವಾದ ಪ್ರಶ್ನೆಗಳನ್ನು ಕಲಾಂ ಅವರತ್ತ ಎಸೆದರು. ಅಷ್ಟೇ ತಣ್ಣನೆಯ, ಸಮಾಧಾನಿಸುವ ರೀತಿಯಲ್ಲಿ ಅವರು ಉತ್ತರಿಸಿದರು.ಉತ್ತಮ ಹೃದಯ ತಜ್ಞೆಯಾಗಬೇಕು ಎಂದಿದ್ದೇನೆ. ಯಾವ ಗುಣ ಹೊಂದಿದ್ದರೆ ಆಗಲು ಸಾಧ್ಯ ಎಂಬ ಪ್ರಶ್ನೆಗೆ ಕಲಾಂ ಅವರು, ‘ಮೊದಲು ನೀನು ಎರಡು ಹೃದಯಗಳನ್ನು ಹೊಂದಬೇಕು. ರೋಗಿಗಳನ್ನು ದಯಾಗುಣದಿಂದ ನೋಡುವ ಹೃದಯ ಹೊಂದಿದಾಗಲೇ ಯಶಸ್ವಿಯಾಗಲು ಸಾಧ್ಯ’ ಎಂದರು.

ಜಾಗತಿಕ ತಾಪಮಾನ ಕುರಿತು ಕೇಳಿದ ಪ್ರಶ್ನೆಗೆ, ‘ಹೆಚ್ಚಾಗುತ್ತಿರುವ ಉಷ್ಣತೆಯನ್ನು ತಡೆಯಲು ಸೋಲಾರ್, ನ್ಯೂಕ್ಲಿಯರ್ ಹಾಗೂ ಜಲ ವಿದ್ಯುತ್ ಉತ್ಪಾದನೆಯ ಮೊರೆ ಹೋಗಬೇಕು. ಆ ಮೂಲಕ ಒಂದಷ್ಟು ಕಡಿಮೆ ಮಾಡಬಹುದಾಗಿದೆ’ ಎಂದು ಹೇಳಿದರು.ಉಪಗ್ರಹಗಳ ನಿರ್ಮಾಣಕ್ಕಾಗಿ ದೊಡ್ಡ ಪ್ರಮಾಣದಲ್ಲಿ ಹಣ ಖರ್ಚು ಮಾಡುವ ಬದಲು, ಆ ಹಣವನ್ನು ಬಡತನ ನಿರ್ಮೂಲನೆ ಮಾಡಲು ಬಳಸಬಹುದಲ್ಲವೇ ಎಂಬ ಪ್ರಶ್ನೆಗೆ, ಚಂದ್ರಯಾನವನ್ನು ಸಾಮಾಜಿಕ ಕಾಳಜಿಯಿಂದಲೇ ಮಾಡಲಾಗುತ್ತಿದೆ. ಸಂವಹನ ಮಾಧ್ಯಮದಲ್ಲಿ ಕ್ರಾಂತಿಯಾಗಲು ಉಪಗ್ರಹಗಳೇ ಕಾರಣವಾಗಿವೆ ಎಂಬುದನ್ನು ಮರೆಯಬಾರದು ಎಂದರು.

ಸೋಲಾರ್ ಎನರ್ಜಿ ಬಳಕೆಗೆ ಏಕೆ ಹೆಚ್ಚು ಒತ್ತು ನೀಡುತ್ತಿಲ್ಲ ಎಂಬ ಪ್ರಶ್ನೆಗೆ, ‘ಸೋಲಾರ್ ಬಳಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. 30 ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲಾಗುತ್ತದೆ. ಈ ನಿಟ್ಟಿನಲ್ಲಿ ಇನ್ನಷ್ಟು ಸಂಶೋಧನೆಯಾಗಬೇಕಿದೆ’ ಎಂದು ಅವರು ಹೇಳಿದರು.ವಿದ್ಯಾರ್ಥಿ, ಶಿಕ್ಷಕ, ರಾಷ್ಟ್ರಪತಿ ಆಗಿದ್ದೀರಿ. ಯಾವಾಗ ಹೆಚ್ಚು ಖುಷಿಯಾಗಿದ್ದೀರಿ ಎಂಬ ಪ್ರಶ್ನೆಗೆ, ಎಲ್ಲ ಕಾಲಕ್ಕೂ ಖುಷಿಯಾಗಿದ್ದೆ. ನಾನು ಶಿಕ್ಷಕ ವೃತ್ತಿ ಪ್ರೀತಿಸುತ್ತೇನೆ ಎಂದು ಅವರು ಹೇಳಿದರು.

ಭಯೋತ್ಪಾದನೆ ನಿರ್ಮೂಲನೆಗೆ ಏನು ಮಾಡಬಹುದು? ಎಂಬ ಪ್ರಶ್ನೆಗೆ, ತೀವ್ರಗತಿಯಲ್ಲಿ ಆರ್ಥಿಕ ಪ್ರಗತಿ ಸಾಧನೆ ಮಾಡಬೇಕು. ಜೊತೆಗೆ ಭಯೋತ್ಪಾದಕರ ವಿಚಾರಣೆಗಾಗಿ ವಿಶೇಷ ನ್ಯಾಯಾಲಯ ಸ್ಥಾಪಿಸಬೇಕು. ಶಿಕ್ಷೆ ನೀಡಬೇಕು ಎಂದರು. ಗುಪ್ತವಾಗಿಡಬೇಕಾಗಿದ್ದ ಭದ್ರತೆಗೆ ಸಂಬಂಧಿಸಿದ ವಿಷಯಗಳನ್ನು ಟಿವಿಯಲ್ಲಿ ಬಿತ್ತರಿಸುತ್ತಾರಲ್ಲ ಎಂಬ ಪ್ರಶ್ನೆಗೆ, ಹಾಗೇನಿಲ್ಲ. ಯಾವುದನ್ನು ಹೇಳಬೇಕು. ಹೇಳಬಾರದು ಎಂದು ವಿಂಗಡಣೆ ಮಾಡಲಾಗಿರುತ್ತದೆ.  ಕೆಲವನ್ನಷ್ಟು ಮಾತ್ರ ಹೇಳಲಾಗುತ್ತದೆ ಎಂದು ಹೇಳಿದರು.

ಸಾಕಷ್ಟು ಸಂಖ್ಯೆಯಲ್ಲಿ ಮಕ್ಕಳು ಪ್ರಶ್ನೆಗಳನ್ನು ಕೇಳಲು ಸಿದ್ಧರಾಗಿದ್ದರು. ಆದರೆ ಸಮಯ ಅಭಾವದಿಂದ ಕೇಳಲು ಅವಕಾಶ ಸಿಗಲಿಲ್ಲ. ಅವರನ್ನೂ ನಿರಾಸೆಗೊಳಿಸದ ಕಲಾಂ ಅವರು, ಪ್ರಶ್ನೆಗಳನ್ನು ಇಮೇಲ್ ಮಾಡಿ, ಉತ್ತರಿಸುತ್ತೇನೆ ಎಂದು ಹೇಳಿದರು. ಇದಕ್ಕೂ ಮೊದಲು ಅಂಕವಿಕಲ ಮಕ್ಕಳಿಗೆ ಸಾಧನಗಳನ್ನು ವಿತರಿಸಿ, ಹಸ್ತಾಕ್ಷರ ನೀಡಿದರು. ಶಾಸಕರಾದ ಅಭಯ ಪಾಟೀಲ, ಸಂಜಯ ಪಾಟೀಲ, ಫಿರೋಜ್ ಸೇಠ, ಜಿಲ್ಲಾಧಿಕಾರಿ ಏಕರೂಪ್ ಕೌರ್, ಜಿಲ್ಲಾ ಪೊಲೀಸ್ ವರಿಷ್ಠ ಸಂದೀಪ ಪಾಟೀಲ, ವಿ.ಜಿ. ನಾಡಗೀರ. ಶಕುಂತಲಾ ಪರಾಂಜಪೆ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT