ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವಿಧಾನದ ಚೌಕಟ್ಟು ಮೀರಿಲ್ಲ

Last Updated 3 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಐದು ಮತ್ತು ಎಂಟನೇ ತರಗತಿಯ ಪರಿಷ್ಕೃತ ಸಮಾಜ ವಿಜ್ಞಾನ ಪಠ್ಯದಲ್ಲಿ ಬಿಜೆಪಿಯ ರಾಜಕೀಯ ಸಿದ್ಧಾಂತವನ್ನು ಅಳವಡಿಸಲಾಗಿದೆ ಎಂಬ ಟೀಕೆಗಳು ಕೇಳಿಬರುತ್ತಿವೆಯಲ್ಲಾ?
- ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು 2005ರ ಮಾರ್ಗದರ್ಶಿ ಸೂತ್ರಗಳ ಆಧಾರದ ಮೇಲೆ ಪಠ್ಯಪುಸ್ತಕಗಳನ್ನು ರಚಿಸಲಾಗಿದೆ. ಮಾಜಿ ಶಿಕ್ಷಣ ಸಚಿವರಾದ ಎಚ್.ವಿಶ್ವನಾಥ್, ಪ್ರೊ.ಬಿ.ಕೆ.ಚಂದ್ರಶೇಖರ್ ಸೇರಿದಂತೆ ಸಂಪನ್ಮೂಲ ವ್ಯಕ್ತಿಗಳೊಂದಿಗೆ ಸುಮಾರು ಎರಡು ವರ್ಷಗಳ ಕಾಲ ಸಮಾಲೋಚನೆ ನಡೆಸಿ, ಸಲಹೆ ಸೂಚನೆಗಳನ್ನು ಪಡೆಯಲಾಗಿದೆ.

ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಸಂಸ್ಥೆ ಮತ್ತು ಮೈಸೂರಿನ ಪ್ರಾದೇಶಿಕ ಶಿಕ್ಷಣ ಸಂಸ್ಥೆಯ ಮಾರ್ಗದರ್ಶಿ ಸೂತ್ರಗಳಿಗೆ ವಿರುದ್ಧವಾಗಿ ಪಠ್ಯಪುಸ್ತಕಗಳ ರಚನೆಯಾಗಿಲ್ಲ. ಪ್ರಮುಖವಾಗಿ ಭಾರತೀಯ ದೃಷ್ಟಿಕೋನ ಇರಬೇಕು ಮತ್ತು `ಗುಲಾಮತನದಲ್ಲಿ ಇದ್ದೇವೆ~ ಎಂಬ ಭಾವನೆಯನ್ನು ಮಕ್ಕಳಲ್ಲಿ ಬೆಳಸುವಂತೆ ಆಗಬಾರದು ಎಂಬ ಎರಡು ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಪಠ್ಯಕ್ರಮ ರೂಪಿಸಲಾಗಿದೆ.

ಹೈದರಾಲಿ ಮುಸ್ಲಿಂ ಎನ್ನುವ ಕಾರಣಕ್ಕಾಗಿ ಶತ್ರುವಿಗೆ ಗೆಲುವಾಯಿತು ಎಂದು ಉಲ್ಲೇಖಿಸಲಾಗಿದೆಯೇ?
- ಪಾಠದಲ್ಲಿನ ಸಂದರ್ಭಕ್ಕೆ ಅನುಗುಣವಾಗಿ ಒಂದೆರಡು ಉದಾಹರಣೆಗಳನ್ನು ನೀಡಿರಬಹುದು. ಆ ಅಂಶಗಳನ್ನೇ ತೆಗೆದುಕೊಂಡು ವೈಭವೀಕರಿಸುವುದು ಸರಿಯಲ್ಲ. ಸ್ವಾಭಿಮಾನ, ರಾಷ್ಟ್ರಾಭಿಮಾನಕ್ಕೆ ಧಕ್ಕೆ ಬಾರದ ಹಾಗೆ ಮೌಲ್ಯಯುತ ಶಿಕ್ಷಣ ನೀಡುವುದಕ್ಕೆ ಒತ್ತು ನೀಡಲಾಗಿದೆ. ಅಲೆಗ್ಸಾಂಡರ್ ಭಾರತದ ಮೇಲೆ ದಂಡೆತ್ತಿ ಬಂದ ಎಂಬುದಕ್ಕಿಂತ ಪೌರವ ಆತನನ್ನು ಓಡಿಸಿದ ಎಂದು ತಿಳಿಸುವುದರಿಂದ ರಾಷ್ಟ್ರಾಭಿಮಾನ ಜಾಗೃತವಾಗುತ್ತದೆ.

ಹಿಂದೂ, ಮುಸ್ಲಿಂ, ಕ್ರೈಸ್ತ, ಸಿಖ್, ಬೌದ್ಧ ಸೇರಿದಂತೆ ಯಾವುದೇ ಧರ್ಮದವರು ಓದಬಹುದಾದ ಪಠ್ಯದಲ್ಲಿ ಕೇವಲ ಹಿಂದೂ ಕುಟುಂಬವನ್ನು ಮಾತ್ರ ವಿವರಿಸಿರುವುದು ಯಾಕೆ?
- ಮೊದಲೇ ಹೇಳಿದಂತೆ ಹಿಂದೂ ಕುಟುಂಬವನ್ನು ಉದಾಹರಣೆಯಾಗಿ ನೀಡಿರಬಹುದು. ಅರ್ಧ ಸತ್ಯ, ಒಂದೆರಡು ಅಂಶಗಳ ಆಧಾರದ ಮೇಲೆ ಅಳೆಯುವುದಕ್ಕಿಂತ ವಿಶಾಲ ಮನೋಭಾವದಿಂದ ನೋಡಬೇಕು. ಯಾವುದೇ ಒಂದು ಧರ್ಮದ ವಿಷಯವನ್ನು ವೈಭವಿಕರಿಸುವ ಕೆಲಸ ಮಾಡಿಲ್ಲ.

ಸಮಾಜ ವಿಜ್ಞಾನ ಪಠ್ಯವನ್ನು ಹಿಂದೂ ಧಾರ್ಮಿಕ ಕ್ಷೇತ್ರಗಳ ಪ್ರಚಾರಕ್ಕೆ ಬಳಸಿಕೊಳ್ಳಲಾಗಿದೆ ಎಂಬ ಟೀಕೆಗಳು ಕೇಳಿಬರುತ್ತಿವೆಯಲ್ಲಾ?
- ಮಾರ್ಗದರ್ಶಿ ಸೂತ್ರಗಳನ್ನು ಮೀರಿ ಪಠ್ಯಪುಸ್ತಕಗಳ ರಚನೆಯಾಗಿಲ್ಲ. ಸಂಪನ್ಮೂಲ ವ್ಯಕ್ತಿಗಳು ಪುಸ್ತಕಗಳನ್ನು ಬರೆದಿದ್ದಾರೆ. ಸಂಘಟನೆಯವರು ಸಂಪನ್ಮೂಲ ವ್ಯಕ್ತಿಗಳೊಂದಿಗೆ ಚರ್ಚೆ ಮಾಡಿಲ್ಲ.

ಪಠ್ಯಪುಸ್ತಕದಲ್ಲಿ ಅಖಂಡ ಭಾರತದ ನಕ್ಷೆ ನೀಡಿರುವುದರ ಉದ್ದೇಶವೇನು?
- ಸ್ವಾತಂತ್ರ್ಯಪೂರ್ವದ ಇತಿಹಾಸವನ್ನೂ ಮಕ್ಕಳಿಗೆ ತಿಳಿಸುವ ದೃಷ್ಟಿಯಿಂದ ನೀಡಲಾಗಿದೆ. 1949ಕ್ಕಿಂತ ಮುಂಚೆ ಅಖಂಡ ಭಾರತವಿತ್ತು. ಆ ವಿಷಯವನ್ನು ತಿಳಿಸಲು ನೀಡಿದರೆ ವಿವಾದ ಸೃಷ್ಟಿಸುವುದು ಸರಿಯಲ್ಲ. ಹಿಂದೆ ಯಾವ ರೀತಿ ಇತ್ತು ಎಂಬುದನ್ನು ಅರ್ಥ ಮಾಡಿಸಲು ನೀಡಲಾಗಿದೆ ಅಷ್ಟೇ.

ಇದರ ಹಿಂದೆ ಮಕ್ಕಳಲ್ಲಿ ಆಕ್ರಮಣಶೀಲತೆಯನ್ನು ಬಿತ್ತುವ ಮತ್ತು ಅಂತರರಾಷ್ಟ್ರೀಯ ಸಂಬಂಧಗಳ ಬಗ್ಗೆ ಪೂರ್ವಗ್ರಹಪೀಡಿತರನ್ನಾಗಿ ಮಾಡುವ ಉದ್ದೇಶ ಇದೆಯೇ?
- ಮಕ್ಕಳಲ್ಲಿ ಸಂಕುಚಿತ ಮನೋಭಾವ, ಕೀಳರಿಮೆ ಮೂಡಿಸುವುದು ನಮ್ಮ ಉದ್ದೇಶವಲ್ಲ. ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿಗೆ ಅನುಗುಣವಾಗಿ ರಚನೆಯಾಗಿದೆ. ಚಿಕ್ಕವಯಸ್ಸಿನ ಮಕ್ಕಳಲ್ಲಿ ಸಂಕುಚಿತ ಮನೋಭಾವ ಬೆಳೆಸುವ ಸಂಸ್ಕೃತಿ ನಮ್ಮದಲ್ಲ. ಸಂವಿಧಾನದ ಚೌಕಟ್ಟನ್ನು ಮೀರಿ ಮಾಡಲು ಸಾಧ್ಯವಿಲ್ಲ. ಆ ರೀತಿ ಮಾಡಲು ಇದು ಚರ್ಚ್, ಮಸೀದಿ ಬಗ್ಗೆ ತಿಳಿಸುವ ಧಾರ್ಮಿಕ ಪುಸ್ತಕವಲ್ಲ.

ಪೊಲೀಸ್ ಠಾಣೆಗೆ ಭೇಟಿ ನೀಡಿ ಭಾರತದಲ್ಲಿ ವಿದೇಶಿಯರು ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ಮತ್ತು ಅವರನ್ನು ಶಿಕ್ಷಿಸಲು ಇರುವ ಇತಿಮಿತಿಗಳ ಬಗ್ಗೆ ಚರ್ಚಿಸಿ ಎಂದು ತಿಳಿಸುವ ಅಗತ್ಯವಿತ್ತೇ?
- ಈ ಬಗ್ಗೆ ಗೊತ್ತಿಲ್ಲ, ನಾನು ಪಠ್ಯಪುಸ್ತಕವನ್ನು ಓದಿಲ್ಲ. ತಜ್ಞರು ಪಠ್ಯಪುಸ್ತಕಗಳನ್ನು ರಚಿಸಿದ್ದಾರೆ.

ತಜ್ಞರ ದೃಷ್ಟಿಯಲ್ಲಿ ಭಾರತಕ್ಕೆ ಭೇಟಿ ನೀಡುವ ವಿದೇಶಿಯರು ಅಪರಾಧ ಚಟುವಟಿಕೆಗಳನ್ನು ತೊಡಗುತ್ತಾರಾ? ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು? ಈ ಅಂಶಗಳನ್ನು ತೆಗೆಯುತ್ತೀರಾ?
 
ಪಠ್ಯಪುಸ್ತಕದಲ್ಲಿ ಏನಿದೆ ಎಂಬುದನ್ನು ಪರಿಶೀಲಿಸುತ್ತೇನೆ. ಯಾವ ಹಿನ್ನೆಲೆಯಲ್ಲಿ ಈ ಅಂಶಗಳನ್ನು ನೀಡಿದ್ದಾರೆ. ಪಾಠದ ವಿಷಯ ಏನು ಎಂಬುದು ಮುಖ್ಯ. ಇಂತಹ ವಿಷಯಗಳನ್ನು ಸಮಗ್ರ ದೃಷ್ಟಿಕೋನದಿಂದ ನೋಡಬೇಕಾಗುತ್ತದೆ.

ಸರ್ವಾಧಿಕಾರಿ ಮತ್ತು ಸಮತಾವಾದಕ್ಕಿಂತ ಪ್ರಜಾಪ್ರಭುತ್ವ ಉತ್ತಮ ಎಂದು ತಿಳಿಸಲಾಗಿದೆ. ಸರ್ವಾಧಿಕಾರಿ ಮತ್ತು ಸಮತಾವಾದವನ್ನು ಒಂದೇ ತಕ್ಕಡಿಯಲ್ಲಿ ತೂಗುವುದು ಸರಿಯೇ?
- ಆ ರೀತಿ ಇರುವುದು ಗೊತ್ತಿಲ್ಲ. ಅದು ತಜ್ಞರ ಅಭಿಪ್ರಾಯ.

ಸ್ಥಳೀಯ ಶಾಸಕರನ್ನು ಶಾಲೆಗೆ ಆಹ್ವಾನಿಸಿ ದ್ವಿಪಕ್ಷ ವ್ಯವಸ್ಥೆ ಬಗ್ಗೆ ಚರ್ಚಿಸಿ ಎಂದು ಪಠ್ಯದಲ್ಲಿದೆ. ಅಂದರೆ ಪ್ರಾದೇಶಿಕ ಪಕ್ಷಗಳು ಇರಬಾರದು, ಎರಡು ಪಕ್ಷಗಳು ಮಾತ್ರ ಇರಬೇಕು ಎಂಬುದು ನಿಮ್ಮ ಉದ್ದೇಶವೇ?
- (ಇದಕ್ಕೆ ಸ್ಪಷ್ಟ ಉತ್ತರ ನೀಡಲಿಲ್ಲ) ಸ್ಥಳೀಯ ಶಾಸಕರು ಪಕ್ಷೇತರರಾಗಿದ್ದರೆ ಅವರನ್ನು ಕರೆದು ಯಾವ ಪಕ್ಷ ಸೂಕ್ತ ಎಂದು ಚರ್ಚಿಸುವುದರಲ್ಲಿ ತಪ್ಪಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT