ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸತ್ ನಿಲುವಿಗೆ ಬದ್ಧ: ಹಜಾರೆ

Last Updated 17 ಏಪ್ರಿಲ್ 2011, 19:00 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ದೇಶದಲ್ಲಿ ‘ಸಂಸತ್ ಸರ್ವೋಚ್ಛ’ವಾಗಿದ್ದು, ಅದು ಲೋಕಪಾಲ ಮಸೂದೆ ತಿರಸ್ಕರಿಸುವ ನಿರ್ಧಾರ ಕೈಗೊಂಡಲ್ಲಿ, ಅದನ್ನು ತಾವು ಮರುಮಾತಿಲ್ಲದೆ ಒಪ್ಪಿಕೊಳ್ಳುವುದಾಗಿ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುತ್ತಿರುವ ಜನಪ್ರಿಯ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಭಾನುವಾರ ಇಲ್ಲಿ ಹೇಳಿದರು.

ತಮ್ಮ ಕಠಿಣ ನಿಲುವಿನಿಂದ ಹಿಂದೆ ಸರಿದಂತೆ ಕಂಡುಬಂದಿರುವ ಅವರು, ಲೋಕಪಾಲ ಮಸೂದೆಯನ್ನು ಅಂಗೀಕರಿಸಲು ಸಂಸತ್‌ಗೆ ತಾವು ನೀಡಿರುವ ಆಗಸ್ಟ್ 15ರ ಗಡುವನ್ನು ಸಡಿಲಿಸುವ ನಿಲುವನ್ನೂ ವ್ಯಕ್ತಪಡಿಸಿದರು. ಸರ್ಕಾರ ಸರಿಯಾದ ಮಾರ್ಗದಲ್ಲಿಲ್ಲವೆಂದು ಕಂಡುಬಂದಲ್ಲಿ ಗಡುವು ವಿಸ್ತರಿಸಲು ಸಿದ್ಧವಿರುವ ಮುಕ್ತ ತೀರ್ಮಾನ ಪ್ರಕಟಿಸುವುದಾಗಿಯೂ ತಿಳಿಸಿದರು.

‘ಸರ್ಕಾರದ ಸಚಿವರು ಮತ್ತು ನಾಗರಿಕ ಸಮಾಜದ ಪ್ರತಿನಿಧಿಗಳು ಜಂಟಿಯಾಗಿ ರೂಪಿಸುವ ಲೋಕಪಾಲ ಮಸೂದೆಯ ಕರಡನ್ನು ಒಂದುವೇಳೆ ಸಂಸತ್ ತಿರಸ್ಕರಿಸಿದಲ್ಲಿ ಆಗ ನಿಮ್ಮ ನಿಲುವೇನು’ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ನಾವು ಸಂಸತ್‌ನ ನಿರ್ಧಾರವನ್ನು ಒಪ್ಪಿಕೊಳ್ಳಬೇಕಿದ್ದು, ನಾವು ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಡಬೇಕಿದೆ” ಎಂದರು.

ಸಿಡಿ ವಿವಾದ: ಲೋಕಪಾಲ ಮಸೂದೆಯ ಜಂಟಿ ಕರಡು ಸಮಿತಿಯ ಸಹ-ಅಧ್ಯಕ್ಷ ಶಾಂತಿ ಭೂಷಣ್ ವಿರುದ್ಧ ಕೇಳಿಬಂದಿರುವ ವಿವಾದಿತ ಸಿಡಿ ಪ್ರಕರಣದ ಆರೋಪವನ್ನು ಅಲ್ಲಗಳೆದ ಹಜಾರೆ, ಸಮಿತಿಯಲ್ಲಿ ಅವರ ಉಪಸ್ಥಿತಿಗೆ ಬೆಂಬಲ ಸೂಚಿಸಿದರು. ಈ ಸಿಡಿಯಲ್ಲಿರುವ ಪ್ರಶ್ನೆಗಳು ನಕಲಿ ಎಂಬುದನ್ನು ವಿಧಿವಿಜ್ಞಾನ ಪ್ರಯೋಗಾಲಯದ ಮೂಲಗಳು ಖಚಿತಪಡಿಸಿರುವುದಾಗಿ ಉತ್ತರಿಸಿದರು.

ದುಭಾಷಿಕನಿಗೆ ಮನವಿ:  ಲೋಕಪಾಲ ಮಸೂದೆಯ ಜಂಟಿ ಕರಡು ಸಮಿತಿ ಸಭೆಯ ಕಲಾಪವನ್ನು ಇಂಗ್ಲಿಷ್‌ನಲ್ಲಿ ನಡೆಸುತ್ತಿರುವುದರಿಂದ ಅನಾನುಕೂಲ ಪರಿಸ್ಥಿತಿಗೆ ಸಿಲುಕಿರುವ ಹಜಾರೆ, ತಮಗೆ ಸಭೆಯ ಕಲಾಪವನ್ನು ಸ್ಪಷ್ಟವಾಗಿ ತಿಳಿದುಕೊಳ್ಳಲು ಹಿಂದಿ ಅಥವಾ ಮರಾಠಿ ಭಾಷೆ ತಿಳಿದ ದುಭಾಷಿ ವ್ಯಾಖ್ಯಾನಕಾರರೊಬ್ಬರನ್ನು ಮುಂದಿನ ಸಭೆಗಳಿಗೆ ಒದಗಿಸಿಕೊಡುವಂತೆ ಸರ್ಕಾರಕ್ಕೆ ಮನವಿ ಮಾಡಿರುವುದಾಗಿ ಮೂಲಗಳು ತಿಳಿಸಿವೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT