ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಶೋಧನೆಯ ಕೈಮರ

Last Updated 16 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಗುಲ್ ಮೊಹರ್, ಆಕಾಶ ಮಲ್ಲಿಗೆ, ಕ್ಯಾಸುರಿನಾ, ಹೊಂಗೆ, ಬಿದಿರು, ನೀಲಗಿರಿ, ಮಳೆ ಮರ, ಮಾವು, ಹುಣಸೆ ಸೇರಿದಂತೆ ಸುಮಾರು 200ಕ್ಕೂ ಹೆಚ್ಚು ಜಾತಿಯ ಮರಗಳು ಬೆಂಗಳೂರಿನಲ್ಲಿವೆ. ಆದರೆ ಮರಮುಟ್ಟು ಬಳಕೆಗೆ ಉಪಯೋಗವಾಗುವಂಥವು ಬೆರಳೆಣಿಕೆಯಷ್ಟು. ಮರಗಳು ಕೇವಲ ಮರಗೆಲಸದವರಿಗೆ ಬೇಕಿರುವ ಸಂಪನ್ಮೂಲಗಳಲ್ಲ. ಇವು ಪರಿಸರ ಸಮತೋಲನದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಹಾಗೂ ಮಾನವನ ಅವಿಭಾಜ್ಯ ಅಂಗ ಎಂಬುದನ್ನು ತಿಳಿಯಪಡಿಸುತ್ತದೆ ಮಲ್ಲೇಶ್ವರದ ಮರ ವಿಜ್ಞಾನ ಮತ್ತು ತಾಂತ್ರಿಕ ಸಂಸ್ಥೆ.

ಮರಗಳ ಬಗ್ಗೆ ಸಂಶೋಧನೆ ನಡೆಸುತ್ತಿರುವ ಈ ಸಂಸ್ಥೆ 1938ರಿಂದ ಬೆಂಗಳೂರು ಸುತ್ತಲಿನ ಪ್ರದೇಶಗಳಲ್ಲಿ ಬೆಳೆಯುವ ಮರಗಳ ಜೊತೆಗೆ ರಾಜ್ಯದಾದ್ಯಂತ ಹಾಗೂ ಆಂಧ್ರ ಪ್ರದೇಶ ಮತ್ತು ಗೋವಾ ರಾಜ್ಯಗಳ ಮರಗಳ ಬಗ್ಗೆ ಸಂಶೋಧನೆ ನಡೆಸುತ್ತಿದೆ. ಒಂದು ಮರದ ಮುಟ್ಟನ್ನು ಹೇಗೆ ಬಳಕೆ ಮಾಡಬೇಕು, ಅದನ್ನು ದೀರ್ಘ ಕಾಲದವರೆಗೆ ಸಂರಕ್ಷಿಸಿಡುವ ಬಗೆ ಹೇಗೆ, ಅದರ ಬಳಕೆಯ ವ್ಯಾಪ್ತಿಗಳೇನು ಇವೇ ಮೊದಲಾದ ಅಂಶಗಳ ಬಗ್ಗೆ ಗಮನ ಹರಿಸುತ್ತದೆ ಈ ಸಂಸ್ಥೆ.

`ಶಿವಾಜಿನಗರದಲ್ಲೋ ಅಥವಾ ಕೆ.ಆರ್. ಮಾರುಕಟ್ಟೆಯಲ್ಲೋ ಸಾಗುವಾನಿ ಮರದ ಪೀಠೋಪಕರಣ ಕೊಂಡುಕೊಳ್ಳಲು ಹೋದರೆ ಕೆಲ ವ್ಯಾಪಾರಿಗಳು ಮೋಸ ಮಾಡುವ ಸಂಭವವಿರುತ್ತದೆ.

ಬಂಗಾಳಿ ಜಾಲಿಯ ಮುಟ್ಟಿನಿಂದ ಮಾಡಿದ ಪೀಠೋಪಕರಣಗಳನ್ನು `ಬರ್ಮಾ ಟೀಕ್~ ಎಂದು ಹೇಳಿ ಮೋಸ ಮಾಡುತ್ತಾರೆ.  ಈ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಜನರಿಗೆ ಮರಗಳ ನಡುವಿನ ವ್ಯತ್ಯಾಸ ತಿಳಿಸಲಾಗುತ್ತದೆ. ಸಾರ್ವಜನಿಕರಲ್ಲಿ ಹಾಗೂ ರೈತರಲ್ಲಿ ಈ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡುತ್ತೇವೆ~ ಎನ್ನುತ್ತಾರೆ ಮರ ವಿಜ್ಞಾನಿ ಡಿ.ವೆನ್‌ಮಲರ್.

ಬಂಗಾಳಿ ಜಾಲಿಯನ್ನು ಹೆಚ್ಚು ವರ್ಷ ಹಾಳಾಗದಂತೆ ಸಂಸ್ಕರಿಸುವ ವಿಧಾನದ ಕುರಿತು ಸಂಸ್ಥೆ ಮಾಹಿತಿ ನೀಡುತ್ತದೆ. ಈ ಸಂಸ್ಕರಣಾ ಪ್ರಕ್ರಿಯೆಯನ್ನು ಟ್ಟಟಛ್ಟಿ ಠಿಚ್ಚಜ್ಞಿಜ ಎನ್ನುತ್ತಾರೆ. ಕತ್ತರಿಸಿದ ಮರದ ತುಂಡುಗಳಲ್ಲಿ ಶೇ 100ರಷ್ಟು ತೇವಾಂಶವಿರುತ್ತದೆ.

ಅದನ್ನು ನೇರವಾಗಿ ಬಳಸಿದರೆ ಮೂರರಿಂದ ನಾಲ್ಕು ವರ್ಷಗಳಲ್ಲಿ ಅವು ಬಿರುಕು ಬಿಡುತ್ತವೆ. ಸುರುಳಿ ಆಕಾರದಲ್ಲಿ ಬಾಗುತ್ತವೆ. ಹಾಗಾಗದಿರಲು, ಕತ್ತರಿಸಿದ ಹಲಗೆಗಳನ್ನು ನೆರಳಿನಲ್ಲಿ ಒಣಗಿಸಬೇಕು. ಇದು ಆರು ತಿಂಗಳವರೆಗೆ ನಡೆಯುವ ಪ್ರಕ್ರಿಯೆ. ಬಾಗಿಲು ಅಥವಾ ಕಿಟಕಿಗಳಿಗೆ ಬಳಸುವ ಮರದ ಪಟ್ಟಿಗಳನ್ನು 6ರಿಂದ 12 ತಿಂಗಳು ಒಣಗಿಸಲೇಬೇಕು~ ಎಂಬುದು ಸಂಸ್ಥೆ ಸಲಹೆ.

`ಮತ್ತೊಂದು ವಿಧಾನವೆಂದರೆ ಹಲಗೆಗಳನ್ನು ಕೊಠಡಿಯಲ್ಲಿ ಜೋಡಿಸಿಟ್ಟು ಬಿಸಿ ಹಬೆಯಿಂದ ಒಣಗಿಸಬಹುದು. ಮುಟ್ಟುಗಳನ್ನು ಬೇಗ ಸಂಸ್ಕರಿಸಬಹುದು. ಜೊತೆಗೆ ವಿದ್ಯುಚ್ಛಕ್ತಿಯಿಂದಲೂ ಒಣಗಿಸಬಹುದು. ಇದರಿಂದಾಗಿ ಮರದ ಮುಟ್ಟುಗಳಲ್ಲಿ ಬೂಸ್ಟು, ಗೆದ್ದಲು, ಅಣಬೆ ಹಾಗೂ ಶಿಲೀಂಧ್ರಗಳಿಂದ ಉಂಟಾಗುವ ಹಾವಳಿ ಮತ್ತು ಕೊಳೆಯುವುದನ್ನು ತಡೆಗಟ್ಟುತ್ತದೆ. ಹೀಗೆ ಒಣಗಿಸುವುದರಿಂದ 20 ವರ್ಷಗಳಿಗೂ ಹೆಚ್ಚು ಕಾಲ ಮರ ಬಾಳಿಕೆ ಬರುತ್ತದೆ~ ಎಂದು ಮಾಹಿತಿ ನೀಡುತ್ತಾರೆ ವೆನ್‌ಮಲರ್.

ನಗರದಲ್ಲಿರುವ ಹೆಚ್ಚಿನ ಪ್ರಮಾಣದ ಮರಗಳು ನೆರಳು ನೀಡುವ ದಟ್ಟ ಮರಗಳಾಗಿವೆ. ಪರಿಸರ ಮಾಲಿನ್ಯ ತಡೆಗಟ್ಟುವಲ್ಲಿ ಸಹಕಾರಿಯಾಗಿವೆ. ಆದರೆ ಮರಮುಟ್ಟು, ಪೀಠೋಪಕರಣಕ್ಕೆ ಉಪಯೋಗವಿಲ್ಲ. ಹಾಗಾಗಿ ನೀಲಗಿರಿ, ಬಿದಿರು, ಸರ್ವೆ ಹಾಗೂ ಶ್ರೀಗಂಧ ಮರಗಳ ಮೇಲೆ ಸಂಶೋಧನೆ ಮಾಡಲಾಗಿದೆ.

ಬಿದಿರಿನ ಬೀಜ ಪಡೆಯಲು 40 ವರ್ಷ ಕಾಯಬೇಕು. ಹಾಗಾಗಿ ಟಿಶ್ಯು ಕಲ್ಚರ್ ಮೂಲಕ ಸಸಿಗಳನ್ನು ತಯಾರಿಸಿ ಕೊಡಲಾಗುತ್ತದೆ. ಜೊತೆಗೆ ಬಿದಿರು ಬೊಂಬಿನ ರಕ್ಷಣೆ ಬಗ್ಗೆಯೂ ಮಾಹಿತಿ ನೀಡಲಾಗುತ್ತದೆ. ಬಿದಿರನ್ನು ಕತ್ತರಿಸಿದ ಸ್ಥಳದಲ್ಲೇ ಯಾವುದೇ ಯಂತ್ರಗಳನ್ನು ಬಳಸದೇ ಪರಿಣತಿ ಹೊಂದದ ಜನಸಾಮಾನ್ಯರು ಅನುಸರಿಸಬಹುದಾದ `ಜೀವರಸ ಸ್ಥಾನ ಪಲ್ಲಟ ವಿಧಾನ~ವನ್ನು ( sap displacement technique) ಸಂಸ್ಥೆ ಅಭಿವೃದ್ಧಿಪಡಿಸಿದೆ.

`ಕತ್ತರಿಸಿದ ಬಿದಿರಿನ ಬುಡವನ್ನು ಒಂದು ತೊಟ್ಟಿ ಅಥವಾ ಡ್ರಮ್‌ನಲ್ಲಿ ಮೊದಲೇ ಸಿದ್ಧಪಡಿಸಿದ ನೀರಿನಲ್ಲಿ ಕರಗುವ ರಾಸಾಯನಿಕ ದ್ರಾವಣಗಳಾದ ಕಾಪರ್ ಸಲ್ಫೇಟ್, ಸೋಡಿಯಂ ಡೈಕ್ರೋಮೇಟ್ ಮತ್ತು ಆರ‌್ಸೆನಿಕ್ ಪೆಂಟಾಕ್ಸೈಡ್ ಅಥವಾ ಸೋಡಿಯಂ ಡೈಕ್ರೋಮೇಟ್ ಮತ್ತು ಬೋರಿಕ್ ಆಸಿಡ್‌ನಲ್ಲಿ 30ರಿಂದ 40 ಸೆ.ಮೀ ಆಳದಷ್ಟು ಮುಳುಗಿಸಬೇಕು. ನಂತರ ಬಿದಿರಿನ ಬುಡವನ್ನು ತಲೆಕೆಳಗೆ ಮಾಡಿ ನಿಲ್ಲಿಸಬೇಕು. 24 ಗಂಟೆ ಆದಮೇಲೆ ಹೊರ ತೆಗೆಯಬೇಕು. ಎರಡರಿಂದ ಮೂರು ವಾರಗಳ ನಂತರ ಇದನ್ನು ಉಪಯೋಗಿಸಬಹುದು. ಈ ರೀತಿ ಸಂಸ್ಕರಿಸಿದ ಬಿದಿರಿನ ಬೊಂಬುಗಳು 10ರಿಂದ 15 ವರ್ಷ ಬಾಳಿಕೆ ಬರುತ್ತವೆ~ ಎಂಬುದು ವಿಜ್ಞಾನಿ ಆಶುತೋಶ್ ಶ್ರೀವಾಸ್ತವ್ ವಿವರಣೆ.
ಬೆಂಗಳೂರಿನ ಹುಣಸೆ, ಮಾವಿನ ಮರಗಳ ಮೇಲೂ ಸಂಶೋಧನೆ ಮಾಡಲಾಗಿದ್ದು, ಈ ಮರಗಳಲ್ಲಿ ಕಡಿಮೆ ಪ್ರಮಾಣದ ಟಿಂಬರ್ ಅಂಶವಿರುತ್ತದೆ. ಹಾಗಾಗಿ ಬಹೂಪಯೋಗಿ ಮರಗಳ ಕುರಿತು ಹೆಚ್ಚಾಗಿ ಸಂಶೋಧನೆ ನಡೆಸಲಾಗುತ್ತದೆ.

ನಮ್ಮ ರಾಜ್ಯದಲ್ಲಿ ಮುಳ್ಳು ಬಿದಿರು, ಮೇದಾರ ಬಿದಿರು ಎಂಬ ಎರಡು ಪ್ರಭೇದಗಳೇ ಹೆಚ್ಚಾಗಿವೆ. ಇನ್ನೂ ಅನೇಕ ಬಿದಿರಿನ ಪ್ರಭೇದಗಳು ಉಳಿದ ರಾಜ್ಯಗಳಲ್ಲಿವೆ. ಇಲ್ಲಿನ ಹವಾಗುಣಕ್ಕೆ ಹೊಂದುವಂಥ ಇತರೆ ಪ್ರಭೇದದ ಬಿದಿರುಗಳನ್ನು ಪರಿಚಯಿಸುವ ಉದ್ದೇಶದಿಂದ ಈಶಾನ್ಯ ರಾಜ್ಯಗಳಿಂದ ತಂದ ಐದು ಬಗೆಯ ಬಿದಿರನ್ನು ಇಲಾಖೆಯಲ್ಲಿ ಸಂಶೋಧನೆಗೆ ಒಳಪಡಿಸಲಾಗಿದೆ.

ಅವುಗಳಲ್ಲಿ `ಡೆಂಡ್ರೋಕಲಮಸ್ ಹೆಮಾಲ್ಟನೈ~, `ಡೆಂಡ್ರೋಕಲಮಸ್‌ಆಸ್ಪರ್~, `ಗುವಡುವಾ ಎಂಗೋಸ್ಟೆಫೊಲಿಯಾ~, `ಬ್ಯಾಂಬೂಸಾ ಬಾಲ್‌ಕೋವಾ~ ಹಾಗೂ `ಬ್ಯಾಂಬೂಸಾ ನೂಟಾನ್ಸ್~ ಮುಖ್ಯವಾದವು.

ಪಶ್ಚಿಮ ಘಟ್ಟ, ಕೊಡಗು ಹಾಗೂ ಒಣ ಪ್ರದೇಶಗಳಲ್ಲಿ ಬೆಳೆಯಬಹುದಾದ ಲಕ್ಷಣಗಳನ್ನು ಇವು ಒಳಗೊಂಡಿವೆ ಎಂಬ ಅಂಶ ಪ್ರಯೋಗದಿಂದ ಗೊತ್ತಾಗಿದೆ ಎನ್ನುತ್ತಾರೆ ಶ್ರೀವಾಸ್ತವ್.
ಬಿದಿರು ಹಾಗೂ ಸರ್ವೆ ಮರಗಳ ಮೇಲೆ ನಡೆಸಿದ ಸಂಶೋಧನೆಯ ಫಲವಾಗಿ ಅನೇಕ ಉಪಯುಕ್ತ ಅಂಶಗಳು ಬೆಳಕಿಗೆ ಬಂದಿವೆ. ಮರಮುಟ್ಟುಗಳ ಉಪಯೋಗದ ಬಗೆ, ಸಂರಕ್ಷಣೆಯ ಮಾಹಿತಿ ತಿಳಿಯುತ್ತದೆ.

ಕೃಷಿ ಮೇಳಗಳಲ್ಲಿ ಹಾಗೂ ವಿಶ್ವವಿದ್ಯಾನಿಲಯದ ಕ್ಯಾಂಪಸ್‌ಗಳಲ್ಲಿ ಪ್ರಾತ್ಯಕ್ಷಿಕೆಗಳ ಮೂಲಕವೂ ರೈತರಿಗೆ ಹಾಗೂ ಸಾರ್ವಜನಿಕರಿಗೆ ಮರಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಸಂಸ್ಥೆ ಆಯೋಜಿಸುತ್ತದೆ. ಆ ಮೂಲಕ ಮರಗಳು ಹಾಗೂ ಬೆಲೆ ಬಾಳುವ ಮರಮುಟ್ಟುಗಳ ಬಗ್ಗೆ ಸಾರ್ವಜನಿಕರಲ್ಲಿ ಜ್ಞಾನ ವಿನಿಮಯವಾಗಲಿದೆ.

ಸಂಸ್ಥೆಯ ಉಗಮ
ಶ್ರೀಗಂಧದ ಮರಗಳ ಬಗ್ಗೆ ಸಂಶೋಧನೆ ನಡೆಸುವ ಉದ್ದೇಶದಿಂದ 1938ರಲ್ಲಿ ಮೈಸೂರು ಅರಸರು ಬೆಂಗಳೂರಿನಲ್ಲಿ ಅರಣ್ಯ ಸಂಶೋಧನಾ ಪ್ರಯೋಗಾಲಯಕ್ಕೆ ಸ್ಥಳ ನೀಡಿದರು. ಆಗ ಶ್ರೀಗಂಧ ಸಂಶೋಧನಾ ಕೇಂದ್ರವಾಗಿ ಆರಂಭವಾಯಿತು. 1956ರಲ್ಲಿ `ಇಂಡಿಯನ್ ಕೌನ್ಸಿಲ್ ಫಾರ್ ಫಾರೆಸ್ಟ್ರಿ ರಿಸರ್ಚ್ ಅಂಡ್ ಎಜುಕೇಷನ್~ (ಐಸಿಎಫ್‌ಆರ್‌ಈ) ಅಧೀನಕ್ಕೊಳಪಟ್ಟು ಮರ ವಿಜ್ಞಾನ ಮತ್ತು ತಾಂತ್ರಿಕ ಸಂಸ್ಥೆಯಾಯಿತು. ಅಂದಿನಿಂದ ಇಲ್ಲಿಯವರೆಗೆ ಸುಮಾರು 60ಕ್ಕೂ ಹೆಚ್ಚು ಜಾತಿಯ ಮರಗಳ ಬಗ್ಗೆ ಇಲ್ಲಿ ಸಂಶೋಧನೆಗಳನ್ನು ನಡೆಸಲಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT