ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಶೋಧನೆಗೆ ಉತ್ತೇಜನ : ಅರಣ್ಯ ಇಲಾಖೆ ಜಮೀನು ನೀಡಿಕೆ

Last Updated 23 ಫೆಬ್ರುವರಿ 2011, 19:55 IST
ಅಕ್ಷರ ಗಾತ್ರ

ಬೆಂಗಳೂರು: ಆಯುರ್ವೇದ, ವನಸ್ಪತಿ ಮತ್ತು ಕಿರು ಅರಣ್ಯ ಉತ್ಪನ್ನಗಳ ಬೆಳವಣಿಗೆ ಮತ್ತು ಸಂಶೋಧನೆಗೆ ಉತ್ತೇಜನ ನೀಡುವ ಉದ್ದೇಶದಿಂದ ಅರಣ್ಯ ಇಲಾಖೆಯ ಜಮೀನನ್ನು ಖಾಸಗಿ ಸಂಸ್ಥೆಗಳಿಗೆ ನೀಡಲಾಗುವುದು. ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಸಂಸ್ಥೆಗಳು ಜಮೀನು ಕೋರಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಬಹುದು ಎಂದು ಅರಣ್ಯ ಸಚಿವ ಸಿ.ಎಚ್.ವಿಜಯಶಂಕರ್ ಬುಧವಾರ ತಿಳಿಸಿದರು.

ಅರಣ್ಯ ಇಲಾಖೆಯ ಸಂಶೋಧನೆ ಮತ್ತು ಆಡಳಿತ ವಿಭಾಗಗಳಿಗೆ ಸಂಬಂಧಿಸಿದಂತೆ ಹಿರಿಯ ಅಧಿಕಾರಿಗಳ ಸಭೆ ನಂತರ ಅವರು ಮಾತನಾಡಿದರು.ಅರಣ್ಯ ಅಭಿವೃದ್ಧಿ ನಿಗಮಕ್ಕೆ ಅರಣ್ಯ ಇಲಾಖೆಯಿಂದ ಒಟ್ಟು 1.4 ಲಕ್ಷ ಎಕರೆ ಜಮೀನು ನೀಡಿದ್ದು, ಇದರಲ್ಲಿ ನಿಗಮಕ್ಕೆ ಬೇಕಾದ ಜಮೀನು ಉಳಿಸಿ, ಉಳಿದ ಜಮೀನನ್ನು ಸರ್ಕಾರ ವಾಪಸ್ ಪಡೆಯಲಿದೆ. ನಂತರ ಅದನ್ನು ಖಾಸಗಿಯವರಿಗೆ ಹಂತಹಂತವಾಗಿ ನೀಡಲಾಗುವುದು. ಭೂಮಿಯ ಮಾಲೀಕತ್ವ ಮಾತ್ರ ಸರ್ಕಾರದ ಬಳಿಯೇ ಇರುತ್ತದೆ.ಗುತ್ತಿಗೆ ಆಧಾರದಲ್ಲೂ ಜಮೀನು ನೀಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಜಮೀನು ಕೊಡುವುದಕ್ಕೂ ಮುನ್ನ ಸಂಸ್ಥೆಯ ಪೂರ್ವಾಪರಗಳ ಬಗ್ಗೆ ಮಾಹಿತಿ ಪಡೆಯಲಾಗುವುದು. ನಂತರ ಕೆಲವು ಷರತ್ತುಗಳನ್ನು ವಿಧಿಸಿ ಜಮೀನು ನೀಡಲಾಗುವುದೆಂದರು. ಇ-ಹರಾಜು: ಇದೇ ಮಾ.31ರೊಳಗೆ ಇಲಾಖೆಯಲ್ಲಿ ಮರ ಉತ್ಪನ್ನಗಳ ಹರಾಜು ಪ್ರಕ್ರಿಯೆಯಲ್ಲಿ ಮತ್ತಷ್ಟು ಪಾರದರ್ಶಕತೆ ತರಲಾಗುವುದು. ಇ-ಹರಾಜು ಪ್ರಕ್ರಿಯೆಯನ್ನು ಮಾ.31ರೊಳಗೆ ಜಾರಿಗೊಳಿಸಲು ಸೂಚಿಸಲಾಗಿದೆ. ಇಡೀ ಇಲಾಖೆಯನ್ನು ಇ-ಆಡಳಿತದ ವ್ಯಾಪ್ತಿಗೆ ತರಲು ನವೆಂಬರ್‌ವರೆಗೆ ಸಮಯ ನೀಡಿದ್ದು, ಆ ಕೆಲಸವನ್ನು ತ್ವರಿತವಾಗಿ ಮಾಡಲಾಗುವುದು ಎಂದರು.

ಕರ್ತವ್ಯ ಸಂದರ್ಭದಲ್ಲಿ ಮರಣ ಹೊಂದುವ ಅರಣ್ಯ ಇಲಾಖೆ ಸಿಬ್ಬಂದಿಗೂ ಸೇನೆ ಮತ್ತು ಪೊಲೀಸ್ ಇಲಾಖೆಯಲ್ಲಿ ಇರುವ ಹಾಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ಮಾಡಲಾಗುವುದು. ಇದು ಈ ತಕ್ಷಣದಿಂದಲೇ ಜಾರಿಗೆ ಬರುತ್ತದೆ ಎಂದು ವಿವರಿಸಿದರು.

ವಿಜ್ಞಾನಿಗಳ ನೇಮಕ: ಅರಣ್ಯ ಇಲಾಖೆಯ ಒಂದೊಂದು ಭಾಗದಲ್ಲೂ ಒಂದೊಂದು ತಳಿ ಮತ್ತು ನರ್ಸರಿಗಳು ಹೆಸರುವಾಸಿಯಾಗಿದ್ದು, ಅವುಗಳನ್ನು  ಅಭಿವೃದ್ಧಿಪಡಿಸುವ ಉದ್ದೇಶದಿಂದ ನಾಲ್ಕು ವಿಭಾಗಗಳಿಗೂ  ವಿಜ್ಞಾನಿಗಳನ್ನು ನೇಮಕ ಮಾಡಲಾಗುವುದು. ಅಲ್ಲದೆ, ಕೇಂದ್ರ ಕಚೇರಿಯಲ್ಲಿ ಒಬ್ಬರು ಹಾಗೂ ತಳಿ ಅಭಿವೃದ್ಧಿಗೆ ಉತ್ತಮ ಅವಕಾಶಗಳನ್ನು ಪತ್ತೆಹಚ್ಚಲು ಒಬ್ಬ ವಿಜ್ಞಾನಿಯನ್ನು ನೇಮಿಸಲಾಗುವುದು. ಇವರನ್ನು ಕೃಷಿ ವಿ.ವಿ., ಅರಣ್ಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಗಳಿಂದ ನಿಯೋಜನೆ ಪಡೆಯಲಾಗುವುದು ಎಂದು ಹೇಳಿದರು.

ಅರಣ್ಯ ಇಲಾಖೆಯ ಪ್ರಯೋಗಾಲಯ ಸ್ಥಗಿತಗೊಂಡಿದ್ದು, ಅದಕ್ಕೆ ಮರುಜೀವ ನೀಡಲಾಗುವುದು. ಅಗತ್ಯ ಇರುವ ಕೆಮಿಸ್ಟ್‌ಗಳನ್ನೂ ಆದಷ್ಟು ಬೇಗ ನೇಮಕ ಮಾಡಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT