ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸತ್ ವಿಸರ್ಜನೆ, 6 ತಿಂಗಳಲ್ಲಿ ಚುನಾವಣೆ

Last Updated 13 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಕೈರೊ (ಪಿಟಿಐ):  ಈಜಿಪ್ಟ್ ಅಧ್ಯಕ್ಷ ಮುಬಾರಕ್ ಪದಚ್ಯುತಿ ಮಾಡಿಸುವಲ್ಲಿ ಸಫಲರಾದ ದೇಶದ ಜನತೆಯ ಪ್ರಮುಖ ಬೇಡಿಕೆಗೆ ಸ್ಪಂದಿಸಿರುವ ಹಂಗಾಮಿ ಆಡಳಿತ ನಿರ್ವಹಿಸುತ್ತಿರುವ ಸಶಸ್ತ್ರ ಪಡೆಗಳ ಪರಮೋಚ್ಛ ಮಂಡಳಿ, ಸಂಸತ್ತನ್ನು ಭಾನುವಾರ ವಿಸರ್ಜಿಸಿದ್ದು, ಆರು ತಿಂಗಳೊಳಗೆ ಚುನಾವಣೆ ನಡೆಸುವುದಾಗಿ ಘೋಷಿಸಿದೆ.

 ಚುನಾವಣೆ ಪ್ರಕ್ರಿಯೆ ಮುಗಿಯುವ ತನಕ ಮಾತ್ರ ತಾನು ಅಧಿಕಾರದಲ್ಲಿ ಇರುವುದಾಗಿ ಹೇಳುವ ಮೂಲಕ ದೀರ್ಘ ಸಮಯ ತನ್ನ ಅಧಿಕಾರ ಇರುವುದಿಲ್ಲ ಎಂಬ ಸಂದೇಶವನ್ನೂ ನೀಡಿದೆ.ಚುನಾವಣೆ ಸೆಪ್ಟೆಂಬರ್ ತಿಂಗಳಲ್ಲಿ ನಡೆಯುವ ಸಾಧ್ಯತೆ ಇದೆ. ಮಂಡಳಿಯು ಸರ್ಕಾರಿ ಟಿವಿ ವಾಹಿನಿ ಮೂಲಕ ಈ ಪ್ರಕಟಣೆ ಹೊರಡಿಸಿದೆ.ಮಂಡಳಿಯು ಇದಕ್ಕೆ ಮೊದಲು ಹೇಳಿಕೆ ನೀಡಿ, ಎಲ್ಲಾ ಅಂತರರಾಷ್ಟ್ರೀಯ ಒಪ್ಪಂದಗಳಿಗೂ ಬದ್ಧವಾಗಿರುವುದಾಗಿ ತಿಳಿಸಿತ್ತು.

ಈ ಮಧ್ಯೆ, ಭ್ರಷ್ಟಾಚಾರದಲ್ಲಿ ಮುಬಾರಕ್ ಅವರಿಗೆ ನೆರವಾದ ಆರೋಪ ಎದುರಿಸುತ್ತಿರುವ ಹಲವು ಹಿರಿಯ ಅಧಿಕಾರಿಗಳು ದೇಶ ಬಿಟ್ಟು ಹೋಗದಂತೆ ನಿಷೇಧ ಹೇರಲಾಗಿದೆ. ಇವರಲ್ಲಿ ಮಾಜಿ ಪ್ರಧಾನಿ ಅಹ್ಮದ್ ನಜೀವ್ ಅವರೂ ಸೇರಿದ್ದಾರೆ.  ಈಜಿಪ್ಟ್  ಸಂಪುಟದ ಇತರ ಕೆಲವು ಸದಸ್ಯರಾದ ಒಳಾಡಳಿತ ಸಚಿವ ಹಬೀಬ್ ಅಲ್-ಅದಿಲಿ, ವಾರ್ತಾ ಸಚಿವ ಅನಾಸ್ ಅಲ್ ಫೆಕ್ಕಿ, ಪ್ರವಾಸೋದ್ಯಮ ಸಚಿವ ಜಹರ್ ಗರನ ಅವರು ದೇಶ ಬಿಟ್ಟು ಹೊರ ಹೋಗುವುದಕ್ಕೂ ನಿಷೇಧ ಹೇರಲಾಗಿದೆ. ಜತೆಗೆ ಉಕ್ಕು ದೊರೆ ಹಾಗೂ ಆಡಳಿತಾರೂಢ ನ್ಯಾಷನಲ್ ಡೆಮಾಕ್ರಟಿಕ್ ಪಾರ್ಟಿಯ (ಎನ್‌ಡಿಪಿ) ಸದಸ್ಯ ಅಹ್ಮದ್ ಎಜ್ ಅವರ ವಿದೇಶ ಪ್ರಯಾಣಕ್ಕೂ ನಿರ್ಬಂಧ ವಿಧಿಸಲಾಗಿದೆ.

ಇಸ್ರೇಲ್ ಜತೆಗೆ 1979ರಲ್ಲಿ ಮಾಡಿಕೊಂಡಿರುವ ಶಾಂತಿ ಒಪ್ಪಂದವನ್ನು ಮುಂದುವರಿಸುವ ಹಂಗಾಮಿ ಸೇನಾ ಆಡಳಿತದ ನಿರ್ಧಾರವನ್ನು ಜೆರುಸಲೇಮ್‌ನಲ್ಲಿ ಸ್ವಾಗತಿಸಿರುವ ಪ್ರಧಾನಿ ಬೆಂಜಮಿನ್ ನೆತಾನ್ಯಾಹು, ಪಶ್ಚಿಮ ಏಷ್ಯಾದಲ್ಲಿನ ಸ್ಥಿರತೆಗೆ ಈ ಒಪ್ಪಂದ ಅಡಿಗಲ್ಲು ಎಂದು ಹೇಳಿದ್ದಾರೆ.

ತಹ್ರೀರ್ ಚೌಕದಲ್ಲೇ ಉಳಿದ ಜನ: ಸುಮಾರು ಮೂರು ವಾರಗಳ ಕಾಲ ಭಾರಿ ಪ್ರತಿಭಟನೆ, ಚಳವಳಿಯ ಕೇಂದ್ರ ಬಿಂದುವಾದ ಕೈರೊದ ತಹ್ರೀರ್ ಚೌಕದಿಂದ ಮುಬಾರಕ್ ಪದತ್ಯಾಗದ ಬಳಿಕವೂ ನೂರಾರು ಜನರು ಜಾಗ ಖಾಲಿ ಮಾಡದೆ ಉಳಿದುಕೊಂಡಿದ್ದಾರೆ.ದೇಶದಲ್ಲಿ ಜಾರಿಯಲ್ಲಿರುವ ತುರ್ತು ಪರಿಸ್ಥಿತಿಯನ್ನು ತಕ್ಷಣ ತೆರವುಗೊಳಿಸಬೇಕು ಎಂಬ ಬೇಡಿಕೆ ಸಹಿತ ಇತರ ಹಲವು ಬೇಡಿಕೆಗಳ ಈಡೇರಿಕೆಗಾಗಿ ಅವರು ಒತ್ತಾಯಿಸುತ್ತಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT