ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸತ್ ಪ್ರವೇಶಿಸಿದ ಗಡಿನಾಡಿನ ಜನನಾಯಕ

Last Updated 26 ಮಾರ್ಚ್ 2014, 9:06 IST
ಅಕ್ಷರ ಗಾತ್ರ

ಕಾಸರಗೋಡು: ತುರ್ತು ಪರಿಸ್ಥಿತಿ ಮತ್ತು ಕಾಂಗ್ರೆಸ್‌ನ ದುರಾಡಳಿತ­ದಿಂದ ಜನರು ರೋಸಿ ಹೋಗಿದ್ದರು. ಇದನ್ನು ಸಿಪಿಎಂ ರಾಜಕೀಯ ಅಸ್ತ್ರವನ್ನಾಗಿ ಬಳಸಿ  1980ರಲ್ಲಿ ನಡೆದ 7ನೇ ಲೋಕಸಭಾ ಚುನಾ­­­ವಣೆ ಎದುರಿಸಿತು.

ಕಣದಲ್ಲಿ ಅಂದಿನ ಹುರಿಯಾಳುಗಳಲ್ಲಿ ಸಿಪಿಎಂನ ಅಭ್ಯರ್ಥಿ ಎಂ. ರಾಮಣ್ಣ ರೈ ಅವರೇ ದೈತ್ಯರಾಗಿದ್ದರು! ಬಹುಮುಖ ಸಾಮಾಜಿಕ ಚಟುವಟಿಕೆ 6ನೇ ಲೋಕಸಭಾ ಚುನಾವಣೆಯಲ್ಲಿ ಕೈಕೊಟ್ಟರೂ 7ನೇ ಚುನಾವಣೆಯಲ್ಲಿ ಫಲ ನೀಡಿತು. ಇಂದಿರಾಗಾಂಧಿ ಮತ್ತು ಕೆ.ಕರುಣಾಕರನ್‌ ಅವರ ಮ್ಯಾಜಿಕ್ ಕೂಡಾ ಫಲಿಸಲಿಲ್ಲ.

ರೈ ಸಾಗಿ ಬಂದ ದಾರಿ: 1966ರಲ್ಲಿ ಅಸ್ತಿತ್ವಕ್ಕೆ ಬಂದ ಕಾಸರಗೋಡು ನಗರಸಭೆಗೆ 1968ರಲ್ಲಿ ಮೊದಲ ಚುನಾವಣೆ ನಡೆಯಿತು. ಚೊಚ್ಚಲ ಅಧ್ಯಕ್ಷಗಾದಿಗೇರಿದ ರಾಮಣ್ಣ ರೈ 1979ರ ವರೆಗೆ 11 ವರ್ಷಗಳ ವರೆಗೆ ನಿರಂತರ  ಆಡಳಿತ ನಡೆಸಿದರು. ಈ ಸಂದರ್ಭದಲ್ಲಿ ನಗರದಲ್ಲಿ ಎಲ್‌ಐಸಿ ಯೋಜನೆಯಡಿ ಕುಡಿಯುವ ನೀರು ವಿತರಣೆ, ಮೀನು ಮಾರುಕಟ್ಟೆ, ಕೆಎಸ್‌ಆರ್‌ಟಿಸಿ ಬಸ್‌ ಡಿಪೋ, ನಗರಸಭಾ ಕಟ್ಟಡ ಸ್ಥಾಪನೆಗೆ ಕಾರಣಕರ್ತರಾದರು. ಈ ಮಧ್ಯೆ ಅವರನ್ನು ಮಂಜೇಶ್ವರ (1965, 67) ಮತ್ತು ಕಾಸರಗೋಡು(1970) ವಿಧಾನಸಭಾ ಕ್ಷೇತ್ರದಿಂದ ಅಭ್ಯರ್ಥಿಯಾಗಿ ಕಣಕ್ಕಿಳಿಸಿದರೂ ಸೋತು ಸುಣ್ಣವಾಗಿದ್ದರು.

ವಿದ್ಯಾರ್ಥಿಯಾಗಿದ್ದಾಗ ಕಾಸರಗೋಡು ವಿಲೀನೀಕರಣ ಹೋರಾಟ (ಇದಕ್ಕಾಗಿ ಮಂಗಳೂರಿನ ಜೈಲಿನಲ್ಲಿ ಎರಡೂವರೆ ತಿಂಗಳು ಜೈಲು ವಾಸ ಅನುಭವಿಸಿದ್ದರು)ಗಾರರಾಗಿ ಗಮನ ಸೆಳೆದಿದ್ದರು. 1962 ರಲ್ಲಿ ನಡೆದ ಭಾರತ–ಚೀನಾ ಯುದ್ಧದ ಪರಿಣಾಮ ಜೈಲಿಗೆ ಹಾಕಿದ ಕಮ್ಯೂನಿಸ್ಟರಲ್ಲಿ ರೈಗಳೂ ಒಬ್ಬರಾಗಿದ್ದು, ಕಣ್ಣೂರು ಸೆಂಟ್ರಲ್‌ ಜೈಲಿನಲ್ಲಿ  15 ತಿಂಗಳು ಜೈಲುವಾಸ ಅನುಭವಿಸಿದ್ದರು. ಇದೇ ಸಂದರ್ಭದಲ್ಲಿ ಜೈಲಿನಿಂದಲೇ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಚುನಾವಣೆ ಎದುರಿಸಿದ್ದರೂ ಅವರು  ಸೋತಿದ್ದರು.

1980ರಲ್ಲಿ ಇಂದಿರಾಗಾಂಧಿ ಚಿಕ್ಕಮಗಳೂರಿನಲ್ಲಿ ಲೋಕಸಭಾ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾಗ ಅವರ ವಿರುದ್ಧ ಪ್ರಚಾರ ಭಾಷಣಕ್ಕಿಳಿದಿದ್ದ ಎ.ಕೆ.ಆಂಟನಿ ಜತೆಯಲ್ಲಿ ರಾಮಣ್ಣ ರೈಗಳೂ ಇದ್ದರು. ಆಂಟನಿ ಇಂಗ್ಲಿಷ್‌ನಲ್ಲಿ ಭಾಷಣ ಮಾಡಿದರೆ, ರಾಮಣ್ಣ ರೈಗಳು ಕನ್ನಡದಲ್ಲಿ ಮಾತನಾಡಿದ್ದರು.

ಇದೇ ವರ್ಷ ಸಿಪಿಐ ಸಿಪಿಎಂ ತರವಾಡಿಗೆ ಸೇರಿತ್ತು. ತುರ್ತು ಪರಿಸ್ಥಿತಿಯ ಪರಿಣಾಮ ಮಸುಕಾದ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನೇ ಕಣಕ್ಕಿಳಿಸಿರಲಿಲ್ಲ! ತುಳುವರಾಗಿದ್ದು, ಕನ್ನಡದ ಅಭಿಮಾನ ಹೊಂದಿದ್ದ ರೈಗಳ ಪರವಾಗಿ ತುಳುವರು ಮತ್ತು ಕನ್ನಡಿಗರು ‘ನಮ್ಮ ನಾಡು–ನುಡಿಯ ಅಭ್ಯರ್ಥಿ’ ಎಂಬ ಭಾವನೆಯಿಂದ ಮತ ಹಾಕಿದ್ದು ಸುಳ್ಳಲ್ಲ. ಇದು ರೈಗಳ ವಿಜಯಕ್ಕೆ ಪ್ರಮುಖ ಕಾರಣವಾಯಿತು.

ಸಂಸತ್ತಿನಲ್ಲಿ ಧ್ವನಿ: ಆ ಕಾಲದಲ್ಲಿ ಸಂಸತ್ತಿನಲ್ಲಿ ಮಾತನಾಡುವ ಅವಕಾಶ ಕಿರಿಯ ಸಂಸದರಿಗೆ ಸಿಗುತ್ತಿರಲಿಲ್ಲ. ಬಂಗಾಳ ಮತ್ತು ಕೇರಳದ ಸದಸ್ಯರೇ ಆಗ ಸಂಸದೀಯ ಸಮಿತಿಯಲ್ಲಿದ್ದರು. ಯಾರು ಮಾತನಾಡಬೇಕು ಎಂಬುದನ್ನು ಈ ಸಮಿತಿಯೇ ತೀರ್ಮಾನಿಸುತ್ತಿತ್ತು. ಬಜೆಟ್ ಅಧಿವೇಶನದಲ್ಲಿ ಮಾತ್ರ ಮಾತನಾಡಲು ಅವಕಾಶ ಸಿಗುತ್ತಿತ್ತು. ಪ್ರಶ್ನೆ ಕೇಳಲು ಉತ್ಸಾಹದಿಂದ ತಯಾರಿಯಾಗಿ ಹೋದರೆ ಸಮಯವನ್ನು ಹಿರಿಯ ನಾಯಕರೇ ಕಬಳಿಸುತ್ತಿದ್ದರು!

ಸಂಸತ್ತಿನಲ್ಲಿ ಮಾತನಾಡುವ ಮೊತ್ತ ಮೊದಲ ಅವಕಾಶವನ್ನು ಸಮರ್ಥವಾಗಿ ಬಳಸಿದ ರೈಗಳು, ನಾವಿಕ ಅಕಾಡೆಮಿ ಮಂಜೂರು ಮಾಡುವ ಬಗ್ಗೆ ಪ್ರಸ್ತಾಪಿಸಿದರು. ಕೊಚ್ಚಿಗೆ ಮಂಜೂರು ಮಾಡಿದ್ದ ಈ ಬೃಹತ್ ಯೋಜನೆಗೆ ಸೂಕ್ತ ಸ್ಥಳಾವಕಾಶ ಲಭ್ಯವಿಲ್ಲದ ಕಾರಣ ಏಳಿಮಲೆ ಅಥವಾ ರಾಜ್ಯದ ಇತರ ಕರಾವಳಿ ಪ್ರದೇಶಕ್ಕೆ ಸ್ಥಳಾಂತರಿಸುವ ಬಗ್ಗೆ ಚರ್ಚೆ ನಡೆಯಿತು. ಕೊಚ್ಚಿಯಿಂದ ಬೇರೆಡೆಗೆ ಸ್ಥಳಾಂತರಿಸುವುದಿದ್ದರೆ ತಾವು ಪ್ರತಿನಿಧಿಸುವ ಕ್ಷೇತ್ರಕ್ಕೆ ಮಂಜೂರು ಮಾಡಬೇಕು ಎಂಬ ಒತ್ತಾಯಕ್ಕೆ ಮಣಿದು ಇಂದಿರಾಗಾಂಧಿ ಸರ್ಕಾರ ಕೊನೆಗೂ ಅನುಮತಿ ನೀಡಿದ್ದು ಈಗ ಇತಿಹಾಸ.

ಎರಡನೇ ಬಾರಿಗೆ ‘ಪುದುಚೆರಿ’ ವಿಷಯ ಪ್ರಸ್ತಾಪಿಸಿ ಅಂಥ ಕೇಂದ್ರಾಡಳಿತ ಪ್ರದೇಶಗಳನ್ನು ಆಯಾ ರಾಜ್ಯಗಳಲ್ಲಿ ವಿಲೀನಗೊಳಿಸಬೇಕು ಎಂದು ಧ್ವನಿ ಎತ್ತಿದ್ದರು. ಇದು ಪಕ್ಷದೊಳಗೆ ಚರ್ಚಿಸದೆ ರೈಗಳು ಎತ್ತಿದ ಪ್ರಶ್ನೆಯಾಗಿದ್ದರಿಂದ ಪಕ್ಷದಲ್ಲಿ ಭಾರಿ ವಿವಾದವುಂಟು ಮಾಡಿತ್ತು ಎಂದು ರಾಮಣ್ಣ ರೈಗಳು ತಮ್ಮ ಆತ್ಮಕಥೆ ‘ಸ್ಮೃತಿಪಥ’ದಲ್ಲಿ ಉಲ್ಲೇಖಿಸಿದ್ದಾರೆ.

ಈ ಚುನಾವಣೆಯಲ್ಲಿ ಎಂ. ರಾಮಣ್ಣ ರೈಗಳು ತಮ್ಮ ಸಮೀಪದ ಪ್ರತಿಸ್ಪರ್ಧಿ ಒ.ರಾಜಗೋಪಾಲ್ ಅವರಿಗಿಂತ 73,587 ಮತಗಳ ಅಂತರದಿಂದ ಗೆದ್ದಿದ್ದರು.

ರಾಮಣ್ಣ ರೈ ಕನ್ನಡದ ದೊಡ್ಡ ಅಭಿಮಾನಿಯಾಗಿದ್ದರು. ಕರ್ನಾಟಕ ಏಕೀಕರಣ ಹೋರಾಟದಲ್ಲಿ ಜೈಲಿಗೆ ಹೋಗಿದ್ದರು. ಸಂಸದನಾಗಿದ್ದ ಅವರಿಗೆ ಅಹಂಕಾರ, ಇತರ ಪಕ್ಷಗಳ ಬಗ್ಗೆ ಅನಾದರ ಇರಲಿಲ್ಲ ಎಂದು 70ರ ದಶಕದಲ್ಲಿ ಮಂಜೇಶ್ವರ ಕಾಂಗ್ರೆಸ್ ಬ್ಲಾಕ್ ಪ್ರಧಾನ ಕಾರ್ಯದರ್ಶಿಯಾಗಿದ್ದ ಹಿರಿಯರಾದ ಕುಂಬಳೆಯ ಬಿ.ಎನ್.ಪೈ. ನೆನಪಿಸುತ್ತಾರೆ.

1980: ಮತದಾರರು 6,78,476; ಚಲಾಯಿತ ಮತ: 4,66,974; ಸಿಂಧುಮತ:4,63,026 (68.83)

1) ಎಂ.ರಾಮಣ್ಣ ರೈ                              (ಸಿಪಿಎಂ)                   2,63,673                         (ಶೇ 56.95)
2) ಒ.ರಾಜಗೋಪಾಲ್‌                           (ಜನತಾ ಪಾರ್ಟಿ)         1,90,086                         (ಶೇ 41.05)
3) ಪಟ್ಟತ್ತಿಲ್‌ ರಾಘವನ್‌                          (ಸ್ವತಂತ್ರ)                  4,360                             (ಶೇ 0.94)
4) ಎಂ.ಎ.ಅಬ್ದುಲ್ಲ ಮಲ್ಲತ್‌                       (ಸ್ವತಂತ್ರ)                  2,492                             (ಶೇ. 0.54)
5) ಕೆ.ವಿ.ಬಾಲಕೃಷ್ಣನ್‌                             (ಸ್ವತಂತ್ರ)                  2,415                             (ಶೇ. 0.52)
ಸುರೇಶ್ ಎಡನಾಡು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT